HomePage_Banner
HomePage_Banner

ಇಂದಿರಾ ಕ್ಯಾಂಟೀನ್ ಲೆಕ್ಕ ಪರಿಶೀಲನೆ ವಿಚಾರ – ಮುಂದುವರೆದ ರಾಜಕೀಯ ಮೇಲಾಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಇಂದಿರಾ ಕ್ಯಾಂಟೀನ್ ಊಟ ಕಾಂಗ್ರೆಸ್ ಮೀಟಿಂಗ್‌ಗೆ? : ನಿತೀಶ್‌ಕುಮಾರ್ ಆರೋಪ

ಪುತ್ತೂರು: ಇಂದಿರಾ ಕ್ಯಾಂಟೀನ್‌ನಲ್ಲಿ ದೊರೆಯುವ ಊಟದ ಸೌಲಭ್ಯ ಬಡವರ ಮನೆಗೆ ತಲುಪಬೇಕು, ಅಲ್ಲಿನ ಊಟ ಹಸಿದವನ ಹೊಟ್ಟೆ ಸೇರಬೇಕು ಇದಕ್ಕಾಗಿಯೇ ಸರಕಾರ ಕೊರೊನಾ ಸಮಯದಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟದ ವ್ಯವಸ್ಥೆಯನ್ನು ಮಾಡಿದೆ. ಉಚಿತವಾಗಿ ನೀಡುವ ಊಟ ಎಲ್ಲೂ ದುರುಪಯೋಗವಾಗಬಾರದು ಅದು ಯಾರಿಗೆ ಸೇರಬೇಕೋ ಅವರಿಗೇ ಸೇರಬೇಕು ಎಂಬ ಉದ್ದೇಶದಿಂದ ಶಾಸಕ ಸಂಜೀವ ಮಠಂದೂರು ಅವರು ಅಲ್ಲಿಗೆ ತೆರಳಿ ಲೆಕ್ಕ ಪರಿಶೀಲನೆ ಮಾಡಿದ್ದು ಇದರಿಂದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಗೆ ಏನು ನಷ್ಟವಾಗಿದೆ? ಅಲ್ಲಿನ ಊಟ ಕಾಂಗ್ರೆಸ್ ಮೀಟಿಂಗ್‌ಗೆ ಹೋಗಿದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕಿದೆ ಎಂದು ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್‌ಕುಮಾರ್ ಶಾಂತಿನವ ಹೇಳಿದರು.

ಕುಂಬ್ರ ಸುದ್ದಿ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶಾಸಕರು ಇಂದಿರಾ ಕ್ಯಾಂಟೀನ್‌ಗೆ ಯಾಕೆ ಹೋಗಿದ್ದಾರೆ? ಎಂಬುದನ್ನು ತಿಳಿದುಕೊಳ್ಳುವ ಕನಿಷ್ಠ ಜ್ಞಾನ ಮಾಜಿ ಶಾಸಕಿ ಇಲ್ಲವಾಗಿ ಹೋಗಿದ್ದು ಯಾಕೆ? ಶಾಸಕ ಸಂಜೀವ ಮಠಂದೂರು ಅವರ ಅಭಿವೃದ್ದಿ ಕಾರ್ಯವನ್ನು ಕಂಡು ಸಹಿಸಲು ಸಾಧ್ಯವಾಗದೆ ವಿಲವಿಲನೆ ಒದ್ದಾಡುತ್ತಿರುವ ಮಾಜಿ ಶಾಸಕಿ ಹಾಗೂ ಅವರ ಪಟಲಾಂ ಶಾಸಕರ ವಿರುದ್ದ ಇಲ್ಲದ ಆರೋಪವನ್ನು ಮಾಡುತ್ತಿರುವುದನ್ನು ಕ್ಷೇತ್ರದ ಜನ ಗಮನಿಸುತ್ತಿದ್ದಾರೆ. ಸರಕಾರದ ಯಾವುದೇ ಯೋಜನೆ ಅದು ಅರ್ಹರಿಗೆ ತಲುಪಿದೆಯೇ ಎಂಬುದನ್ನು ಅರಿತುಕೊಳ್ಳುವ ಜವಾಬ್ದಾರಿ ಶಾಸಕರಾದವರಿಗೆ ಇದೆ ಅದನ್ನೇ ಮಠಂದೂರು ಅವರು ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್‌ಗೆ ತೆರಳಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿ ಅರ್ಹರಿಗೆ ಅಲ್ಲಿನ ಸೌಲಭ್ಯ ಸಿಗುವಂತೆ ಕ್ರಮಕೈಗೊಂಡಿರುವ ಶಾಸಕರ ಪ್ರಯತ್ನವನ್ನು ಮಾಜಿ ಶಾಸಕಿಯಾಗಿ ಶಕುಂತಳಾ ಶೆಟ್ಟಿ ಅಭಿನಂದಿಸಬೇಕಿತ್ತು ಅದನ್ನು ಬಿಟ್ಟು ರಾಜಕೀಯಕ್ಕೋಸ್ಕರ ಏನೇನೋ ಮಾತನಾಡುವುದನ್ನು ಜನ ಸಹಿಸುವುದಿಲ್ಲ ಎಂದು ಹೇಳಿದರು.

ನಾಲಾಯಕ್ ಹೇಳಿಕೆಯನ್ನು ಖಂಡಿಸುತ್ತೇವೆ
ಶಾಸಕ ಸಂಜೀವ ಮಠಂದೂರು ಅವರನ್ನು ನಾಲಾಯಕ್ ಶಾಸಕರು ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ನೀಡಿರುವ ಹೇಳಿಕೆಯನ್ನು ಖಂಡಿಸುವುದಾಗಿ ನಿತೀಶ್‌ಕುಮಾರ್ ಶಾಂತಿವನ ಹೇಳಿದರು. ಯಾರೂ ಲಾಯಕ್ ಯಾರೂ ನಾಲಾಯಕ್ ಎಂಬುದನ್ನು ಮೂರು ವರ್ಷದ ಹಿಂದೆಯೇ ಜನ ತೀರ್ಮಾನಿಸಿದ್ದಾರೆ. ಶಾಸಕರಾದ ಬಳಿಕ ಒಂದು ದಿನವೂ ಬಿಡುವಿಲ್ಲದೆ ಜನ ಸೇವೆಯಲ್ಲಿ ನಿತರಾದ ಮಠಂದೂರು ಅವರ ಕಾರ್ಯವೈಖರಿಯನ್ನು ಕ್ಷೇತ್ರದ ಜನತೆ ಮೆಚ್ಚಿದ್ದಾರೆ. ಈ ಕಾರಣಕ್ಕೆ ಶಾಸಕರು ಹೋದಲ್ಲೆಲ್ಲಾ ಜನ ಆದರದಿಂದ ಗೌರವಿಸುತ್ತಾರೆ. ಪುತ್ತೂರು ಕ್ಷೇತ್ರದಲ್ಲಿ ಸಾವಿರಾರು ಅಭಿವೃದ್ದಿ ಕೆಲಸಗಳು ನಡೆದಿದೆ. ಇದುವರೆಗೆ ಆಗದ ಕೆಲಸಗಳು ಈ ಬಾರಿ ಆಗಿದೆ. ಪುತ್ತೂರು ಸರಕಾರಿ ಆಸ್ಪತ್ರೆ ಖಾಸಗಿ ಆಸ್ಪತ್ರೆಯನ್ನೂ ಮೀರಿಸುವ ರೀತಿಯಲ್ಲಿ ಅಭಿವೃದ್ದಿಯನ್ನು ಕಂಡಿದೆ. ಕೋವಿಡ್ ವಿಚಾರದಲ್ಲಿ ೪೪ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು ಗ್ರಾಮೀಣ ಭಾಗದಲ್ಲಿ ಕೋವಿಡ್ ಹರಡದಂತೆ ಎಚ್ಚರಿಕಾ ಕ್ರಮಕ್ಕೆ ಅಧಿಕಾರಿಗಳನ್ನು ನೇಮಿಸಿದ್ದಾರೆ. ಆಕ್ಸಿಜನ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಶಾಸಕರ ವಾರ್ ರೂಂ ಮೂಲಕ ನಡೆಯುತ್ತಿದೆ. ಕೋವಿಡ್ ಸಂದರ್ಭದಲ್ಲಿ ಕ್ಷೆತ್ರದ ಜನತೆ ತೊಂದರೆಗೆ ಸುಲುಕಬಾರದು, ಹಸಿವಿನಿಂದ ಇರಬಾರದು, ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಆಹೋರಾತ್ರಿ ಕೆಲಸ ಮಾಡುತ್ತಿದ್ದಾರೆ ಇದೆಲ್ಲವನ್ನೂ ಕಂಡು ಸಹಿಸದ ಶಾಸಕಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಲಸಿಕೆಯ ಬಗ್ಗೆ ಅಪಪ್ರಚಾರ
ಕೋವಿಡ್ ಲಸಿಕೆ ಅದನ್ನು ತೆಗೆದುಕೊಳ್ಳಬೇಡಿ ಅದು ಡಿಸ್ಟಿಲ್ ವಾಟರ್ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡಿದ ಪರಿಣಾಮ ಜನ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕಿದರು. ಪರಿಣಾಮ ಅನೇಕ ಸಾವುಗಳು ಸಂಭವಿಸಿತು. ಲಸಿಕೆ ಬಳಕೆಯಾಗದ ಕಾರಣ ಅದನ್ನು ವಿದೇಶಕ್ಕೆ ಕಳುಹಿಸಬೇಕಾದ ಅನಿವಾರ್ಯತೆ ಒದಗಿತ್ತು ಇದಕ್ಕೆಲ್ಲಾ ಕಾಂಗ್ರೆಸ್ ನೇರ ಹೊಣೆಗಾರರು ಎಂದು ಆರೋಪಿಸಿದರು. ಜನ ಸಂಕಷ್ಟದಲ್ಲಿರುವಾಗ ಆಡಳಿತ ಯಂತ್ರದೊಂದಿಗೆ ಕೈಜೋಡಿಸಿ ಜನರಿಗೆ ನೆರವಾಗುದನ್ನು ಬಿಟ್ಟು ಕೊರೊನಾ ಸಂಕಷ್ಟದಲ್ಲಿ ರಾಜಕೀಯ ಮಾಡುತ್ತಿರುವುದು ನ್ಯಾಯವಲ್ಲ ಇದಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಒಳಮೊಗ್ರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಳ್ಳತ್ತಾರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.