ಮೈಂದನಡ್ಕ ಮೈದಾನದ ಬಗ್ಗೆ ಆರೋಪವು ಕೀಳು ಮಟ್ಟದ ರಾಜಕೀಯ: 34ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಮೈಂದಡ್ಕ ಮೈದಾನದ ವಿಚಾರವಾಗಿ ೩೪ ನೆಕ್ಕಿಲಾಡಿ ಗ್ರಾ.ಪಂ.ನಿಂದ ಸಾಮರಸ್ಯ ಒಡೆಯುವ ಕೆಲಸ ನಿರ್ಮಾಣವಾಗಿದೆ ಎಂದು ಮೈಂದನಡ್ಕದ ಸೌಹಾರ್ದತೆ ಉಳಿಸಿ ಹೋರಾಟ ಸಮಿತಿ ಹಾಗೂ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರ ಆರೋಪವು ಸತ್ಯಕ್ಕೆ ದೂರವಾದ ಹಾಗೂ ದ್ವೇಷಮಯ ವಾತಾವರಣವನ್ನು ಸೃಷ್ಟಿಸುವ ಕೀಳು ರಾಜಕೀಯವಾಗಿದೆ ಎಂದು 34ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್. ತಿಳಿಸಿದ್ದಾರೆ.

ಗ್ರಾ.ಪಂ. ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈಂದನಡ್ಕ ಮೈದಾನದ ಸುತ್ತಮುತ್ತ ಈ ಮೊದಲು ಇದ್ದ ಚರಂಡಿಯನ್ನೇ ಹೂಳು ತುಂಬಿದ ಕಾರಣಕ್ಕೆ ದುರಸ್ತಿಪಡಿಸಲಾಗಿತ್ತು. ಮಳೆಯ ನೀರು ಮೈದಾನಕ್ಕೆ ನುಗ್ಗದೆ ಚರಂಡಿಯಲ್ಲಿ ಸರಾಗವಾಗಿ ಹರಿದುಹೋಗಬೇಕೆಂಬ ಸದುದ್ದೇಶದಿಂದ ಚರಂಡಿ ದುರಸ್ತಿಗೆ ಮುಂದಾಗಿದ್ದೇವೆಯೇ ವಿನಹ ಇದರಲ್ಲಿ ಸಾಮರಸ್ಯ ಕದಡುವ ಬಗೆಯಾದರೂ ಹೇಗೆ ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ. ಮೈದಾನ ಬಳಕೆಗೆ ಯಾವುದೇ ಮತೀಯ ಅಥವಾ ಜಾತೀಯ ಮಾನದಂಡಗಳಿಲ್ಲ. ಎಲ್ಲರಿಗೂ ಮೈದಾನವನ್ನು ಆಟೋಟದಂತಹ ಚಟುವಟಿಕೆಗಳಿಗೆ ಬಳಸಲು ಅವಕಾಶವಿದೆ. ಅದಕ್ಕಾಗಿ ತಾತ್ಕಾಲಿಕ ನೆಲೆಯಲ್ಲಿ ಮೈದಾನಕ್ಕೆ ಹೋಗಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ವ್ಯವಸ್ಥೆಯನ್ನು ಬಳಸಲು ಎಲ್ಲರಿಗೂ ಅವಕಾಶವಿದ್ದು, ಮೈದಾನದ ಸುತ್ತಮುತ್ತಲೂ ವ್ಯವಸ್ಥಿತ ಚರಂಡಿ ನಿರ್ಮಿಸಿದಾಕ್ಷಣ ಸಾಮರಸ್ಯಕ್ಕೆ ಧಕ್ಕೆ ಮೂಡಿದೆ ಎನ್ನಬೇಕಾದರೆ ಯಾವುದೋ ಒಳಸಂಚು ಇದರಲ್ಲಿ ಅಡಕವಾಗಿದೆ ಎಂದು ಆರೋಪಿಸಿದ ಅವರು, ಈ ಹಿಂದೆಯೇ `ನಮ್ಮೂರು- ನಮ್ಮವರು’ ಎಂಬ ಸ್ಥಳೀಯ ನೋಂದಾಯಿತ ಸಂಘಟನೆಯ ಆಶ್ರಯದಲ್ಲಿ ಅದರ ಸ್ಥಾಪಕಾಧ್ಯಕ್ಷರಾಗಿದ್ದ ಜತೀಂದ್ರ ಶೆಟ್ಟಿಯವರು ಸಂಘಟನೆಯ ಪರವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿ ಅಲ್ಲಿನ ನಿರ್ದಿಷ್ಟ ಪ್ರದೇಶವನ್ನು ಕ್ರೀಡಾ ಮೈದಾನವಾಗಿ ಬಳಸಲು ಅನುಮತಿಯನ್ನು ಪಡೆದುಕೊಂಡಿದ್ದರು. ಬಳಿಕದ ದಿನಗಳಲ್ಲಿ ಅವರು ನಮ್ಮೂರು- ನಮ್ಮವರು ಸಂಘಟನೆಯಿಂದ ಹೊರಬಂದು ಪ್ರತ್ಯೇಕ ಸಂಘಟನೆಯನ್ನು ರಚಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ವಾಸ್ತವವಾಗಿ ಅಲ್ಲಿನ ಸರ್ವೆ ನಂಬರ್ ೮೮/೧ಪಿ೨ ಹಾಗೂ ಸರ್ವೆ ನಂಬ್ರ ೯೨/೧ಪಿ೧ರಲ್ಲಿ ೧.೬೦ ಎಕ್ರೆ ಸರಕಾರಿ ಭೂಮಿಯನ್ನು ಸ್ಥಳೀಯರು ಅತಿಕ್ರಮಿಸುವ ಸಾಧ್ಯತೆಯನ್ನು ಮನಗಂಡು ಊರಿಗೊಂದು ಸುಸಜ್ಜಿತ ಆಟದ ಮೈದಾನ ಹಾಗೂ ಗ್ರಾ.ಪಂ.ಗೆ ನಿವೇಶನ ಹಂಚಿಕೆಗೆ ೨೦೧೭-೧೮ರಲ್ಲಿ ಅಂದಿನ ಗ್ರಾ.ಪಂ. ಆಡಳಿತ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ತಿಳಿಸಿದ ಅವರು, ಸಾಮರಸ್ಯಕ್ಕೆ ಧಕ್ಕೆ ಬಂದಿದೆ ಎಂದು ಆರೋಪಿಸುವವರು ಒಂದು ಸಮುದಾಯದ ಮಂದಿಗೆ ಪಾರ್ಕಿಂಗ್‌ಗೆ ಅವಕಾಶ ನಿರಾಕರಿಸಲಾಗಿದೆ ಎಂದಿದ್ದಾರೆ. ಬರೇ ಒಂದು ಸಮುದಾಯದ ಮಂದಿಗೆ ಮಾತ್ರವಲ್ಲ. ಬದಲಾಗಿ ಯಾರಿಗೂ ಪಾರ್ಕಿಂಗ್ ಮಾಡಲು ಆಟದ ಮೈದಾನದೊಳಗೆ ಅವಕಾಶವಿಲ್ಲ. ಯಾಕೆಂದರೆ ಮೈದಾನದಲ್ಲಿ ವಾಹನ ಸಂಚರಿಸುವಾಗ ಏರುತಗ್ಗುಗಳು ನಿರ್ಮಿಸಲ್ಪಟ್ಟು ಆಟೋಟ ಚುಟುವಟಿಕೆಗೆ ಅಡಚಣೆಯಾಗುವುದೆಂಬ ಕಾರಣಕ್ಕೆ ಎಲ್ಲೆಡೆ ಮೈದಾನದಲ್ಲಿ ವಾಹನಗಳನ್ನು ಇಳಿಸಲು ಅವಕಾಶ ನೀಡುವುದಿಲ್ಲ. ಇಲ್ಲಿಯೂ ಈ ಮೈದಾನದಲ್ಲಿ ವಾಹನ ನಿಲುಗಡೆ ಅಥವಾ ವಾಹನ ಚಲಾವಣೆಗೆ ಅವಕಾಶ ಲಭಿಸುವುದಿಲ್ಲ ಎಂದಾದರೆ ಅದು ಎಲ್ಲರಿಗೂ ಅನ್ವಯಿಸುವಂತೆ ಆಗಿದೆಯೇ ವಿನಹ ಯಾವುದೇ ಒಂದು ಮತೀಯರಿಗೆ ಮಾತ್ರ ತಡೆಯೊಡ್ಡಲಾಗಿದೆ ಎಂಬ ಆಪಾದನೆಯೇ ವಿಚಿತ್ರವಾಗಿದೆ. ಅದೇ ಆಟದ ಮೈದಾನದ ಸಮೀಪ ಎಲ್ಲರಿಗೂ ವಾಹನ ನಿಲುಗಡೆಗೆ ಅವಕಾಶವಾಗಲೆಂದು ಸುಮಾರು ೧೦ ಸೆಂಟ್ಸ್ ಭೂಮಿಯನ್ನು ಸಮತಟ್ಟು ಮಾಡಲಾಗಿದೆ. ಇಲ್ಲಿ ಎಲ್ಲರಿಗೂ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಪರಿಸರದಲ್ಲಿ ಮಹಿಳೆಯರಿಗೆ ಚುಡಾಯಿಸುವುದು, ಗಾಂಜಾ ವ್ಯಸನಿಗಳ ಹಾವಳಿ ಇದೆ ಎಂದು ಅಪಾದಿಸುವವರು ಅಂತಹ ಮಂದಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡಲಿ. ಅದು ಬಿಟ್ಟು ಇಲ್ಲಿ ಇಷ್ಟೆಲ್ಲಾ ಅವಕಾಶಗಳಿದ್ದರೂ, ಸಾಮರಸ್ಯಕ್ಕೆ ಧಕ್ಕೆ ಎಂದು ಒತ್ತಿ ಹೇಳುವ ಹಿಂದೆ ಒಂದು ಸಮುದಾಯವನ್ನು ಎತ್ತಿಕಟ್ಟಿ ಭೂಮಿಯನ್ನು ಮತ್ತೆ ಅತಿಕ್ರಮಿಸುವ ಹುನ್ನಾರ ನಡೆದಿರುವ ಸಾಧ್ಯತೆಯಿದೆ ಎಂದು ಸಂಶಯವ್ಯಕ್ತಪಡಿಸಿದ ಅವರು, ಸುಳ್ಳು ಆರೋಪಗಳು ಮೂಲಕ ಆಡಳಿತ ವ್ಯವಸ್ಥೆಯನ್ನು ಧಮನಿಸಬಹುದೆಂಬ ಕನಸನ್ನು ಯಾರಾದರೂ ಹೊಂದಿದ್ದರೆ ಅದನ್ನು ತಕ್ಷಣವೇ ನಿಲ್ಲಿಸಬೇಕು. ಮೈದಾನದಲ್ಲಿ ಯಾರೆಷ್ಟೇ ಅಬ್ಬರಿಸಿ ಬೊಬ್ಬಿರಿಸಿದರೂ ವಾಹನ ಪಾರ್ಕಿಂಗ್‌ಗೆ ಯಾರಿಗೂ ಅವಕಾಶ ನೀಡಲಾಗದು ಎಂದರಲ್ಲದೆ, ಪ್ರಶ್ನೆಯೊಂದಕ್ಕೆ ಉತ್ತರಿಸಿ ಮೈದಾನದಲ್ಲಿ ಮಕ್ಕಳು ಸೈಕಲ್ ಸವಾರಿ ಕಲಿಯಬೇಕು. ವೃದ್ಧರೂ ಮೈದಾನದ ಪ್ರಯೋಜನ ಪಡೆಯುವಂತಾಗಬೇಕು ಎಂಬುದು ನಮಗೂ ಇದೆ. ಆದರೆ ಆ ಮೈದಾನ ಈಗ ಗ್ರಾ.ಪಂ.ಗೆ ಹಸ್ತಾಂತರವಾಗಿಲ್ಲ. ಗ್ರಾ.ಪಂ.ಗೆ ಮೈದಾನ ಹಸ್ತಾಂತರ ಆದ ಬಳಿಕ ಈಗಿರುವ ಕಾಲು ಪಾಪು ತೆಗೆದು ಅದಕ್ಕೆ ದಾರಿ ಮಾಡಿಕೊಡಲಾಗುವುದು ಎಂದರು.

ಮೈದಾನಕ್ಕೆ ಮಕ್ಕಳನ್ನು ಬಾರದಂತೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಪೊಲೀಸ್ ದೂರನ್ನು ಹಿಂದೆಗೆದುಕೊಳ್ಳಿ ಎಂದು ಪಂಚಾಯತ್ ಅಧ್ಯಕ್ಷರು ವಿನಂತಿಸಿದ್ದಾರೆಂಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ. ಅವರ ಆರೋಪ ಸತ್ಯಕ್ಕೆ ದೂರವಾಗಿದ್ದು, ಸ್ಥಳ ಪರಿಶೀಲನೆಗೆ ಹೋದ ವೇಳೆ ಸ್ಥಳಕ್ಕೆ ಆಗಮಿಸಿದ ಡಾ. ರಾಜಾರಾಮ ಮತ್ತವರ ಪಕ್ಷದ ಮುಂದಾಳುಗಳ ನಿಯೋಗಕ್ಕೆ ಸುಳ್ಳು ದೂರು ನೀಡಿರುವುದನ್ನು ನಾವು ಮನವರಿಕೆ ಮಾಡಿಕೊಟ್ಟಿದ್ದಲ್ಲದೆ, ಸುಳ್ಳು ದೂರನ್ನು ಹಿಂದೆಗೆದುಕೊಂಡರೆ ದಾರಿ ಬಳಿ ನೆಟ್ಟಂತಹ ಕ್ರೋಟಾನ್ ಗಿಡಗಳನ್ನು ತೆರವುಗೊಳಿಸಲು ಸೂಚಿಸುವೆನು ಎಂದಿದ್ದೆ. ಅಂತೆಯೇ ಕ್ರೋಟಾನ್ ಗಿಡಗಳನ್ನು ತೆರವುಗೊಳಿಸಲಾಗಿತ್ತು. ಈ ವೇಳೆ ಮುರಳೀಧರ ರೈ ಮಠಂತಬೆಟ್ಟು, ಡಾ. ರಘು ರಂತಹ ನಾಯಕರು ಅವರ ಜೊತೆಗಿದ್ದರು. ಆದರೆ ಅಂದು ಮಾತುಕೊಟ್ಟಂತೆ ಕ್ರೋಟಾನ್ ಗಿಡಗಳನ್ನು ಕಿತ್ತು ನಾವು ಮಾತು ಉಳಿಸಿಕೊಂಡಿದ್ದೇವೆ. ಆದರೆ ಸುಳ್ಳು ದೂರು ಹಿಂದೆಗೆಯಲ್ಪಟ್ಟಿದೆಯೇ ಎಂದು ಪ್ರಶ್ನಿಸಿದರು.

ಇಷ್ಟಿದ್ದರೂ ಮುಂದಾಳುಗಳೆಲ್ಲಾ ಬಂದು ಸಾಮರಸ್ಯಕ್ಕೆ ಧಕ್ಕೆ ಎಂದು ಬೊಬ್ಬಿರಿಸುವುದು ಯಾಕೆ ಎಂದು ಅರ್ಥವಾಗುತ್ತಿಲ್ಲ. ಯಾವ ಭೂಗಳ್ಳರಿಗೋಸ್ಕರ ಸಾಮರಸ್ಯದ ಧ್ವನಿ ಅನಾವರಣಗೊಳಿಸಲಾಗುತ್ತಿದೆ ಎನ್ನುವುದನ್ನು ಮಾಜಿ ಶಾಸಕಿಯವರು ಸಾರ್ವಜನಿಕರಿಗೆ ತಿಳಿಸಬೇಕೆಂದು ಅವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಸ್ವಪ್ನ ಜೀವನ್, ಸದಸ್ಯರಾದ ವಿಜಯಕುಮಾರ್, ರಮೇಶ್ ಸುಭಾಶ್‌ನಗರ, ಹರೀಶ್ ಬೊಳ್ಳಾರ್, ಸುಜಾತ ರೈ, ವೇದಾವತಿ, ರತ್ನಾವತಿ, ಗೀತಾ ಉಪಸ್ಥಿತರಿದ್ದರು.

ಗ್ರಾ.ಪಂ. ಕಚೇರಿಯ ಎದುರು ಇರುವ ಹಳೆ ರಾಷ್ಟ್ರೀಯ ಹೆದ್ದಾರಿಯನ್ನೇ ಖಾಸಗಿ ವ್ಯಕ್ತಿಯೋರ್ವರು ಮಣ್ಣುಹಾಕಿ ಮುಚ್ಚಿದ್ದಾರೆ. ಇದರಿಂದ ಗ್ರಾ.ಪಂ. ಕಚೇರಿಗೆ ಬರುವ ಮೊದಲಿನ ದಾರಿಯೂ ಇಲ್ಲದಂತಾಗಿದೆ. ಸಾರ್ವಜನಿಕರಿಗೂ ಸಮಸ್ಯೆಯಾಗಿದೆ. ಸಾರ್ವಜನಿಕರ ಆಸ್ತಿ ರಕ್ಷಣೆಯ ಬಗ್ಗೆ ಕಾಳಜಿ ಹೊಂದಿರುವ ನೀವು ನಿಮ್ಮ ಕಚೇರಿಯ ಎದುರಿನ ಸಾರ್ವಜನಿಕ ಸೊತ್ತಿನ ಮೂಲ ಸ್ವರೂಪವನ್ನೇ ಖಾಸಗಿ ವ್ಯಕ್ತಿಗಳು ಬದಲಾಯಿಸಿದ್ದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಅವರು, ಈ ಬಗ್ಗೆ ಜಿಲ್ಲಾಧಿಕಾರಿಗೆ ಮೌಖಿಕವಾಗಿ ತಿಳಿಸಲಾಗಿದೆ ಎಂದರು ಅಲ್ಲದೇ, ಮಳೆ ನೀರು ಹರಿದು ಹೋಗಬೇಕೆಂಬ ಉದ್ದೇಶದಿಂದ ಚರಂಡಿ ಮಾಡುವಾಗ ಮೈದಾನದ ಒಂದು ಬದಿ ಚರಂಡಿ ಮಾಡದೇ ಅಲ್ಲಿ ಮೈದಾನದ ಬದಿಗೆ ಮಣ್ಣು ತಂದು ರಾಶಿ ಹಾಕಿ ಮಣ್ಣಿನ ದಿಬ್ಬ ನಿರ್ಮಿಸಿದ್ದು ಯಾಕೆ? ಇದರಿಂದ ಅಲ್ಲಿ ನೀರು ಹರಿಯಲು ಜಾಗವಿಲ್ಲದೆ ನೀರು ನಿಲ್ಲುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ಆ ಪ್ರದೇಶದಲ್ಲಿ ಕೊಳವೆ ಬಾವಿಯೊಂದಿದ್ದು, ಆದ್ದರಿಂದ ಅಲ್ಲಿ ನೀರಿಂಗಿಸೋಣ ಎಂದು ಹಾಗೆ ಮಾಡಿದ್ದು ಎಂದು ಸ್ಪಷ್ಟನೆ ನೀಡಿದರು. ಅಗತ್ಯವಿರುವ ಜನನಿಬಿಡ ಪ್ರದೇಶವಾದ ಕರ್ವೇಲ್‌ನಲ್ಲಿ ತಳ್ಳುಗಾಡಿಗಳಿಗೆ ಅವಕಾಶ ನಿರಾಕರಿಸಿ, ನಿರ್ಜನ ಪ್ರದೇಶವಾದ ಮೈಂದಡ್ಕದಲ್ಲಿ ತಳ್ಳುಗಾಡಿಗಳಿಗೆ ಅವಕಾಶ ನೀಡಿರುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನೆಕ್ಕಿಲಾಡಿ ಗ್ರಾ.ಪಂ.ನ ಹಾಗೂ ಪೆರ್ನೆ ಗ್ರಾ.ಪಂ.ನ ಗಡಿಭಾಗ ಕರ್ವೇಲ್. ಇದರ ಗಡಿ ಗುರುತು ಇನ್ನೂ ಸ್ಪಷ್ಟತೆಯಾಗಿಲ್ಲ. ಆ ಬಳಿಕ ಅಲ್ಲಿ ತಳ್ಳುಗಾಡಿಗೆ ಅವಕಾಶ ನೀಡುವ ಬಗ್ಗೆ ಯೋಚಿಸಲಾಗುವುದು ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.