HomePage_Banner
HomePage_Banner

ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ  ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಕೇಂದ್ರದ ಗುತ್ತಿಗೆ ನೌಕರರಿಗೆ ಧನಸಹಾಯ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

  • ಅಲ್ಪಾವಧಿ ಬೆಳೆಸಾಲದ ಷರತ್ತು ಹಿಂತೆಗೆತ ಕುರಿತು ಸಹಕಾರ ಸಚಿವರ ಜೊತೆ ಮಾತುಕತೆ: ಎಸ್.ಅಂಗಾರ

ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನೆಲ್ಯಾಡಿ ಹಾಗೂ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ನೌಕರರಿಗೆ ಧನಸಹಾಯ ಹಸ್ತಾಂತರ ಕಾರ್ಯಕ್ರಮ ಜೂ.೨೫ರಂದು ಸಂಘದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.
ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರು ಧನಸಹಾಯದ ಚೆಕ್ ಹಸ್ತಾಂತರ ಮಾಡಿದರು. ಬಳಿಕ ಮಾತನಾಡಿದ ಅವರು, ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರಲ್ಲಿ ನೀಡುವ ಅಲ್ಪವಾಧಿ ಬೆಳೆಸಾಲ ಪಡೆಯಲು ಸರಕಾರ ಹಲವು ಷರತ್ತು ವಿಧಿಸಿದೆ. ಈ ಷರತ್ತು ಹಿಂಪಡೆಯಬೇಕೆಂದು ಒತ್ತಾಯಿಸಿ ನೆಲ್ಯಾಡಿ ಸೇರಿದಂತೆ ವಿವಿಧ ಸಹಕಾರ ಸಂಘಗಳಿಂದ ಮನವಿ ಬಂದಿದೆ. ಈ ಸಂಬಂಧ ಸಹಕಾರ ಸಚಿವರ ಜೊತೆಗೆ ಮಾತುಕತೆ ನಡೆಸುವುದಾಗಿ ಹೇಳಿದರು. ಈ ಹಿಂದೆ ಸರಕಾರ ಘೋಷಣೆ ಮಾಡಿರುವ ಸಾಲಮನ್ನಾ ಬಾಕಿ ಮೊತ್ತ ಬಿಡುಗಡೆಗೆ ಸಂಬಂಧಿಸಿಯೂ ಪ್ರಯತ್ನಿಸುವುದಾಗಿ ಹೇಳಿದ ಸಚಿವ ಎಸ್.ಅಂಗಾರರವರು, ಕೋವಿಡ್ ಸಂದರ್ಭದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಹಾಗೂ ಗುತ್ತಿಗೆ ನೌಕರರಿಗೆ ನಗದು ನೀಡಿ ಪ್ರೋತ್ಸಾಹಿಸಿರುವ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸೇವೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಸಿರಾ ಮಾತನಾಡಿ, ಕೊರೋನಾ ಸೋಂಕಿತರ ಮನೆ ಮನೆ ಭೇಟಿ, ಅವರ ಸಮಸ್ಯೆಗೆ ಸ್ಪಂದನದಂತಹ ಕಾರ್ಯಗಳ ಮೂಲಕ ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ನಡೆಸಿದ ಕರ್ತವ್ಯ ನಿರ್ವಹಣೆ ಪ್ರಶಂಸನೀಯ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ ಮಾತನಾಡಿ, ಕಳೆದ ವರ್ಷವೂ ಕೊರೋನಾ ಅಬ್ಬರದ ಸಂದರ್ಭದಲ್ಲಿ ನೆಲ್ಯಾಡಿಯ ಸಮಾನ ಮನಸ್ಕರ ವೇದಿಕೆಯ ಜೊತೆ ಸೇರಿಕೊಂಡು ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಆಹಾರದ ಸಾಮಾಗ್ರಿಗಳ ಕಿಟ್ ವಿತರಣೆಯಲ್ಲಿ ಸಂಘವೂ ಕೈ ಜೋಡಿಸಿತ್ತು. ಈ ಬಾರಿ ಸಂಘದ ವ್ಯಾಪ್ತಿಯಲ್ಲಿ ಬರುವ ನೆಲ್ಯಾಡಿ ಹಾಗೂ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರಗಳಲ್ಲಿನ ಗುತ್ತಿಗೆ ನೌಕರರಿಗೆ ಪ್ರೋತ್ಸಾಹ ಧನ ನೀಡುತ್ತಿರುವುದಾಗಿ ಹೇಳಿದರು. ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಸಂಘದ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್, ನಿರ್ದೇಶಕರಾದ ಬಾಲಕೃಷ್ಣ ಬಾಣಜಾಲು, ಸರ್ವೋತ್ತಮ ಗೌಡ, ಜಯಾನಂದ ಬಂಟ್ರಿಯಾಲ್, ಪ್ರಶಾಂತ್ ರೈ ಅರಂತಬೈಲು, ಸುದರ್ಶನ್, ಗುರುರಾಜ್ ಭಟ್, ಉಷಾ ಅಂಚನ್, ಅಣ್ಣು, ಸುಮಿತ್ರಾ, ಸುಲೋಚನಾ ವೇದಿಕೆಯಲ್ಲಿದ್ದರು.
ಬಾಲಕೃಷ್ಣ ಬಾಣಜಾಲು ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಂ.ದಯಾಕರ ರೈ ವಂದಿಸಿದರು. ಜಯಾನಂದ ಬಂಟ್ರಿಯಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಸುಲೋಚನಾ ಡಿ.,ಪ್ರಾರ್ಥಿಸಿದರು. ಪ್ರಮುಖರಾದ ಎನ್.ವಿ.ವ್ಯಾಸ, ರವಿಪ್ರಸಾದ್ ಶೆಟ್ಟಿ, ಶಿವರಂಜನ್, ಮಹಾಬಲ ಶೆಟ್ಟಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬ್ಯಾಂಕ್‌ನ ಸಿಬ್ಬಂದಿಗಳು ಸಹಕರಿಸಿದರು.


31 ಮಂದಿಗೆ ಧನಸಹಾಯ:
ನೆಲ್ಯಾಡಿ ಹಾಗೂ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ 23 ಆಶಾ ಕಾರ್ಯಕರ್ತೆಯರಿಗೆ ಹಾಗೂ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ 5 ಮಂದಿ ಗುತ್ತಿಗೆ ನೌಕರರಿಗೆ ಹಾಗೂ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಗುತ್ತಿಗೆ ನೌಕರರಿಗೆ ಸಂಘದ ವತಿಯಿಂದ ಧನ ಸಹಾಯ ನೀಡಿ ಪ್ರೋತ್ಸಾಹಿಸಲಾಯಿತು.

ಕಿಟ್ ವಿತರಣೆ:
ಸಚಿವ ಎಸ್.ಅಂಗಾರರವರ ಶಿಫಾರಸ್ಸಿನ ಮೇರೆಗೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಆಶಾ ಕಾರ್ಯಕರ್ತೆಯರಿಗೆ ನೀಡಲಾದ ಆಹಾರ ಸಾಮಾಗ್ರಿಗಳ ಕಿಟ್‌ಗಳನ್ನು ಸಚಿವ ಎಸ್.ಅಂಗಾರರವರು ಈ ಸಂದರ್ಭದಲ್ಲಿ ವಿತರಿಸಿದರು.

ವೈದ್ಯರಿಗೆ ಸನ್ಮಾನ:
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ವೈದ್ಯಾಧಿಕಾರಿಯಾಗಿ ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗಿರುವ ಡಾ.ಶಿಸಿರಾರವರನ್ನು ಸಂಘದ ಪರವಾಗಿ ಸಚಿವ ಎಸ್.ಅಂಗಾರರವರು ಸನ್ಮಾನಿಸಿದರು. ನಿರ್ದೇಶಕ ಸುದರ್ಶನ್ ಪರಿಚಯಿಸಿದರು.

ಔಷಧಿ ಕಿಟ್ ವಿತರಣೆ:
ನೆಲ್ಯಾಡಿ ಜನೌಷಧಿ ಕೇಂದ್ರದ ಶಿವರಂಜನ್‌ರವರು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಔಷಧಿಯ ಕಿಟ್ ವಿತರಣೆ ಮಾಡಿದರು.

ಸಚಿವರಿಗೆ ಮನವಿ:
ಸರಕಾರದಿಂದ ಸಹಕಾರ ಸಂಘಕ್ಕೆ ಬರಬೇಕಾಗಿರುವ ಸಾಲ ಮನ್ನಾ ಬಾಕಿ ಮೊತ್ತ ಶೀಘ್ರ ಪಾವತಿಗೆ ಹಾಗೂ ಶೂನ್ಯ ಬಡ್ಡಿ ಸಾಲಕ್ಕೆ ಸಂಬಂಧಿಸಿ ಇರುವ ಷರತ್ತುಗಳ ಸಡಿಲಿಕೆಗೆ ಸರಕಾರಕ್ಕೆ ಒತ್ತಡ ತರುವಂತೆ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಚಿವ ಎಸ್.ಅಂಗಾರರವರಿಗೆ ಮನವಿ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.