ನೆಲ್ಯಾಡಿ ಗ್ರಾ.ಪಂ.ಸಾಮಾನ್ಯ ಸಭೆ – ತುರ್ತು ನಿರ್ವಹಿಸಿದ ಕಾಮಗಾರಿ ಬಿಲ್ಲು ಪಾವತಿ ವಿಚಾರ; ಸದಸ್ಯರೊಳಗೆ ಮಾತಿನ ಚಕಮಕಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಅನಧಿಕೃತ ಅಂಗಡಿಗಳ ತೆರವಿಗೆ ನಿರ್ಣಯ
  • ಗ್ರಂಥಾಲಯ ಕಟ್ಟಡ ಉದ್ಘಾಟನೆಗೆ ನಿರ್ಧಾರ
  • ಸ್ವಚ್ಛತೆ, ಕಸವಿಲೇವಾರಿ ವಿಚಾರ ಪ್ರಸ್ತಾಪ

ನೆಲ್ಯಾಡಿ: ಕಳೆದ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ನೆಲ್ಯಾಡಿ ಪೇಟೆಯಲ್ಲಿ ನಡೆದ ತುರ್ತು ಚರಂಡಿ ದುರಸ್ತಿ ಕಾಮಗಾರಿಗೆ ಹಾಗೂ ಬೆಥನಿ-ಪಡ್ಡಡ್ಕ ರಸ್ತೆಯಲ್ಲಿ ನಡೆದ ತುರ್ತು ಕಾಮಗಾರಿ ಬಿಲ್ಲು ಮಂಜೂರಾತಿ ವಿಚಾರಕ್ಕೆ ಸಂಬಂಧಿಸಿ ಸದಸ್ಯರೊಳಗೆ ಪರ, ವಿರೋಧ ಚರ್ಚೆ ನಡೆದು ಮಾತಿನ ಚಕಮಕಿ ನಡೆದ ಘಟನೆ ನೆಲ್ಯಾಡಿ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಸಭೆ ಜೂ.೮ರಂದು ಗ್ರಾ.ಪಂ.ಅಧ್ಯಕ್ಷೆ ಚೇತನರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಪಿಡಿಒ ಮಂಜುಳ ಎನ್.,ರವರು ಈ ಹಿಂದೆ ಸದಸ್ಯ ಮೊಹಮ್ಮದ್ ಇಕ್ಬಾಲ್‌ರವರ ಮುತುವರ್ಜಿಯಲ್ಲಿ ನೆಲ್ಯಾಡಿ ಪೇಟೆಯಲ್ಲಿ ನಿರ್ವಹಿಸಿದ ಚರಂಡಿ ದುರಸ್ತಿ ಕಾಮಗಾರಿ ಹಾಗೂ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್‌ರವರ ನಿರ್ವಹಣೆಯಲ್ಲಿ ನಡೆದ ಬೆಥನಿ-ಪಡ್ಡಡ್ಕ ರಸ್ತೆಯ ತುರ್ತು ಕಾಮಗಾರಿಯ ಬಿಲ್ಲನ್ನು ಸಭೆಗೆ ಮಂಡಿಸಿದರು. ಬೆಥನಿ-ಪಡ್ಡಡ್ಕ ರಸ್ತೆ ಕಾಮಗಾರಿ ನನ್ನ ಗಮನಕ್ಕೆ ಬಂದಿಲ್ಲ ಎಂದು ವಾರ್ಡ್‌ನ ಸದಸ್ಯೆ ಉಷಾ ಜೋಯಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಬ್ದುಲ್ ಜಬ್ಬಾರ್‌ರವರು ಕಾಮಗಾರಿ ಆರಂಭಕ್ಕೆ ಮೊದಲು ಸದಸ್ಯ ಜಯಾನಂದ ಬಂಟ್ರಿಯಾಲ್‌ರವರ ಗಮನಕ್ಕೆ ತಂದಿದ್ದೇನೆ. ನಿಮಗೂ ಕರೆ ಮಾಡಿದ್ದು ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದರು. ಇದಕ್ಕೆ ಆಕ್ಷೇಪ ಸೂಚಿಸಿದ ಉಷಾ ಜೋಯಿಯವರು ಮತ್ತೆ ಆದರೂ ಕರೆ ಮಾಡಿ ವಿಚಾರ ತಿಳಿಸಬೇಕಿತ್ತು ಎಂದರು. ಈ ವಿಚಾರದ ಚರ್ಚೆ ನಡೆಯುತ್ತಿದ್ದಂತೆ ಕಳೆದ ಬಾರಿ ನೆಲ್ಯಾಡಿ ಪೇಟೆಯಲ್ಲಿ ನಡೆದ ತುರ್ತು ಚರಂಡಿ ದುರಸ್ತಿ ವಿಚಾರವೂ ಚರ್ಚೆಗೆ ಬಂದು ಸದಸ್ಯರಾದ ಜಯಾನಂದ ಬಂಟ್ರಿಯಾಲ್ ಹಾಗೂ ಮೊಹಮ್ಮದ್ ಇಕ್ಬಾಲ್‌ರವರ ನಡುವೆ ತೀವ್ರ ಮಾತಿನ ಚಕಮಕಿಯೂ ನಡೆಯಿತು. ಇತರೇ ಸದಸ್ಯರಿಂದಲೂ ಪರ, ವಿರೋಧ ಅಭಿಪ್ರಾಯ ಕೇಳಿಬಂದು ಸಭೆಯಲ್ಲಿ ಗದ್ದಲ ನಿರ್ಮಾಣಗೊಂಡಿತು. ಈ ವೇಳೆ ಮಧ್ಯಪ್ರವೇಶಿಸಿದ ಪಿಡಿಒ ಮಂಜುಳ ಎನ್.,ರವರು, ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯ ಬಗ್ಗೆ ಸದಸ್ಯರಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಇಲ್ಲಿ ಆರೋಗ್ಯಕರ ಚರ್ಚೆಯಾಗಬೇಕು ಎಂದು ಹೇಳಿದರು. ಯಾವುದೇ ಕಾಮಗಾರಿ ನಡೆಸುವ ಮೊದಲು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಗಮನಕ್ಕೆ ತರುವಂತೆ ಸದಸ್ಯರಿಗೆ ತಿಳಿಸಿರುತ್ತೇನೆ ಎಂದರು. ತುರ್ತು ಕಾಮಗಾರಿ ಎಂದು ಸದಸ್ಯರು ತಮ್ಮ ವಾರ್ಡ್‌ನಲ್ಲಿ ಕಾಮಗಾರಿ ನಿರ್ವಹಿಸಿದಲ್ಲಿ ಬಿಲ್ಲು ಪಾವತಿಗೆ ತೊಂದರೆಯಾಗಲಿದೆ ಎಂಬ ಅಭಿಪ್ರಾಯವೂ ಸಭೆಯಲ್ಲಿ ಕೇಳಿಬಂತು. ರೂ. ೫ ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಯೂ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿರಬೇಕು. ಕ್ರೀಯಾಯೋಜನೆಯಲ್ಲಿ ಸೇರ್ಪಡೆಯಾಗದೇ ಬಿಲ್ಲು ಪಾವತಿಗೂ ಅವಕಾಶವಿಲ್ಲ. ಪಾವತಿಯಾದಲ್ಲಿ ಅಧ್ಯಕ್ಷ, ಪಿಡಿಒ ತೊಂದರೆಗೆ ಸಿಲುಕುತ್ತಾರೆ ಎಂದು ಸದಸ್ಯ ರವಿಪ್ರಸಾದ್ ಶೆಟ್ಟಿ ಹೇಳಿದರು. ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್‌ರವರು ಮಾತನಾಡಿ, ಒಂದು ವಾರ್ಡ್‌ನಲ್ಲಿ ಒಮ್ಮೆ ಮಾತ್ರ ತುರ್ತು ಕಾಮಗಾರಿ ನಿರ್ವಹಿಸಬಹುದಾಗಿದೆ. ವಾರ್ಡ್‌ನಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಮೊದಲು ಅಧ್ಯಕ್ಷರು, ಉಪಾಧ್ಯಕ್ಷರ ಗಮನಕ್ಕೆ ತನ್ನಿ ಎಂದರು. ಅಂತಿಮವಾಗಿ ವರ್ಗ ೨ರಲ್ಲಿ ಗ್ರಾಮ ಪಂಚಾಯತ್‌ಗೆ ಬಂದಿರುವ ಅನುದಾನವನ್ನು ಸದಸ್ಯರಿಗೆ ಹಂಚಿಕೆ ಮಾಡಿ, ಸದಸ್ಯರ ಪಾಲಿಗೆ ಬಂದ ಅನುದಾನದಲ್ಲಿಯೇ ಅವರ ವಾರ್ಡ್‌ನಲ್ಲಿ ಈಗಾಗಲೇ ನಡೆದ ತುರ್ತು ಕಾಮಗಾರಿಯ ಬಿಲ್ಲು ಪಾವತಿಸುವುದೆಂಬ ನಿರ್ಧಾರಕ್ಕೆ ಬರಲಾಯಿತು.

ಅನಧಿಕೃತ ಅಂಗಡಿಗಳ ತೆರವಿಗೆ ನಿರ್ಣಯ:
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಅನಧಿಕೃತ ಅಂಗಡಿಗಳ ತೆರವಿಗೆ ಸಂಬಂಧಿಸಿ ಜಿ.ಪಂ.,ತಾ.ಪಂ.,ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ರವರಿಂದ ನೋಟಿಸ್ ಬಂದಿದೆ ಎಂದು ಪಿಡಿಒರವರು ಸಭೆಗೆ ವಿಚಾರ ತಿಳಿಸಿದರು. ಈ ವಿಚಾರ ಕಳೆದ ಸಾಮಾನ್ಯ ಸಭೆಯಲ್ಲೂ ಪ್ರಸ್ತಾಪಕ್ಕೆ ಬಂದಿದೆ. ಅನಧಿಕೃತ ಅಂಗಡಿಯವರಿಂದ ಪಂಚಾಯತ್‌ನಿಂದ ಏಲಂನಲ್ಲಿ ಅಂಗಡಿ ಕೊಠಡಿ ಪಡೆದುಕೊಂಡವರಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯ ಮೊಹಮ್ಮದ್ ಇಕ್ಬಾಲ್ ಹೇಳಿದರು. ಈ ವಿಚಾರವಾಗಿ ಚರ್ಚೆ ನಡೆದು ಅನಧಿಕೃತ ಅಂಗಡಿಯವರಿಗೆ ನೋಟಿಸ್ ನೀಡಿ ೧ ವಾರದೊಳಗೆ ತೆರವಿಗೆ ಸೂಚನೆ ನೀಡುವುದು. ಅವರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸದೇ ಇದ್ದಲ್ಲಿ ಪೊಲೀಸ್ ಹಾಗೂ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರ ಸಹಕಾರ ಪಡೆದುಕೊಂಡು ತೆರವುಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು. ಬಾಡಿಗೆ ಉಳಿಸಿಕೊಂಡಿರುವ ಮೊಬೈಲ್ ಅಂಗಡಿಯ ಮಾಲಕರಿಗೆ ನೋಟಿಸ್ ನೀಡಲು ನಿರ್ಣಯ ಕೈಗೊಳ್ಳಲಾಯಿತು.

ಸದಸ್ಯರಿಗೆ ಸಮಾನವಾಗಿ ಅನುದಾನ ಹಂಚಿಕೆಗೆ ನಿರ್ಣಯ:
ಗ್ರಾ.ಪಂ.ಗೆ ಬಂದಿರುವ ಅನುದಾನವನ್ನು ಸದಸ್ಯರಂತೆ ಹಾಗೂ ವಾರ್ಡ್‌ವಾರು ಹಂಚಿಕೆ ಮಾಡುವ ಕುರಿತಂತೆ ಚರ್ಚೆ ನಡೆಯಿತು. ಈ ಹಿನ್ನೆಲೆಯಲ್ಲಿ ಪಿಡಿಒರವರು ತಾ.ಪಂ.ಇಒರವರಿಗೆ ಕರೆ ಮಾಡಿ ಮಾರ್ಗದರ್ಶನ ಪಡೆದುಕೊಂಡರು. ಬಳಿಕ ಇಒರವರ ಸೂಚನೆಯಂತೆ ಒಟ್ಟು ಅನುದಾನವನ್ನು ೧೪ ಮಂದಿ ಸದಸ್ಯರಿಗೂ ಸಮಾನವಾಗಿ ಹಂಚಿಕೆ ಮಾಡಲಾಯಿತು.

ಪರವಾನಿಗೆ ನವೀಕರಣಕ್ಕೆ ಸೂಚನೆ:
ಕೆಲವೊಂದು ಅಂಗಡಿಯವರು ಪರವಾನಿಗೆ ನವೀಕರಣ ಮಾಡಿಲ್ಲ. ಇಂತವರಿಗೂ ಪರವಾನಿಗೆ ನವೀಕರಿಸುವಂತೆ ಸೂಚಿಸುವಂತೆಯೂ ಸದಸ್ಯರು ಆಗ್ರಹಿಸಿದರು. ಅಲ್ಲದೇ ದಿನಸಿ ವ್ಯಾಪಾರಕ್ಕೆ ಪರವಾನಿಗೆ ಪಡೆದುಕೊಂಡವರು ಅಲ್ಲಿ ಬೇಕರಿ ಐಟಂಗಳನ್ನೂ ಮಾರಾಟ ಮಾಡುತ್ತಿದ್ದಾರೆ. ಇಂತವರಿಗೂ ನೋಟಿಸ್ ನೀಡಿ ಅವರು ಯಾವುದಕ್ಕೆ ಪರವಾನಿಗೆ ಪಡೆದುಕೊಂಡಿದ್ದಾರೆಯೋ ಅದೇ ವ್ಯಾಪಾರ ಮಾಡುವಂತೆ ಸೂಚಿಸಬೇಕೆಂದು ಸದಸ್ಯ ಜಯಾನಂದ ಬಂಟ್ರಿಯಾಲ್ ಹೇಳಿದರು.

ಗ್ರಂಥಾಲಯ ಕಟ್ಟಡ ಉದ್ಘಾಟಿಸಿ:
೨೦೧೩-೧೪ನೇ ಸಾಲಿನಲ್ಲಿ ಗ್ರಾ.ಪಂ.ಗ್ರಂಥಾಲಯಕ್ಕೆ ಹೊಸ ಕಟ್ಟಡ ಮಂಜೂರು ಆಗಿದೆ. ಇನ್ನೂ ಹೊಸ ಕಟ್ಟಡಕ್ಕೆ ಗ್ರಂಥಾಲಯ ಸ್ಥಳಾಂತರವಾಗದೇ ಇರುವುದನ್ನು ಸದಸ್ಯ ಜಯಾನಂದ ಬಂಟ್ರಿಯಾಲ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಮಂಜುಳ ಎನ್.,ರವರು, ಸದ್ರಿ ಕಟ್ಟಡ ನಿರ್ಮಾಣ ಕಾಮಗಾರಿ ನಿರ್ಮಿತಿ ಕೇಂದ್ರದವರಿಗೆ ಟೆಂಡರ್ ಆಗಿದ್ದು ಕಟ್ಟಡ ಆಗಿದೆ. ವಿದ್ಯುತ್ ಸಂಪರ್ಕ ಬಾಕಿ ಇದೆ ಎಂದರು. ವಿದ್ಯುತ್ ಸಂಪರ್ಕ ಕಾಮಗಾರಿ ಪೂರ್ಣಗೊಳಿಸಿ ಗ್ರಂಥಾಲಯ ಕಟ್ಟಡ ಉದ್ಘಾಟನೆಗೆ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.

ಬೀದಿದೀಪ ವಿಚಾರ-ಚರ್ಚೆ;
ಪಲಸತಡ್ಕ ಎಂಬಲ್ಲಿ ಸೋಲಾರ್ ಬೀದಿದೀಪ ಅಳವಡಿಸಲಾಗಿದ್ದು ಬಿಲ್ಲು ಪಾವತಿಯಾಗಿರುವುದನ್ನು ಜಮಾಖರ್ಚಿನ ಪಟ್ಟಿಯಲ್ಲಿ ತೋರಿಸಲಾಗಿತ್ತು. ಇದಕ್ಕೆ ಸದಸ್ಯ ಆನಂದ ಪಿಲವೂರುರವರು ಆಕ್ಷೇಪ ಸೂಚಿಸಿ, ಪಲಸತ್ತಡ್ಕದಲ್ಲಿ ಹೊಸದಾಗಿ ಬೀದಿದೀಪ ಅಳವಡಿಸಲಾಗಿಲ್ಲ ಎಂದು ಹೇಳಿದರು. ಹೊಸದಾಗಿ ಅಳವಡಿಸಲಾಗಿರುವ ಕೆಲವೊಂದು ಬೀದಿ ದೀಪಗಳೂ ಸರಿಯಾಗಿ ಉರಿಯುತ್ತಿಲ್ಲ ಎಂದು ಸದಸ್ಯರು ದೂರಿದರು.

ಸ್ವಚ್ಛತೆ, ಕಸವಿಲೇವಾರಿ ವಿಚಾರ ಪ್ರಸ್ತಾಪ:
ಸ್ವಚ್ಛತೆ, ಕಸ ವಿಲೇವಾರಿ ವಿಚಾರವೂ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್‌ರವರು, ಕಸ ವಿಲೇವಾರಿ ವಿಚಾರವಾಗಿ ಈ ಹಿಂದೆ ವರ್ತಕರು, ಜನಪ್ರತಿನಿಧಿಗಳ ಜೊತೆ ಸಭೆ ನಡೆದಿದ್ದು ಬಳಿಕ ಲಾಕ್‌ಡೌನ್ ಜಾರಿಗೊಂಡಿರುವುದರಿಂದ ಅನುಷ್ಠಾನ ತಡವಾಗಿದೆ ಎಂದರು. ಪೇಟೆಯ ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಸದಸ್ಯ ಬಂಟ್ರಿಯಾಲ್ ಆಗ್ರಹಿಸಿದರು. ಉಪಸಮಿತಿಗಳಿಗೆ ಸದಸ್ಯರ ಆಯ್ಕೆ ನಡೆಯಿತು. ಭರತ್‌ರಾಜ್‌ರವರು ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರುಗಳಾದ ಜಯಾನಂದ ಬಂಟ್ರಿಯಾಲ್, ರವಿಪ್ರಸಾದ್ ಶೆಟ್ಟಿ, ಆನಂದ ಪಿಲವೂರು, ರೇಷ್ಮಾಶಶಿ, ಶ್ರೀಲಚಾ ಸಿ.ಹೆಚ್., ಯಾಕೂಬ್ ಸಲಾಂ, ಮೊಹಮ್ಮದ್ ಇಕ್ಬಾಲ್, ಪ್ರಕಾಶ್ ಪೂಜಾರಿ, ಉಷಾ ಜೋಯಿ, ಜಯಲಕ್ಷ್ಮೀ ಪ್ರಸಾದ್, ಪುಷ್ಪಾ ಪಡುಬೆಟ್ಟು, ಜಯಂತಿಯವರು ಉಪಸ್ಥಿತರಿದ್ದು ಚರ್ಚೆಯಲ್ಲಿ ಪಾಲ್ಗೊಂಡರು. ಪಿಡಿಒ ಮಂಜುಳ ಎನ್., ಸ್ವಾಗತಿಸಿ, ಸಾರ್ವಜನಿಕ ಅರ್ಜಿ, ಸರಕಾರದ ಸುತ್ತೋಲೆಯನ್ನು ಮಂಡಿಸಿದರು. ಸಿಬ್ಬಂದಿ ಶಿವಪ್ರಸಾದ್ ಜಮಾಖರ್ಚಿನ ವಿವರ ಮಂಡಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.