ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದುಗೊಳಿಸಲು ಸಮನ್ವಯ ವೇದಿಕೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ರಾಜ್ಯ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದಿರುವ ಮಕ್ಕಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಕೂಡ ರದ್ದುಗೊಳಿಸುವ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ವತಿಯಿಂದ ಸಹಾಯಕ ಆಯುಕ್ತರ ಕಛೇರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಕೊರೋನ ಮಹಾಮಾರಿಯು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಸರಿಯಾದ ರೀತಿಯ ಪಾಠ ಪ್ರವಚನ ಇಲ್ಲದೆ ಭಾಧಿಸಿರುವುದನ್ನು ಮನಗಂಡು ಹಾಗೂ ಆ ಮಕ್ಕಳ ಆರೋಗ್ಯದ ಬಗೆಗಿನ ಕಾಳಜಿಯಿಂದ ಮಾನ್ಯ ಪ್ರಧಾನ ಮಂತ್ರಿಯ ಅಧ್ಯಕ್ಷತೆಯಲ್ಲಿರುವ ಸಮಿತಿಯು ದೇಶದಲ್ಲಿ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಮಂಡಳಿಗಳ ಪರೀಕ್ಷೆಗಳನ್ನು ರದ್ದುಗೊಳಿಸಿರುತ್ತದೆ. ಅದಕ್ಕೆ ಪೂರಕವಾಗಿ ಕರ್ನಾಟಕ ರಾಜ್ಯ ಸರಕಾರ ಕೂಡ ಪಿ ಯು ಸಿ ಪರೀಕ್ಷೆಯನ್ನು ರದ್ದು ಗೊಳಿಸಿರುವುದು ಸಂತೋಷದ ವಿಷಯ. ಆದರೆ ನಮ್ಮ ರಾಜ್ಯದ ಸಿಲೆಬಸ್ ನಲ್ಲಿ ಓದುತ್ತಿರುವ ನಮ್ಮ ಮಕ್ಕಳ ಮೇಲೆ ಪರೀಕ್ಷೆ ಎಂಬ ಹೊರೆಯನ್ನು ಕೊಡುತ್ತಿರುವುದು ತಾರತಮ್ಯತೆಯ ಪರಮಾವಧಿ ಆಗಿದೆ. ರಾಜ್ಯ ಸಿಲೆಬಸ್ ನಲ್ಲಿ ಕಲಿಯುತ್ತಿರುವ ಹೆಚ್ಚಿನ ಮಕ್ಕಳು ಬಡ,ಗ್ರಾಮೀಣ ಭಾಗದ ಹಿಂದುಳಿದ ವಿಭಾಗ ಅಲ್ಪ ಸಂಖ್ಯಾತರ ಮಕ್ಕಳು ಆಗಿದ್ದು,ಅಧಿಕಾರಿ ವರ್ಗಗಳ ಹಾಗೂ ಮೇಲ್ವರ್ಗದ ಹೆಚ್ಚಿನ ಮಕ್ಕಳಿಗೆ ಅವರು ಸಿಬಿಎಸ್ ಇ,ಮತ್ತು ಐಸಿಎಸ್‌ಇ ಮಂಡಳಿಗಳ ಶಾಲೆಯಲ್ಲಿ ಕಲಿಯುವ ಕಾರಣದಿಂದ ಪರೀಕ್ಷೆಗಳು ರದ್ದಾಗಿದೆ. ಇದೇ ಸಂದರ್ಭದಲ್ಲಿ ೧೦ನೇ (ಎಸ್‌ಎಸ್‌ಎಲ್‌ಸಿ) ತರಗತಿ ಪರೀಕ್ಷೆಯನ್ನು ನಡೆಸುವುದಾಗಿ ಪ್ರಕಟಿಸಿರುವುದು ನಿಜಕ್ಕೂ ಹಾಸ್ಯಾಸ್ಪದ . ಅದಕ್ಕೆ ಇರುವ ತರ್ಕಾಧಾರ ಏನೆಂಬುದು ಅರ್ಥವಾಗುತ್ತಿಲ್ಲ.

೧೦ನೇ ತರಗತಿಯಲ್ಲಿರುವ ಮಕ್ಕಳ ಸಂಚಿತ (ಕ್ಯುಮ್ಯುಲೇಟೀವ್) ಸಾಧನೆಯನ್ನು ಪರಿಗಣಿಸಿ ಮಂಡಳಿ ಪರೀಕ್ಷೆಯಿಲ್ಲದೆ ವಸ್ತುನಿಷ್ಠವಾಗಿ ಹಾಗು ವೈಜ್ಞಾನಿಕವಾಗಿ ತೇರ್ಗಡೆಗೊಳಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ ಮತ್ತು ದೀರ್ಘಕಾಲದ ಸಾಧನೆಯನ್ನು ಪರಿಗಣಿಸಬಹುದಾಗಿದೆ. ಸಾಮಾನ್ಯವಾಗಿ ೧೦ ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳು ೧ರಿಂದ ೧೦ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ಕಲಿಯುತ್ತಿರುತ್ತಾರೆ. ಅಥವಾ ಕನಿಷ್ಠ ಮೂರು ವರ್ಷಗಳಾದರು ಒಂದು ಶಾಲೆಯಲ್ಲಿ(೮,೯ ಮತ್ತು ೧೦ನೇ ತರಗತಿ) ಮಕ್ಕಳ ೧೦ ವರ್ಷದ ಸಂಚಿತ ಸಾಧನೆ ಅಥವಾ ಮೂರು ವರ್ಷದ ಸಂಚಿತ ಸಾಧನೆ ಹೆಚ್ಚು ವಸ್ತುನಿಷ್ಠವಾಗಿರುವುದಲ್ಲದೆ ಕಲಿಕೆಯ ಹಲವು ಆಯಾಮಗಳನ್ನು ಪರಿಗಣಿಸಿ ಮಕ್ಕಳನ್ನು ತೇರ್ಗಡೆಗೊಳಿಸುವ ವಿಫುಲ ಅವಕಾಶಗಳಿವೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ೧೦ ನೇ ತರಗತಿಯನ್ನು ರದ್ದುಗೊಳಿಸದಿರುವುದು ಅವೈಜ್ಞಾನಿಕ ಮಾತ್ರವಲ್ಲ ಶೈಕ್ಷಣಿಕವಾಗಿ ತಪ್ಪು ನಿರ್ಧಾರ. ಜೊತೆಗೆ ಈಗಾಗಲೇ ಉಳಿದ ಎರಡು ಮಂಡಳಿಗಳಾದ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಂಡಳಿಗಳು ತಮ್ಮ ಪರೀಕ್ಷೆಗಳನ್ನು ರದ್ದು ಮಾಡಿರುವಾಗ, ರಾಜ್ಯ ಮಂಡಳಿಯ ಪಠ್ಯಕ್ರಮಕ್ಕೆ ಸಂಯೋಜನೆಗೊಂಡಿರುವ ಮಕ್ಕಳ ಮೇಲೆ ಪರೀಕ್ಷೆ ಹೇರುವುದು ಅಮಾನವೀಯ, ತಾರತಮ್ಯ ಮತ್ತು ಶೈಕ್ಷಣಿಕವಾಗಿ ಅಪಕ್ವ-ಅಪ್ರಬುದ್ಧ ನಿರ್ಧಾರ. ಈ ಮಕ್ಕಳು ಕಳೆದ ೧೪ ತಿಂಗಳುಗಳಿಂದ ಸಂಕಷ್ಟಕ್ಕೆ ಗುರಿಯಾಗಿದ್ದು,ಸರಿಯಾದ ಕಲಿಕಾ ವ್ಯವಸ್ಥೆಯಿಲ್ಲದೆ ಮಾನಸಿಕವಾಗಿ ಸೊರಗಿರುವ ಈ ಸಂದರ್ಭದಲ್ಲಿ ಸಮಾನಾಂತರ ತರಗತಿಯಲ್ಲಿ ಕಲಿಯುತ್ತಿರುವ ಅವರ ಗೆಳೆಯರು ಮಂಡಳಿ ಪರೀಕ್ಷೆಯಿಲ್ಲದೆ ತೇರ್ಗಡೆ ಹೊಂದಿ ಇವರು ಮಾತ್ರ ರಾಜ್ಯ ಪಠ್ಯಕ್ರಮದಲ್ಲಿ ಓದಿದಕ್ಕಾಗಿ ಪರೀಕ್ಷೆ ಬರೆಯುವುದು ಎಷ್ಟು ಸಂಮಂಜಸ.ಇದು ತಾರತಮ್ಯವಲ್ಲವೇ? ಇದು ಅತ್ಯಂತ ಅವೈಜ್ಞಾನಿಕ ನಿರ್ಧಾರ. ಮಕ್ಕಳ ನಡುವೆ ಇಂತಹ ತಾರತಮ್ಯಗಳನ್ನು ಸರಕಾರಗಳು ಮಾಡುತ್ತಿರುವುದನ್ನು ಎಸ್ಡಿಎಂಸಿ ಸಮನ್ವಯ ವೇದಿಕೆಯು ಖಂಡಿಸುತ್ತದೆ

ಸಚಿವರೂ ಕೂಡಲೇ ತಮ್ಮ ನಿರ್ಧಾರವನ್ನು ಹಿಂಪಡೆದು ಮಕ್ಕಳ ಹಾಗು ಪಾಲಕರ ಆತಂಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸಲು ೧೦ನೇ ತರಗತಿ ಪರೀಕ್ಷೆಗಳನ್ನು ಕೂಡ ರದ್ದು ಮಾಡುವಂತೆ ಎಸ್ಡಿಎಂಸಿ ಸಮನ್ವಯ ವೇದಿಕೆಯು ಆಗ್ರಹಿಸುತ್ತದೆ. ಜೊತೆಗೆ ಕಳೆದ ವರ್ಷ ಎಸ್ ಎಸ್ ಎಲ್ ಸಿ ಹಾಗು ಪಿಯುಸಿಯಲ್ಲಿ ತೇರ್ಗಡೆಯಾಗದೆ ಈಗ ಪೂರಕ ಪರೀಕ್ಷೆಗಳಿಗೆ ಸಿದ್ಧವಾಗಿದ್ದ ಪುನರಾವರ್ತಿ ವಿದ್ಯಾರ್ಥಿಗಳನ್ನು ಕೂಡ ತೇರ್ಗಡೆಗೊಳಿಸಿ ಅವರು ತಮ್ಮ ಮುಂದಿನ ಶಿಕ್ಷಣ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವ ರೀತಿಯಲ್ಲಿ ಸರಕಾರವು ತೀರ್ಮಾನವನ್ನು ಪ್ರಕಟಿಸಬೇಕು. ನಮ್ಮ ಶಕ್ತಿ, ಸಾಮರ್ಥ್ಯ ಹಾಗು ಸಂಪನ್ಮೂಲಗಳನ್ನು ಸಾಧುವಲ್ಲದ ಪರೀಕ್ಷೆಗಳಿಗೆ ವ್ಯಯಿಸುವ ಬದಲು, ೧೦ ಅಥವಾ ೧೨ ನೇ ತರಗತಿಯ ಮಕ್ಕಳಾಗಲಿ ಅಥವಾ ಇತರೆ ಯಾವುದೇ ತರಗತಿಯ ಮಕ್ಕಳ ಕಲಿಕೆ ಕಳೆದ ೧೫ ತಿಂಗಳಿಗಳಿಂದ ಸಮರ್ಪಕವಾಗಿ ನಡೆದಿಲ್ಲವೆಂಬ ಸತ್ಯವನ್ನು ಒಪ್ಪಿ, ಈ ಮಕ್ಕಳು ಮುಂದಿನ ಯಾವುದೇ ತರಗತಿಗಳಿಗೆ ತೇರ್ಗಡೆಯಾಗಿ ಹೋಗುವ ಸಂದರ್ಭದಲ್ಲಿ , ೨೦೨೧-೨೨ ನೇ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲು ಅವರಿಗೆ ಮೂರು ತಿಂಗಳ ವೇಗ ವರ್ಧಿತ ಕಲಿಕಾ ಸೇತು ಬಂಧ ಕಾರ್ಯಕ್ರಮದ ಮೂಲಕ ಕಲಿಕೆಯಲ್ಲಿನ ನಷ್ಟವನ್ನು ತುಂಬಿ ಕೊಡುವುದು ಹಾಗು ಬುನಾದಿ ಜ್ಞಾನವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಯೋಚಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯ ಮತ್ತು ಆದ್ಯತೆಯಾಗಬೇಕೆಂದು ನಾವು ಒತ್ತಾಯಿಸುತ್ತಾ ಇದ್ದೇವೆ. ಸರ್ಕಾರ ಪರೀಕ್ಷೆ ಎಂಬ ಸುಳಿಯಿಂದ ಹೊರಬಂದು ಮಕ್ಕಳ ಮುಂದಿನ ಶೈಕ್ಷಣಿಕ ಪ್ರಗತಿಯ ನಿಟ್ಟಿನಲ್ಲಿ ಮಾಡಬೇಕಾದ ಮಾರ್ಪಾಡುಗಳ ಬಗ್ಗೆ ಯೋಚಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ಎಸ್ಡಿಎಂಸಿ ರಾಜ್ಯಾಧ್ಯಕ್ಷ ಮೊಯಿದಿನ್ ಕುಟ್ಟಿ, ಲತೀಫ್ ಶಾಂತಿನಗರ ಎಸ್‌ಡಿಎಂಸಿ ತಾಲೂಕು ಸಮಿತಿ, ಚಿತ್ರ ಲೇಖ ಪುತ್ತೂರು, ಸಲೀಂ ಉಪ್ಪಿನಂಗಡಿ, ಸುಂದರ ನಾಯಕ್ ಪುತ್ತೂರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.