ಕೋವಿಡ್ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಿಲ್‌ಗೆ ಸಂಬಂಧಿಸಿ ಅಧಿಕಾರಿಗಳೊಂದಿಗೆ ಉಸ್ತುವಾರಿ ಸಚಿವರ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
 • ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿರುವ
 • ಚಿಕಿತ್ಸಾ ಶುಲ್ಕ ಮಾತ್ರ ಪಡೆಯಬೇಕು
 • * ಉಸ್ತುವಾರಿ ನೋಡಲ್ ಅಧಿಕಾರಿಗಳಿಗೆ ಜವಾಬ್ದಾರಿ
  *  ಉದಾಸೀನತೆ ತೋರುವ ಅಧಿಕಾರಿಗಳಿಗೆ ನೋಟಿಸ್

  * ಕೋಟ ಶ್ರೀನಿವಾಸ ಪೂಜಾರಿ ಸೂಚನೆ
  * ಪರಿಶೀಲನೆಗೆ ಜಿಲ್ಲಾಡಳಿತದಿಂದ ಆಡಿಟ್ ತಂಡ-ಡಿ.ಸಿ
  ಪುತ್ತೂರು: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿ ಪಡಿಸಿರುವ ಮೊತ್ತದ ಶುಲ್ಕವನ್ನು ಮಾತ್ರ ಪಡೆಯಬೇಕು. ಒಂದೊಮ್ಮೆ ಹೆಚ್ಚುವರಿ ಶುಲ್ಕವನ್ನು ಪಡೆದಲ್ಲಿ ಅದನ್ನು ಹಿಂದಿರುಗಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

  ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜೂ ೯ರಂದು ನಡೆದ ಕೋವಿಡ್ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಿಲ್‌ಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

  ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡುವ ಸಂದರ್ಭದಲ್ಲಿ ಸರ್ಕಾರ ನಿಗದಿ ಪಡಿಸಿರುವ ದರಕ್ಕಿಂತ ಹೆಚ್ಚಿನ ಚಿಕಿತ್ಸಾ ಶುಲ್ಕವನ್ನು ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಸಾರ್ವಜನಿಕರಿಂದ ಸರ್ಕಾರ ನಿಗದಿ ಪಡಿಸಿರುವ ದರಕ್ಕಿಂತ ಹೆಚ್ಚಿನ ಶುಲ್ಕ ಪಡೆಯದಂತೆ ಖಾಸಗಿ ಆಸ್ಪತ್ರೆಗಳ ಉಸ್ತುವಾರಿ ನೋಡಲ್ ಅಧಿಕಾರಿಗಳು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು. ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್ ಆಗುವಾಗ ನೀಡುವ ಡಿಸ್ಜಾರ್ಚ್ ಸಮ್ಮರಿ ಸೇರಿದಂತೆ ಚಿಕಿತ್ಸೆಗೆ ವಿಧಿಸುವ ಶುಲ್ಕಗಳ ವಿವರವನ್ನು ಪರಿಶೀಲಿಸಿ ಅವುಗಳಿಗೆ ತಪ್ಪದೇ ದೃಢೀಕರಣ ಮಾಡಬೇಕು ಎಂದ ಸಚಿವರು, ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಹಾಗೂ ಮೂಲ ಸೌಕರ್ಯಗಳನ್ನು ಪೂರೈಸುವ ಸಲುವಾಗಿ ಪ್ರತಿ ಆಸ್ಪತ್ರೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದ್ದು, ಸೋಂಕಿತರಿಗೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕು. ಆದರೆ ಕೆಲವು ಅಧಿಕಾರಿಗಳು ಈ ಬಗ್ಗೆ ಉದಾಸೀನತೆ ತೋರುತ್ತಿರುವುದು ಕಂಡು ಬಂದಿದೆ. ಅವರುಗಳಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು. ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಬರುವ ರೋಗಿಗಳಿಂದ ಯಾವುದೇ ರೀತಿಯ ಮುಂಗಡ ಹಣವನ್ನು ಪಡೆಯುವ ಆಗಿಲ್ಲ, ಖಾಸಗಿ ಆಸ್ಪತ್ರೆಗಳು ಶೇ.೫೦ರಷ್ಟು ಹಾಸಿಗೆಗಳನ್ನು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ರೆಫರ್ ಮಾಡುವ ರೋಗಿಗಳ ಚಿಕಿತ್ಸೆಗಾಗಿ ಕಾಯ್ದಿರಿಸುವುದು ಕಡ್ಡಾಯವಾಗಿದ್ದು, ಇದನ್ನು ಉಲ್ಲಂಸಿದ್ದಲ್ಲಿ ಕೆ.ಪಿ.ಎಂ.ಇ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

  ಸರ್ಕಾರ ಕಾರ್ಯಪಡೆ ಸಮಿತಿಯ ವರದಿಯನ್ನು ಆಧರಿಸಿ ಕೋವಿಡ್ ಚಿಕಿತ್ಸೆಯ ಪ್ಯಾಕೇಜ್ ದರವನ್ನು ನಿಗದಿ ಪಡಿಸಿದೆ. ಅದರನ್ವಯ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಿದ ರೋಗಿಗಳಿಂದ ಪಡೆದುಕೊಳ್ಳಬೇಕು ಎಂದು ಹೇಳಿದ ಕೋಟ ಶ್ರೀನಿವಾಸ ಪೂಜಾರಿಯವರು ಸಿ.ಟಿ ಸ್ಕ್ಯಾನಿಂಗ್‌ಗೆ ಬಿ.ಪಿ.ಎಲ್ ಕಾರ್ಡ್ ಹೊಂದಿದವರಿಂದ ರೂ.೧.೫೦೦, ಇತರರಿಂದ ರೂ.೨.೫೦೦ ಹಾಗೂ ಎಕ್ಸ್-ರೇಗೆ ೨೫೦ ರೂ.ಗಳ ಶುಲ್ಕ ಪಡೆಯಬಹುದಾಗಿದೆ. ಖಾಸಗಿ ಆಸ್ಪತ್ರೆಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಯಿಂದ ರೆಫರ್ ಮಾಡಿದ ಆಯುಷ್ಮಾನ್ ಕಾರ್ಡ್ ಹೊಂದಿರುವ ಕೋವಿಡ್ ರೋಗಿಗಳ ಒಂದು ದಿನದ ಚಿಕಿತ್ಸೆಗೆ ಜನರಲ್ ವಾರ್ಡ್‌ಗೆ ೫,೨೦೦, ಹೆಚ್.ಡಿ.ಯುಗೆ ೭,೦೦೦, ಐ.ಸಿ.ಯು ವೆಂಟಿಲೇಟರ್ ರಹಿತಕ್ಕೆ ೮,೫೦೦, ಐ.ಸಿ.ಯು ವೆಂಟಿಲೇಟರ್ ಸಹಿತ ಚಿಕಿತ್ಸೆಗೆ ೧೦,೦೦೦ ರೂ., ಪಿ.ಪಿ.ಇ ಹಾಗೂ ಇತರ ಉಪಭೋಗ್ಯ ವಸ್ತುಗಳನ್ನೊಳಗೊಂಡಂತೆ ಪಡೆಯಬೇಕು. ಸೋಂಕಿತ ರೋಗಿಗಳು ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಪ್ರವೇಶ ಪಡೆದು ಚಿಕಿತ್ಸೆ ಪಡೆದ ರೋಗಿಗಳಿಂದ ಒಂದು ದಿನಕ್ಕೆ ಜನರಲ್ ವಾರ್ಡ್‌ಗೆ ೧೦,೦೦೦, ಹೆಚ್.ಡಿಯುಗೆ ೧೨,೦೦೦, ಐ.ಸಿ.ಯು ವೆಂಟಿಲೇಟರ್ ರಹಿತ ೧೫,೦೦೦, ಐ.ಸಿ.ಯು ವೆಂಟಿಲೇಟರ್ ಸಹಿತ ೨೫.೦೦೦ ರೂಗಳನ್ನು ಪಿ.ಪಿ.ಇ ಹಾಗೂ ಇತರ ಉಪಭೋಗ್ಯ ವಸ್ತುಗಳನ್ನೊಳಗೊಂಡಂತೆ ಪಡೆಯಬೇಕು. ಒಂದೇ ಕೋಣೆಯಲ್ಲಿ ಇಬ್ಬರು ರೋಗಿಗಳು ಚಿಕಿತ್ಸೆ ಪಡೆದಲ್ಲಿ ಶೇ.೧೦ರಷ್ಟು, ಏಕ ವ್ಯಕ್ತಿ ಚಿಕಿತ್ಸೆ ಪಡೆದಲ್ಲಿ ಶೇ.೨೫ ರಷ್ಟು, ಡಿಲಕ್ಸ್ ರೂಮಿನಲ್ಲಿ ಚಿಕಿತ್ಸೆ ಪಡೆದರೆ ಅನಿಯಮಿತ ಶುಲ್ಕ ವೆಚ್ಚವನ್ನು ಪಡೆಯಬಹುದಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

  ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ ಖಾಸಗಿ ಆಸ್ಪತ್ರೆಗಳ ಬಿಲ್‌ಗಳ ಪರಿಶೀಲನೆಗೆ ಜಿಲ್ಲಾಡಳಿತ ಆಡಿಟ್ ತಂಡವನ್ನು ರಚಿಸಲಾಗಿದ್ದು, ತಂಡವು ಖಾಸಗಿ ಆಸ್ಪತೆಗಳ ಬಿಲ್‌ನ ಆಡಿಟ್ ಮಾಡಿ ಜಿಲ್ಲಾಡಳಿತಕ್ಕೆ ವರದಿ ನೀಡಲಿದೆ. ಈವರೆಗೆ ೧೧ ಖಾಸಗಿ ಆಸ್ಪತ್ರೆಯ ೮೯೬ ಕೋವಿಡ್ ರೋಗಿಗಳ ಚಿಕಿತ್ಸಾ ಬಿಲ್‌ಗಳನ್ನು ಪರಿಶೀಲಿಸಿದೆ ಎಂದರು.

  ಕೋವಿಡ್ ಸಂಬಂಧ ಖಾಸಗಿ ಆಸ್ಪತ್ರೆಯ ಮೇಲುಸ್ತುವಾರಿಗೆ ನೇಮಕ ಮಾಡಿರುವ ನೋಡಲ್ ಅಧಿಕಾರಿಗಳು ತಮ್ಮ ಹಂತದಲ್ಲಿಯೇ ಹೆಚ್ಚುವರಿ ಶುಲ್ಕವನ್ನು ಪಡೆಯದ ಹಾಗೆ ಜವಾಬ್ದಾರಿ ವಹಿಸಿ ನೋಡಬೇಕು ಎಂದರು. ಸಾರ್ವಜನಿಕರು ಕೋವಿಡ್ ಚಿಕಿತ್ಸೆ ಪಡೆದು ಶುಲ್ಕವನ್ನು ಭರಿಸುವಾಗ ಸರ್ಕಾರ ನಿಗದಿಪಡಿಸಿರುವ ದರವನ್ನು ನೀಡಬೇಕು. ಒಂದೊಮ್ಮೆ ಹೆಚ್ಚುವರಿ ಶುಲ್ಕದ ಬಿಲ್ಲನ್ನು ಖಾಸಗಿ ಆಸ್ಪತ್ರೆಗಳು ನೀಡಿದಾಗ, ಕೂಡಲೇ ಜಿಲ್ಲಾಡಳಿತ ನೇಮಕ ಮಾಡಿರುವ ನೋಡಲ್ ಅಧಿಕಾರಿಗಳ ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳನ್ನೊಳಗೊಂಡ ಸಮಿತಿಗೆ ದೂರನ್ನು ನೀಡಬೇಕು ಎಂದರು. ಖಾಸಗಿ ಆಸ್ಪತ್ರೆಯ ಚಿಕಿತ್ಸೆಗೆ ನೇರವಾಗಿ ಬಂದಂತಹ ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ಸೇರಿದಂತೆ ವೆಚ್ಚದ ಬಗ್ಗೆ ಸಲಹೆ ಸೂಚನೆಗಳನ್ನು ನೋಡಲ್ ಅಧಿಕಾರಿಗಳು ನೀಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಆಗುವ ಶುಲ್ಕ ಭರಿಸುವ ಗೊಂದಲಗಳನ್ನು ನಿವಾರಿಸಲು ಸಾಧ್ಯ ಎಂದ ಅವರು, ನೋಡಲ್ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಚಾಚು ತಪ್ಪದೇ ನಿರ್ವಹಿಸಬೇಕು. ತಮಗೆ ವಹಿಸಿರುವ ಕಾರ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.