HomePage_Banner
HomePage_Banner

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ-ಪುತ್ತೂರು ತಾಲೂಕಿನಲ್ಲಿ ಚುರುಕುಗೊಂಡ ನರೇಗಾ ಕಾಯಕ

Puttur_Advt_NewsUnder_1
Puttur_Advt_NewsUnder_1

ತೋಟಗಾರಿಕೆ ಕಾಮಗಾರಿಗೆ ಹೆಚ್ಚಿದ ಬೇಡಿಕೆ – 2 ಲಕ್ಷ ಮಾನವ ದಿನ ಸೃಜನೆಯ ಗುರಿ

ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್‌ಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಲವು ಕಾಮಗಾರಿಗಳು ವೇಗವಾಗಿ ಅನುಷ್ಠಾನಗೊಳ್ಳುತ್ತಿದೆ. ಉಪ್ಪಿನಂಗಡಿ, 34 ನೆಕ್ಕಿಲಾಡಿ, ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಹುಪ್ರದೇಶ ನಗರಗಳಾಗಿ ಮಾರ್‍ಪಟ್ಟಿದ್ದರೂ, ಇನ್ನುಳಿದ ಗ್ರಾಮ ಪಂಚಾಯತ್‌ಗಳಲ್ಲಿ ನರೇಗಾ ಕೆಲಸ ಚುರುಕುಗೊಂಡಿದೆ.


ತೋಟಗಾರಿಕೆ ಕಾಮಗಾರಿಗೆ ಹೆಚ್ಚಿದ ಬೇಡಿಕೆ
ತಾಲೂಕಿನಾದ್ಯಂತ ಅಡಿಕೆ, ತೆಂಗು, ಕಾಣುಮೆಣಸು, ಕೊಕ್ಕೊ, ಗೇರು, ವೀಳ್ಯದೆಲೆ, ನುಗ್ಗೆ, ಪಪ್ಪಾಯ, ಮಲ್ಲಿಗೆ ಕೃಷಿ ಮಾಡುವ ಕಾರ್ಯ ಚುರುಕುಗೊಂಡಿದೆ. ತೋಟಗಾರಿಕೆ ಗಿಡ, ಅರಣ್ಯಗಿಡ, ಪೌಷ್ಠಿಕಾಂಶ ಹಣ್ಣಿನ ಗಿಡಗಳನ್ನು ನೆಡುವ ಕಾಮಗಾರಿಗಳಲ್ಲಿ ಈಗಾಗಲೇ ಗುರಿ ಮೀರಿದ ಸಾಧನೆ ಮಾಡಲಾಗಿದೆ. ತೋಟಗಾರಿಕೆ ಕೆಲಸಗಳಿಗೆ ಇನ್ನೂ ಹೆಚ್ಚಿನ ಬೇಡಿಕೆ ಇದೆ. ಹೊಸ ಕೃಷಿ ತೋಟಗಳಿಗೆ ಉಜಿರಿ ಕಣಿ (ಬಸಿ ಕಾಲುವೆ) ನಿರ್ಮಿಸಬಹುದಾಗಿದ್ದು ಇದರಿಂದ ಹೆಚ್ಚು ನೀರಿರುವ ತೋಟಗಳಲ್ಲಿ ಹೊಸ ಅಡಿಕೆ ತೋಟ ರಚಿಸುವವರಿಗೆ ಇದು ಸಹಕಾರಿಯಾಗಲಿದೆ.

ಜಲಶಕ್ತಿ ಅಭಿಯಾನದಡಿ ಹಲವು ಅನುಷ್ಠಾನ
ಎಪ್ರಿಲ್ ನಿಂದ ನವೆಂಬರ್ ವರೆಗೆ ನರೇಗಾ ಯೋಜನೆಯಡಿ ‘ಕ್ಯಾಚ್ ದಿ ರೈನ್’ ಶೀರ್ಷಿಕೆಯಡಿ ಮಳೆ ನೀರನ್ನು ಹಿಡಿದುಟ್ಟುಕೊಂಡು ಭೂಮಿಗೆ ಇಂಗಿಸುವ ‘ಅಂತರ್ಜಲ ಚೇತನ’ಕ್ಕೆ ಪೂರಕವಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶದಿಂದ ಜಲಶಕ್ತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಭಿಯಾನದಡಿ ವಿಶೇಷವಾಗಿ 70 ತೆರೆದ ಬಾವಿ ನಿರ್ಮಾಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು ಇನ್ನೂ ತೆರೆದ ಬಾವಿಗೆ ಬೇಡಿಕೆ ಬರುತ್ತಿದೆ. ಕೃಷಿ ಜಮೀನಿನಲ್ಲಿ ನೀರನ್ನು ಶೇಖರಿಸಿಡುವ ಸಲುವಾಗಿ 15 ಕೃಷಿ ಹೊಂಡ ರಚನೆ ಕಾರ್ಯ ಪ್ರಗತಿಯಲ್ಲಿದೆ. ಮನೆಯಲ್ಲಿ ಬಳಸಿದ ವ್ಯರ್ಥ ನೀರನ್ನು ಅಂದರೆ ಸ್ನಾನ ಗೃಹದ, ಪಾತ್ರೆ ತೊಳೆದ, ಬಟ್ಟೆ ಒಗೆದ ನೀರನ್ನು ವ್ಯವಸ್ಥಿತವಾಗಿ ಇಂಗಿಸುವ ಮತ್ತು ಆ ಮೂಲಕ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಯಾಗಿಡಲು ಬಚ್ಚಲುಗುಂಡಿ (ಸೋಕ್ ಪಿಟ್) ನಿರ್ಮಿಸಬಹುದಾಗಿದ್ದು ಜಲಶಕ್ತಿ ಅಭಿಯಾನದಡಿ ತಾಲೂಕಿನಲ್ಲಿ ಎಪ್ರಿಲ್‌ನಿಂದ ಈವರೆಗೆ 104 ಬಚ್ಚಲು ಗುಂಡಿ ರಚನೆ ನಡೆದಿದ್ದು ಇನ್ನು 100 ಬಚ್ಚಲುಗುಂಡಿ ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. ನಾಲ ಹೂಳೆತ್ತುವ ಯೋಜನೆ ರೂಪಿಸಿದ್ದು ಪ್ರಸ್ತುತ 21 ಕಾಮಗಾರಿಗಳು ಪೂರ್ಣಗೊಂಡಿವೆ. ಇವಿಷ್ಟೇ ಅಲ್ಲದೆ ಸಮಗ್ರ ಕೆರೆ ಅಭಿವೃದ್ಧಿ, ಗೋಕಟ್ಟೆ, ಕಲ್ಯಾಣಿ ಪುನಶ್ಚೇತನ, ಮಳೆ ನೀರ ಕೊಯ್ಲು ಘಟಕ ರಚನೆ, ಕಿಂಡಿ ಅಣೆಕಟ್ಟು ನಿರ್ಮಾಣ, ಕೊಳವೆ ಬಾವಿ ಮರುಪೂರಣ ಘಟಕ ಇತ್ಯಾದಿ ಸೇರಿದಂತೆ ಒಟ್ಟು ತಾಲೂಕಿನಾದ್ಯಂತ 480 ಕಾಮಗಾರಿಗಳು ಪ್ರಗತಿಯಲ್ಲಿದ್ದು ಮಳೆಗಾಲದ ಅಂತ್ಯಕ್ಕೆ ಗುರಿಮೀರಿದ ಸಾಧನೆಗೆ ಯೋಜನೆ ರೂಪಿಸಲಾಗಿದೆ.

 

 

ಗ್ರಾ.ಪಂ. ಕಟ್ಟಗಳಿಗೆ ಮಳೆ ನೀರ ಕೊಯ್ಲು ಘಟಕ
ತಾಲೂಕಿನ 22 ಗ್ರಾ.ಪಂ. ಕಚೇರಿ ಕಟ್ಟಡಗಳಿಗೆ ಮಳೆ ನೀರ ಕೊಯ್ಲು ಘಟಕ ರಚನೆಗೆ ಯೋಜನೆ ರೂಪಿಸಿದ್ದು ಈಗಾಗಲೇ ನೆಟ್ಟಣಿಗೆ ಮುಡ್ನೂರು, ಬಲ್ನಾಡು, ಬಡಗನ್ನೂರು, ಪಾಣಾಜೆ, 34 ನೆಕ್ಕಿಲಾಡಿ, ಕೆಯ್ಯೂರು, ಕೊಳ್ತಿಗೆ, ನಿಡ್ಪಳ್ಳಿ, ಮುಂಡೂರು, ಅರಿಯಡ್ಕ ಗ್ರಾಮ ಪಂಚಾಯತ್ ಕಟ್ಟಗಳ ಮೇಲ್ಛಾವಣಿ ನೀರನ್ನು ಭೂಮಿಗೆ ಇಂಗಿಸುವ ಕಾರ್ಯವಾಗಿದೆ. ಅಲ್ಲದೆ ಕೋಡಿಂಬಾಡಿ ಸರಕಾರಿ ಶಾಲೆಗೆ ಮಳೆ ನೀರ ಕೊಯ್ಲು ಘಟಕ ಅಳವಡಿಸಲಾಗಿದೆ. ಇನ್ನುಳಿದ ಪಂಚಾಯತ್ ಕಟ್ಟಡ, ಸರಕಾರಿ ಶಾಲೆ, ಅಂಗನವಾಡಿ ಕಟ್ಟಡಗಳಿಗೂ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ.

ಉದ್ಯೋಗ ಖಾತರಿ ಯೋಜನೆಯಡಿ ಆರ್ಯಾಪು, ನಿಡ್ಪಳ್ಳಿ ಕೆಯ್ಯೂರು ಗ್ರಾಮ ಪಂಚಾಯತ್‌ಗಳಿಗೆ ಹೊಸ ಗ್ರಾ.ಪಂ. ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಉಪ್ಪಿನಂಗಡಿ, ನೆಟ್ಟಣಿಗೆ ಮುಡ್ನೂರು ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲೆಗಳಿಗೆ ಆವರಣ ಗೋಡೆ ಕೆಲಸ ಪ್ರಗತಿಯಲ್ಲಿದೆ. ಕೊಡಿಪ್ಪಾಡಿ, ಅರಿಯಡ್ಕ, ನಿಡ್ಪಳ್ಳಿ, ಕೆದಂಬಾಡಿ, ನೆಟ್ಟಣಿಗೆ ಮುಡ್ನೂರು ಪಂಚಾಯತ್ ವ್ಯಾಪ್ತಿಯ ಶಾಲೆಗಳಿಗೆ ಶೌಚಾಲಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮುಂಡೂರಿನಲ್ಲಿ ಸ್ಮಶಾನ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ನರೇಗಾ ಹಾಗೂ ಇತರ ಅನುದಾನವನ್ನು ಬಳಸಿಕೊಂಡು ಒಗ್ಗೂಡಿಸುವಿಕೆಯಲ್ಲಿ ಕೊಡಿಪ್ಪಾಡಿ ಶಾಲೆಯಲ್ಲಿ 6.20 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಬಿಸಿಯೂಟದ ಕೊಠಡಿ ನಿರ್ಮಾಣ ನಡೆಯುತ್ತಿದೆ.

2 ಲಕ್ಷ ಮಾನವ ದಿನಗಳ ಸೃಜನೆಯ ಗುರಿ
ತಾಲೂಕು ಕಳೆದ ಆರ್ಥಿಕ ವರ್ಷದಲ್ಲಿ 1,87,442 ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ.107 ಗುರಿ ಮೀರಿದ ಸಾಧನೆಯನ್ನು ಮಾಡಿತ್ತು. ವಿಶೇಷವಾಗಿ ಹಿರೇಬಂಡಾಡಿ, ಬಜತ್ತೂರು, ಬಲ್ನಾಡು, ನರಿಮೊಗ್ರು, ಮುಂಡೂರು, ಅರಿಯಡ್ಕ ಗ್ರಾಮ ಪಂಚಾಯತ್‌ಗಳು ಹೆಚ್ಚಿನ ಮಾನವ ದಿನಗಳನ್ನು ಸೃಜಿಸಿದ್ದವು. ಈ ಬಾರಿ 2 ಲಕ್ಷ ಮಾನವ ದಿನ ಸೃಜನೆಯ ಗುರಿಯನ್ನು ತಾಲೂಕು ಹೊಂದಿದ್ದು ಕೇವಲ 80 ದಿನಗಳಲ್ಲಿ 40 ಸಾವಿರ ಮಾನವ ದಿನಗಳ ಸೃಜಿಸಲಾಗಿದ್ದು 800 ಕಾಮಗಾರಿಗಳು ಪ್ರಸ್ತುತ ಪ್ರಗತಿಯಲ್ಲಿದೆ. ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ 289 ರೂ. ನೀಡಲಾಗುತ್ತಿದ್ದು ಪ್ರಸ್ತುತ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಶೇ.48 ರಷ್ಟಿದೆ. ಒಟ್ಟಾರೆಯಾಗಿ ನರೇಗಾ ಯೋಜನೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ.

ಅಂತರ್ಜಲ ಚೇತನ ಕಾರ್ಯಗಳನ್ನು ಹಮ್ಮಿಕೊಳ್ಳಿ
ಕೋವಿಡ್-19 ಸಂಕಷ್ಟದಲ್ಲಿ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಯೋಜನೆಯ ಫಲವನ್ನು ಎಲ್ಲರೂ ಪಡೆದುಕೊಳ್ಳಬೇಕು. ಮಳೆ ನೀರನ್ನು ಹಿಡಿದಿಟ್ಟುಕೊಂಡು ಭೂಮಿಗೆ ಇಂಗಿಸುವಂತಹ ಅಂತರ್ಜಲ ಚೇತನ ಕಾರ್ಯಗಳನ್ನು ಎಲ್ಲೆಡೆ ಹಮ್ಮಿಕೊಳ್ಳುವ ಅಗತ್ಯವಿದೆ. ನರೇಗಾ ಯೋಜನೆ ಬಗ್ಗೆ ಗೊಂದಲಗಳಿದ್ದಲ್ಲಿ ತಾಲೂಕು ಪಂಚಾಯತ್‌ನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ.

– ನವೀನ್ ಭಂಡಾರಿ
ಕಾರ್ಯನಿರ್ವಾಹಕ ಅಧಿಕಾರಿ
ತಾ.ಪಂ. ಪುತ್ತೂರು

ಕೋವಿಡ್-19ರ ಆರ್ಥಿಕ ಸಂಕಷ್ಟ ಕಾಲದಲ್ಲಿ ಗ್ರಾಮೀಣ ಬಡಜನರಿಗೆ ಆಸರೆಯಾದ ನರೇಗಾ ಯೋಜನೆಯು ಪುತ್ತೂರು ತಾಲೂಕಿನಾದ್ಯಂತ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ. ಜಲಶಕ್ತಿ ಅಭಿಯಾನದಡಿ ಪುತ್ತೂರು ತಾಲೂಕಿನಲ್ಲಿ 674 ಕಾಮಗಾರಿಗಳಿಗೆ ಗುರಿ ನಿಗದಿಪಡಿಸಲಾಗಿದ್ದು, ಈಗಾಗಲೇ 480 ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಉಳಿದ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು, ಗುರಿ ಮೀರಿದ ಸಾಧನೆ ಮಾಡುವ ವಿಶ್ವಾಸವಿದೆ. ಸಂಜೀವಿನಿ ಒಕ್ಕೂಟದ ಸಹಯೋಗದೊಂದಿಗೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೂ ನರೇಗಾ ನಾಂದಿ ಹಾಡಲಿದೆ.

– ಶೈಲಜಾ ಭಟ್
ಸಹಾಯಕ ನಿರ್ದೇಶಕರು (ನರೇಗಾ)
ತಾ.ಪಂ. ಪುತ್ತೂರು

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.