HomePage_Banner
HomePage_Banner

ಸೂರಿಲ್ಲದವರಿಗೊಂದು ಆಸರೆ-ಅರ್ದ ಶತಕ ಪೂರೈಸಿದ ಮಹಮ್ಮದ್ ಕುಕ್ಕುವಳ್ಳಿ ತಂಡ…!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

@ಯೂಸುಫ್ ರೆಂಜಲಾಡಿ

  • ಕುರಿಯದಲ್ಲಿ 50ನೇ ಮನೆಯ ದುರಸ್ತಿ-ಹಸ್ತಾಂತರ

ಪುತ್ತೂರು: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದ.ಕ ಜಿಲ್ಲೆ ಆಶ್ರಯದಲ್ಲಿ ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿಯವರ ನೇತೃತ್ವದಲ್ಲಿ `ಸೂರಿಲ್ಲದವರಿಗೊಂದು ಆಸರೆ’ ಕಾರ್ಯಕ್ರಮದಡಿಯಲ್ಲಿ ೫೦ನೇ ಮನೆಯನ್ನು ದುರಸ್ತಿ ಮಾಡಿ ಕೊಡಲಾಗಿದೆ. ಆ ಮೂಲಕ ಕ್ಷಿಪ್ರ ಅವಧಿಯಲ್ಲಿ ೫೦ ಮನೆಗಳ ದುರಸ್ತಿ ಕಾರ್ಯವನ್ನು ಮಾಡಿ ಬಡವರ ಕಣ್ಣೀರೊರೆಸುವ ಕಾರ್ಯದ ಮೂಲಕ ಮಾದರಿಯಾಗಿದೆ. ಜಿಲ್ಲೆಯ ವಿವಿಧೆಡೆ ಮತ್ತು ಹೊರ ಜಿಲ್ಲೆಯ ಕೆಲವೆಡೆಗಳಲ್ಲಿ ಸಂಕಷ್ಟದಲ್ಲಿರುವವರ ಮನೆ ದುರಸ್ತಿ, ಮೇಲ್ಛಾವಣಿ ನಿರ್ಮಾಣ ಹಾಗೂ ಅತೀ ಅವಶ್ಯವಿರುವ ಕುಟುಂಬಗಳಿಗೆ ಪೂರ್ತಿ ಮನೆ ನಿರ್ಮಾಣ ಕಾರ್ಯವನ್ನು ಈ ತಂಡ ಮಾಡಿಕೊಟ್ಟಿದೆ. ಪುತ್ತೂರು ತಾಲೂಕಿನಲ್ಲಿ ಹೆಚ್ಚಿನ ಮನೆಗಳ ದುರಸ್ತಿ ಕಾರ್ಯ ಮಾಡಿರುವ ತಂಡ ಕಡಬ ತಾಲೂಕಿನಲ್ಲಿ ಕೆಲವು ಮನೆಗಳನ್ನು ದುರಸ್ತಿ ಮಾಡಿಕೊಟ್ಟಿದ್ದಾರೆ.

ಕುರಿಯದಲ್ಲಿ ೫೦ನೇ ಮನೆ ದುರಸ್ತಿ:
ಆರ್ಯಾಪು ಗ್ರಾ.ಪಂ ವ್ಯಾಪ್ತಿಯ ಕುರಿಯದಲ್ಲಿ ಸಣ್ಣ ಮನೆಯೊಂದರಲ್ಲಿ ವಾಸವಾಗಿರುವ ವಿಧವೆ ರೇವತಿ ಅವರ ಮನೆ ಇಂದೋ, ನಾಳೆಯೋ ಬೀಳುವ ಸ್ಥಿತಿಯಲ್ಲಿತ್ತು. ಈ ಮನೆಯಲ್ಲಿ ರೇವತಿ ಮತ್ತು ಅವರ ಪುತ್ರ ವಾಸವಾಗಿದ್ದು ಮಣ್ಣಿನ ಗೋಡೆಯ ಸಣ್ಣ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ಮನೆಯ ಗೋಡೆ ಬಿರುಕು ಬಿಟ್ಟು ಮಾಡು ಶಿಥಿಲಾವಸ್ಥೆಗೆ ತಲುಪಿತ್ತು. ಇದೀಗ ಮಳೆಗಾಲ ಆರಂಭಗೊಂಡಿರುವುದರಿಂದ ಮನೆ ಕುಸಿಯುವ ಭೀತಿಯೂ ಉಂಟಾಗಿತ್ತು. ಅತ್ತ ಮನೆ ರಿಪೇರಿಗೆ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದ ರೇವತಿಯವರು ನಿರಾಶೆಯಿಂದಲೇ ಆ ಪುಟ್ಟ ಮನೆಯಲ್ಲಿ ತನ್ನ ಪುತ್ರನೊಂದಿಗೆ ಜೀವನ ಸಾಗಿಸುತ್ತಿದ್ದರು.

ನೆರವಿಗೆ ಧಾವಿಸಿದ ಕುಕ್ಕುವಳ್ಳಿ ತಂಡ:
ರೇವತಿಯವರ ಮನೆ ಬೀಳುವ ಸ್ಥಿತಿಯಲ್ಲಿರುವುದನ್ನು ಮನಗಂಡ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ದ.ಕ ಜಿಲಾಧ್ಯಕ್ಷ, ಉದ್ಯಮಿ ಹಾಜಿ ಮಹಮ್ಮದ್ ಕುಕ್ಕುವಳ್ಳಿ ಅವರ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ರೇವತಿ ಮತ್ತು ಅವರ ಪುತ್ರನಲ್ಲಿ ಮತುಕತೆ ನಡೆಸಿದರು. ಶಿಥಿಲಾವಸ್ಥೆಯಲ್ಲಿದ್ದ ಮನೆಯನ್ನು ನಾವು ದುರಸ್ತಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು. ಕೊಟ್ಟ ಮಾತಿನಂತೆ ಮರುದಿನವೇ ಮನೆಯ ದುರಸ್ತಿಗೆ ಇಳಿದ ಮಹಮ್ಮದ್ ಕುಕ್ಕುವಳ್ಳಿ ನೇತೃತ್ವದ ತಂಡ ಮನೆಯ ಹಂಚನ್ನು ತೆಗೆದು, ಬೀಳುವ ಹಂತದಲ್ಲಿದ್ದ ಮಣ್ಣಿನ ಗೋಡೆಯನ್ನು ಅರ್ದದಷ್ಟು ತೆಗೆದು ಹೋಲೋ ಬ್ಲಾಕ್ ಮೂಲಕ ಗೋಡೆ ಕಟ್ಟುವ ಕಾರ್ಯ ಮಾಡಿದ್ದಾರೆ. ಮೇಲ್ಛಾವಣಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿದ ತಂಡ ಸುಸಜ್ಜಿತವಾಗಿ ಸಿಮೆಂಟ್ ಶೀಟ್ ಅಳವಡಿಸಿ ಮನೆಯ ಮುಂಭಾಗಕ್ಕೆ ಸಾರಣೆ ಮಾಡಿಕೊಟ್ಟು ಮನೆಯನ್ನು ಸುಸಜ್ಜಿತವಾಗಿ ದುರಸ್ತಿ ಮಾಡಿ ಜೂ.೧೯ರಂದು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಮಹಮ್ಮದ್ ಕುಕ್ಕುವಳ್ಳಿ ಮತ್ತು ತಂಡಕ್ಕೆ ಕೃತಜ್ಞತೆ ಸಲ್ಲಿಸಿದ ರೇವತಿ ಅವರು ನಮ್ಮಂತ ಬಡವರ ಕಷ್ಟಕ್ಕೆ ನೆರವಾದ ನಿಮ್ಮನ್ನು ದೇವರು ಕೈಬಿಡಲಾರ ಎಂದು ಹೇಳಿದರು.

ಮನೆ ದುರಸ್ತಿ ಕಾರ್ಯದಲ್ಲಿ ಹಾಜಿ ಮಹಮ್ಮದ್ ಕುಕ್ಕುವಳ್ಳಿ, ಕರವೇ ಕಡಬ ತಾಲೂಕು ಅಧ್ಯಕ್ಷ ಅಬ್ದುಲ್ ಜಲೀಲ್ ಬೈತಡ್ಕ, ಆಸಿಫ್ ಹಾಜಿ ತಂಬುತ್ತಡ್ಕ, ಸೈಯದ್ ವೈ.ಎಂ.ಕೆ, ಗಿರೀಶ್ ಶೇಟ್ ಮಂಗಳೂರು, ಉದಯ ಕುರಿಯ, ಮೋಹನ್ ಸಿಂಹವನ, ರಝಾಕ್ ತಂಬುತ್ತಡ್ಕ, ಫೈರೋಝ್ ಕುಕ್ಕುವಳ್ಳಿ, ಶ್ರೀಧರ್ ಮಣಿಯಾಣಿ, ನಾಸಿರ್ ನಿಡ್ಪಳ್ಳಿ, ಗಫೂರ್ ನಿಡ್ಪಳ್ಳಿ, ಮಣಿಕಂಠ ಸಿಂಹವನ, ರವಿ ಆಚಾರ್ಯ, ಸುಬ್ರಹ್ಮಣ್ಯ ಭಂಡಾರಿ, ಸಿದ್ದೀಕ್, ಹಮೀದ್ ಕೊಮ್ಮೆಮಾರ್, ಸೈಯದ್ ವೈ.ಎಂ.ಕೆ, ಶರೀಫ್ ಕೂಡುರಸ್ತೆ, ವಸಂತ ಪಟ್ಟೆ, ರಿಸಾದ್ ಕುಕ್ಕುವಳ್ಳಿ, ಹಮೀದ್ ಕುಂಜೂರುಪಂಜ, ಅಮೀರ್ ವೈಎಂಕೆ, ಅಶ್ರಫ್ ಪೆರ್ಲಂಪಾಡಿ, ನೌಶಾದ್ ರೋಯಲ್ ಈಶ್ವರಮಂಗಲ, ಇಕ್ಬಾಲ್ ಬಾಳಿಲ, ಶರೀಫ್ ನೆಕ್ಕರೆ ಪಾಲ್ಗೊಂಡಿದ್ದರು.

ಶ್ಲಾಘನೆ:
ಮನೆ ಹಸ್ತಾಂತರ ಸಂದರ್ಭದಲ್ಲಿ ಆರ್ಯಾಪು ಗ್ರಾ.ಪಂ ಸದಸ್ಯ ಬೂಡಿಯಾರು ಪುರುಷೋತ್ತಮ ರೈ ಅವರು ಆಗಮಿಸಿ ಮಹಮ್ಮದ್ ಕುಕ್ಕುವಳ್ಳಿ ನೇತೃತ್ವದ ತಂಡ ಕಾರ್ಯವನ್ನು ಶ್ಲಾಘಿಸಿ ಶುಭ ಹಾರೈಸಿದರು. ಸುಂದರ ಪೂಜಾರಿ ಪುತ್ತೂರು ಹಾಗೂ ಅಶ್ವಥ್ ಉಪಸ್ಥಿತರಿದ್ದರು.

ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ-ಕುಕ್ಕುವಳ್ಳಿ
ಈಗಾಗಲೇ ಕ.ರ.ವೇ ಸ್ವಾಭಿಮಾನಿ ಬಣದ ವತಿಯಿಂದ `ಸೂರಿಲ್ಲದವರಿಗೊಂದು ಆಸರೆ’ ಮುಖಾಂತರ ೫೦ ಮನೆಗಳನ್ನು ವರ್ಷದೊಳಗಾಗಿ ದುರಸ್ತಿ ಮಾಡಿಕೊಟ್ಟಿದ್ದೇವೆ. ನಮ್ಮ ತಂಡದ ಎಲ್ಲರ ಸಂಪೂರ್ಣ ಭಾಗವಹಿಸುವಿಕೆ ಮತ್ತು ಸಹಕಾರದಿಂದ ಈ ಮಹತ್ವಪೂರ್ಣ ಕಾರ್ಯವನ್ನು ಮಾಡಲು ನಮಗೆ ಸಾಧ್ಯವಾಗಿದೆ ಎಂದು ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಹಾಜಿ ಮಹಮ್ಮದ್ ಕುಕ್ಕುವಳ್ಳಿ ತಿಳಿಸಿದ್ದಾರೆ. ಊರಿನ ದಾನಿಗಳು, ವಿದೇಶದಲ್ಲಿರುವ ಸಹೃದಯಿಗಳು ನಮಗೆ ಸಹಕಾರ ನೀಡುತ್ತಿದ್ದಾರೆ. ಮನೆ ದುರಸ್ತಿ, ಛಾವಣಿ ನಿರ್ಮಾಣ, ಮನೆ ನಿರ್ಮಾಣದ ಜೊತೆಗೆ ಸ್ಥಳೀಯ ಯುವಕರನ್ನು ಒಗ್ಗೂಡಿಸಿಕೊಂಡು ಅವರಿಗೆ ಬಡವರ ಪರವಾಗಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ನಾವು ತರಬೇತಿ ನೀಡುತ್ತಿದ್ದೇವೆ. ಬಡವರು ಸಂಕಷ್ಟ ಅನುಭವಿಸಬಾರದು ಎಂಬ ನೆಲೆಯಲ್ಲಿ ನಮ್ಮಿಂದಾಗುವ ನೆರವು ನೀಡುತ್ತಿದ್ದೇವೆ. ಮನೆ ದುರಸ್ತಿ ಮಾತ್ರವಲ್ಲದೇ ಅನೇಕ ಸಾಮಾಜಿಕ ಚಟುವಟಿಕೆಗಳನ್ನೂ ನಾವು ಮಾಡುತ್ತಿದ್ದೇವೆ. ನಮ್ಮ ತಂಡದ ಎಲ್ಲರೂ ಪ್ರತಿಫಲಾಪೇಕ್ಷೆಯಿಲ್ಲದೇ ಸಕ್ರಿಯವಾಗಿ ತೊಡಗಿಸಿಕೊಳ್ಳುವುದೇ ನಮ್ಮ ಯಶಸ್ಸಿಗೆ ಮೂಲ ಕಾರಣವಾಗಿದೆ ಎಂದು ಮಹಮ್ಮದ್ ಕುಕ್ಕುವಳ್ಳಿ ತಿಳಿಸಿದ್ದಾರೆ.

ಅವಶ್ಯಕತೆಗಳನ್ನು ಪೂರೈಸುತ್ತಿದ್ದೇವೆ-ಜಲೀಲ್ ಬೈತಡ್ಕ
ಮನೆ ನಿರ್ಮಾಣ ಮತ್ತು ದುರಸ್ತಿ ಮಾತ್ರವಲ್ಲದೇ ಮನೆಗೆ ಬೇಕಾಗುವ ಮೂಲಭೂತ ಅವಶ್ಯಕತೆಗಳನ್ನು ಕೂಡಾ ಅನೇಕ ಕಡೆಗಳಲ್ಲಿ ನಾವು ಮಾಡಿಕೊಟ್ಟಿದ್ದೇವೆ. ಮಹಮ್ಮದ್ ಕುಕ್ಕುವಳ್ಳಿ ಅವರ ನೇತೃತ್ವದಡಿಯಲ್ಲಿ ಬಡವರಿಗೆ ನೆರವಾಗಲು ಸಾಧ್ಯವಾಗಿರುವುದು ಖುಷಿ ನೀಡಿದೆ. ಮುಂದಕ್ಕೂ ನಮ್ಮ ಕಾರ್ಯಚಟುವಟಿಕೆಗಳನ್ನು ನಾವು ಮುಂದುವರಿಸಲಿದ್ದೇವೆ ಎಂದು ಕ.ರ.ವೇ ಸ್ವಾಭಿಮಾನಿ ಬಣ ಕಡಬ ತಾಲೂಕು ಅಧ್ಯಕ್ಷ ಅಬ್ದುಲ್ ಜಲೀಲ್ ಬೈತಡ್ಕ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.