ಅಂಬಿಕಾ ಶಿಕ್ಷಣ ಸಂಸ್ಥೆ ವತಿಯಿಂದ ಸಾವರ್ಕರ್ ಜನ್ಮದಿನಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಮಹಾನ್ ವ್ಯಕ್ತಿತ್ವಗಳ ಬಗೆಗಿನ ಅರಿವನ್ನು ಎಳೆಯರಲ್ಲಿ ಮೂಡಿಸಬೇಕಿದೆ : ನಟ್ಟೋಜ

ಪುತ್ತೂರು: ನಮ್ಮ ದೇಶವನ್ನು ಹಾಳುಮಾಡಿದವರ ಕುರಿತಾಗಿ ನಮ್ಮ ಪಠ್ಯ ಪುಸ್ತಕಗಳಲ್ಲಿ ಹಾಡಿಹೊಗಳಲಾಗುತ್ತಿದೆ. ಇದರಿಂದಾಗಿ ನಿಜವಾದ ಇತಿಹಾಸ ಮೂಲೆಗುಂಪಾಗುತ್ತಿದೆ. ದೇಶಕ್ಕಾಗಿ ಹೋರಾಡಿದವರ, ಮಡಿದವರ ಬದಲಿಗೆ ದೇಶವನ್ನು ಶೋಷಿಸಿದವರ ವೈಭವೀಕೃತ ವಿವರಗಳು ನಮ್ಮ ಮಕ್ಕಳಿಗೆ ದೊರಕುವಂತಾಗಿವೆ. ಆದರೆ ವಿನಾಯಕ ದಾಮೋದರ ಸಾವರ್ಕರ್ ಅವರಂತಹ ಮಹಾನ್ ವ್ಯಕ್ತಿತ್ವಗಳ ಬಗೆಗಿನ ಅರಿವನ್ನು ಎಳೆಯರ ಮನದಲ್ಲಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.

ಅವರು ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸಾವರ್ಕರ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಶುಕ್ರವಾರ ಆಯೋಜಿಸಲಾದ ಆನ್ ಲೈನ್ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ವೀರ ಸಾವರ್ಕರ್ ಈ ದೇಶದಲ್ಲಿ ಜನಿಸಿದ ಸಾಮಾನ್ಯ ವ್ಯಕ್ತಿಯಲ್ಲ. ಬದಲಾಗಿ ಅವರೊಂದು ಅವತಾರ ಪುರುಷ. ಅನೇಕರು ಸ್ವಾತಂತ್ರ್ಯಕ್ಕಾಗಿ ಈ ದೇಶದಲ್ಲಿ ಹೋರಾಟ ನಡೆಸಿದರೆ ಸಾವರ್ಕರ್ ಅವರು ಇಂಗ್ಲೆಂಡ್‌ಗೇ ತೆರಳಿ ಅಲ್ಲಿಯೇ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದವರು. ದುರ್ಜನರ ಸಮೀಪಕ್ಕೇ ಹೋಗಿ ಹೋರಾಟ ನಡೆಸಿದ ಸಿಂಹದ ಮರಿ ವೀರ ಸಾವರ್ಕರ್. ಇಂತಹ ಮಹಾನ್ ದೇಶಭಕ್ತ ನಮ್ಮ ಯುವಮನಸ್ಸುಗಳಿಗೆ ಮಾದರಿಯಾಗಬೇಕು ಎಂದು ಕರೆನೀಡಿದರು.

೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಇಂಗ್ಲೆಂಡಿನಲ್ಲೇ ಕೃತಿ ಪ್ರಕಟಿಸುವ ಧೈರ್ಯ ತೋರಿದವರು ಸಾವರ್ಕರ್. ವಿಶೇಷವೆಂದರೆ, ಬಿಡುಗಡೆಯಾಗುವ ಮೊದಲೇ ಆ ಕೃತಿಗೆ ನಿಷೇಧ ಹೇರಲಾಯಿತು. ಹೀಗೆ ಪುಸ್ತಕವೊಂದು ಅಚ್ಚಾಗುವ ಮೊದಲೇ ನಿಷೇಧಕ್ಕೊಳಗಾಗಿದೆ ಎನ್ನುವುದೂ ಒಂದು ವಿಶಿಷ್ಟ ದಾಖಲೆ. ಆದಾಗ್ಯೂ ಅದನ್ನು ಅಚ್ಚು ಹಾಕಿ ತಮ್ಮ ಬುದ್ಧಿವಂತಿಕೆಯಿಂದ ಭಾರತಕ್ಕೆ ರವಾನಿಸುವ ಧೈರ್ಯ ತೋರಿದ ಮಹಾನ್ ಸಾಹಸಿ ಸಾವರ್ಕರ್. ನಮಗೆ ೧೯೪೭ರಲ್ಲಿ ದೊರಕಿದ ಸ್ವಾತಂತ್ರ್ಯಕ್ಕೆ ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೇ ಮೂಲಕಾರಣ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.

ಕಾರ್ಯಕ್ರಮ ನಿರ್ವಹಿಸಿದ ಅಂಬಿಕಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ ಗಾಳಿಮನೆ ಮಾತನಾಡಿ ಸಾವರ್ಕರ್ ಅವರ ಜನ್ಮದಿನ ಜನ್ಮೋತ್ಸವವಾಗಿ ಆಚರಿಸಲ್ಪಡಬೇಕು. ಅಂಬಿಕಾ ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯತೆ, ಭಾರತೀಯತೆಯನ್ನು ಮಕ್ಕಳಲ್ಲಿ ತುಂಬುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಅಂಬಿಕಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶಂಕರನಾರಾಯಣ ಭಟ್, ಉಪನ್ಯಾಸಕರು, ಹೆತ್ತವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಂಬಿಕಾ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.