ಖಾಸಗಿ ವ್ಯಕ್ತಿಗಳಿಂದ ಸಾರ್ವಜನಿಕ ಮೈದಾನದ ದಾರಿ ಬಂದ್ – ಮಕ್ಕಳನ್ನು ಬೆದರಿಸಿ ಓಡಿಸಿದ ಗುಂಪು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಾರ್ವಜನಿಕರ ಆಕ್ರೋಶ: ಸಾರ್ವಜನಿಕ ಸೊತ್ತು ರಕ್ಷಣೆಗೆ ಆಗ್ರಹ

ಉಪ್ಪಿನಂಗಡಿ: ೩೪ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಮೈಂದಡ್ಕದ ಸಾರ್ವಜನಿಕ ಮೈದಾನಕ್ಕೆ ಹೋಗುವ ದಾರಿಯನ್ನು ಕೆಲವು ಖಾಸಗಿ ವ್ಯಕ್ತಿಗಳು ಗಿಡಗಳನ್ನು ನೆಟ್ಟು ಬಂದ್ ಮಾಡಿದ್ದಲ್ಲದೆ, ಸೈಕಲ್ ಸವಾರಿ ಮಾಡಿಕೊಂಡು ಅಲ್ಲಿಗೆ ತೆರಳಿದ್ದ ಪರಿಸರದ ಸಣ್ಣ ಮಕ್ಕಳಿಗೆ ಅಲ್ಲಿ ಆಟವಾಡುತ್ತಿದ್ದ ಗುಂಪು ಮೈದಾನಕ್ಕೆ ಬಾರದಂತೆ ಬೈದು ಅಲ್ಲಿಂದ ಓಡಿಸಿರುವ ಘಟನೆಯು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಈ ದಾರಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ನಮ್ಮೂರು- ನೆಕ್ಕಿಲಾಡಿ ಸಂಸ್ಥೆಯು ಪೊಲೀಸ್ ಇಲಾಖೆ ಹಾಗೂ ನೆಕ್ಕಿಲಾಡಿ ಗ್ರಾ.ಪಂ.ಗೆ ಮನವಿ ನೀಡಿದೆ.

ನಮ್ಮೂರು- ನೆಕ್ಕಿಲಾಡಿಯ ಸ್ಥಾಪಕಾಧ್ಯಕ್ಷ ಜತೀಂದ್ರ ಶೆಟ್ಟಿಯವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ಅನಿಲ್ ಮೆನೇಜಸ್ ಅವರ ಕುಮ್ಕಿಯಾಗಿದ್ದ ಈ ಜಾಗವು ಇಬ್ಬರೊಳಗೆ ನ್ಯಾಯಾಲಯದೊಳಗೆ ಇತ್ಯರ್ಥಗೊಂಡು ೩೪ ನೆಕ್ಕಿಲಾಡಿ ಗ್ರಾಮಕ್ಕೆ ಮೈಂದಡ್ಕ ಎಂಬಲ್ಲಿ ಸಾರ್ವಜನಿಕ ಮೈದಾನವೊಂದು ದೊರಕಿದೆ. ಇದು ಸಾರ್ವಜನಿಕರಿಗೆ ಸೇರಿದ ಮೈದಾನವೇ ಹೊರತು, ಯಾರದ್ದೇ ಖಾಸಗಿ ವ್ಯಕ್ತಿಗಳ ಸ್ವಂತ ಆಸ್ತಿಯಲ್ಲ. ಈ ಮೈದಾನಕ್ಕೆ ತೆರಳಲು ದಾರಿಯೊಂದನ್ನು ಮಾಡಲಾಗಿತ್ತು. ಮೈದಾನದ ಪಕ್ಕದಲ್ಲೇ ಕ್ರೈಸ್ತರ ದಫನ ಭೂಮಿಯಿದ್ದು, ಯಾರಾದರೂ ಮರಣ ಹೊಂದಿದರೆ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಅವರ ವಾಹನ ನಿಲ್ಲಿಸಲು ಕಿರಿದಾದ ರಸ್ತೆಯ ಬದಿ ಜಾಗವಿಲ್ಲದಿದ್ದುದರಿಂದ ಅವರು ಕೂಡಾ ತಮ್ಮ ವಾಹನಗಳನ್ನು ನಿಲ್ಲಿಸಲು ಈ ಮೈದಾನವನ್ನು ಉಪಯೋಗಿಸುತ್ತಿದ್ದರು. ಸಂಜೆಯ ಹೊತ್ತು ಪರಿಸರದ ಮಕ್ಕಳು ಈ ಮೈದಾನದಲ್ಲಿ ಸೈಕಲ್ ಸವಾರಿ, ಆಟವಾಡುವುದು ಮಾಡುತ್ತಿದ್ದರು. ಆದರೆ ಕೆಲವು ಕಿಡಿಗೇಡಿಗಳು ಇಲ್ಲಿಯ ಪರಿಸರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಗುಂಪು ಸೇರಿ ದಾರಿಯಲ್ಲಿ ಹೋಗುವ ಹೆಂಗಸರನ್ನು, ಯುವತಿಯರನ್ನು ಚುಡಾಯಿಸುವುದು, ರಾತ್ರಿಯ ಹೊತ್ತು ಗಾಂಜಾ ಸೇವನೆ, ಮದ್ಯ ಸೇವನೆಯ ಪಾರ್ಟಿ ಮಾಡುತ್ತಿದ್ದಾರೆ. ಅಲ್ಲದೇ, ಕೊರೋನಾ ಲಾಕ್‌ಡೌನ್‌ನ ಈ ಕಠಿಣ ಮಾರ್ಗಸೂಚಿಯ ನಿರ್ಬಂಧಗಳ ನಡುವೆಯೂ ಎಲ್ಲೆಲ್ಲಿಂದಲೋ ಸುಮಾರು ೩೦ ರಿಂದ ೪೦ ಮಂದಿ ಈ ಮೈದಾನಕ್ಕೆ ಬಂದು ಆಟವಾಡುತ್ತಿದ್ದಾರೆ. ಈ ನಡುವೆ ಕೆಲವರು ಈ ಸಾರ್ವಜನಿಕ ಮೈದಾನವನ್ನು ತಮ್ಮ ಖಾಸಗಿ ಆಸ್ತಿಯೆಂಬಂತೆ ಮೇ.31 ರಂದು ಮೈದಾನಕ್ಕೆ ಹೋಗುವ ದಾರಿಗಡ್ಡವಾಗಿ ಗಿಡಗಳನ್ನು ನೆಟ್ಟಿದ್ದು, ದಾರಿಯನ್ನು ಬಂದ್ ಮಾಡುವ ಹುನ್ನಾರ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಅಂದೇ ಸಂಜೆ ಅಲ್ಲಿ ಆಟವಾಡುತ್ತಿದ್ದ ೩೦ರಷ್ಟು ಮಂದಿಯಲ್ಲಿ ಕೆಲವರು ಅದೇ ಪರಿಸರದ ಮನೆಯ ೭ ಹರೆಯದ ಬಾಲಕ ಹಾಗೂ ೧೨ ಹರೆಯದ ಆತನ ಸಹೋದರಿ ಸೈಕಲ್ ಸವಾರಿ ಮಾಡುತ್ತಾ ಆ ಮೈದಾನಕ್ಕೆ ತೆರಳಿದಾಗ ಅವರಿಗೆ ಅವ್ಯಾಚ್ಯವಾಗಿ ಬೈದು, ಇನ್ನು ನೀವು ಮೈದಾನಕ್ಕೆ ಬಂದರೆ ಜಾಗೃತೆ ಎಂದು ಬೆದರಿಸಿ, ಭಯಹುಟ್ಟಿಸಿ, ಅವರನ್ನು ಅಲ್ಲಿಂದ ಓಡಿಸಿದ್ದಾರೆ. ಮಕ್ಕಳೆಂದು ಕರುಣೆ ತೋರದ ಅವರ ವಿಕೃತ ಮನೋಸ್ಥಿತಿಯನ್ನು ಇದು ತೋರಿಸುತ್ತದೆ. ಆದ್ದರಿಂದ ಅದಕ್ಕೆ ಕಾರಣರಾದವರ ಮೇಲೆ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ಪ್ರದೇಶ ನಿರ್ಜನ ಪ್ರದೇಶವಾಗಿದ್ದು, ಇದೇ ಪ್ರದೇಶದಲ್ಲಿ ಈಗಾಗಲೇ ಒಬ್ಬ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು, ನ್ಯಾಯಾಲಯದಲ್ಲಿ ಸಾಬೀತಾಗಿದೆ. ಅಲ್ಲದೇ, ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆಯೂ ಇದೇ ಪರಿಸರದಲ್ಲಿ ಇತ್ತೀಚೆಗೆ ನಡೆದಿದೆ. ಆದ್ದರಿಂದ ಇಲ್ಲಿ ಮೈದಾನವನ್ನು ಗಾಂಜಾ ಸೇವನೆ, ಮದ್ಯದ ಪಾರ್ಟಿಗೆ ದುರುಪಯೋಗ ಪಡಿಸಿಕೊಳ್ಳುವ ಕಿಡಿಗೇಡಿಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಇಲ್ಲಿ ಗುಂಪು ಸೇರಿ ಆಟವಾಡುವ ವ್ಯಕ್ತಿಗಳ ಮೇಲೆಯೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮೈದಾನಕ್ಕೆ ತೆರಳುವ ದಾರಿಗಡ್ಡವಾಗಿ ಗಿಡಗಳನ್ನು ನೆಟ್ಟು ದಾರಿ ಮುಚ್ಚಲು ಹುನ್ನಾರ ನಡೆಸುವ ಮೂಲಕ ಪರಿಸರದಲ್ಲಿ ಸೌಹಾರ್ದತೆಯ ವಾತಾವರಣಕ್ಕೆ ಧಕ್ಕೆ ತಂದು ಸಂಘರ್ಷದ ವಾತಾವರಣ ನಿರ್ಮಿಸಲು ಮುಂದಾದವರ ಮೇಲೆ ಕ್ರಮ ಕೈಗೊಂಡು, ದಾರಿಗಡ್ಡವಾಗಿ ನೆಟ್ಟಿರುವ ಗಿಡಗಳನ್ನು ತೆರವುಗೊಳಿಸಬೇಕು. ಮತ್ತು ಈ ಮೈದಾನವನ್ನು ಸರ್ವಧರ್ಮೀಯರಿಗೆ ಬಳಕೆಯಾಗುವ ಸಾರ್ವಜನಿಕ ಮೈದಾನವಾಗಿ ಉಳಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದೆ. ನಮ್ಮೂರು – ನೆಕ್ಕಿಲಾಡಿ ಅಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್ ಹಾಗೂ ಕಾರ್ಯದರ್ಶಿ ರೂಪೇಶ್ ರೈ ಅಲಿಮಾರ್ ಮನವಿ ನೀಡಿದರು.

ನಾನು ಸತತ 8 ವರ್ಷದ ಹೋರಾಟ ಮಾಡಿದ್ದರಿಂದ ಮೈಂದಡ್ಕದಲ್ಲಿರುವ 55 ಸೆಂಟ್ಸ್ ಜಾಗವು ಸಾರ್ವಜನಿಕರಿಗೆ ಆಟದ ಮೈದಾನವಾಗಿ ಸಿಗುವಂತಾಗಿದೆ. ಆ ಹೋರಾಟದ ಸಂದರ್ಭದಲ್ಲಿ ನಾನು ಹಲವು ಜೀವ ಬೆದರಿಕೆಗಳನ್ನು, ಹಲವು ಸಂಘರ್ಷ, ಮಾನಸಿಕ ನೋವುಗಳನ್ನು ಅನುಭವಿಸಿದ್ದೇನೆ. ಆಗ ಪಂಚಾಯತ್ ಆಗಲೀ, ಕಂದಾಯ ಇಲಾಖೆಯಾಗಲೀ, ಹೀಗೆ ಯಾವುದೇ ಸರಕಾರದ ಇಲಾಖೆಗಳು, ಜನಪ್ರತಿನಿಧಿಗಳು ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಆಗ ನನ್ನ ಬೆಂಬಲಕ್ಕೆ ಇದ್ದವರೆಂದರೆ ಪತ್ರಕರ್ತರು ಮಾತ್ರ. ಕೊನೆಗೇ ನ್ಯಾಯಾಲಯದಲ್ಲಿ ನಾನು ಮತ್ತು ಎದುರುದಾರರು ರಾಜಿಯಲ್ಲಿ ಈ ಪ್ರಕರಣವನ್ನು ಇತ್ಯರ್ಥಪಡಿಸಿದ್ದು, ಅವರು ಈ ಜಾಗವನ್ನು 2015ರಲ್ಲಿ ಸಾರ್ವಜನಿಕ ಆಟದ ಮೈದಾನಕ್ಕೆ ಬಿಟ್ಟುಕೊಟ್ಟಿದ್ದಾರೆ. ಆ ಮೇಲೆ ಸಾರ್ವಜನಿಕರಿಗೆ ಲಭಿಸಿದೆ. ಇದು ಈಗ ಸಾರ್ವಜನಿಕ ಸೊತ್ತೇ ಹೊರತು, ಯಾರದ್ದೇ ಖಾಸಗಿ ಆಸ್ತಿಯಲ್ಲ. ಆದರೆ ಬಳಿಕದ ದಿನಗಳಲ್ಲಿ ಈ ಮೈದಾನ ರಾಜಕೀಯವಾಗಿ, ಧರ್ಮಾಧಾರಿತವಾಗಿ ಬದಲಾಗತೊಡಗಿತು. ಇದೇ ಮೈದಾನದ ಪಕ್ಕದಲ್ಲಿ ಕ್ರೈಸ್ತರ ದಫನ ಭೂಮಿ ಇದ್ದು, ಅಲ್ಲಿಗೆ ಬರುವವರು ಈ ಮೈದಾನದಲ್ಲಿಯೇ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದರು. ಆದರೆ ಮೇ.31ರಂದು ಕೆಲವರು ಇದನ್ನು ತಮ್ಮ ಖಾಸಗಿ ಆಸ್ತಿಯೆಂಬಂತೆ ತಿಳಿದುಕೊಂಡು ಮೈದಾನಕ್ಕೆ ತೆರಳುವ ದಾರಿಗಡ್ಡವಾಗಿ ಗಿಡಗಳನ್ನು ನೆಟ್ಟು ಆ ದಾರಿಯನ್ನು ಬಂದ್ ಮಾಡಿದ್ದಾರೆ. ಕೋವಿಡ್ ನಿರ್ಬಂಧದ ನಡುವೆಯೂ ಸಂಜೆ ಇಲ್ಲಿ ಗುಂಪು ಸೇರಿ ಆಟವಾಡುತ್ತಿದ್ದ ಕೆಲವರು ಆ ಸಂದರ್ಭ ಮೈದಾನಕ್ಕೆ ಸೈಕಲ್‌ನಲ್ಲಿ ತೆರಳಿದ ಏಳರ ಹಾಗೂ 12ರ ಹರೆಯದ ಮಕ್ಕಳನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಅವರನ್ನು ಮೈದಾನಕ್ಕೆ ಕಾಲಿಡಬಾರದು ಎಂದು ಅಲ್ಲಿಂದ ಅಟ್ಟಿಸಿದ್ದಾರೆ. ಇವರಿಗೆ ಈ ಅಧಿಕಾರ ಕೊಟ್ಟವರು ಯಾರು? ಅಲ್ಲದೇ, ಈ ಮೈದಾನವನ್ನು ಕೆಲವರು ಅನಧಿಕೃತ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದು, ಗಾಂಜಾ ಸೇವನೆ, ಎಣ್ಣೆ ಪಾರ್ಟಿಗಳನ್ನೂ ಕೆಲವರು ಮಾಡುತ್ತಿದ್ದಾರೆ. ಈ ಮೈದಾನವಿರುವ ಪ್ರದೇಶ ನಿರ್ಜನವಾಗಿದ್ದು, ಈಗಾಗಲೇ ಇದೇ ಪರಿಸರದಲ್ಲಿ ಏಳರ ಹರೆಯದ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ನಡೆದು, ಅಪರಾಧಿಗೆ ಕಠಿಣ ಶಿಕ್ಷೆಯಾಗಿದೆ. ಮಾನಸಿಕ ಅಸ್ವಸ್ಥೆಯೋರ್ವರ ಮೇಲೆ ಅತ್ಯಾಚಾರವೂ ನಡೆದಿದೆ. ಇದೇ ರೀತಿ ಮುಂದುವರಿದರೆ ಇಂತಹ ಪುಂಡು- ಪೋಕರಿಗಳಿಂದ ಇಲ್ಲಿ ಹೆಣ್ಣು ಮಕ್ಕಳು ದಾರಿಯಲ್ಲಿ ನಡೆಯದಂತಾಗುತ್ತದೆ. ಅಲ್ಲದೇ, ಶಾಂತಿ- ಸೌಹಾರ್ದತೆಯ ಪರಿಸರದ ನೆಮ್ಮದಿಯು ಕೆಟ್ಟು, ಸಂಘರ್ಷಕ್ಕೆ ಕಾರಣವಾಗಲಿದೆ. ನಾನು ಹೋರಾಟ ಮಾಡಿದ್ದು, ಸರ್ವಧರ್ಮದ ಸಾರ್ವಜನಿಕರ ಉಪಯೋಗಕ್ಕೆ ಸಿಗಲಿ ಎಂದು. ಯಾವುದೇ ಒಂದು ತಂಡದ ಉಪಯೋಗಕ್ಕೆ ಎಂದು ಅಲ್ಲ. ಆದ್ದರಿಂದ ಈ ಮೈದಾನದ ದಾರಿಗಡ್ಡವಾಗಿ ಹಾಕಿರುವ ತಡೆಯನ್ನು ತೆರವುಗೊಳಿಸಬೇಕು. ಇಲ್ಲಿ ಶಾಂತಿ ಕದಡುವ ಹುನ್ನಾರದ ವಿರುದ್ಧ ಎಲ್ಲರೂ ಜಾತಿ- ಪಕ್ಷ ಬೇಧ ಮರೆತು ಒಂದಾಗಿ ಹೋರಾಡಬೇಕಾಗಿದೆ – ಜತೀಂದ್ರ ಶೆಟ್ಟಿ ಅಲಿಮಾರ್ ಸ್ಥಾಪಕಾಧ್ಯಕ್ಷರು ನಮ್ಮೂರು- ನೆಕ್ಕಿಲಾಡಿ

ಪೋಟೋ: ೧ಯುಪಿಪಿತಡೆ (ಮೈದಾನಕ್ಕೆ ತೆರಳುವ ದಾರಿಯನ್ನು ಬಂದ್ ಮಾಡಿರುವುದು)

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.