HomePage_Banner
HomePage_Banner

ಬಾವಿಯೊಳಗಿನ `ಎಂಡೋ ಬಾಂಬ್’ಗೆ ಸಿಗಲಿದೆಯೇ ಮುಕ್ತಿ?

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ವ್ಯಾಪ್ತಿಯಿಂದ ಸಂಗ್ರಹಿಸಿದ್ದ ನೀರಿನ ಮಾದರಿಗಳಲ್ಲಿ `ಎಂಡೋ ಸಲ್ಫಾನ್ ಅಂಶ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದೆ’.  ಇದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2014ರ ಫೆಬ್ರವರಿಯಲ್ಲಿ ನೀಡಿದ್ದ ವರದಿ.
ಕರ್ನಾಟಕಕ್ಕೆ ಹೊಂದಿಕೊಂಡ `ದ ಪ್ಲಾಂಟೇಷನ್ ಕಾರ್ಪೊರೇಷನ್ ಆಫ್ ಕೇರಳ’ದ ಬಾವಿಗಳಲ್ಲಿ ತಾನೇ ಖುದ್ದಾಗಿ ಎಂಡೋ ಸಲ್ಫಾನ್ ಹೂತು ಹಾಕಿರುವುದಾಗಿ ಅಲ್ಲಿನ ನಿವೃತ್ತ ನೌಕರ ಅಚ್ಯುತ ಮಣಿಯಾಣಿ ಅವರು ಮಾಧ್ಯಮಗಳಿಗೆ ನೀಡಿದ್ದ ಸ್ಫೋಟಕ ಹೇಳಿಕೆ 2013ರಲ್ಲಿ ಭಾರೀ ಸಂಚಲನ ಹುಟ್ಟುಹಾಕಿತ್ತು. ಬಳಿಕ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ., ಸ್ಥಳೀಯರು ಹಾಗೂ ಹೋರಾಟಗಾರರ ಆಗ್ರಹದ ಫಲವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಈ ವರದಿಯನ್ನು ನೀಡಿತ್ತು. ಇದೀಗ ಮತ್ತೆ ಈ ವರದಿ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ಕರಾವಳಿ ಭಾಗದ ಎಂಡೋ ಪೀಡಿತರ ಅಹವಾಲು ಆಲಿಸಲು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರು ಗೂಗಲ್ ಮೀಟ್ ಏರ್ಪಡಿಸಿದ್ದು, ಅಲ್ಲಿಯೂ ಈ ವಿಚಾರವನ್ನು ಎಂಡೋ ವಿರೋಧಿ ಹೋರಾಟಗಾರರು ಪ್ರಸ್ತಾವಿಸಿದ್ದಾರೆ. ಅಲ್ಲಿನ ನ್ಯಾಯಾಧೀಶರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ನೇತೃತ್ವದ ತಂಡ ಎಂಡೋ ಸಲ್ಫಾನ್ ಹೂತಿಟ್ಟ ಮಿಂಚಿಪದವು ಬಾವಿಯ ಪ್ರದೇಶಕ್ಕೆ ಭೇಟಿ ನೀಡಿದೆ. ಇವರ ಜೊತೆಗೆ ಸುರತ್ಕಲ್ ಎನ್‌ಐಟಿಕೆಯ ತಜ್ಞರ ತಂಡವೂ ಸ್ಥಳಕ್ಕೆ ಧಾವಿಸಿತ್ತು. ಆದ್ದರಿಂದ ಮುಂದೆ ಅಧಿಕಾರಿಗಳು ಕೈಗೊಳ್ಳುವ ಕ್ರಮದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಮಿಂಚಿಪದವು ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದ ಗಡಿಭಾಗ. ಕರ್ನಾಟಕದ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ಗೆ ಹೊಂದಿಕೊಂಡಂತಿರುವ ಪ್ರದೇಶ. ಈ ಗಡಿಭಾಗದಲ್ಲಿ `ದ ಪ್ಲಾಂಟೇಷನ್ ಕಾರ್ಪೊರೇಷನ್ ಆಫ್ ಕೇರಳ’ದ ಸುಪರ್ದಿಯಲ್ಲಿ ೧೪೧.೭೦ ಹೆಕ್ಟೇರ್ ಪ್ರದೇಶದಲ್ಲಿ ಗೇರು ಬೆಳೆ ಹರಡಿಕೊಂಡಿದೆ. ಮೊದಲು ಈ ಗೇರಿಗೆ ಹೆಲಿಕಾಫ್ಟರ್‌ನಲ್ಲಿ ಎಂಡೋ ಸಲ್ಫಾನ್ ಸಿಂಪಡಿಸಲಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಮುಂದೆ ಎಂಡೋ ಸಲ್ಫಾನ್ ರಾಸಾಯನಿಕವನ್ನು ನಾಶ ಪಡಿಸುವಂತೆ ಕೇರಳ ಸರಕಾರ ಸೂಚಿಸಿದಾಗ, `ದ ಪ್ಲಾಂಟೇಷನ್ ಕಾರ್ಪೊರೇಷನ್ ಆಫ್ ಕೇರಳ’ದ ದಾಸ್ತಾನಿನಲ್ಲಿದ್ದ 100 ಲೀಟರ್‌ಗೂ ಅಧಿಕ ಎಂಡೋ ಸಲ್ಫಾನ್ ಅನ್ನು ಪ್ಲಾಂಟೇಷನ್‌ನ ಬಾವಿಯಲ್ಲಿ ಹೂತು ಹಾಕಿದೆ ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿತ್ತು.

2014ರ ಸುಮಾರಿಗೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕುಮಾರನಾಥ್ ರೈ ಎಂಬವರು ಕೊಳವೆ ಬಾವಿ ಕೊರೆಸುತ್ತಾರೆ. ಈ ಕೊಳವೆ ಬಾವಿಯ ನೀರಿನ ಜೊತೆಗೆ ಸೀತ ಎನ್ನುವವರ ಹಾಗೂ ಕಾವೇರಮ್ಮ ದೇವಸ್ಥಾನದ ಕೆರೆಯ ನೀರಿನ ಮಾದರಿಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸುತ್ತದೆ. ಇದರ ವರದಿಯನ್ನು ಎಂಡೋ ವಿರೋಧಿ ಹೋರಾಟಗಾರ ಸಂಜೀವ ಕಬಕ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದಾಗ, `ನೀರಿನ ಮಾದರಿಗಳಲ್ಲಿ ಎಂಡೋ ಸಲ್ಫಾನ್ ಅಂಶ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದೆ’ ಎಂಬ ಉತ್ತರ ನೀಡಲಾಗಿತ್ತು. ಅಂದರೆ ಕೊಳವೆ ಬಾವಿಯ ನೀರಿನಲ್ಲಿ ಎಂಡೋ ಸಲ್ಫಾನ್ ಅಂಶ ಇರುವುದು ಸ್ಪಷ್ಟ.

ಭಯದ ಕಾರಣ:
ಎಂಡೋ ಸಲ್ಫಾನ್ ರಾಸಾಯನಿಕ ಸಿಂಪರಣೆಯ ನಂತರದ ಫಲಿತಾಂಶವೇ ಬಹುದೊಡ್ಡ ತಲೆನೋವು. ಇದರ ನಡುವೆ ಬಾವಿಯೊಳಗೆ ಎಂಡೋ ಹೂತಿಟ್ಟಿರುವುದು ಇನ್ನಷ್ಟು ಭಯದ ಕೂಪಕ್ಕೆ ತಳ್ಳಿ ಹಾಕಿದೆ. ಕಾರಣ, ಬಾವಿಯೊಳಗೆ ಹೂತು ಹಾಕಿರುವ ಎಂಡೋ ಅಂಶ ಅಂತರ್ಜಲದಲ್ಲಿ ಸೇರಿಕೊಂಡಿರುವುದು. ಈ ನೀರನ್ನು ಸೇವಿಸಿದವರಲ್ಲಿ ವಂಶವಾಹಿ ಸಮಸ್ಯೆಗಳು ಕಂಡುಬರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಬಾವಿ ಇರುವ ಮಿಂಚಿಪದವು ಬಹು ಎತ್ತರದಲ್ಲಿ ಹರಡಿಕೊಂಡಿರುವ ಪ್ರದೇಶ. ಇದಕ್ಕೆ ಒತ್ತಿಕೊಂಡಂತಿರುವ ಕರ್ನಾಟಕದ ಭೂಭಾಗ ತಗ್ಗುಪ್ರದೇಶದಲ್ಲಿದೆ. ಆದ್ದರಿಂದ ಅಂತರ್ಜಲದೊಂದಿಗೆ ಸೇರುವ ಎಂಡೋ, ಮೊದಲಿಗೆ ಪರಿಣಾಮ ಬೀರುವುದೇ ಕರ್ನಾಟಕದ ನೆಟ್ಟಣಿಗೆ ಮುಡ್ನೂರು ಗ್ರಾಪಂ ವ್ಯಾಪ್ತಿಯ ಜನರಿಗೆ.

ಈಡೇರದ ಭರವಸೆಗೆ ೮ ವರ್ಷ: ಅಚ್ಯುತ ಮಣಿಯಾಣಿ ಅವರ ಹೇಳಿಕೆ ಬಳಿಕ, ಕೇರಳ ಸರಕಾರ ಆ ಭಾಗದ ಮಣ್ಣು ಹಾಗೂ ನೀರನ್ನು ಪರೀಕ್ಷೆಗೆ ಒಳಪಡಿಸಿತ್ತು. ಅದರ ವರದಿ ಪ್ರಕಾರ, ವಿಷಾಂಶ ಇಲ್ಲ ಎಂಬ ತೀರ್ಮಾನಕ್ಕೆ ಬಂದಿತ್ತು. ಆದರೆ ಕುಮಾರನಾಥ್ ರೈ ಅವರ ಕೊಳವೆ ಬಾವಿಯ ನೀರು, ಹೋರಾಟಕ್ಕೆ ಹೊಸ ದಿಕ್ಕನ್ನೇ ನೀಡಿತು. ಕೇರಳ ಸರಕಾರ ವಿಷಪೂರಿತ ಮಣ್ಣು ಹಾಗೂ ನೀರನ್ನು ಸಂಗ್ರಹಿಸದೇ ಪರೀಕ್ಷೆ ನಡೆಸಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಆಗಿನ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಕೇರಳ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ, ಬಾವಿಯ ಉತ್ಖನನ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು. ಸಚಿವರ ಈಡೇರದ ಭರವಸೆಗೆ ಇದೀಗ ೮ ವರ್ಷ. ಈಗಲಾದರೂ ಈ ಭರವಸೆ ಈಡೇರಬಹುದೇ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.

೨೦೧೫ರಲ್ಲಿ ಪುತ್ತೂರಿಗೆ ಸಹಾಯಕ ಆಯುಕ್ತರಾಗಿ ಆಗಮಿಸಿದ್ದ ಯುವ ಐಎಎಸ್ ಅಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಗಮನವನ್ನು ಸೆಳೆಯುವ ಪ್ರಯತ್ನ ಮಾಡಲಾಗಿತ್ತು. ಅವರು ಸ್ಥಳಕ್ಕೆ ಭೇಟಿ ನೀಡಿ, ಉತ್ಖನನಕ್ಕೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು. ಆದರೆ ಈ ಪ್ರಯತ್ನವೂ ಫಲಕೂಡಲಿಲ್ಲ. ಇದೀಗ ಅದೇ ಡಾ. ರಾಜೇಂದ್ರ ಕೆ.ವಿ. ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಕೆಲವು ದಿನಗಳ ಹಿಂದೆಯಷ್ಟೇ ಮಿಂಚಿಪದವು ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಈಗಲಾದರೂ ಹೋರಾಟಗಾರರ ಪ್ರಯತ್ನಕ್ಕೆ ಫಲ ಸಿಗಬಹುದು ಎಂಬ ಭರವಸೆ ವ್ಯಕ್ತವಾಗುತ್ತಿದೆ.

ಬೇಡಿಕೆಗಳೇನು?: ಎಂಡೋ ಸಲ್ಫಾನ್ ರಾಸಾಯನಿಕ ಭಾರೀ ಅಪಾಯಕಾರಿ ಎನ್ನುವುದು ಈಗಾಗಲೇ ತಿಳಿದಿರುವ ವಿಷಯ. ಇಂತಹ ಅಪಾಯಕಾರಿ ವಿಷಯವನ್ನು ಬಾವಿಯಲ್ಲಿ ಹೂತಿಟ್ಟಿದ್ದು, ಅದು ಅಂತರ್ಜಲವನ್ನು ಸೇರಿ, ಇನ್ನಷ್ಟು ಅಪಾಯವನ್ನು ಉಂಟು ಮಾಡಬಹುದು. ಆದ್ದರಿಂದ ಎಂಡೋ ಸಲ್ಫಾನ್ ಹೂತಿಟ್ಟ ಬಾವಿಯನ್ನು ಉತ್ಖನನ ಮಾಡಬೇಕು, ಸತ್ಯ ಬಹಿರಂಗವಾಗಬೇಕು. ಇದರಿಂದ ಉಂಟಾಗುವ ಪರಿಣಾಮಗಳಿಗೆ ಶಾಶ್ವತ ಪರಿಹಾರ ಇಲ್ಲದೇ ಇದ್ದರೂ, ಒಂದಷ್ಟು ಮುಂಜಾಗರೂಕತ ಕ್ರಮಗಳನ್ನು ಕೈಗೊಳ್ಳಲು ಸಾಧ್ಯ ಎನ್ನುವುದು ಸ್ಥಳೀಯರ ಅಭಿಮತ.

ನಿಗದಿತ ಪ್ರಮಾಣ ಎಷ್ಟು?: `ಕೊಳವೆ ಬಾವಿಯ ನೀರಿನಲ್ಲಿ ನಿಗದಿತ ಪ್ರಮಾಣದಷ್ಟು ಎಂಡೋ ಅಂಶ ಇಲ್ಲ’ ಎನ್ನುವುದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ. ವರದಿಯಲ್ಲಿ ಉಲ್ಲೇಖವಾಗಿರುವ ಈ ಸಾಲುಗಳು ಚರ್ಚೆಗೆ ಗ್ರಾಸವಾಗಿದೆ. ನೀರಿನ ಮೂಲಧಾತುಗಳು ಜಲಜನಕ ಹಾಗೂ ಆಮ್ಲಜನಕ. ಇದರ ಜೊತೆ ಲವಣಾಂಶ, ಖನಿಜಾಂಶ, ಪೋಷಕಾಂಶಗಳು ಇರುವುದು ಸಹಜ. ಇದರೊಂದಿಗೆ ಎಂಡೋ ಅಂಶವೂ ಜೊತೆಯಾಗಿದೆ ಎನ್ನುವುದು ಇಲಾಖೆ ನೀಡಿದ ವರದಿಯಲ್ಲಿ ಬಹಿರಂಗವಾಗಿದೆ. ಆದರೆ ಅದರ ಪ್ರಮಾಣವೆಷ್ಟು ಎನ್ನುವುದು ಮಾತ್ರ ಗೌಪ್ಯವಾಗಿಯೇ ಉಳಿದುಕೊಂಡಿದೆ.

ಸಾಮಾಜಿಕ ಹೋರಾಟಗಾರರ ಹೋರಾಟದ ಫಲವಾಗಿ ನೆಟ್ಟಣಿಗೆ ಮುಡ್ನೂರು ಭಾಗದ ನೀರಿನ ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಿದ್ದು, ಅದರಲ್ಲಿ ಎಂಡೋಸಲ್ಫಾನ್ ಅಂಶ ಸಿಕ್ಕಿವೆ. ಈ ಪ್ರದೇಶ ಟೇಬಲ್ ಟಾಪ್ ಆಗಿರುವುದರಿಂದ, ಕೆಳಭಾಗದಲ್ಲಿರುವ ನೆಟ್ಟಣಿಗೆಮುಡ್ನೂರು ಪ್ರದೇಶದ ಜನರಿಗೆ ಆತಂಕ ಎದುರಾಗಿದೆ. ಇಲ್ಲಿ ಎಂಡೋಸಲ್ಫಾನ್ ಅಂಶ ಇದೆಯೋ ಇಲ್ಲವೋ ಎನ್ನುವ ಸತ್ಯಾಂಶ ಬಯಲಾಗಬೇಕು.
– ಶ್ರೀರಾಮ ಪಕ್ಕಳ, ಸದಸ್ಯರು, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.

ಹೆಲಿಕಾಫ್ಟರ್‌ನಲ್ಲಿ ಎಂಡೋ ಸಿಂಪರಣೆ ಮಾಡಿದ ಬಳಿಕ ಕೇರಳದಲ್ಲಿ ಎಂಡೋ ಸಲ್ಫಾನ್ ಅನ್ನು ನಿಷೇಧಿಸಲಾಗಿತ್ತು. ಬಳಿಕ ಕೇರಳದ ಅನೇಕ ಕಡೆಗಳಲ್ಲಿ ಸಂಗ್ರಹವಿದ್ದ ಎಂಡೋ ಸಲ್ಫಾನ್ ಅನ್ನು ಮಿಂಚಿಪದವಿನ ಬಾವಿಯಲ್ಲಿ ಹೂತು ಹಾಕಲಾಗಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರ ನಡುವೆ ಭಿನ್ನಾಭಿಪ್ರಾಯ ಬಂದು ಈ ವಿಚಾರ ಬಹಿರಂಗಗೊಂಡಿತು. ಆ ಸಮಯದಲ್ಲಿ ನಮ್ಮ ಗ್ರಾಮಕ್ಕೆ ಅಪಾಯ ಇದೆ ಎನ್ನುವ ಆತಂಕದಲ್ಲಿ ದೊಡ್ಡ ಆಂದೋಲನವೇ ನಡೆದಿದೆ. ಆ ಪ್ರದೇಶವನ್ನು ಉತ್ಖನನ ಮಾಡಿ ಸತ್ಯಾಂಶ ಬಹಿರಂಗಪಡಿಸಬೇಕು.
– ಕುಮಾರನಾಥ ರೈ, ಮಾಜಿ ಅಧ್ಯಕ್ಷರು, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.

ಮಿಂಚಿಪದವಿನ ಬಾವಿಗೆ ಎಂಡೋಸಲ್ಫಾನ್ ಹಾಕಿ ಹೂಳಲಾಗಿದೆ ಎನ್ನುವ ಮಾಹಿತಿ ಮಾಧ್ಯಮಗಳ ಮೂಲಕ ನಮಗೆ ಲಭಿಸಿತ್ತು. ಈ ನಿಟ್ಟಿನಲ್ಲಿ ಆ ಪ್ರದೇಶದ ಜನರ ಆತಂಕ ನಿವಾರಿಸುವ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣಾ ಮಂಡಳಿಯ ಬಳಿ ಅಲ್ಲಿನ ನೀರಿನ ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡುವಂತೆ ಕೇಳಿಕೊಂಡಿದ್ದೆವು. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿತ್ತು. ಕೇರಳ ಸರ್ಕಾರಕ್ಕೆ ನಿಯೋಗ ತೆರಳಿ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದು ಈಡೇರಿಲ್ಲ.

ಕೊಳವೆ ಬಾವಿಯಲ್ಲಿ ಪತ್ತೆಯಾಗಿರುವ ನೀರಿನಲ್ಲಿ ನಿಗದಿತ ಪ್ರಮಾಣದಷ್ಟು ಎಂಡೋ ಅಂಶ ಇಲ್ಲ ಎಂಬ ವರದಿಯನ್ನು ಇಲಾಖೆ ನೀಡಿದೆ. ಇತ್ತೀಚೆಗೆ ಕರಾವಳಿ ಭಾಗದ ಎಂಡೋ ಪೀಡಿತರ ಸಮಸ್ಯೆಯ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರ ಗಮನಕ್ಕೆ ತರುವ ಉದ್ದೇಶದಿಂದ ಗೂಗಲ್ ಮೀಟ್‌ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿವೆ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರ ಗಮನಕ್ಕೂ ತಂದಿದ್ದೆವು. ಈಗಾಗಲೇ ಜಿಲ್ಲಾಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇಲ್ಲಿ ನಿಜಾಂಶ ಏನು ಎನ್ನುವ ಬಗ್ಗೆ ಯಾರಿಗೂ ಖಚಿತತೆ ಇಲ್ಲ. ಸರ್ಕಾರ ಸೂಕ್ತ ಕ್ರಮ ಕೈಗೊಂಡು, ಜನರ ಆತಂಕ ದೂರ ಮಾಡಬೇಕಿದೆ.
– ಸಂಜೀವ ಕಬಕ, ಎಂಡೋ ವಿರೋಧಿ ಹೋರಾಟಗಾರರು

ಗೇರು ಪ್ಲಾಂಟೇಷನ್‌ಗಳಿಗೆ ಹಲವು ಬಾರಿ ಹೆಲಿಕಾಪ್ಟರ್‌ನಲ್ಲಿ ಎಂಡೋಸಲ್ಫಾನ್ ಸಿಂಪಡಣೆ ಮಾಡಿದ್ದಾರೆ. ಇದರ ದುಷ್ಪರಿಣಾಮಗಳ ಬಗ್ಗೆ ಯಾರೂ ಚಿಂತನೆ ಮಾಡಿರಲಿಲ್ಲ. ಮನುಷ್ಯನನ್ನು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸಂಪೂರ್ಣ ಹಾಳುಮಾಡುವ ಅಪಾಯಕಾರಿ ಕೀಟನಾಶಕ ಎಂಡೋಸಲ್ಫಾನ್. ಇದು ಅನೇಕ ಮೂಲಗಳಿಂದ ಮನುಷ್ಯನ ದೇಹವನ್ನು ಸೇರುತ್ತದೆ. ಇದು ಯಾವುದೇ ಶಾಶ್ವತ ಪರಿಹಾರ ಇಲ್ಲದ ನರಮಂಡಲ ಹಾಗೂ ಶಾರೀರಿಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
– ಡಾ. ಸಿ. ನಿತ್ಯಾನಂದ ಪೈ, ವೈದ್ಯರು, ಎಂಡೋ ವಿರೋಧಿ ಹೋರಾಟಗಾರರು

ಬಾವಿಯಲ್ಲಿ ಹೂತಿಟ್ಟ ಎಂಡೋ ಸಲ್ಫಾನ್‌ನ ಪ್ರಕರಣಕ್ಕೆ ಹೊಸ ತಿರುವು ನೀಡಿ ಕಾರಡ್ಕ ನಿವಾಸಿ ಅಚ್ಯುತ ಮಣಿಯಾಣಿ ಅವರ ಹೇಳಿಕೆ. `ದ ಪ್ಲಾಂಟೇಷನ್ ಕಾರ್ಪೊರೇಷನ್ ಆಫ್ ಕೇರಳದ ನಿರ್ದೇಶನದಂತೆ ತಾನೇ ಸ್ವತಃ ಎಂಡೋ ಸಲ್ಫಾನ್ ಅನ್ನು ಬಾವಿಯೊಳಗೆ ಹಾಕಿದ್ದೇ ನೆ’ ಎಂದು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಪ್ಲಾಂಟೇಷನ್ ಅಧಿಕಾರಿಗಳ ವಿಕೃತಿಯನ್ನು ಬಯಲಿಗೆಳೆದಿತ್ತು.

1953ರಿಂದ 2006ರವರೆಗೆ ಮಿಂಚಿಪದವು ಗೇರು ಪ್ಲಾಂಟೇಷನ್‌ನಲ್ಲಿ ನೌಕರನಾಗಿ ದುಡಿದಿದ್ದೇನೆ. ಮದ್ದು ಸಿಂಪಡಿಸಲು ಬಂದ ಹೆಲಿಕಾಪ್ಟರ್‌ಗೆ ತಾನೇ ಎಂಡೋ ಸಲ್ಫಾನ್ ರಾಸಾಯನಿಕವನ್ನು ತುಂಬಿಸಿದ್ದೇನೆ. ಪ್ಲಾಂಟೇಷನ್‌ನಲ್ಲಿ ಡಬ್ಬಿ, ಬಾಟಲಿ, ಅಲ್ಯೂಮಿನಿಯಂ ಪಾತ್ರೆ, ಪ್ಲಾಸ್ಟಿಕ್ ಪರಿಕರಗಳಲ್ಲಿ ಎಂಡೋ ಸಲ್ಫಾನ್ ಅನ್ನು ಶೇಖರಿಸಿಡಲಾಗಿತ್ತು. ಅಧಿಕಾರಿಗಳ ನಿರ್ದೇಶನದಂತೆ ಎಂಡೋ ಸಲ್ಫಾನ್ ತುಂಬಿದ ಡಬ್ಬಿ, ಬಾಟಲಿಗಳನ್ನು ಮಿಂಚಿಪದವು ಬಾವಿಯೊಳಗೆ ತಾನೇ ಸುರಿದಿದ್ದೇನೆ. ಬಾವಿ ಸುಮಾರು 18 ಕೋಲಿನಷ್ಟು ಆಳ ಇದೆ ಎಂದು ಅಚ್ಯುತ ಮಣಿಯಾಣಿ ಅವರು ‘ಸುದ್ದಿ’ಗೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.