ಮೊಟ್ಟೆತ್ತಡ್ಕ:ಕೋವಿಡ್ ನಿಯಂತ್ರಣ ವಾರ್ಡ್ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

-ಕೋವಿಡ್ ನಿಯಂತ್ರಣದಲ್ಲಿ ಪುತ್ತೂರು ಪ್ರಶಂಸೆ..
-ವಾರ್ಡ್‌ನಲ್ಲಿ ಕೇವಲ ೪ ಆಕ್ಟಿವ್ ಕೇಸ್..
-ಲಸಿಕೆಯಲ್ಲಿ ಅಡ್ಡಪರಿಣಾಮಗಳಿವೆಯೇ?..
-ಮಲೇರಿಯ, ಡೆಂಗ್ಯೂ ಬಗ್ಗೆ ಎಚ್ಚರವಹಿಸಿ..

ಪುತ್ತೂರು: ಕೋವಿಡ್ ೧೯ ಎರಡನೇ ಅಲೆಯಿಂದಾಗಿ ರಾಜ್ಯ ಸರಕಾರ ಕೋವಿಡ್ ಹತ್ತಿಕ್ಕುವ ಸಲುವಾಗಿ ಜೂನ್ ಏಳರ ತನಕ ಲಾಕ್‌ಡೌನ್ ವಿಧಿಸಿದೆ. ಈ ನಿಟ್ಟಿನಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಕೋವಿಡ್ ನಿಯಂತ್ರಣ ವಾರ್ಡ್ ಸಭೆಯು ನಡೆಸಲಾಗುತ್ತಿದ್ದು, ಮೊಟ್ಟೆತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಎರಡನೇ ಬಾರಿಗೆ ಕೋವಿಡ್ ನಿಯಂತ್ರಣ ಸಭೆಯು ನಗರಸಭೆ ಪೌರಾಯುಕ್ತರಾದ ಮಧು ಎಸ್.ಮನೋಹರ್‌ರವರ ಅಧ್ಯಕ್ಷತೆಯಲ್ಲಿ ಜೂ.೧ ರಂದು ಅಪರಾಹ್ನ ಜರಗಿತು.

ಕೋವಿಡ್ ನಿಯಂತ್ರಣದಲ್ಲಿ ಪುತ್ತೂರು ಪ್ರಶಂಸೆ:
ಕೋವಿಡ್ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿದ್ದರೂ ಪುತ್ತೂರು ಶಾಸಕರು, ನಗರಸಭೆಯ ಅಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಯಾರು ಕೋವಿಡ್ ವಾರಿಯರ್‍ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೋ ಅವರೆಲ್ಲಾ ಕೋವಿಡ್ ನಿರ್ವಹಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮಾತ್ರವಲ್ಲದೆ ಇದಕ್ಕೆ ಸಾರ್ವಜನಿಕರೂ ಕೂಡ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದಾರೆ. ಆದ್ದರಿಂದ ಕೋವಿಡ್ ನಿಯಂತ್ರಣದಲ್ಲಿ ಪುತ್ತೂರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಪ್ರಶಂಸೆಗೆ ಪಾತ್ರವಾಗಿದೆ ಎಂದು ನಗರಸಭಾ ಪೌರಾಯುಕ್ತರಾದ ಮಧು ಎಸ್.ಮನೋಹರ್‌ರವರು ಹೇಳಿದರು.

ವಾರ್ಡ್‌ನಲ್ಲಿ ಕೇವಲ ೪ ಆಕ್ಟಿವ್ ಕೇಸ್:
ಪ್ರಸಕ್ತ ವಾರ್ಡ್‌ನಲ್ಲಿ ಎಷ್ಟು ಕೋವಿಡ್ ಆಕ್ಟಿವ್ ಕೇಸ್ ಇದೆ ಮತ್ತು ಪ್ರೈಮರಿ ಕಾಂಟ್ಯಾಕ್ಟ್‌ನಲ್ಲಿ ಎಷ್ಟು ಮಂದಿ ಇದ್ದಾರೆ. ಅವರಿಗೆ ಮನೆಯಲ್ಲಿ ಸೌಲಭ್ಯಗಳಿದೆಯೇ ಎಂದು ಪೌರಾಯುಕ್ತರಾದ ಮಧು ಮನೋಹರ್‌ರವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಥಳೀಯ ಆಶಾ ಕಾರ್ಯಕರ್ತೆ ಮೋಹಿನಿಯವರು, ಪ್ರಸಕ್ತ ಕೇವಲ ನಾಲ್ಕು ಮಾತ್ರ ಆಕ್ಟೀವ್ ಕೇಸ್ ಇದ್ದು ಅದರಲ್ಲಿ ಓರ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು ಮೂವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಪ್ರೈಮರಿ ಕಾಂಟ್ಯಾಕ್ಟ್‌ನಲ್ಲಿ ಯಾರೂ ಇಲ್ಲ. ಮತ್ತು ಕೋವಿಡ್ ಕೇಸ್‌ವುಳ್ಳವರು ಮನೆಯಲ್ಲಿಯೇ ಸೌಲಭ್ಯಗಳೊಂದಿಗೆ ಇದ್ದಾರೆ ಎಂದು ಆಶಾ ಕಾರ್ಯಕರ್ತೆ ಮೋಹಿನಿಯವರು ಉತ್ತರಿಸಿದರು.

ಕೋವಿಡ್ ಮನೆಯನ್ನು ಸ್ಯಾನಿಟೈಸ್ ಮಾಡಬೇಕು:
ಕೋವಿಡ್ ನಿಯಂತ್ರಣ ಮಾಡಬೇಕಾದರೆ ಯಾರು ಕೋವಿಡ್‌ಗೆ ಗುರಿಯಾಗಿದ್ದಾರೋ ಅವರುಗಳ ಮನೆಯನ್ನು ಸ್ಯಾನಿಟೈಸ್ ಮಾಡಬೇಕು ಎಂದು ಸ್ಥಳೀಯ ನಗರಸಭೆ ಸದಸ್ಯೆ ಶೈಲಾ ಪೈಯವರು ಸಭೆಯಲ್ಲಿ ಅಭಿಪ್ರಾಯ ಮಂಡಿಸಿದ್ದಕ್ಕೆ ಉತ್ತರಿಸಿದ ಪೌರಾಯುಕ್ತರು, ನೋಡೋಣ ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಕೋವಿಡ್ ಲಸಿಕೆ ಕ್ಯಾಂಪ್ ಆಗಬೇಕು:
ನಗರಸಭೆಯ ಪ್ರತೀ ವಾರ್ಡ್‌ನಲ್ಲೂ ಕೋವಿಡ್ ಲಸಿಕೆ ಕ್ಯಾಂಪ್ ಆಗಬೇಕು, ಪಕ್ಕದ ಗ್ರಾಮಾಂತರ ಪ್ರದೇಶಗಳಲ್ಲಿ ಕೋವಿಡ್ ಲಸಿಕೆ ಸಿಗುತ್ತದೆ ಮಾತ್ರವಲ್ಲದೆ ಆಧಾರ್ ಕಾರ್ಡ್ ತೋರಿಸಿ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ ಮಾನವೀಯ ನೆಲೆಯಲ್ಲಿ. ನಮ್ಮಲ್ಲಿ ಯಾಕಿಲ್ಲ ಎಂಬ ಸ್ಥಳೀಯ ಪ್ರಶ್ನೆಗೆ ಉತ್ತರಿಸಿದ ಪೌರಾಯುಕ್ತರು, ಸರಕಾರದ ಮಾರ್ಗಸೂಚಿಯಂತೆ ಸರಕಾರವು ಈಗಾಗಲೇ ನಾಗರಿಕರಿಗೆ, ಕೋವಿಡ್ ವಾರಿಯರ್ಸ್‌ಗಳಿಗೆ ಹಂತ ಹಂತದಲ್ಲಿ ಕೋವಿಡ್ ಲಸಿಕೆ ನೀಡುತ್ತಾ ಬಂದಿದೆ. ಲಸಿಕೆಯನ್ನು ಒಂದೇ ಸಮನೆ ಪೂರೈಸಲು ಕಷ್ಟಸಾಧ್ಯ. ಹಂತ ಹಂತದಲ್ಲಿ ಸರಕಾರ ಪೂರೈಸುವ ಭರವಸೆಯನ್ನು ನೀಡಿದೆ ಎಂದರು.

ಲಸಿಕೆಯಲ್ಲಿ ಅಡ್ಡಪರಿಣಾಮಗಳಿವೆಯೇ?.:
ಕೋವ್ಯಾಕ್ಸಿನ್ ಆಗಲಿ ಕೋವಿಶೀಲ್ಡ್ ಲಸಿಕೆಯಾಗಲಿ, ಇವೆರಡರಲ್ಲಿ ಯಾವುದಾದರೂ ಒಂದನ್ನು ತೆಗೆದುಕೊಂಡರೆ ಅಡ್ಡ ಪರಿಣಾಮಗಳಿವೆಯೇ ಎಂಬ ಸ್ಥಳೀಯರ ಪ್ರಶ್ನೆಗೆ ಉತ್ತರಿಸಿದ ಪೌರಾಯುಕ್ತರು, ದೇಹದಲ್ಲಿ ಯಾರಿಗೆ ರೋಗನಿರೋಧಕ ಶಕ್ತಿ ಹೊಂದಿರುತ್ತಾರೋ ಅವರಿಗೆ ಲಸಿಕೆ ತೆಗೆದುಕೊಂಡಲ್ಲಿ ಯಾವುದೇ ಪರಿಣಾಮವಾಗದು. ಯಾರಲ್ಲಿ ರೋಗನಿರೋಧಕ ಶಕ್ತಿ ಅಲ್ಪಮಟ್ಟದಲ್ಲಿದ್ದೆಯೋ ಅವರಿಗೆ ಜ್ವರ, ಮೈಕೈ ನೋವು ಬರುವುದು ಸಹಜ. ಆದರೆ ಲಸಿಕೆ ಹಾಕಿಸಿಕೊಂಡರೆ ಯಾವುದೇ ಅಡ್ಡ ಪರಿಣಾಮ ಬೀರೋದಿಲ್ಲ ಎಂದು ವೈದ್ಯಕೀಯ ಅಂಕಿಅಂಶಗಳೇ ಸೂಚಿಸುತ್ತವೆ ಎಂದರು.

ಮಲೇರಿಯ, ಡೆಂಗ್ಯೂ ಬಗ್ಗೆ ಎಚ್ಚರವಹಿಸಿ:
ಪ್ರಸಕ್ತ ದಿನಗಳಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮನೆಯ ಸುತ್ತಮುತ್ತಲೂ ಎಲ್ಲೆಂದರಲ್ಲಿ ನೀರು ಶೇಖರಗೊಳ್ಳಲು ಬಿಡದೆ ಪರಿಸರವನ್ನು ಸ್ವಚ್ಚತೆಯಲ್ಲಿಟ್ಟುಕೊಳ್ಳಬೇಕಾಗುತ್ತದೆ. ಪುತ್ತೂರಿನಲ್ಲಿ ಮಲೇರಿಯ ೨, ಡೆಂಗ್ಯೂ ೯ ಸಕ್ರಿಯ ಕೇಸ್‌ಗಳಿದ್ದು, ಪುತ್ತೂರು, ಸುಳ್ಯ ಈ ಭಾಗದಲ್ಲಿ ಇಂತಹ ಕೇಸ್‌ಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ.

ಸೊಳ್ಳೆ ಉತ್ಪತ್ತಿಗೊಳ್ಳಲು ಪುತ್ತೂರು, ಸುಳ್ಯ ಮತ್ತು ಮಂಗಳೂರಿನ ವಾತಾವರಣ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕೆಮಿಕಲ್ ಸ್ಪ್ರೆ, ಫಾಗಿಂಗ್ ಅನ್ನು ನಿರಂತರ ಮಾಡಿದರೆ ಮನುಷ್ಯನ ದೇಹದ ಮೇಲೆ ಅಡ್ಡಪರಿಣಾಮ ಬೀಳಲು ಸಾಧ್ಯವಾಗುವುದು. ಆದ್ದರಿಂದ ತಮ್ಮ ಸುತ್ತಮತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸೂಕ್ತವಾಗಿದೆ ಎಂದು ಪೌರಾಯುಕ್ತರಾದ ಮಧು ಮನೋಹರ್‌ರವರು ಹೇಳಿದರು.

ಸಭೆಯಲ್ಲಿ ನಗರಸಭೆಯ ನೀರಿನ ವಿಭಾಗದ ಮುಖ್ಯಸ್ಥರಾದ ವಸಂತ್, ನಗರಸಭಾ ಇಂಜಿನಿಯರ್ ಶ್ರೀಧರ್, ಸಿಬ್ಬಂದಿಗಳಾದ ಕಾವ್ಯಾ, ಶರೀಪ್, ಸ್ಥಳೀಯರಾದ ಅಬ್ದುಲ್ಲ ಕೆ, ಉಮೇಶ್, ಗಣೇಶ್ ಆಚಾರ್ಯ, ವೇಣುಗೋಪಾಲ್ ಗೌಡ, ಹನೀಫ್, ಅಂಗನವಾಡಿ ಶಿಕ್ಷಕಿ ಶೋಭಾರವರು ಉಪಸ್ಥಿತರಿದ್ದರು.

ರೇಷನ್ ಅಂಗಡಿಗಳಲ್ಲಿ ಕೋವಿಡ್ ಕಿಟ್ ಸಿಗುವಂತಾಗಲಿ..
ರಾಜ್ಯ ಸರಕಾರ ಈಗಾಗಲೇ ರೂ.೧೨೫೦ ಕೋಟಿ ಬಜೆಟ್‌ನ್ನು ಜನತೆಗೆ ಕೋವಿಡ್ ಪ್ಯಾಕೇಜ್‌ನ್ನಾಗಿ ಘೋಷಿಸಿದೆ. ಈ ಪ್ಯಾಕೇಜಿನಲ್ಲಿ ಆಯಾ ಶ್ರಮಿಕ ವರ್ಗದವರಿಗೆ ಇಂತಿಷ್ಟು ಎಂಬಂತೆ ಹಣವನ್ನು ನೀಡುವುದಾಗಿ ಸಿಎಂ ಯಡಿಯೂರಪ್ಪರವರು ಹೇಳಿರುತ್ತಾರೆ. ಕಳೆದ ವರ್ಷ ರಿಕ್ಷಾ ಚಾಲಕರಿಗೆ ರೂ.೫ ಸಾವಿರ ಸಹಾಯಧನ ಎಂದು ಘೋಷಿಸಿದ್ದರು. ಆದರೆ ಇಲ್ಲಿ ಕೆಲವರಿಗೆ ಮಾತ್ರ ಈ ಸಹಾಯಧನ ಲಭ್ಯವಾಗಿತ್ತು. ಹೆಚ್ಚಿನ ಮಂದಿಗೆ ಲಭ್ಯವಾಗದಿರುವ ಕುರಿತು ಕೂಗು ಕೇಳಿ ಬಂದಿತ್ತು. ಪ್ರಸ್ತುತ ಭಾರತದ ನಾಗರಿಕರಿಗೆ ರೇಷನ್ ಕಾರ್ಡ್ ಎಂಬುದು ಇದೆ. ಆಯಾ ವರ್ಗದವರಿಗೆ ಇಂತಿಷ್ಟು ಹಣ ಕೊಡುವ ಬದಲು ಆಯಾ ವಾರ್ಡ್‌ನಲ್ಲಿ ರೇಷನ್ ಕಾರ್ಡಿನ ಮೂಲಕ ರೇಷನ್ ಅಂಗಡಿಗಳಿಂದ ಮನೆಗಳಿಗೆ ತಿಂಗಳಿಗೆ ಬೇಕಾಗುವಷ್ಟು ಎಲ್ಲರಿಗೂ ಅಗತ್ಯ ಸಾಮಾಗ್ರಿಗಳನ್ನು ವಿತರಿಸಿದರೆ ಯಾರು ತಾನೇ ಮಾರ್ಗಕ್ಕೆ ಬರುತ್ತಾರೆ. ಪೊಲೀಸ್‌ರವರಿಂದ ಯಾಕೆ ದಂಡ ಕಟ್ಟಿಸಿಕೊಳ್ಳಬೇಕು -ಗ್ರಾಮಾಸ್ಥರು

ಮುಕ್ರಂಪಾಡಿ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಬೇರೆ ಊರಿನವರೋರ್ವರಿಗೆ ಕೋವಿಡ್ ದೃಢಪಟ್ಟಿತ್ತು. ಈ ಬಗ್ಗೆ ಆ ಮನೆಯ ಯಜಮಾನರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ತಿಳಿಸದೆ ಅವರನ್ನು ಬೆಳಿಗ್ಗೆ ಬೆಳಕು ಮೂಡುವ ಮೊದಲೇ ಮನೆಯಿಂದ ಜಾಗ ಖಾಲಿಮಾಡಿಸಲಾಗಿತ್ತು. ಈ ಬಗ್ಗೆ ಆ ಮನೆಯವರಲ್ಲಿ ಕೇಳಿದರೆ `ನಮಗೊತ್ತಿಲ್ಲ, ಅವರು ಬೆಳಿಗ್ಗೆಯೇ ಹೊರಟು ಹೋಗಿದ್ದಾರೆ’ ಎಂಬ ಹೇಳಿರುತ್ತಾರೆ. ಈ ರೀತಿ ಆದರೆ ಹೇಗೆ ಎಂದು ನಗರಸಭಾ ಸದಸ್ಯೆ ಶೈಲಾ ಪೈಯವರು ಸಭೆಯಲ್ಲಿ ಪ್ರಶ್ನಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.