HomePage_Banner
HomePage_Banner

ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ವಿರುದ್ಧ ಮುಂಡೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ:ಯೂಸುಫ್ ರೆಂಜಲಾಡಿ

  • ಕಾರ್ಪೋರೇಟ್‌ಗಳ ಪರವಾಗಿರುವ ಸರಕಾರಕ್ಕೆ ಜನರ ಸಮಸ್ಯೆ ಅರ್ಥವಾಗುವುದಿಲ್ಲ-ಎಂ.ಬಿ ವಿಶ್ವನಾಥ್
  • ಬೆಲೆಯೇರಿಕೆಯಿಂದ ಬಿಜೆಪಿಯವರೇ ರೋಸಿ ಹೋಗಿದ್ದಾರೆ-ಹೇಮನಾಥ ಶೆಟ್ಟಿ

ಪುತ್ತೂರು: ಬಿಜೆಪಿ ಸರಕಾರ ಕಾಪೋರೇಟ್ ಪರವಾಗಿರುವ ಸರಕಾರವಾಗಿದ್ದು ಜನಸಾಮಾನ್ಯರ ನೋವು, ಕಷ್ಟ ಅವರಿಗೆ ಅರ್ಥವಾಗುವುದಿಲ್ಲ. ಮೊದಲೇ ಕೊರೋನಾದಿಂದ ತತ್ತರಿಸಿ ಹೋಗಿರುವ ಜನರಿಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಬೆಲೆಯೇರಿಕೆ ಮಾಡಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ನಮ್ಮ ಮೌನವೇ ಇದಲ್ಲೆಕ್ಕಾ ಕಾರಣವಾಗಿದ್ದು ಮುಂದಿನ ದಿನಗಳಲ್ಲಿ ನಾವೆಲ್ಲರೂ ಮೌನ ಮುರಿದು ಇಂತಹ ಕೆಟ್ಟ ಆಡಳಿತದ ವಿರುದ್ದ ಉಗ್ರ ಹೋರಾಟ ನಡೆಸಲೇಬೇಕಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಹೇಳಿದರು. ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ವಿರುದ್ಧ ಜೂ.೧೪ರಂದು ಮುಂಡೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಜನರ ಕಷ್ಟವನ್ನು ಕೇಳಿಸಿಕೊಳ್ಳದ ಬಿಜೆಪಿ ಸರಕಾರದ ಕೆಟ್ಟ ಆಡಳಿತದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಪ್ರತಿಯೋರ್ವರು ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು-ಹೇಮನಾಥ ಶೆಟ್ಟಿ
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಗಗನಕ್ಕೇರಿದ್ದ ಸಂದರ್ಭದಲ್ಲಿ ದೇಶದಲ್ಲಿ ಇಂಧನವನ್ನು ಕನಿಷ್ಠ ದರಕ್ಕೆ ಮನಮೋಹನ್ ಸಿಂಗ್ ಸರಕಾರ ನೀಡಿತ್ತು. ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪಾತಾಳಕ್ಕಿಳಿದಿದ್ದು ಕನಿಷ್ಠ ಬೆಲೆಗೆ ಪೆಟ್ರೋಲ್, ಡೀಸೆಲ್ ಲಭಿಸುತ್ತಿದ್ದರೂ ಕೂಡಾ ಮೋದಿ ಸರಕಾರ ಅದನ್ನು ನೂರು ದೂಪಾಯಿಗೆ ತಂದು ಮುಟ್ಟಿಸಿದ್ದಾರೆ. ಒಂದು ವೇಳೆ ಮನಮೋಹನ್ ಸಿಂಗ್ ಅವಧಿಯಲ್ಲಿ ಮೋದಿ ಆಡಳಿತ ನಡೆಸುತ್ತಿದ್ದರೆ ಪೆಟ್ರೋಲ್ ಬೆಲೆ ೨೫೦ ರೂ ಆಗಿರುವ ಸಾಧ್ಯತೆ ಇತ್ತು ಎಂದು ಅವರು ಹೇಳಿದರು.

ಮೋದಿ ಆಡಳಿತ ದೇಶ ಕಂಡ ಕೆಟ್ಟ ಆಡಳಿತವಾಗಿದ್ದು ದೇಶದ ಬಿಜೆಪಿಯವರು ಕೂಡಾ ರೋಸಿ ಹೋಗಿದ್ದಾರೆ. ನೀವು ಬೆಲೆಯೇರಿಕೆ ವಿರುದ್ಧ ಪ್ರತಿಭಟಿಸಿ ಎಂದು ಬಿಜೆಪಿಯವರೇ ನಮ್ಮ ಬಳಿ ಹೇಳಿಕೊಳ್ಳುತ್ತಿದ್ದಾರೆ ಎಂದ ಹೇಮನಾಥ ಶೆಟ್ಟಿಯವರು ದೇಶದ ಪ್ರತಿಯೊಬ್ಬರೂ ಈ ನಿರಂಕುಶ ಆಡಳಿತದ ವಿರುದ್ಧ ಮಾತನಾಡಬೇಕು, ಬಿಜೆಪಿ ಸರಕಾರ ತೊಲಗುವ ತನಕ ನಾವು ಸುಮ್ಮನಾಗಬಾರದು ಎಂದು ಅವರು ಹೇಳಿದರು.

ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ತೊಲಗಿ-ಹುಸೈನ್ ದಾರಿಮಿ
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಪೆಟ್ರೋಲ್ ಬೆಲೆಯೇರಿಕೆ ಹೆಸರಿನಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದ ನರೇಂದ್ರ ಮೋದಿಯವರು ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ಕೊಟ್ಟು ದೇಶದ ಜನರಿಗೆ ಒಳಿತು ಮಾಡಲಿ ಎಂದು ಹೇಳಿದರು. ಬೆಲೆಯೇರಿಕೆ ಮೂಲಕ ಬಿಜೆಪಿ ಸರಕಾರ ಎಲ್ಲ ಕ್ಷೇತ್ರಗಳಲ್ಲೂ ಶತಕ ದಾಖಲಿಸಿದೆ. ಅಂಬಾನಿ, ಅದಾನಿಗಳಿಗೆ ದೇಶವನ್ನು ಮಾರುತ್ತಿರುವ ಕೇಂದ್ರ ಸರಕಾರ ದೇಶದ ಎಲ್ಲರನ್ನು ಸಂಕಷ್ಟದ ಕೂಪಕ್ಕೆ ತಳ್ಳಿದೆ. ಈ ಸರಕಾರ ತೊಲಗದಿದ್ದರೆ ದೇಶದಲ್ಲಿ ಯಾರಿಗೂ ನೆಮ್ಮದಿಯಿಲ್ಲ ಎಂದು ಅವರು ಹೇಳಿದರು.

ಬಿಜೆಪಿ ಸರಕಾರ ಲೂಟಿ ಮಾಡುವುದರಲ್ಲಿ ತಲ್ಲೀಣವಾಗಿದೆ-ಅನಿತಾ
ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ ಅಚ್ಚೇ ದಿನ್ ತರುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ದೇಶವನ್ನು ಹೀನಾಯ ಸ್ಥಿತಿಗೆ ಕೊಂಡೊಯ್ದಿದೆ. ಮೋದಿ ನೇತೃತ್ವದ ಸರಕಾರದಿಂದ ಅಂಬಾನಿ, ಅದಾನಿಗಳ ಆದಾಯ ನಿರಂತರವಾಗಿ ಏರುತ್ತಿದೆಯೇ ವಿನಃ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಬೀದಿಯಲ್ಲಿ ಪ್ರತಿಭಟಿಸುತ್ತಿದ್ದ ಬಿಜೆಪಿಯ ನಾಯಕರು, ಸಂಸದರು ಈಗ ಎಲ್ಲಿಗೆ ಹೋಗಿದ್ದಾರೆ. ಶೋಭಾ ಕರಂದ್ಲಾಜೆ ಈಗ ಎಲ್ಲೋಗಿದ್ದಾರೆ ಎಂದು ಪ್ರಶ್ನಿಸಿದ ಅವರು ಬಿಜೆಪಿ ಸರಕಾರ ಬಂದ ಬಳಿಕ ಹಣ ಲೂಟಿ ಮಾಡುವುದರಲ್ಲಿ, ದೋಚುವುದರಲ್ಲಿ ತಲ್ಲೀಣರಾಗಿದ್ದಾರೆಯೇ ಹೊರತು ಜನರಿಗೆ ನಯಾ ಪೈಸೆಯ ಉಪಕಾರವನ್ನು ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಬಿಜೆಪಿ ಕಿತ್ತೊಗೆಯದೆ ಜನರಿಗೆ ಉಳಿಗಾಲವಿಲ್ಲ-ಶೈಲಜಾ
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶೈಲಜಾ ಅಮರನಾಥ್ ಮಾತನಾಡಿ ದೇಶದ ಇತಿಹಾಸದಲ್ಲಿ ಕೆಟ್ಟ ಆಡಳಿತ ನಡೆಸಿ ದೇಶವನ್ನು ಅಭಿವೃದ್ಧಿಯಲ್ಲಿ ಕುಂಠಿತಗೊಳ್ಳುವಂತೆ ಮಾಡಿರುವ ಬಿಜೆಪಿ ಸರಕಾರವನ್ನು ಕಿತ್ತೊಗೆಯದೆ ನಮ್ಮ ಹೋರಾಟ ನಿಲ್ಲಬಾರದು. ಈ ಸರಕಾರ ಬದಲಾವಣೆಯಾಗದೇ ಹೋದಲ್ಲಿ ಜನರಿಗೆ ಉಳಿಗಾಲವಿಲ್ಲ ಎಂದು ಅವರು ಹೇಳಿದರು.

ಬಿಜೆಪಿ ಜನರಿಗೆ ಮೋಸ ಮಾಡುತ್ತಿದೆ-ಎಸ್.ಡಿ ವಸಂತ
ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್.ಡಿ ವಸಂತ ಮಾತನಾಡಿ ಕೊರೋನಾದಿಂದ ದೇಶದ ಜನತೆ ಸಂಕಷ್ಟದ ಕೂಪದಲ್ಲಿ ಸಿಲುಕಿದ್ದರೂ ಕೂಡಾ ಜನರಿಗೆ ಪರಿಹಾರ ನೀಡಬೇಕಾದೀತು ಎನ್ನುವ ಕಾರಣಕ್ಕೆ ಅದನ್ನು ರಾಷ್ಟ್ರೀಯ ವಿಪತ್ತು ಎಂದು ಬಿಜೆಪಿ ಸರಕಾರ ಘೋಷಿಸುತ್ತಿಲ್ಲ ಇದು ಖಂಡನೀಯ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಮತ ಪಡೆಯುವ ಬಿಜೆಪಿ ಜನರನ್ನು ಮೋಸ ಮಾಡುತ್ತಿದೆ ಎಂದು ಹೇಳಿದರು. ಕಳೆದ ಅವಧಿಯಲ್ಲಿ ನಾವು ಗ್ರಾ.ಪಂನಿಂದ ಒಂದೂವರೆ ಲಕ್ಷ ರುಪಾಯಿಯ ಕಿಟ್‌ನ್ನು ಬಡವರಿಗೆ ಕೊಟ್ಟಿದ್ದೇವೆ. ಆದರೆ ಈ ಬಾರಿ ಒಬ್ಬರಿಗೂ ಕೂಡಾ ಕಿಟ್ ಕೊಡುವ ಅವಕಾಶ ಗ್ರಾ.ಪಂಗೆ ಆಗಿಲ್ಲ ಎಂದು ಅವರು ಆರೋಪಿಸಿದರು.

ಬಿಜೆಪಿಯ ಕೀಳು ಮನಸ್ಥಿತಿ ದೇಶದ ಇಂದಿನ ಸ್ಥಿತಿಗೆ ಕಾರಣ-ಯಾಕೂಬ್ ಮುಲಾರ್
ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರ್ ಮಾತನಾಡಿ ಪೆಟ್ರೋಲ್ ಬೆಲೆ ರೂ.೧೦೦ ದಾಟಿದ್ದಕ್ಕೆ ನಾವು ಪ್ರತಿಭಟಿಸಿದರೆ ಬಿಜೆಪಿಯ ಕಾರ್ಯಕರ್ತರು ಬಂಗುಡೆ ಮೀನು ದರ ೩೦೦ ಆಗಿದೆ ಯಾಕೆ ಮಾತನಾಡುತ್ತಿಲ್ಲ ಎಂದು ಕೇಳುತ್ತಾರೆ. ಬಂಗುಡೆಯನ್ನು ಬೇಕಾದವರು ಮಾತ್ರ ತಿನ್ನುತ್ತಾರೆ, ಪೆಟ್ರೋಲ್, ಡೀಸೆಲ್ ಎಲ್ಲರಿಗೂ ಬೇಕಾಗಿದೆ ಬಿಜೆಪಿಯವರ ಅಂತಹ ಕೀಳು ಮಟ್ಟದ ಮನಸ್ಥಿತಿಯಿಂದಲೇ ದೇಶದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಬಿಜೆಪಿ ವಿರುದ್ಧ ಗ್ರಾಮ ಮಟ್ಟದಲ್ಲೂ ಜನ ಬೀದಿಗಿಳಿದಿದ್ದಾರೆ-ಕಮಲೇಶ್
ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಸರ್ವೆದೋಳಗುತ್ತು ಮಾತನಾಡಿ ಕಾಂಗ್ರೆಸ್ ಪಕ್ಷದ ತೀರ್ಮಾನದಂತೆ ರಾಜ್ಯಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು ಗ್ರಾಮ ಮಟ್ಟದಲ್ಲೂ ಜನರು ಬೀದಿಗಿಳಿದಿದ್ದಾರೆ, ಜನಸಾಮಾನ್ಯರ ವಿರೋಧಿಯಾಗಿರುವ, ಕೊರೋನಾಗಿಂತಲೂ ಅಪಾಯಕಾರಿಯಾಗಿರುವ ಬಿಜೆಪಿ ಸರಕಾರವನ್ನು ಕೆಳಗಿಳಿಸಬೇಕೆನ್ನುವ ಧೃಡ ಸಂಕಲ್ಪದೊಂದಿಗೆ ಪ್ರತಿಭಟನೆ ನಡೆಯುತ್ತಿದ್ದು ಇದರಲ್ಲಿ ನಮಗೆ ಯಶಸ್ಸು ಸಿಗಲಿದೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದಾಲಿ, ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ನಿರ್ದೇಶಕ ಪದ್ಮಯ್ಯ ನಾಯ್ಕ್ ಬಂಡಿಕಾನ, ಮುಂಡೂರು ಗ್ರಾ.ಪಂ ಸದಸ್ಯರಾದ ಬಾಬು ಕಲ್ಲಗುಡ್ಡೆ, ಕಮಲ ನೇರೋಳ್ತಡ್ಕ, ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಕುರೆಮಜಲು, ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಮುಲಾರ್, ಮಾಜಿ ಸದಸ್ಯರಾದ ಯತೀಶ್ ರೈ ಮೇಗಿನಗುತ್ತು, ರಾಮಚಂದ್ರ ಸೊರಕೆ, ಹಂಝ ಎಲಿಯ, ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಸ್.ಡಿ, ಕೆಪಿಸಿಸಿ ಜಾಲತಾಣದ ಪ್ರ.ಕಾರ್ಯದರ್ಶಿ ಕೆ.ಸಿ ಅಶೋಕ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ದಿನೇಶ್ ಪಾಣಾಜೆ, ತಿಲಕ್‌ರಾಜ್ ಶೆಟ್ಟಿ, ಅಮರನಾಥ್ ಗೌಡ, ಅಣ್ಣಿ ಪೂಜಾರಿ ಹಿಂದಾರು, ರಹೀಂ ರೆಂಜಲಾಡಿ, ಅಶ್ರಫ್ ಮುಲಾರ್, ಪಿ.ಕೆ ಮಹಮ್ಮದ್ ಕೂಡುರಸ್ತೆ, ಸಮದ್ ಅಂಙತ್ತಡ್ಕ, ಮಜೀದ್ ಬಾಳಾಯ, ತಿಮ್ಮಪ್ಪ ನಾಯ್ಕ್ ಬಂಡಿಕಾನ, ಆಸಿಫ್ ಕಂಪ, ಚಿರಾಗ್ ರೈ ಮೇಗಿನಗುತ್ತು, ಝಕರಿಯಾ ಮುಲಾರ್, ಫಯಾಜ್ ಮುಲಾರ್, ಚೋಮ ಮುಂಡೂರು, ಶೀನಪ್ಪ ನಾಯ್ಕ್ ಅಂಬಟ, ಜಗದೀಶ್ ಬದಿಯಡ್ಕ, ಪ್ರವೀಣ್ ಬದಿಯಡ್ಕ, ಸುಲೈಮಾನ್ ಮುಲಾರ್, ರಝಾಕ್ ಮುಲಾರ್, ಅಬ್ದುಲ್ ಕುಂಞಿ ಮುಲಾರ್, ಅಬೂಬಕ್ಕರ್ ಮುಲಾರ್, ಪ್ರಭಾಕರ್ ಸರ್ವೆದೋಳಗುತ್ತು, ನೀಲಪ್ಪ ಅಂಬಟ, ಹನೀಫ್ ಮುಂಡೂರು, ಶಶಿ ಪಜಿಮಣ್ಣು, ಐತ್ತ ಬದಿಯಡ್ಕ, ಮೋಂಟ ಅಜಲಾಡಿ, ತಿಮ್ಮಪ್ಪ ನಾಯ್ಕ್ ಅಜಲಾಡಿ ಮತ್ತಿತರರು ಉಪಸ್ಥಿತರಿದ್ದರು.
ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಸರ್ವೆದೋಳಗುತ್ತು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಯುವ ಕಾಂಗ್ರೆಸ್ ಮುಖಂಡ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.