HomePage_Banner
HomePage_Banner

ಮೋದಿಜೀಯವರೇ ಭ್ರಷ್ಟಾಚಾರ ಮುಕ್ತ ಭಾರತ ಘೋಷಣೆ ಮಾಡಿ ದೇಶವನ್ನು ರಕ್ಷಿಸಿ | ನಾ ಖಾವುಂಗ-ನಾ ಖಾನೆದೂಂಗವನ್ನು ಎಲ್ಲರೂ ಆಚರಿಸುವಂತೆ ಮಾಡಿ ಜನರನ್ನು ರಕ್ಷಿಸಿ

Puttur_Advt_NewsUnder_1
Puttur_Advt_NewsUnder_1
  • 75ನೇ ಸ್ವಾತಂತ್ರ್ಯೋತ್ಸವ ರಾಮರಾಜ್ಯದ, ಜನಾಧಿಕಾರದ ಜನರ ಸ್ವಾತಂತ್ರ್ಯವಾಗಲಿ

ಮೋದಿಜೀಯವರೇ ನೀವು ಭಾರತ ಕಂಡ ಪ್ರಭಾವಿ ನಾಯಕರಲ್ಲಿ ಒಬ್ಬರು ಎಂದು ಈ ಹಿಂದೆಯೇ ಬರೆದಿದ್ದೇನೆ, ಈಗಲೂ ಬರೆಯುತ್ತಿದ್ದೇನೆ. ನೀವು ಒಂದು ಕರೆ ಕೊಟ್ಟರೆ ಅದನ್ನು ಜೀವನದ ಗುರಿಯನ್ನಾಗಿ ಆಚರಿಸುವ ಲಕ್ಷಾಂತರ ಮಂದಿ ಇದ್ದಾರೆ. ಒಪ್ಪಿ ಆಚರಿಸುವ ಕೋಟ್ಯಾಂತರ ಜನರಿದ್ದಾರೆ. ತಮ್ಮ ಪ್ರಧಾನಿಯ ಅವಧಿಯಲ್ಲಿ ತಾವು ಬಹಳಷ್ಟು ಸಾಧನೆ ಮಾಡಿದ್ದೀರಿ. ಚರಿತ್ರೆ ಸೃಷ್ಟಿಸಿದ್ದೀರಿ. ಆದರೆ ಭಾರತದ ಚರಿತ್ರೆಯಲ್ಲಿ ಮಹಾತ್ಮ ಗಾಂಧಿಯ ನಂತರ ಸಾರ್ವಕಾಲಿಕ ಶ್ರೇಷ್ಠ ಭಾರತೀಯನಾಗಿ ಗುರುತಿಸಿಕೊಳ್ಳುವ ಅವಕಾಶ ಮತ್ತು ಶಕ್ತಿ ತಮಗಿದೆ ಎಂದು ನಂಬಿ ಈ ಪತ್ರವನ್ನು ಬರೆಯುತ್ತಿದ್ದೇನೆ.

ದೇಶವ್ಯಾಪಿ ಭ್ರಷ್ಟಾಚಾರದ ಕುರಿತು ನಾನು ಇಲ್ಲಿ ಬರೆಯುವುದಿಲ್ಲ. ನಮ್ಮ ಕರ್ನಾಟಕವನ್ನು ಮಾತ್ರ ಉಲ್ಲೇಖಿಸಿ ಬರೆಯುತ್ತಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪರವರ ಮಂತ್ರಿಮಂಡಲದಲ್ಲಿರುವವರು ನಮಗೆ ಉತ್ತಮ ಖಾತೆ ಮಾತ್ರವಲ್ಲ ಜಿಲ್ಲೆಯ ಉಸ್ತುವಾರಿ ಸಿಗುವುದೇ ಗುರಿ ಎಂದು ದಿನರಾತ್ರಿ ಹೋರಾಟ ಮಾಡುತ್ತಿದ್ದಾರೆ. ಕೆಲವರು ಮುಖ್ಯಮಂತ್ರಿ ಸ್ಥಾನಕ್ಕೂ ಪ್ರಯತ್ನಿಸುತ್ತಿದ್ದಾರೆ. ಮಂತ್ರಿಸ್ಥಾನ ಸಿಗದಿದ್ದರೆ ರಾಜೀನಾಮೆ ಕೊಡುವ ಬೆದರಿಕೆ ಕೆಲವರು ಒಡ್ಡುತ್ತಿದ್ದಾರೆ. ಕಾಂಗ್ರೆಸ್, ದಳ ಬಿಟ್ಟು ಬಂದಾಗ ಅವರು ಮಂತ್ರಿ ಪದವಿಗಾಗಿಯೇ ಬಂದದ್ದು ಎಂದು ಬಾಯಿಬಿಟ್ಟು ಹೇಳಿಕೊಂಡಿದ್ದಾರೆ. ಅವರೆಲ್ಲರೂ ಹೆಚ್ಚು ಹೆಚ್ಚು ಭ್ರಷ್ಟಾಚಾರದ ಅವಕಾಶಕ್ಕಾಗಿ ಪ್ರಯತ್ನ ಮಾಡುತ್ತಿರುವುದೇ ಹೊರತು ಜನಸೇವೆಗಾಗಿ ಅಲ್ಲ ಎಂದು ಸಾಮಾನ್ಯ ಜನರಿಗೂ ಗೊತ್ತಿದೆ. ಈ ಸರಕಾರ ಭ್ರಷ್ಟ ಸರಕಾರವೆಂದು ವಿರೋಧ ಪಕ್ಷದವರು ಮಾತ್ರ ಹೇಳುವುದಲ್ಲ, ಬಿಜೆಪಿ ಸರಕಾರದ ಶಾಸಕರು ಪರಸ್ಪರ ಆರೋಪ ಮಾಡಿಕೊಳ್ಳುತ್ತಾ ಹೇಳಿಕೊಳ್ಳುತ್ತಿದ್ದಾರೆ.

ಪ್ರಾಮಾಣಿಕ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಇದು ಕಾಲ ಅಲ್ಲವೆಂಬಂತೆ ಆಗಿದೆ:
ನೀವು ನಾ ಖಾವುಂಗ-ನಾ ಖಾನೆದೂಂಗ ಎಂದು ಹೇಳಿದ ನಾಯಕ ಮೋದಿಯವರ ಹೆಸರಿನಲ್ಲಿ ಗೆದ್ದವರು, ಸಬ್‌ಕ ಸಾಥ್ ಸಬ್‌ಕ ವಿಕಾಸ್ ಎಂದು ಘೋಷಣೆ ಮಾಡಿದ ನಾಯಕ ಮೋದಿಯವರ ಹೆಸರಿನಲ್ಲಿ ಗೆದ್ದು ಬಂದಿದ್ದೀರಿ ಎಂದು ಹೇಳಿದರೆ ಕ್ಯಾರೇ ಮಾಡುವುದಿಲ್ಲ. ಅವರು ಯಾರಿಗೂ ಕೊರೋನಾ ಆಗಲಿ ಅದರ ಹಿಂದಿರುವ ಭ್ರಷ್ಟಾಚಾರದಿಂದಾಗಿ ಆಗುತ್ತಿರುವ ಸಾವುಗಳು ಕಾಣುತ್ತಿಲ್ಲ. ದಿನ ಬೆಳಗಾದರೆ ಮುಖ್ಯಮಂತ್ರಿಯನ್ನು ಉಳಿಸುವ ಮತ್ತು ಇಳಿಸುವ ಪ್ರಯತ್ನವೇ ಕಂಡುಬರುತ್ತದೆ. ಅಧಿಕಾರ ಹಿಡಿದು ಎಷ್ಟು ಲೂಟಿ ಮಾಡಬಹುದು ಎಂಬುವುದು ಅವರ ಲೆಕ್ಕಾಚಾರ. ಪ್ರತಿಯೊಂದು ಬಿಲ್ಲಿನಲ್ಲೂ ಶೇ. 10ರಷ್ಟು ಮೇಲಿನವರಿಗೆ ಸುರಿದ ಮೇಲೆಯೇ ಅದು ಮಂಜೂರು ಆಗುವುದು ಎಂದು ಹೇಳಲಾಗುತ್ತದೆ. ಅದು ಕೆಳಗೆ ಬರುವಾಗ ಎಷ್ಟು ಪರ್ಸಂಟೇಜ್ ಆಗಿ ಉಳಿಯುತ್ತದೆ ಎಂದು ರಾಜೀವ ಗಾಂಧಿಯವರ ಲೆಕ್ಕದಲ್ಲಿ ಹೇಳಬೇಕಷ್ಟೆ. ನಮ್ಮ ಸ್ಥಳೀಯ ಗ್ರಾಮೀಣ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಭ್ರಷ್ಟಾಚಾರ ಮಾಡಿಯೇ ಬದುಕಬೇಕು ಎಂಬ ವಾತಾವರಣ ಸೃಷ್ಟಿಯಾಗಿದೆ. ಹಿಂದೆ ಜನರ ಸುಲಿಗೆ ಮಾಡಿ ಬ್ರಿಟಿಷರಿಗೆ ಕಪ್ಪ ಕೊಟ್ಟಂತೆ ಈಗೀನ ಅಧಿಕಾರಿಗಳು ಜನರನ್ನು ಸುಲಿಗೆ ಮಾಡಿ ಮೇಲು ಮೇಲಿನ ಅಧಿಕಾರಿಗಳಿಗೆ, ಜನಪ್ರತಿನಿಧಿ, ಮಂತ್ರಿ ಮಹೋದಯರುಗಳಿಗೆ, ಎಷ್ಟೊಂದು ಜನರಿಗೆ ಲಂಚದಲ್ಲಿ ಪಾಲು ಕೊಡಬೇಕು ಎಂಬುದನ್ನು ತಾವು ತಮ್ಮ ತನಿಖಾಧಿಕಾರಿಗಳನ್ನು ಕಳುಹಿಸಿ ವಿಚಾರಿಸಬೇಕು. ರಸ್ತೆಗಿಳಿಯುವ ನೂರು ರೂಪಾಯಿಯಲ್ಲಿ ಕಾಂಟ್ರಕ್ಟರ್‌ಗಳಿಗೆ ಸಿಗುವುದು ಎಷ್ಟು?, ರಸ್ತೆಗೆ ಬೀಳುವುದು ಎಷ್ಟು? ಎಂದು ಲೆಕ್ಕ ಮಾಡಿದರೆ ನಮ್ಮ ರಸ್ತೆ, ಸಂಕ, ಕಟ್ಟಡ, ವಿವಿಧ ಕಾಮಗಾರಿಗಳು, ಯೋಜನೆಗಳು ಎಷ್ಟು ಸುರಕ್ಷಿತ ಮತ್ತು ಯಾವಾಗ ಬೀಳಬಹುದು ಎಂಬ ಲೆಕ್ಕ ಮಾಡಬಹುದು. ನಾನು ಈ ಹಿಂದೆಯೇ ಬರೆದಿದ್ದೆ ನಮ್ಮ ಇಲ್ಲಿಯ ಅಧಿಕಾರಿಗಳು ತಾವು ಕೆಲಸಕ್ಕೆ ಸೇರಲಿಕ್ಕೆ ಕೊಟ್ಟ ಹಣವನ್ನು ಪಡೆಯಲಿಕ್ಕೆ ಮತ್ತು ಮೇಲಿನವರಿಗೆ ಕೊಡಲಿಕ್ಕೆ ಬಡ್ಡಿ ಸಮೇತ ಜನರಿಂದ ಅಥವಾ ಯೋಜನೆಗಳಿಂದ ಸುಲಿಗೆ ಮಾಡುತ್ತಾರೆ. ಅದರಲ್ಲಿ ಅವರಿಗೆ ಸಿಗುವ ಪಾಲು ಕಡಿಮೆ, ಹೆಚ್ಚು ಪಾಲು ಮೇಲೆ ಹೋಗುತ್ತದೆ. ಅವರನ್ನು ಭ್ರಷ್ಟಾಚಾರಿ ಎಂದು ಕರೆದರೆ ಮೇಲಿನವರು ದೊಡ್ಡ ಭ್ರಷ್ಟಾಚಾರಿಗಳಾಗುತ್ತಾರೆ. ಈ ವ್ಯವಸ್ಥೆಯಿಂದಾಗಿ ಪ್ರಾಮಾಣಿಕ ಅಧಿಕಾರಿಗಳಿಗೆ ಮತ್ತು ಎಲ್ಲಾ ಪಕ್ಷದ ಪ್ರಾಮಾಣಿಕ ಜನಪ್ರತಿನಿಧಿಗಳಿಗೆ ಕಾಲವಿಲ್ಲದಂತಾಗಿದೆ. ಇದು ಗಂಭೀರವಾಗಿ ಚಿಂತಿಸಬೇಕಾದ ವಿಷಯವಾಗಿದೆ. ತಾವು ಡಿ.ಕೆ. ಶಿವಕುಮಾರ್‌ರನ್ನು ಹಣ ಸಂಪಾದಿಸಿದ ವಿಧಾನದ ಬಗ್ಗೆ ತನಿಖೆಗೆ ಒಳಪಡಿಸಿದಂತೆ ಉಳಿದ ಎಲ್ಲಾ ರಾಜಕೀಯ ನೇತಾರರನ್ನು ತಮ್ಮ ಪಕ್ಷದವರನ್ನು ಸೇರಿಸಿ ತನಿಖೆಗೆ ಒಳಪಡಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂಬುದು ಬಹುಜನರ ಅಪೇಕ್ಷೆ.

ಬಿಜೆಪಿ ವಿರೋಧ ಪಕ್ಷದಲ್ಲಿರುವಾಗ ಕಾಂಗ್ರೆಸ್‌ನವರು ಭ್ರಷ್ಟಾಚಾರ ಮಾಡಲು ಹೆದರುತ್ತಿದ್ದರು, ಸಿಕ್ಕಿಬೀಳುತ್ತಿದ್ದರು:
ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದಾಗ, ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಭ್ರಷ್ಟಾಚಾರ ಇದ್ದರೂ ಅದರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಹೆದರಿಕೆ ಇತ್ತು. ಜನರಿಗೂ ಬಿಜೆಪಿ ನಾಯಕರು ಭ್ರಷ್ಟಾಚಾರವನ್ನು ಹೊರಗೆಳೆಯುತ್ತಾರೆ ಎಂಬ ಭರವಸೆ ಇತ್ತು. ಬಿಜೆಪಿಯಲ್ಲಿ ಬೆರಳೆಣಿಕೆ ಸದಸ್ಯರಿದ್ದರೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎ. ಕೆ. ಸುಬ್ಬಯ್ಯ ಕಾಂಗ್ರೆಸ್ ನಾಯಕರ ಭ್ರಷ್ಟಾಚಾರವನ್ನು ಬಯಲಿಗೆಳೆದು ಮಂತ್ರಿ ರಾಜೀನಾಮೆ ಕೊಡುವಂತೆ ಮಾಡಿದ್ದರು. ಯಡಿಯೂರಪ್ಪನವರು ಸೇರಿ ಬಿಜೆಪಿಯ ಎಲ್ಲಾ ಜನಪ್ರತಿನಿಧಿಗಳು ಭ್ರಷ್ಟಾಚಾರ ವಿರುದ್ದ ವಿಧಾನಸೌಧದ ಒಳಗು, ಹೊರಗು ಹೋರಾಟ ನಡೆಸುತ್ತಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರದ ಬಗ್ಗೆ ಬಿಜೆಪಿಯವರಿಗೆ ಯಾರ ಹೆದರಿಕೆಯೂ ಇಲ್ಲ. ಕಾಂಗ್ರೆಸ್, ದಳ ಇತರ ಪಕ್ಷಗಳು 70 ವರುಷದಲ್ಲಿ ಮಾಡಿದ ಭ್ರಷ್ಟಾಚಾರದ ಸಾಧನೆಯನ್ನು 5-10 ವರ್ಷದಲ್ಲಿ ಮೀರುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಕಾಂಗ್ರೆಸ್ ಅಥವಾ ಇತರ ಯಾವುದೇ ಪಕ್ಷದವರು ಅವರನ್ನು ಪ್ರಶ್ನಿಸಿದರೆ ಕೇಳಲಿಕ್ಕೆ ನೀವ್ಯಾರು? ಭ್ರಷ್ಟಾಚಾರ ಮಾಡಿರುವ ನಿಮಗೆ ಕೇಳುವ ಹಕ್ಕೇನಿದೆ. ಹೆಚ್ಚು ಮಾತನಾಡಿದರೆ ನಿಮ್ಮ ಬಂಡವಾಳ ಬಯಲು ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ. ಬಿಜೆಪಿ ನಾಯಕರು ಭ್ರಷ್ಟಾಚಾರದಲ್ಲಿ ಆಧಾರ ಸಹಿತ ಸಿಕ್ಕಿಬಿದ್ದಿದ್ದರೂ ನಮ್ಮ ಹಳೆ ಕೇಸ್ ಹೊರಗೆ ಬರುವುದು ಬೇಡ ಎಂದು ಕಾಂಗ್ರೆಸ್, ದಳದ ನಾಯಕರು ಅದನ್ನು ಅಲ್ಲಿಗೇ ಬಿಟ್ಟು ಎಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುತ್ತಾರೆ. ಅಥವಾ ಪಾಲು ತೆಗೆದುಕೊಂಡು ಸುಮ್ಮನಿರುತ್ತಾರೆ. ಬಿಜೆಪಿ ನಾಯಕರೇ ನಿಮ್ಮ ಬಂಡವಾಳ ಬಯಲು ಮಾಡುತ್ತೇವೆ ಎಂಬ ಮಾತನ್ನು ಕಾಂಗ್ರೆಸಿನ ಸಿದ್ದರಾಮಯ್ಯ, ದಳದ ಕುಮಾರಸ್ವಾಮಿ ಅವರನ್ನು ಹೆದರಿಸಲು ಆಗಾಗ ಹೇಳುವುದು ಉಂಟು. ಡಿ.ಕೆ ಶಿವಕುಮಾರ್ ತನಿಖೆಗೆ ಒಳಪಡಿಸಿದಾಗ ಬಿಜೆಪಿಯವರೇನು ಸತ್ಯ ಹರಿಶ್ಚಂದ್ರರೇ?, ಸಂದರ್ಭ ಬಂದಾಗ ಅದನ್ನು ಹೊರಗೆ ತೆಗೆಯುತ್ತೇನೆ ಎಂದು ಹೇಳಿ ಬಿಜೆಪಿ ನಾಯಕರು ವಿರೋಧ ಮಾಡದಂತೆ ನೋಡಿಕೊಂಡಿದ್ದಾರೆ. ತನಗೆ ತಿರುಗಿ ಬೀಳಬಾರದೆಂದು ಯಡಿಯೂರಪ್ಪನವರಂತೂ ಯಾರ ವಿರುದ್ಧವೂ ಭ್ರಷ್ಟಾಚಾರದ ಗಂಭೀರ ಆರೋಪವನ್ನು ಮಾಡುವುದಿಲ್ಲ. ಈಗ ಬಿಜೆಪಿಯ ನಾಯಕರು ಪರಸ್ಪರ ಆರೋಪ ಮಾಡಿಕೊಂಡು ಯಡಿಯೂರಪ್ಪನವರನ್ನು ಬ್ಲ್ಯಾಕ್‌ಮೇಲ್ ಮಾಡಿ ಅಧಿಕಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿಯ ಭ್ರಷ್ಟಾಚಾರವನ್ನು ಕೇಳುವ ಶಕ್ತಿ ವಿರೋಧ ಪಕ್ಷಗಳಿಗೆ ಇಲ್ಲವೇ ಇಲ್ಲ:
ಪ್ರವಾಸೋದ್ಯಮ ಮಂತ್ರಿ ಸಿ.ಪಿ. ಯೋಗೀಶ್ವರ್, ಬೆಂಗಳೂರು ಅಭಿವೃದ್ಧಿ ಎಂಬ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ತಿಂದಿದ್ದಾರೆ ಎಂದು ಅವರ ಮೇಲೆ ಕೇಸು ಮಾಡಬೇಕೆಂದು ಅವರ ಪಕ್ಷದ ಯಡಿಯೂರಪ್ಪನವರ ರಾಜಕೀಯ ಕಾರ್‍ಯದರ್ಶಿ ಶಾಸಕರಾದ ರೇಣುಕಾಚಾರ್ಯ ಬಹಿರಂಗವಾಗಿ ಹೇಳಿದ್ದಾರೆ. ಬಿಜೆಪಿ ಶಾಸಕ ಎಚ್. ವಿಶ್ವನಾಥ್‌ರವರು ಯಡಿಯೂರಪ್ಪನವರ ಮಗ ವಿಜಯೇಂದ್ರ 22 ಸಾವಿರ ಕೋಟಿ ರೂಪಾಯಿಯ ಭದ್ರಾ ದಂಡೆಯ ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಸರಕಾರ ಅದನ್ನು ತನಿಖೆಗೆ ಒಳಪಡಿಸುವ ಬದಲು ಆ ಯೋಜನೆಯನ್ನು ಕಾರ್ಯಗತಗೊಳಿಸಿದ ತನಿಖೆಗೆ ಒಳಪಡಬೇಕಾದ ಅಧಿಕಾರಿಯ ಹೇಳಿಕೆಯನ್ನು ತೆಗೆದುಕೊಂಡು ಹಾಗೆಯೇ ಬಿಟ್ಟುಬಿಟ್ಟಿದ್ದಾರೆ. ಈ ಮೇಲಿನ ಎರಡು ಪ್ರಕರಣಗಳಲ್ಲಿಯೂ ಆಡಳಿತ ಪಕ್ಷದ ಬಿಜೆಪಿಯ ಶಾಸಕರೇ ಆರೋಪ ಮಾಡಿದ್ದರೂ ವಿರೋಧ ಪಕ್ಷದ ನಾಯಕರು ಅದರ ಬಗ್ಗೆ ಯಾವ ಆಕ್ಷೇಪಣೆಯನ್ನು ಮಾಡಿರುವುದಿಲ್ಲ, ತನಿಖೆಗೆ ಒತ್ತಾಯಿಸಿರುವುದಿಲ್ಲ. ಆದರೆ ಹಿಂದೆ ನೀರಾವರಿ ಮಂತ್ರಿಯಾಗಿದ್ದ ಸಿ.ಡಿ. ಕೇಸಿನಿಂದ ರಾಜೀನಾಮೆ ಕೊಡಬೇಕಾಗಿ ಬಂದ ರಮೇಶ್ ಜಾರಕಿಹೊಳಿ ತನಗೆ ಬರಬೇಕಾಗಿದ್ದ ಭದ್ರಾ ದಂಡೆಯ ನೀರಾವರಿ ಯೋಜನೆಯ ಕಮಿಷನ್ ವಿಜಯೇಂದ್ರರವರಿಗೆ ಹೋಗಿದೆ ಎಂದು ಅದಕ್ಕೆ ಕಾರಣರಾಗಿರುವ ಯಡಿಯೂರಪ್ಪನವರ ಮೇಲೆ ಅಸಮಾಧಾನಗೊಂಡಿದ್ದಾರೆ. ತನ್ನ ಶಾಸಕತ್ವಕ್ಕೆ ರಾಜೀನಾಮೆ ಕೊಡಲು ಸಿದ್ದತೆ ನಡೆಸಿದ್ದಾರೆ. ಯಡಿಯೂರಪ್ಪನವರ ಮಗ ವಿಜಯೇಂದ್ರ 18 ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ದಾಖಲೆಯೊಂದಿಗೆ ಪವರ್ ಟಿವಿಯಲ್ಲಿ ಸರಣಿಯಾಗಿ ವರದಿ ಬಂದಿತ್ತು. ಪವರ್ ಟಿವಿಯ ಮುಖ್ಯಸ್ಥರು ವಿಜಯೇಂದ್ರರನ್ನು ಚಾನೆಲ್‌ಗೆ ಬಂದು ಆರೋಪದ ಬಗ್ಗೆ ಚರ್ಚಿಸುವಂತೆ ಆಹ್ವಾನಿಸಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯನವರು ೧೮ ಕೋಟಿ ರೂಪಾಯಿ ವಿಜಯೇಂದ್ರರ ಖಾತೆಗೆ ಬಂದಿರುವ ಪಟ್ಟಿಯನ್ನು ವಿಧಾನಸೌದದ ಕಲಾಪದಲ್ಲಿ ಓದಿ ಹೇಳಿದ್ದರು. ಆನಂತರ ಪವರ್ ಟಿವಿಯ ಮೇಲೆ ಕೇಸ್ ಆಯಿತು, ಟಿವಿಯ ಕಚೇರಿಯ ಮೇಲೆ ರೈಡ್ ಆಯಿತು. ಅವರ ಚಾನೆಲ್‌ನ ವಸ್ತುಗಳನ್ನು ಕೊಂಡೊಯ್ದಿದ್ದಾರೆ ಎಂಬ ಮಾತು ಕೇಳಿಬಂತು. ಪವರ್ ಟಿವಿ ಕೆಲವು ದಿವಸ ಸ್ಥಗಿತಗೊಂಡಿತ್ತು. ಪುನಃ ಪ್ರಾರಂಭವಾದರೂ ಆ ಭ್ರಷ್ಟಾಚಾರದ ಸುದ್ದಿ ಮತ್ತೆ ಬರಲೇ ಇಲ್ಲ. ಚರ್ಚೆಯೂ ನಡೆಯಲಿಲ್ಲ. ವಿಜಯೇಂದ್ರರ ಮೇಲಿನ ಆರೋಪ ಬಿದ್ದುಹೋಗಿತ್ತು. ಚಾನೆಲ್‌ನ ಮೇಲೆ ಇಷ್ಟೆಲ್ಲಾ ಆದರೂ ಯಾವುದೇ ವಿರೋಧ ಪಕ್ಷದ ನಾಯಕರು ಸಿದ್ದರಾಮಯ್ಯ ಸೇರಿದಂತೆ ಧ್ವನಿ ಎತ್ತಲಿಲ್ಲ. ಆ ಪ್ರಕರಣದ ಬಗ್ಗೆಯೂ ಯಾರು ಮತ್ತೆ ಕೇಳಲಿಲ್ಲ. ಪ್ರಧಾನಿ ಮೋದಿಜೀಯವರೇ ಇದು ಏನನ್ನು ತೋರಿಸುತ್ತದೆ ನೀವೆ ಹೇಳಿ.

ನಿಮಗೆ ರಾಹುಲ್ ಗಾಂಧಿಯವರ ಕಾಂಗ್ರೆಸ್ ಬೇಕೇ? ದೇವೇ ಗೌಡರ ದಳ ಬೇಕೇ? ಮೋದಿಯವರ ಬಿಜೆಪಿ ಬೇಕೇ?:
ಬಿಜೆಪಿ ನಾಯಕರ ಭ್ರಷ್ಟಚಾರದ ಬಗ್ಗೆ ವಿರೋಧ ಪಕ್ಷದವರು ಪ್ರಶ್ನಿಸಿದಾಗ ಜನತೆ ನಮ್ಮನ್ನು ಗೆಲ್ಲಿಸಿದ್ದಾರೆ, ಸೋತ ನೀವು ನಮ್ಮನ್ನು ಕೇಳುವುದು ಏಕೆ ಎಂದು ಲೇವಡಿ ಮಾಡುತ್ತಾರೆ. ಕಾಂಗ್ರೆಸ್‌ನವರು ಭ್ರಷ್ಟಾಚಾರ ಮಾಡುತ್ತಾರೆ. ಬಿಜೆಪಿಯವರು ಬಂದರೆ ಮಾಡಲಿಕ್ಕಿಲ್ಲ ಎಂಬ ನಂಬಿಕೆಯಿಂದ ಜನರು ಓಟು ಹಾಕಿದ್ದಾರೆ ಎಂಬ ಮಾತನ್ನು ಮರೆತೇ ಬಿಡುತ್ತಾರೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಗಿಂತ ಹೆಚ್ಚು ಭ್ರಷ್ಟಾಚಾರ ಮಾಡಲು ಗೆಲ್ಲಿಸಿದ್ದು ಎಂಬಂತೆ ಮಾತನಾಡುತ್ತಾರೆ. ನಮ್ಮಂತ ಸಾಮಾನ್ಯ ಜನತೆ ಪ್ರಶ್ನಿಸಿದರೆ, ಭ್ರಷ್ಟಾಚಾರದಿಂದ ತೊಂದರೆಗೆ ಒಳಗಾದವರು ಕೇಳಿದರೆ ನಿಮಗೆ ರಾಹುಲ್ ಗಾಂಧಿಯ ಕಾಂಗ್ರೆಸ್ ಬೇಕೇ? ದೇವೇಗೌಡರ ದಳ ಬೇಕೇ? ಮೋದಿಯವರ ಬಿಜೆಪಿ ಬೇಕೇ? ಅವರಿಗಿಂತ ಬಿಜೆಪಿಯ ನಾವೇ ವಾಸಿ ಅಲ್ಲವೇ ಎಂದು ಜನರನ್ನು ಕೇಳುತ್ತಾರೆ, ಹೇಳುತ್ತಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಇವರಲ್ಲಿ ಯಾರನ್ನು ಆಯ್ಕೆಮಾಡುವುದು ಎಂಬುದು ಜನರ ಮುಂದಿರುವ ಯಕ್ಷ ಪ್ರಶ್ನೆಯಾಗಿದೆ. ಇಂತಹ ಸಂದರ್ಭದಲ್ಲಿ ನಿಮ್ಮ ನಾ ಖಾವುಂಗ-ನಾ ಖಾನೆದೂಂಗ, ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂಬ ಮಾತು ಭರವಸೆಯ ಬೆಳಕನ್ನು ನೀಡಿದೆ. ಆದರೆ ಅದು ಕಾರ್ಯರೂಪಕ್ಕೆ ಬರಬೇಕಲ್ಲವೇ?. ಭ್ರಷ್ಟಾಚಾರ ಮುಕ್ತ ಭಾರತ ಎಂಬ ಘೋಷಣೆಯ ಕರೆ ಅದನ್ನು ಮಾಡಬಹುದಲ್ಲವೇ?

ಮೋದಿಜೀಯವರೇ ತಾವು ಭ್ರಷ್ಟಾಚಾರಿಯಲ್ಲ ಎಂದು ಎಲ್ಲರಿಗೂ ತಿಳಿದಿದೆ, ಆದರೆ ತಮ್ಮವರು ಭ್ರಷ್ಟಾಚಾರ ಮಾಡಿದರೆ ತಾವೇ ಹೊಣೆಗಾರರಾಗುತ್ತೀರಿ:
ಕಾಂಗ್ರೆಸ್, ದಳದವರು ಸಾಚಾ ಅಲ್ಲ. ಅವರು ಈಗಾಗಲೇ ಸರಕಾರ ಬೀಳುತ್ತದೆ, ಭ್ರಷ್ಟಾಚಾರ ಮಾಡಲು ತಮಗೆ ಅಧಿಕಾರ ಸಿಗುತ್ತದೆ ಎಂದು ಮನಸ್ಸಿನಲ್ಲಿ ಮಂಡಕ್ಕಿ ತಿನ್ನುತ್ತಾ ಕಾಯುತ್ತ ಕುಳಿತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಯಾರು? ಮತ್ತು ಮಂತ್ರಿಗಳು ಯಾರ್‍ಯಾರು? ಎಂಬ ಲೆಕ್ಕಾಚಾರ ಸ್ಫರ್ಧೆಗೆ ಬಿದ್ದಿದ್ದಾರೆ. ಇಲ್ಲಿ ನಾನು ಕಾಂಗ್ರೆಸ್ಸಿಗನಾಗಿ, ಬಿಜೆಪಿಯವನಾಗಿ, ದಳದವನಾಗಿ ಬರೆಯುತ್ತಿಲ್ಲ. ಸಾಮಾನ್ಯ ಪ್ರಜೆಯಾಗಿ, ಸಾಮಾನ್ಯರ ಅಭಿಪ್ರಾಯದಂತೆ ನಮ್ಮ ಊರಿನಲ್ಲಿ ಭ್ರಷ್ಟಾಚಾರ ನಿಲ್ಲಲಿ, ನಮ್ಮ ಊರಿನ ಅಭಿವೃದ್ಧಿಗೆ ಭ್ರಷ್ಟಾಚಾರವೇ ಕಂಟಕ ಮತ್ತು ತಡೆ, ಸಾವು-ನೋವಿಗೆ ಕಾರಣ ಎಂಬುದಕ್ಕಾಗಿ ಬರೆಯುತ್ತಿದ್ದೇನೆ. ಈಗ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಈ ರಾಜ್ಯದ ಭ್ರಷ್ಟಾಚಾರ ನಿರ್ಮೂಲನೆ ಮಾಡಲಿಕ್ಕೆ ನಿಮ್ಮನ್ನೇ ಕೇಳಬೇಕು. ಕಾಂಗ್ರೆಸ್‌ನವರಲ್ಲಿ ಕೇಳಿ ಪ್ರಯೋಜನವಿಲ್ಲ ಎಂಬುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ತಾವು ಭ್ರಷ್ಟಾಚಾರಿಯಲ್ಲ ಎಂದು ಎಲ್ಲರಿಗೂ ತಿಳಿದಿದೆ. ಆದರೆ ತಮ್ಮ ಹೆಸರಿನಲ್ಲಿ ಗೆದ್ದು ಬಂದು, ತಮ್ಮ ಹೆಸರಿನಲ್ಲಿ ಆಡಳಿತ ನಡೆಸುವವರು ಭ್ರಷ್ಟಾಚಾರ ನಡೆಸಿದರೆ ಆದರ ಕೆಟ್ಟ ಹೆಸರು ನಿಮಗೆ ಬರುತ್ತದೆ. ನಿಮ್ಮ ಅಡಿಯಲ್ಲಿರುವವರನ್ನು ನೀವು ಕಂಟ್ರೋಲ್ ಮಾಡದಿದ್ದರೆ ನಾ ಖಾನೆ ದೂಂಗ ಎಂಬ ಮಾತಿಗೆ ಬೆಲೆ ಬರಲಾರದು. ಅವರಿಗೆ ನೀವೇ ರಕ್ಷಣೆ ಕೊಡುವವರು ಎಂಬ ಅಭಿಪ್ರಾಯ ಬರಬಹುದು. ಅವರ ಭ್ರಷ್ಟಾಚಾರಗಳಿಗೆ ನೀವೇ ಹೊಣೆಗಾರರಾಗುತ್ತೀರಿ ಎಂದು ಹೇಳಿದರೆ ತಪ್ಪಾದೀತೆ?.

ಗ್ರಾಮೀಣ ಜನರು, ಸ್ಥಳೀಯ ಆಡಳಿತದವರು, ಜನಪ್ರತಿನಿಧಿಗಳು ಭ್ರಷ್ಟಾಚಾರಿಗಳಲ್ಲ. ಅವರನ್ನು ರಕ್ಷಿಸಬೇಕಾಗಿದೆ, ಜನಾಧಿಕಾರ ಕೊಡಬೇಕಾಗಿದೆ:
ಗ್ರಾಮೀಣ ಜನರು ಮತ್ತು ಸ್ಥಳೀಯ ಆಡಳಿತದವರು, ಜನಪ್ರತಿನಿಧಿಗಳು ಇಂದಿಗೂ ಭ್ರಷ್ಟಾಚಾರಿಗಳಾಗಿಲ್ಲ. ಆದರೆ ಭ್ರಷ್ಟಾಚಾರ ತೀರ್ಥ ಮೇಲಿನಿಂದ ಇಳಿದು ಪಾದಕ್ಕೆ ಬಂದರೆ ಡೆಲ್ಲಿಯಿಂದ, ರಾಜ್ಯದಿಂದ ಹಳ್ಳಿಗೆ ಬಂದರೆ ಅವರು ಅನಿವಾರ್‍ಯವಾಗಿ ಬದುಕಲಿಕ್ಕಾಗಿ ಭ್ರಷ್ಟಾಚಾರಿಗಳಾಗುತ್ತಾರೆ. ಹಣ ಮಾಡುವುದು, ಹೇಗಾದರೂ ಮಾಡಿ ಅಧಿಕಾರ ಗಳಿಸುವುದು ಎಂಬ ಪಕ್ಷಗಳ ಸಂಚಿಗೆ ಬಲಿಯಾಗುತ್ತಾರೆ, ತೊಂದರೆಗೊಳಗಾಗುತ್ತಾರೆ. ಊರಿನ ವ್ಯವಸ್ಥೆ, ಸಾಮರಸ್ಯ ಹಾಳಾಗುತ್ತದೆ. ಎಪ್ಪತೈದು ವರ್ಷಗಳ ಹಿಂದೆ ಲಕ್ಷಾಂತರ ಮಂದಿಯ ತ್ಯಾಗದ, ಬಲಿದಾನದಿಂದ ಗಳಿಸಿದ ಸ್ವಾತಂತ್ರ್ಯವನ್ನು ಬಲಿಕೊಟ್ಟಂತಾಗುತ್ತದೆ, ಮಾರಾಟ ಮಾಡಿದಂತಾಗುತ್ತದೆ. ಅದಕ್ಕಾಗಿ ತಾವು ಕೂಡಲೇ ಕಾರ್‍ಯಪ್ರವೃತ್ತರಾಗಿ ತಮ್ಮ ಆಡಳಿತದಲ್ಲಿರುವ ಅಧಿಕಾರಿಗಳನ್ನು, ವಿರೋಧ ಪಕ್ಷದಲ್ಲಿರುವ ಮತ್ತು ತಮ್ಮ ಪಕ್ಷದಲ್ಲಿರುವ ಭ್ರಷ್ಟಾಚಾರಿಗಳನ್ನು ಶಿಕ್ಷೆಗೆ ಗುರಿಪಡಿಸಿ, ಪ್ರಾಮಾಣಿಕ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ರಾಜ್ಯದ ಆಡಳಿತ ನೋಡಿಕೊಳ್ಳಲು ನೇಮಿಸಬೇಕು ಎಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ನಿಮ್ಮ ಘೋಷಣೆಯನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ತಮ್ಮ ಬೆಂಬಲಿಗರೊಂದಿಗೆ ನಾವು ಸುದ್ದಿ ಮಾಧ್ಯಮವಾಗಿ ಕೈ ಜೋಡಿಸುತ್ತೇವೆ. 75 ವರ್ಷದ ಸ್ವಾತಂತ್ರ್ಯವನ್ನು ಜನರ ಸ್ವಾತಂತ್ರ್ಯವನ್ನಾಗಿ ಮಾಡಿ, ಭ್ರಷ್ಟಾಚಾರ ಮುಕ್ತ ಗ್ರಾಮ, ತಾಲೂಕು, ಜಿಲ್ಲೆ, ದೇಶ ಎಂಬ ಘೋಷಣೆಗೆ ಒಳಪಡಿಸಲಿದ್ದೇವೆ. ಸ್ಥಳೀಯ ಆಡಳಿತವನ್ನು ಜನಾಧಿಕಾರದ, ಗ್ರಾಮ ಸ್ವರಾಜ್ಯದ ಆಡಳಿತವನ್ನಾಗಿಸುವುದು, ಮಹಾತ್ಮ ಗಾಂಧಿಯವರ ಕನಸನ್ನು ನನಸಾಗಿಸುವ ದಿಕ್ಕಿನಲ್ಲಿ ಪ್ರಯತ್ನಿಸಲಿದ್ದೇವೆ ಎಂದು ಸುದ್ದಿ ಮಾಧ್ಯಮದ ಮೂಲಕ ತಿಳಿಸಲು ಬಯಸುತ್ತೇವೆ. ಕಳೆದ ಮೂವತೈದು ವರ್ಷಗಳಿಂದ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ಪತ್ರಿಕೆ ನಡೆಸುತ್ತಾ, ಇದೀಗ ವೆಬ್‌ಸೈಟ್ ಮತ್ತು ಚಾನಲ್‌ನ ಮೂಲಕ ಜನಜಾಗೃತಿಯನ್ನು ಮಾಡುತ್ತಿದ್ದೇನೆ. ಈ ಮೇಲಿನ ಮಾತನ್ನು ಹೇಳಲೆಂದೆ ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರ ಕ್ಷೇತ್ರ ಅಮೇಥಿಯಲ್ಲಿ ಸ್ಫರ್ಧಿಸಿದ್ದೆ. ನಿಮ್ಮ ಕ್ಷೇತ್ರ ವಾರಾಣಾಸಿಯಲ್ಲಿ ನಾಮಪತ್ರವನ್ನು ಸಲ್ಲಿಸಿದ್ದೆ ಎಂಬುದನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಸಂ

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.