HomePage_Banner
HomePage_Banner

ಹಲಸಿನ ಬೀಜದಲ್ಲಿದೆ ರೋಗ ನಿರೋಧಕ ಶಕ್ತಿ – ತುಳುನಾಡಿನ ಪೆಲತ್ತರಿಗೆ ಆನ್‌ಲೈನ್‌ನಲ್ಲಿ ದುಪ್ಪಟ್ಟು ದರ

Puttur_Advt_NewsUnder_1
Puttur_Advt_NewsUnder_1

@ ಸಿಶೇ ಕಜೆಮಾರ್

ಪುತ್ತೂರು: ಹಣ್ಣುಗಳ ರಾಜ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಹಲಸಿನ ಹಣ್ಣಿನಲ್ಲಿ ಬಹಳಷ್ಟು ಪೋಷಕಾಂಶಗಳು ಇರುವ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಅದೇ ರೀತಿ ಹಲಸಿನ ಬೀಜದಲ್ಲೂ ರೋಗ ನಿರೋಧಕ ಶಕ್ತಿ ಇದ್ದು ಇದೀಗ ಆನ್‌ಲೈನ್‌ನಲ್ಲಿ ಹಲಸಿನ ಬೀಜಕ್ಕೆ ದುಪ್ಪಟ್ಟು ದರ ಇದ್ದು ಎಲ್ಲರನ್ನು ನಿಬ್ಬೆರಗಾಗಿಸಿದೆ. ಒಂದು ಕಾಲದಲ್ಲಿ ತುಳುನಾಡಿನ ಪ್ರತಿ ಮನೆಯಲ್ಲೂ ಹಲಸಿನ ಬೀಜಗಳನ್ನು ಹಾಳಾಗದಂತೆ ಸಂರಕ್ಷಿಸಿ ಇಟ್ಟು ಕಾಲ ಕಾಲಕ್ಕೆ ಉಪಯೋಗಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಹಲಸಿನ ಬೀಜಗಳನ್ನು ಮೂಸಿ ನೋಡುವವರು ಕೂಡ ಇಲ್ಲದಾಗಿದೆ. ಮರದ ಕೆಳಗೆ ಬೀಜಗಳು ಬಿದ್ದು ಮೊಳಕೆಯೊಡೆದು ಗಿಡವಾಗುತ್ತೆ ವಿನಹ ಬೀಜಗಳನ್ನು ಹೆಕ್ಕಿ ಸಂರಕ್ಷಣೆ ಮಾಡುವವರು ಇಲ್ಲದಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಇದೇ ಹಲಸಿನ ಬೀಜಗಳು ಆನ್‌ಲೈನ್‌ನಲ್ಲಿ ದುಪ್ಪಟ್ಟು ದರದಲ್ಲಿ ಮಾರಾಟಕ್ಕೆ ಸೇರ್ಪಡೆಗೊಂಡಿದೆ. ಅಮೆಜಾನ್, ಪ್ಲಿಪ್‌ಕಾರ್ಟ್ ಇತ್ಯಾದಿ ಆನ್‌ಲೈನ್ ಆಪ್‌ಗಳಲ್ಲಿ ಅರ್ಧ ಕೆ.ಜಿಗೆ ೫೦೦ ಕ್ಕೂ ಅಧಿಕ ದರ ನಿಗದಿ ಪಡಿಸಲಾಗಿದೆ. ಇಷ್ಟಕ್ಕೂ ಹಲಸಿನ ಬೀಜದಲ್ಲಿ ಅಂತದ್ದೇನಿದೆ? ಬನ್ನಿ ನೋಡ್ಕೊಂಡು ಬರೋಣ…

ಹಲಸಿನ ಹಣ್ಣಿನಲ್ಲಿ ಪೋಷಕಾಂಶ ಸತ್ವಗಳು
ತುಳುನಾಡಿನ ಪ್ರತಿ ಮನೆಯ ಜಾಗದಲ್ಲೂ ಹೇರಳವಾಗಿ ಬೆಳೆಯುವ ಹಲಸಿನ ಹಣ್ಣುಗಳಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ವಿಟಮಿನ್‌ಗಳಿವೆ. ಆರೋಗ್ಯಕರವಾದ ಹಣ್ಣು ಇದಾಗಿದ್ದು ಇದರಲ್ಲಿ ಪ್ರೋಟೀನ್ ಹಾಗೂ ವಿಟಮಿನ್ ಬಿ, ಪೊಟ್ಯಾಶಿಯಂ, ಕ್ಯಾಲ್ಸಿಯಂ ಹಾಗೂ ಸತುವಿನ ಸಹಿತ ಹಲವಾರು ಪೋಶಕಾಂಶಗಳಿವೆ. ಎಳೆಯದಿದ್ದಾಗ ಗುಜ್ಜೆಯ ರೂಪದಲ್ಲಿ ಬೇಯಿಸಿ ಹಾಗೂ ಹಣ್ಣಾದ ಬಳಿಕ ಇದರ ತೊಳೆಗಳನ್ನು ಹಾಗೇ ತಿನ್ನಬಹುದು ಅಥವಾ ಹಲವಾರು ಖಾದ್ಯಗಳನ್ನು ತಯಾರಿಸಿ ತಿನ್ನಬಹುದಾಗಿದೆ.

ಹಲಸಿನ ಬೀಜದಲ್ಲಿದೆ ರೋಗ ನಿರೋಧಕ ಶಕ್ತಿ
ಸಾಮಾನ್ಯವಾಗಿ ಹಲಸಿನ ಹಣ್ಣು ತಿಂದು ಅದರ ಬೀಜಗಳನ್ನು ಬಿಸಾಡಿ ಬಿಡುತ್ತೇವೆ. ಇಂದಿನ ದಿನಗಳಲ್ಲಿ ಹಲಸಿನ ಬೀಜಗಳನ್ನು ಸಂರಕ್ಷಣೆ ಮಾಡಿ ಇಡುವ ಕ್ರಮವೇ ಇಲ್ಲದಾಗಿದೆ. ಹಲಸಿನ ಬೀಜ ಎಂದರೆ ಎಲ್ಲರಿಗೂ ಒಂದು ರೀತಿಯ ತಾತ್ಸಾರ. ಹಲಸಿನ ಬೀಜದಲ್ಲಿರುವ ಆರೋಗ್ಯಕರ ಅಂಶಗಳನ್ನು ನೋಡಿದರೆ ನೀವು ಕೂಡ ನಾಳೆಯಿಂದ ಬೀಜಗಳನ್ನು ಸಂರಕ್ಷಣೆ ಮಾಡಿ ಇಡುತ್ತೀರಿ. ಹಾಗಾದರೆ ಬನ್ನಿ ಈ ಬೀಜದಲ್ಲಿ ಏನೇನಿದೆ ನೋಡೋಣ. ಇದರಲ್ಲಿ ರೈಬೋಫ್ಲೇವಿನ್, ಥಿಯಾಮೈನ್ ಮೊದಲಾದ ಪೋಷಕಾಂಶಗಳು ಹೆಚ್ಚಾಗಿವೆ. ಇವು ನಮ್ಮ ಆಹಾರದ ಪೋಷಕಾಂಶಗಳನ್ನು ಶಕ್ತಿಯಾಗಿ ಪರಿವರ್ತಿಸಲು ನೆರವಾಗುತ್ತವೆ. ಅಲ್ಲದೇ ಈ ಪೋಷಕಾಂಶಗಳು ಕಣ್ಣು, ತ್ವಚೆ ಹಾಗೂ ಕೂದಲುಗಳನ್ನೂ ಆರೋಗ್ಯಕರವಾಗಿರಿಸುತ್ತವೆ. ಹಲಸಿನ ಬೀಜಗಳಲ್ಲಿ ಖನಿಜಗಳಾದ ಮೆಗ್ನೀಶಿಯಂ, ಸತು, ಪೊಟ್ಯಾಶಿಯಂ, ಕಬ್ಬಿಣ, ಕ್ಯಾಲ್ಸಿಯಂ ಹಾಗೂ ತಾಮ್ರಗಳು ಅಲ್ಪಪ್ರಮಾಣದಲ್ಲಿವೆ. ಅಲ್ಲದೇ ಅತಿಸೂಕ್ಷ್ಮಜೀವಿ ನಿರೋಧಕ ಸಂಯುಕ್ತಗಳೂ ಇದ್ದು ಇವು ಕೆಲವು ಆಹಾರದ ಮೂಲಕ ದೇಹವನ್ನು ಪ್ರವೇಶಿಸಿರುವ ಸೂಕ್ಷ್ಮ ಬ್ಯಾಕ್ಟೀರಿಯಾಗಳ ದಾಳಿಯನ್ನು ತಡೆಯುತ್ತದೆ ಹಾಗೂ ಕೆಲವು ಖಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಬೀಜಗಳು ನೋಡಲಿಕ್ಕೆ ಸುಂದರವಾಗಿಲ್ಲದಿದ್ದರೂ ಪ್ರೋಟೀನ್ ನಿಂದ ಸಮೃದ್ಧವಾಗಿದೆ. ಬೀಜದಲ್ಲಿರುವ ಪ್ರೋಟೀನ್ ಸ್ನಾಯುಗಳ ಬೆಳವಣಿಗೆ ಹಾಗೂ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತದೆ. ಅಜೀರ್ಣಕ್ಕೆ ಹಲಸಿನ ಬೀಜ ತಕ್ಷಣದ ಪರಿಹಾರ ಒದಗಿಸುತ್ತದೆ. ಇದರಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆ ಸುಲಭವಾಗಿಸುತ್ತವೆ ಹಾಗೂ ಆಹಾರವನ್ನು ಪೂರ್ಣವಾಗಿ ಜೀರ್ಣಿಸಿಕೊಳ್ಳಲು ನೆರವಾಗುತ್ತದೆ.

ಕಣ್ಣಿನ ಆರೋಗ್ಯಕ್ಕೂ ಸಹಕಾರಿ
ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ಅಗತ್ಯವಾಗಿದ್ದು ಹಲಸಿನ ಬೀಜವನ್ನು ನಿಯಮಿತವಾಗಿ ಸೇವಿಸುವ ಮೂಲಕ ಕಣ್ಣಿನ ಆರೋಗ್ಯವನ್ನು ಉತ್ತಮವಾಗಿರಿಸಿ ಕೊಂಡು ಕಣ್ಣಿನ ಖಾಯಿಲೆಗಳನ್ನು ದೂರವಿರಿಸಬಹುದಾಗಿದೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಲಸಿನ ಬೀಜಗಳನ್ನು ಸೇವಿಸುವ ಮೂಲಕ ದೇಹದಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚುತ್ತದೆ ಹಾಗೂ ರಕ್ತಹೀನತೆಯನ್ನು ಹೋಗಲಾಡಿಸುತ್ತದೆ. ಹಲಸಿನ ಬೀಜಗಳಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಿದ್ದು ಹೀಮೋಗ್ಲೋಬಿನ್ ಕೊರತೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಸೂಕ್ತವಾದ ಆಹಾರವಾಗಿದೆ. ಒಂದು ವೇಳೆ ನಿಮಗೆ ರಕ್ತಹೀನತೆಯ ತೊಂದರೆ ಇದ್ದರೆ ಹಲಸಿನ ಬೀಜ ಸೇವಿಸಲು ಪ್ರಾರಂಭಿಸಿ. ಇದರಿಂದ ರಕ್ತಹೀನತೆ ದೂರವಾಗುವುದು ಮಾತ್ರವಲ್ಲ, ಇತರ ರಕ್ತಹೀನತೆಯಿಂದ ಎದುರಾಗುವ ಕಾಯಿಲೆಗಳಿಂದಲೂ ರಕ್ಷಣೆ ಪಡೆಯಬಹುದು.

ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ
ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ ಈ ಬೀಜಗಳಲ್ಲಿ ಪ್ರೋಟೀನುಗಳು ಹಾಗೂ ಹಲವಾರು ಸೂಕ್ಷ್ಮ ಪೋಷಕಾಂಶಗಳಿದ್ದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಒಂದು ವೇಳೆ ಮಾನಸಿಕ ಒತ್ತಡ ಸತತವಾಗಿದ್ದರೆ ಆಗಾಗ ಹಲಸಿನ ಬೀಜಗಳನ್ನು ಸೇವಿಸುತ್ತಿರುವ ಮೂಲಕ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಹಲಸಿನ ಬೀಜಗಳಲ್ಲಿರುವ ಕರಗದ ನಾರು ಮಲಬದ್ಧತೆಯಾಗದಿರಲು ನೆರವಾಗುತ್ತದೆ. ಹಲಸಿನ ಬೀಜಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಜೀರ್ಣಾಂಗಗಳ ಕ್ಷಮತೆ ಹೆಚ್ಚುತ್ತದೆ ಹಾಗೂ ಜೀರ್ಣಕ್ರಿಯೆ ಸುಲಭವಾಗಿ ಪೂರ್ಣಗೊಳ್ಳಲು ಹಾಗೂ ಕರುಳುಗಳಲ್ಲಿನ ತ್ಯಾಜ್ಯವನ್ನು ಸಡಿಲಿಸಿ ಸುಲಭವಾಗಿ ವಿಸರ್ಜಿಸಲು ನೆರವಾಗುತ್ತದೆ. ಹಲಸಿನ ಬೀಜಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ಬ್ಯಾಕ್ಟೀರಿಯಾಗಳು ವೃದ್ಧಿಯಾಗದಂತೆ ನೋಡಿಕೊಳ್ಳುತ್ತದೆ ಹಾಗೂ ಇದರಲ್ಲಿರುವ ಸತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ತನ್ಮೂಲಕ ಹಲವಾರು ರೋಗಗಳ ವಿರುದ್ದ ರಕ್ಷಣೆ ಒದಗಿಸುತ್ತದೆ.

ಹೃದಯಾಘಾತವನ್ನು ತಡೆಯಬಲ್ಲದು
ಹಲಸಿನ ಬೀಜಗಳಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಇವು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಹಾನಿಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುತ್ತವೆ. ಒಂದು ವೇಳೆ ಈಗಾಗಲೇ ಕ್ಯಾನ್ಸರ್ ಕಾರಣ ಜೀವಕೋಶಗಳು ನಿರ್ಮಾಣವಾಗಿದ್ದರೆ ಇವನ್ನು ಬೆಳೆಯಗೊಡದೇ ಕ್ಯಾನ್ಸರ್ ಉಲ್ಬಣಗೊಳ್ಳುವುದರಿಂದ ತಪ್ಪಿಸುತ್ತದೆ. ಹಲಸಿನ ಬೀಜದಲ್ಲಿರುವ ಕ್ಯಾಲ್ಸಿಯಂ ಮೂಳೆಗಳು ದೃಢಗೊಳ್ಳಲು ನೆರವಾಗುತ್ತದೆ. ಅಲ್ಲದೇ ಈ ಬೀಜಗಳಲ್ಲಿರುವ ಪೊಟ್ಯಾಶಿಯಂ ಮೂಳೆಗಳನ್ನು ಗಟ್ಟಿಯಾಗಿಸಲು ಹಾಗೂ ಸವೆತವನ್ನು ಮರುಪೂರೈಸಲು ನೆರವಾಗುತ್ತದೆ. ಹಲಸಿನ ಬೀಜಗಳು ಹೃದ್ರೋಗಿಗಳಿಗೆ ಉತ್ತಮವಾದ ಆಹಾರವಾಗಿದೆ. ಏಕೆಂದರೆ ಈ ಬೀಜಗಳಲ್ಲಿ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಅಲ್ಲದೇ ಇವುಗಳ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಹಾಗೂ ಈ ಮೂಲಕ ಎದುರಾಗುವ ಹೃದಯ ಸ್ತಂಭನ ಹಾಗೂ ಇತರ ಹಲವಾರು ಹೃದ್ರೋಗಗಳಿಂದ ರಕ್ಷಣೆ ಒದಗಿಸುತ್ತದೆ. ಇಷ್ಟೇ ಅಲ್ಲ ಹಲಸಿನ ಬೀಜದಿಂದ ಬಹಳಷ್ಟು ಉಪಯೋಗಗಳಿವೆ. ಬೇಕಿದ್ದರೆ ಮನೆಯಲ್ಲಿನ ಹಿರಿಯರನ್ನು ಕೇಳಿನೋಡಿ.

ಆನ್‌ಲೈನ್‌ನಲ್ಲಿ ಭಾರೀ ದರ
ಜಾಕ್‌ಫ್ರುಟ್(ಹಲಸಿನ ಹಣ್ಣು)ನ ಬೀಜಕ್ಕೆ ಆನ್‌ಲೈನ್‌ನಲ್ಲಿ ದುಪ್ಪಟ್ಟು ದರ ನಿಗದಿ ಪಡಿಸಲಾಗಿದ್ದು ಪ್ಲಿಪ್‌ಕಾರ್ಟ್‌ನಲ್ಲಿ ಸರ್ಚ್ ಮಾಡಿದರೆ ೮೦೦ ಗ್ರಾಂಗೆ ೫೫೦ ರೂ. ೪೦೦ ಗ್ರಾಂಗೆ ೨೯೯ ರೂ. ಇತ್ಯಾದಿ ದರಗಳಿವೆ. ಅದೇ ರೀತಿ ಅಮೆಜಾನ್‌ನಲ್ಲಿ ೩೦೦ ಗ್ರಾಂಗೆ ೨೪೯ ರೂ. ಇತ್ಯಾದಿ ಭಾರೀ ಬೆಲೆ ಇರುವುದನ್ನು ಗಮನಿಸಬಹುದಾಗಿದೆ. ಒಟ್ಟಿನಲ್ಲಿ ತುಳುನಾಡಿನ ಪೆಲತ್ತರಿಗೆ ಇಷ್ಟೊಂದು ದರ ಬಂದಿರುವುದು ಅಚ್ಚರಿಯೇ ಸರಿ.

ಸ್ಥಳೀಯವಾಗಿ ಬೇಡಿಕೆ ಇಲ್ಲ
ಆನ್‌ಲೈನ್‌ನಲ್ಲಿ ಇಷ್ಟೊಂದು ದರ ಇದ್ದರೂ ಸ್ಥಳೀಯವಾಗಿ ಹಲಸಿನ ಬೀಜ ಯಾರಿಗೂ ಬೇಡವಾಗಿದೆ. ಮಾರುಕಟ್ಟೆಯಲ್ಲೂ ಕೂಡ ಪೆಲತ್ತರಿಗೆ ಬೇಡಿಕೆ ಇಲ್ಲದಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಹಲಸಿನ ಬೀಜ ದೊರೆಯುವುದು ಕೂಡ ಇಲ್ಲ. ಗ್ರಾಮಾಂತರದಲ್ಲಿ ರಾಶಿ ರಾಶಿ ಸಿಗುವ ಹಲಸಿನ ಬೀಜಕ್ಕೆ ಮಾರುಕಟ್ಟೆ ಮಾಡಬೇಕಾದ ಅನಿವಾರ್ಯತೆ ಇದೆ. ಮುಂದಿನ ದಿನಗಳಲ್ಲೂ ನಮ್ಮೂರಿನ ಸಾಹೇಬರ ಅಂಗಡಿಯಲ್ಲೂ ಪೆಲತ್ತರಿ ಸಿಗಬಹುದು ಏನಂತೀರಾ?

ಸಾಮಾನ್ಯವಾಗಿ ಹಲಸಿನ ಬೀಜ ಪದಾರ್ಥ ಮಾಡಿದರೆ ಗ್ಯಾಸ್ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕೆ ಪದಾರ್ಥ ಮಾಡುವಾಗ ಸ್ವಲ್ಪ ಇಂಗು ಹಾಕಿದರೆ ಸರಿಯಾಗುತ್ತದೆ. ಬಟಾಟೆಗಿಂತಲೂ ಹಲಸಿನ ಬೀಜ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಆರೋಗ್ಯಕ್ಕೆ ಬೇಕಾದ ಬಹಳಷ್ಟು ಪೋಷಕಾಂಶಗಳಿವೆ. ಎಲ್ಲಾ ವಿಧದಲ್ಲೂ ಹಲಸಿನ ಬೀಜ ಒಂದು ಒಳ್ಳೆಯ ಆರೋಗ್ಯಕರವಾದ ವಸ್ತುವಾಗಿದೆ – ಡಾ. ಮುರಳೀಕೃಷ್ಣ ರೈ , ಚಿರಾಯು ಕ್ಲಿನಿಕ್ ಕುಂಬ್ರ

ಹಲಸಿನ ಬೀಜಕ್ಕೆ ಕೆಸರು ಮಣ್ಣು ಬೆರೆಸಿ ಸುಮಾರು ೬ ತಿಂಗಳು ಕಾಲ ಹಾಳಾಗದೆ ಹಾಗೆ ಇಡಬಹುದು, ಹಲಸಿನ ಬೀಜವನ್ನು ಗುದ್ದಿ ಪುಡಿ ಮಾಡಿ ಪದಾರ್ಥ ಮಾಡಿದರೆ ಹೆಚ್ಚು ರುಚಿ ಇರುತ್ತದೆ. ನಾವು ಕೂಡ ಮನೇಲಿ ಹಲಸಿನ ಬೀಜಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದೇವೆ.ಇಂದಿನ ಆಧುನಿಕ ಜನಾಂಗಕ್ಕೆ ಹಲಸಿನ ಬೀಜ ಎಂದರೆ ಅಸಡ್ಡೆ – ಸತೀಶ್ ರೈ ಕರ್ನೂರು, ಪ್ರಶಸ್ತಿ ಪುರಸ್ಕೃತ ಕೃಷಿಕರು

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.