ಕರಾಯ ಮನೆಗಳಿಂದ ಕಳ್ಳತನ: ಆರೋಪಿಗಳ ಬಂಧನ – ಪರಿಸರದ ಮನೆಗಳೇ ಖದೀಮರ ಟಾರ್ಗೆಟ್!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಮನೆಯಲ್ಲಿ ಯಾರೂ ಇಲ್ಲದನ್ನು ಖಚಿತಪಡಿಸಿಕೊಂಡು ಕರಾಯದಲ್ಲಿ ಎರಡು ಮನೆಗಳಿಗೆ ನುಗ್ಗಿ ಕಳ್ಳತನ ನಡೆಸಿದ ಕಳ್ಳರ ತಂಡವನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಮುರಿಯಾಳ ಎಂಬಲ್ಲಿಯ ಅಬ್ದುಲ್ ಖಾದರ್ ಎಂಬವರ ಪುತ್ರ ಸಂಶು ಯಾನೆ ಸಂಶುದ್ದೀನ್ (30), ಮೂಲತಃ ಪುತ್ತೂರು ತಾಲೂಕಿನ ಹಿರೇಬಂಡಾಡಿ ಮುರ ಎಂಬಲ್ಲಿಯ ನಿವಾಸಿ ಅಬ್ಬಾಸ್ ಎಂಬವರ ಪುತ್ರ, ಪ್ರಸ್ತುತ ಕರಾಯ ಗ್ರಾಮದ ಕಲ್ಪನೆ ಎಂಬಲ್ಲಿ ವಾಸವಾಗಿರುವ ನವಾಝ್ ಮುಹಮ್ಮದ್ (25), ಕರಾಯ ಜನತಾ ಕಾಲನಿ ನಿವಾಸಿ ದಿ. ಸೈಯ್ಯದ್ ಪೂಕೋಯ ತಂಙಳ್ ಎಂಬವರ ಪುತ್ರ ಯು. ನಿಜಾಮ್ ಯಾನೆ ಸೈಯದ್ ನಿಜಾಂ ತಂಙಳ್ (27), ಇಳಂತಿಲ ಗ್ರಾಮದ ಕಡವಿನ ಬಾಗಿಲು ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ, ಪ್ರಸ್ತುತ ಕರಾಯ ಪೆಟ್ರೋಲ್ ಬಂಕ್ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿರುವ ಸರ್ಫ್‌ರಾಜ್ (24) ಎಂಬವರು ಬಂಧಿತ ಆರೋಪಿಗಳು. ಇವರಲ್ಲಿ ಪ್ರಕರಣದ ಪ್ರಮುಖ ಆರೋಪಿಯಾದ ಸಂಶುದ್ದೀನ್ ಎಂಬಾತನ ಮೇಲೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿ, ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಈತ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ.

ಘಟನೆಯ ವಿವರ: 2021ರ ಜ.14ರಂದು ಕಲ್ಲೇರಿ ಎಂಬಲ್ಲಿ ಬೇಕರಿ ವ್ಯವಹಾರ ನಡೆಸುತ್ತಿದ್ದ ಕೆ.ಎನ್. ಶರತ್‌ಕುಮಾರ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮನೆಯ ಮುಂಭಾಗದ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಅಲ್ಲಿ ಕಪಾಟಿನಲ್ಲಿದ್ದ 3.81 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 14 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು. ಶರತ್ ಅವರು ಬೇಕರಿಯಲ್ಲಿದ್ದ ಸಮಯದಲ್ಲಿ ರಾತ್ರಿ 7 ರಿಂದ 9.30ರ ಮಧ್ಯೆ ಈ ಕಳ್ಳತನ ನಡೆಸಲಾಗಿದ್ದು, ಕಳ್ಳರು ಮನೆಯ ವಿದ್ಯುತ್ ಸಂಪರ್ಕವನ್ನು ತಪ್ಪಿಸಿ ಮನೆಯ ಮುಂಭಾಗದ ಎರಡು ವಿದ್ಯುತ್ ದೀಪಗಳನ್ನು ಒಡೆದು ಹಾಕಿದ್ದರು. ಅಲ್ಲದೇ, ಆ ದಿನ ಮಕರ ಸಂಕ್ರಮಣವಾಗಿದ್ದರಿಂದ ಸಂಪ್ರದಾಯದಂತೆ ಮನೆಯವರು ದೇವರ ಮುಂದೆ ನಗದು ಇಟ್ಟು ಪೂಜೆ ಮಾಡಿದ್ದರು. ಮನೆಯೊಳಗೆ ನುಗ್ಗಿದ ಕಳ್ಳರು ಅಲ್ಲಿದ್ದ ಬೆಳ್ಳಿಯ ದೀಪಗಳನ್ನು ಕಳವುಗೈದರಾದರೂ, ಅಲ್ಲಿದ್ದ ನಗದನ್ನು ಮುಟ್ಟಿರಲಿಲ್ಲ. ಮನೆಯಲ್ಲಿದ್ದ ಕಪಾಟುಗಳನ್ನು ಜಾಲಾಡಿ ಅಲ್ಲಿದ್ದ ನಗ- ನಗದು ದೋಚಿದರು. ಶರತ್ ಅವರ ಪತ್ನಿ ಕಾನೂನು ಪದವೀಧರೆಯಾಗಿದ್ದು, ಅವರ ಪದವಿಗೆ ಸಂಬಂಧಿಸಿದ ಸರ್ಟಿಪಿಕೇಟ್‌ಗಳು, ಇತರ ದಾಖಲೆಗಳಿದ್ದ ಬ್ಯಾಗನ್ನೇ ಕದ್ದೊಯ್ದಿದ್ದ ಕಳ್ಳರು ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿ ಅದನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿ ಹೋಗಿದ್ದರು. ಅಲ್ಲದೇ, ಕಳವು ನಡೆಸಿ ಹೋಗುವಾಗ ಪೋಲಿಸರಿಗೆ ತಮ್ಮ ಬೆರಳಚ್ಚು ಗುರುತು ಪತ್ತೆಯಾಗದಂತೆ ಮನೆ ಬಚ್ಚಲು ಮನೆಯಲ್ಲಿ ಕೈಕಾಲು ತೊಳೆದು ಹೋಗಿದ್ದರು. ಶರತ್ ಅವರು ರಾತ್ರಿ ಬೇಕರಿಗೆ ಬಾಗಿಲು ಹಾಕಿ ವಾಪಸ್ ಬಂದಾಗಲೇ ಇಲ್ಲಿ ಕಳ್ಳತನವಾಗಿದ್ದ ವಿಷಯ ಬೆಳಕಿಗೆ ಬಂದಿತ್ತು.

ಇನ್ನೊಂದು ಪ್ರಕರಣವು ಮುರಿಯಾಳ ಎಂಬಲ್ಲಿ ನಡೆದಿದ್ದು, ಇದು ಮೇ 17ರಂದು ಬೆಳಕಿಗೆ ಬಂದಿತ್ತು. ಇಲ್ಲಿನ ಶಾಹಿದಾ ಎಂಬವರು ಕಲ್ಲಡ್ಕದ ತನ್ನ ತವರು ಮನೆಗೆ ಹೋಗಿದ್ದ ವೇಳೆ ಈ ಘಟನೆ ನಡೆದಿತ್ತು. ಇಲ್ಲಿಯೂ ಮನೆಯ ಮುಂಭಾಗದ ಬೀಗ ಒಡೆದು ಒಳನುಗ್ಗಿದ ಕಳ್ಳರು ಸುಮಾರು 1.70 ಲಕ್ಷದ ಚಿನ್ನಾಭರಣ, 4 ಸಾವಿರ ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಎರಡೂ ಪ್ರಕರಣಗಳ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಪ್ರಕರಣಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಆಗ ದೊರೆತ ಸುಳಿವಿನ ಆಧಾರದಲ್ಲಿ ಮೇ ೨೮ರಂದು ನೆಕ್ಕಿಲಾಡಿ ಪೊಲೀಸ್ ಚೆಕ್‌ಪೋಸ್ಟ್ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರೆಲ್ಲಾ ಕರಾಯ ಪರಿಸರದವರೇ ಆಗಿದ್ದು, ತಮ್ಮ ಸುತ್ತಮುತ್ತಲಿನ ಮನೆಯವರ ಚಲನವಲವನ್ನು ಅಧ್ಯಯನ ಮಾಡಿ, ಅವರು ಮನೆಯಲ್ಲಿ ಇಲ್ಲ ಎಂದಾಗ ಮೊಬೈಲ್ ಕೂಡಾ ಹಿಡಿದುಕೊಳ್ಳದೇ ಆ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿ ತಮ್ಮ ಮನೆ ಸೇರಿಕೊಳ್ಳುತ್ತಿದ್ದರು. ಇದರಿಂದಾಗಿ ಇವರ ಮೇಲೆ ಯಾರಿಗೂ ಸಂಶಯ ಬರುತ್ತಿರಲಿಲ್ಲ. ಬಂಧಿತರಿಂದ ಕಳ್ಳತನ ಪ್ರಕರಣಕ್ಕೆ ಉಪಯೋಗಿಸಿದ ಮೂರು ಮೋಟಾರು ಸೈಕಲ್, 5.50 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

ದ.ಕ. ಜಿಲ್ಲಾ ಎಸ್ಪಿ ಸೋನಾವಣೆ ರಿಷಿಕೇಶ್ ಅವರ ನಿರ್ದೇಶನದಂತೆ ಹೆಚ್ಚುವರಿ ಎಸ್ಪಿ ಭಾಸ್ಕರ ಒಕ್ಕಲಿಗ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷರಾದ ಕು.ಗಾನ ಪಿ. ಕುಮಾರ್‌ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ಕುಮಾರ್ ಸಿ. ಕಾಂಬ್ಳೆ ಅವರ ನೇತೃತ್ವದಲ್ಲಿ ನಡೆದ ಈ ಪತ್ತೆ ಕಾರ್ಯದಲ್ಲಿ ಪ್ರೊಬೆಷನರಿ ಪಿಎಸ್‌ಐ ಅನೀಲ ಕುಮಾರ, ಎಎಸ್‌ಐ ಚೋಮ ಪಿ., ವೃತ್ತ ನಿರೀಕ್ಷಕರ ಕಚೇರಿಯ ಸಿಬ್ಬಂದಿಗಳಾದ ಶಿವರಾಮ, ಸಲೀಂ, ಧರ್ಣಪ್ಪ ಗೌಡ, ಜಗದೀಶ್ ಎ., ಉಪ್ಪಿನಂಗಡಿ ಠಾಣಾ ಸಿಬ್ಬಂದಿಗಳಾದ ಹರೀಶ್ಚಂದ್ರ, ಹರೀಶ್ ಗೌಡ, ಚಂದ್ರ, ನವೀನ, ಪ್ರತಾಪ್ ವಿನಾಯಕ, ಪುತ್ತೂರು ಗ್ರಾಮಾಂತರ ಠಾಣೆಯ ಪ್ರವೀಣ್ ರೈ, ಜಿಲ್ಲಾ ಗಣಕಯಂತ್ರ ಸಿಬ್ಬಂದಿಗಳಾದ ಸಂಪತ್, ದಿವಾಕರ, ಚಾಲಕರಾದ ಬಿ. ನವಾಝ್ ಬುಡ್ಕಿ, ಕನಕರಾಜ್ ಪಾಲ್ಗೊಂಡಿದ್ದರು. ಪೊಲೀಸರ ಈ ಕಾರ್ಯವು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.