ಒಳಮೊಗ್ರು ಗ್ರಾಮದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ – ರಸ್ತೆ ಬದಿಗಳಲ್ಲಿ ನಿರುಪಯುಕ್ತ ಟಯರ್‌ಗಳು …!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೊನಾ ಮಹಾ ಮಾರಿಯ ನಡುವೆ ಕಳೆದ ಒಂದು ತಿಂಗಳಿಂದ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಪುತ್ತೂರು ಹಾಗೂ ಕಡಬ ತಾಲೂಕಿನ ಕೆಲವು ಕಡೆಗಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಕೆಲವೊಂದು ಗ್ರಾಮಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿದೆ. ಒಳಮೊಗ್ರು ಗ್ರಾಮದಲ್ಲಿಯೂ ಕಳೆದ ಒಂದು ತಿಂಗಳಿಂದ ೨೦ ಕ್ಕೂ ಮಿಕ್ಕಿ ಮಂದಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು ಒಬ್ಬರು ಮೃತಪಟ್ಟಿದ್ದಾರೆ. ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಕಾರ್ಯಕರ್ತರು ನಿರಂತರ ಶ್ರಮವಹಿಸುತ್ತಿದ್ದಾರೆ, ಇವರಿಗೆ ಒಳಮೊಗ್ರು ಗ್ರಾಪಂ ಕೂಡಾ ಸಹಕಾರವನ್ನು ನೀಡುತ್ತಿದೆ. ಆದರೆ ಒಳಮೊಗ್ರು ಗ್ರಾಮದ ಕುಂಬ್ರ ಪೇಟೆಯ ಸುತ್ತಮುತ್ತ ನಿರುಪಯುಕ್ತ ಟಯರ್‌ಗಳು ರಸ್ತೆ ಬದಿಯಲ್ಲೇ ಇದ್ದು ಇದು ಸೊಳ್ಳೆ ಉತ್ಪಾದನಾ ಕೇಂದ್ರಗಳಾಗಿ ಮಾರ್ಪಟ್ಟಿದೆ.

ಟಯರ್ ಒಳಗಡೆ ನೀರು..!
ರಸ್ತೆ ಬದಿಯಲ್ಲಿ ಸುಮಾರು ೨೦ ಕ್ಕೂ ಮಿಕ್ಕಿ ಟಯರ್‌ಗಳು ಅಲ್ಲಲ್ಲಿ ರಾಶಿ ಬಿದ್ದಿದೆ. ಟಯರ್‌ಗಳನ್ನು ತೆಗೆಯುವಂತೆ ಗ್ರಾಪಂ ಸಂಬಂಧಿಸಿದವರಿಗೆ ಸೂಚನೆಯನ್ನೂ ನೀಡಿತ್ತು. ಆದರೆ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದ್ದರೂ ನಿರುಪಯುಕ್ತ ಟಯರ್‌ಗಳು ಮಾತ್ರ ಹಾಗೇ ಉಳಿದುಕೊಂಡಿದೆ. ಕುಂಬ್ರ ಪೇಟೆಯಲ್ಲಿ ಶ್ರಮದಾನದ ಮೂಲಕ ಸ್ವಚ್ಚ ಮಾಡಲಾಗಿದೆ. ಪೇಟೆಯಲ್ಲಿರುವ ಕಸಕಡ್ಡಿಗಳನ್ನು ಸಂಪೂರ್ಣವಾಗಿ ಸ್ವಚ್ಚ ಮಾಡಲಾಗಿದೆ. ಆದರೆ ಟಯರ್‌ಗಳು ಮಾತ್ರ ನೀರು ತುಂಬಿ ಲಾರ್ವಗಳ ವಾಸಸ್ಥಾನವಾಗಿ ಮಾರ್ಪಟ್ಟಿರುವುದು ಅಪಾಯವನ್ನು ತಂದೊಡ್ಡಿದೆ.

ಹೊಳೆಗೆ ತ್ಯಾಜ್ಯ
ಕುಂಬ್ರ ಹೊಳೆಯಲ್ಲಿ ಕನಿಷ್ಠ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಸೇತುವೆಯ ಮೇಲಿಂದ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ತ್ಯಾಜ್ಯದ ಕಾರಣಕ್ಕೆ ಕುಂಬ್ರ ಸೇತುವೆಯ ಅಕ್ಕಪಕ್ಕದಲ್ಲಿರುವ ಮನೆಗಳಲ್ಲಿ ಆತಂಕ ಶುರುವಾಗಿದೆ. ವಾಹನ ಸವಾರರು, ಕೆಲವು ಮನೆಯವರೇ ಈ ತ್ಯಾಜ್ಯವನ್ನು ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಎಚ್ಚರಗೊಳ್ಳದಿದ್ದರೆ ಅಪಾಯ
ಡೆಂಗ್ಯೂ ಬಾರದಂತೆ ತಡೆಯುವಲ್ಲಿ ಗ್ರಾಪಂ ಮತ್ತು ಆರೋಗ್ಯ ಇಲಾಖೆಯ ಜೊತೆ ಸಾರ್ವಜನಿಕರು ಸಹಕಾರ ನೀಡಬೇಕಿದೆ. ಡೆಂಗ್ಯೂ ಸಾಂಕ್ರಾಮಿಕ ರೋಗವಾಗಿರುವ ಕಾರಣ ಸೊಳ್ಳೆಗಳು ವ್ಯಕ್ತಿ ನೋಡಿ ಕಚ್ಚುವುದಿಲ್ಲ ಎಂಬ ಕನಿಷ್ಠ ಜ್ಞಾನ ನಮ್ಮಲ್ಲಿರಬೇಕಿದೆ. ಪೇಟೆ ಹಾಗೂ ಮನೆಯ ಸುತ್ತ ಮುತ್ತ ಶುಚಿಯಾಗಿಡುವ ಕೆಲಸ ಸಾರ್ವಜನಿಕರದ್ದು. ಡೆಂಗ್ಯೂ ಅಪಾಯವಲ್ಲದೇ ಇದ್ದರೂ ವ್ಯಕ್ತಿಯನ್ನು ಕೊಲ್ಲಬಲ್ಲದು. ಮನೆಯ ಸುತ್ತ ಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ, ರಬ್ಬರ್ ಟ್ಯಾಪಿಂಗ್ ಚಿಪ್ಪಿಯನ್ನು ಕವುಚಿ ಹಾಕಿ, ಮನೆಯ ಸುತ್ತಮುತ್ತ ಇರುವ ಪ್ಲಾಸ್ಟಿಕ್ ಬಾಟಲಿಗಳು, ಹಳೆಯ ಪಾತ್ರೆಗಳಲ್ಲಿ ನೀರು ತುಂಬಂದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆ ನೀಡುವ ಸಲಹೆ ಸೂಚನೆಯನ್ನು ತಪ್ಪದೇ ಪಾಲಿಸಿದರೆ ಡೆಂಗ್ಯೂ ತಡೆಗಟ್ಟಬಹುದು. ನೀವು ನಿಮ್ಮ ಮನೆಯ ಸುತ್ತ ಶುಚಿಯಾಗಿಡುವುದರ ಜೊತೆಗೆ ನೆರೆ ಮನೆಯವರನ್ನು ಪ್ರೋತ್ಸಾಹಿಸಿ ಯಾಕೆಂದರೆ ಸೊಳ್ಳೆಗಳಿಗೆ ಮನೆಗಳಿಲ್ಲ ಅವು ಎಲ್ಲರ ಮನೆಗಳಿಗೂ ಅತಿಥಿಯಾಗಿ ಬರಬಹುದು ಜಾಗೃತೆ ವಹಿಸಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.