ಗೋಳಿತೊಟ್ಟು-ಉಪ್ಪಾರಪಳಿಕೆ ರಸ್ತೆ ದುರವಸ್ಥೆ..!! ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಸಂಕಷ್ಟದ ಪಯಣ: ಪ್ರಯಾಣಿಕ, ಚಾಲಕರಿಂದ ಅಧಿಕಾರಿ, ಜನಪ್ರತಿನಿಧಿಗಳಿಗೆ ಹಿಡಿಶಾಪ…!!!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ/ಬರಹ: ಸಿದ್ದಿಕ್ ನೀರಾಜೆಉಪ್ಪಿನಂಗಡಿ: ಇದು ಯಾವುದೋ ಹಳ್ಳಿಯೊಳಗಿನ ಕೆಸರು ಗದ್ದೆಯೋ… ಅಲ್ಲ ಗಾಡಿ ರಸ್ತೆಯೋ… ಇಲ್ಲ ಗದ್ದೆಯೊಳಗೆ ರಸ್ತೆ ನಿರ್ಮಿಸಲಾಗಿದೆಯೋ ಎನ್ನುವ ಬಗ್ಗೆ ಪ್ರಶ್ನೆ ಮೂಡುವುದು ಸಹಜ. ಆದರೆ ಇದು ಗೋಳಿತೊಟ್ಟು-ಉಪ್ಪಾರಪಳಿಕೆ ರಸ್ತೆಯ ದುರವಸ್ಥೆಯಾಗಿದ್ದು, ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಸಂಚರಿಸುತ್ತಾ ತೀರಾ ಸಂಕಷ್ಟ ಎದುರಿಸುತ್ತಿರುವ ವಾಹನ ಚಾಲಕರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಗೋಳಿತೊಟ್ಟು-ಉಪ್ಪಾರಪಳಿಕೆ ಮೂಲಕ ಪಟ್ರಮೆ-ಧರ್ಮಸ್ಥಳ ಸಂಪರ್ಕ ಹಾಗೂ ಕೊಕ್ಕಡಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಗೋಳಿತೊಟ್ಟುನಿಂದ ಉಪ್ಪಾರತ್ತಾರ್ ಸೇತುವೆ ತನಕ ಸುಮಾರು ಒಂದೂವರೆ ಕಿ.ಮೀ. ರಸ್ತೆಯಲ್ಲಿ ಡಾಂಬಾರು ಸಂಪೂರ್ಣವಾಗಿ ಎದ್ದು ಹೋಗಿದ್ದು, ಅಲ್ಲಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿ ರಸ್ತೆಯಲ್ಲಿ ಕೆಸರು ತುಂಬಿಕೊಂಡು ಗದ್ದೆಯಂತಾಗಿದೆ. ಅದರಲ್ಲೂ ಮಳೆ ಸುರಿಯಿತ್ತೆಂದರೆ ರಸ್ತೆಯಲ್ಲಿ ಸಂಚರಿಸುವುದು ತೀರಾ ಅಪಾಯಕಾರಿಯಾಗಿದೆ, ವಾಹನ ಚಾಲಕರು ನರಕಯಾತನೆ ಅನುಭವಿಸುವಂತಾಗಿದೆ ಎಂದು ವಾಹನ ಚಾಲಕರು ದೂರಿಕೊಂಡಿದ್ದಾರೆ.

ಈ ರಸ್ತೆ ರಸ್ತೆ ಬೆಳ್ತಂಗಡಿ ಹಾಗೂ ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯನ್ನು ಹಂಚಿಕೊಂಡಿದೆ. ಈ ರಸ್ತೆ ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಇದ್ದು, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆಯು ಸುಸ್ಥಿತಿಯಲ್ಲಿದ್ದರೆ, ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೇವಲ ಒಂದೂವರೆ ಕಿ.ಮಿ. ಉದ್ದದ ರಸ್ತೆಯ ಭಾಗವು ಕಳೆದ ೨ ವರ್ಷಗಳ ಹಿಂದೆಯೇ ಡಾಂಬಾರು ಕಿತ್ತು ಹೋಗಿ ಸಂಚಾರಕ್ಕೆ ಅಯೋಗ್ಯವಾಗಿತ್ತು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯರು, ಶಾಸಕರಿಗೆ ಮಾಡಿರುವ ಮನವಿಗೆ ಸ್ಪಂಧನೆ ದೊರೆತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ರಸ್ತೆಯ ಸಮಸ್ಯೆಯನ್ನು ಮನಗಂಡ ಸ್ಥಳೀಯ ಯುವಕರು ಶ್ರಮದಾನದ ಮೂಲಕ ರಸ್ತೆಗೆ ಮಣ್ಣು ಹಾಕಿ ಸಂಚಾರ ಯೋಗ್ಯವನ್ನಾಗಿಸಿದ್ದರು. ಆದರೆ ಅಕಾಲಿಕ ಮಳೆಯಿಂದಾಗಿ ರಸ್ತೆಯು ಗದ್ದೆಯಂತಾಗಿದ್ದು, ಕೆಸರುಮಯವಾಗಿರುವ ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ಜಾರುವ ಸ್ಥಿತಿಗೆ ತಲುಪಿದ್ದು, ಬಹಳಷ್ಟು ವಾಹನಗಳು ಜಾರಿಕೊಂಡು ಹೋಗಿ ಚರಂಡಿಗೆ ಬಿದ್ದು ಹಾನಿಗೊಂಡ ಪ್ರಮೇಯ ಸಂಭವಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ದುಸ್ಥಿತಿಯ ರಸ್ತೆ ಬರುವ ಭಾಗವು ಪ್ರಸಕ್ತ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಯೂ ಆಗಿರುವs ಸುಳ್ಯ ಶಾಸಕ ಎಸ್. ಅಂಗಾರರವರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದು, ಅವರ ಸಕಾಲಿಕ ಸ್ಪಂದನೆ ದೊರೆಯದಿರುವ ಬಗ್ಗೆಯೂ ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಮುಖ್ಯ ರಸ್ತೆಯಾಗಿ ಮೇಲ್ದರ್ಜೆಗೇರಿದೆ-ಸರ್ವೋತ್ತಮ ಗೌಡ
ಈ ರಸ್ತೆ ಈ ಹಿಂದೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತು. ಆ ಸಂದರ್ಭದಲ್ಲಿ ಅದರ ದುರಸ್ಥಿ ಮಾಡಿಸಿದ್ದೆನು. ಆದರೆ ಇದೀಗ ಅದು ಜಿಲ್ಲಾ ಮುಖ್ಯ ರಸ್ತೆಯಾಗಿ ಮೇಲ್ದರ್ಜೆಗೆ ಏರಿದ್ದು, ಇಲ್ಲಿನ ಸಮಸ್ಯೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. -ಸರ್ವೋತ್ತಮ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು.

ಗಮನಕ್ಕೆ ಬಂದಿದ್ದು, ದುರಸ್ಥಿಗೆ ಕ್ರಮ ಕೈಗೊಳ್ಕಲಾಗುವುದು-ಪ್ರಮೋದ್ ಕುಮಾರ್
ಇಲ್ಲಿನ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಉಪ್ಪಿನಂಗಡಿ-ಹಿರೇಬಂಡಾಡಿ-ಕೊಲ-ರಾಮಕುಂಜ-ಹಳೆನೇರೆಂಕಿ-ಆಲಂತಾಯ-ಗೋಳಿತೊಟ್ಟು-ಉಪ್ಪಾರಪಳಿಕೆ ತನಕದ ೨೪ ಕಿ.ಮಿ. ಉದ್ದದ ಈ ರಸ್ತೆ ಈ ಹಿಂದೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದುದು ಇದೀಗ ಲೋಕೋಪಯೋಗಿ ಇಲಾಖೆಯ ಅಧೀನಕ್ಕೆ ಬಂದಿದೆ. ಈ ರಸ್ತೆಯ ಸಂಪೂರ್ಣ ದುರಸ್ಥಿಗೆ ಪ್ರಸ್ತಾವಣೆ ಸಲ್ಲಿಕೆಯಾಗಿದೆ. ಅದು ಆಗುವಾಗ ವಿಳಂಬ ಆಗಬಹುದು. ಆದರೆ ತುರ್ತಾಗಿ ಇದೀಗ ತೀರಾ ಹದಗೆಟ್ಟಿರುವ ಭಾಗದಲ್ಲಿ ದುರಸ್ಥಿಗೆ ಕ್ರಮ ಕೈಗೊಳ್ಳಲಾಗುವುದು-ಪ್ರಮೋದ್ ಕುಮಾರ್, ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.