HomePage_Banner
HomePage_Banner

ಪಿಡಿಒ ಪಿ.ವೆಂಕಟೇಶ್‌ರವರ ಮಾನವೀಯತೆ

Puttur_Advt_NewsUnder_1
Puttur_Advt_NewsUnder_1
  • ಮಾನಸಿಕ ಅಸ್ವಸ್ಥರಿಬ್ಬರಿಗೆ ಶಿವಮೊಗ್ಗದ ಮಾನಸ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ | ಗ್ರಾಮಸ್ಥರ ಶ್ಲಾಘನೆ

ನೆಲ್ಯಾಡಿ: ಮಾನಸಿಕ ಅಸ್ವಸ್ಥರಿಂದ ಅಂತರ ಕಾಯ್ದುಕೊಳ್ಳುವವರೇ ಹೆಚ್ಚು. ಇವರೊಂದಿಗೆ ಜೀವನ ಸಾಗಿಸುವ ಮನೆಯವರ ಸಂಕಷ್ಟ ಹೇಳತೀರದು. ಇವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಾಗುತ್ತದೆ. ಮಾನಸಿಕ ಅಸ್ವಸ್ಥರ ಬಗ್ಗೆ ಜನರಲ್ಲಿಯೂ ತಾತ್ಸಾರದ ಭಾವನೆಯೇ ಹೆಚ್ಚು. ಇಂತವರ ಮಧ್ಯೆ ಗ್ರಾಮ ಪಂಚಾಯಿತಿ ಪಿಡಿಓ ಪಿ.ವೆಂಕಟೇಶ್‌ರವರು ಗ್ರಾಮಸ್ಥರ ಸಹಕಾರದೊಂದಿಗೆ ಸ್ವಂತ ಖರ್ಚು ಮಾಡಿ ಮಾನಸಿಕ ಅಸ್ವಸ್ಥರಿಬ್ಬರಿಗೆ ಶಿವಮೊಗ್ಗದ ಮಾನಸ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮಾನಸಿಕ ಅಸ್ವಸ್ಥರಾಗಿದ್ದ ಮುಗೇರಡ್ಕ ಕಡಮಾಜೆ ನಿವಾಸಿ ಸುಂದರ ಮುಗೇರ ಹಾಗೂ ಶಿರಾಡಿಯ ಯುವತಿಯೋರ್ವರನ್ನು ಅವರ ಮನೆಯವರ ಬೆಂಬಲದೊಂದಿಗೆ ಗ್ರಾಮಸ್ಥರ ಸಹಕಾರದೊಂದಿಗೆ ಶಿರಾಡಿ ಹಾಗೂ ಗೋಳಿತ್ತೊಟ್ಟು (ಪ್ರಭಾರ) ಗ್ರಾಮ ಪಂಚಾಯಿತಿ ಪಿಡಿಓ ಪಿ.ವೆಂಕಟೇಶ್‌ರವರು ಶಿವಮೊಗ್ಗದ ಮಾನಸ ನರ್ಸಿಂಗ್ ಹೋಮ್ ಕರೆದೊಯ್ದು ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಈ ಮೂಲಕ ಎರಡು ಬಡ ಕುಟುಂಬಗಳ ನೋವಿಗೆ ನೆರವಾಗಿದ್ದಾರೆ.

ಬೆಳ್ತಂಗಡಿ ತಾಲೂಕು ಮುಗೇರಡ್ಕ ಕಡಮಾಜೆ ದಿ.ಪೊಡಿಯ ಹಾಗೂ ನೀಲಮ್ಮ ದಂಪತಿ ಪುತ್ರ, ಸುಂದರ ಮುಗೇರ(46 ವ)ರವರು ಮಾನಸಿಕ ಅಸ್ವಸ್ಥರಾಗಿದ್ದು ಹಲವು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಅಲೆದಾಡುತ್ತಿದ್ದರು. ಸುಂದರ ಮುಗೇರರವರು ಮನೆ ಸಮೀಪದ ಮರವೊಂದರಿಂದ ಬಿದ್ದು ತಲೆಗೆ ಗಂಭೀರ ಪೆಟ್ಟು ಆಗಿತ್ತು. ಆಗ ಅವರಿಗೆ 16 ವರ್ಷ ಪ್ರಾಯವಾಗಿತ್ತು. ಮನೆಯವರು ಸಾಕಷ್ಟೂ ವೆಚ್ಚ ಮಾಡಿ ಚಿಕಿತ್ಸೆ ಕೊಡಿಸಿದರೂ ತಲೆಗೆ ಪೆಟ್ಟು ಆಗಿದ್ದರಿಂದ ಸುಂದರ ಮುಗೇರರವರು ಸರಿಯಾಗಲಿಲ್ಲ. ಅವರಿಗೆ ಯಾವುದನ್ನೂ ತಿಳಿದುಕೊಳ್ಳುವ ಶಕ್ತಿ ಕಡಿಮೆಯಾಯಿತು. ಇದರಿಂದಾಗಿ 9ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಂಡಿತು. ಪೋಷಕರು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗಲಿಲ್ಲ. ಕಳೆದ 30 ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿರುವ ಇವರು ಮನೆಯಲ್ಲಿ ಗಲಾಟೆ ಮಾಡುವುದು, ಹೆದ್ದಾರಿಯುದ್ದಕ್ಕೂ ಅಲೆದಾಟ ನಡೆಸುತ್ತಿದ್ದರು. ಕೆಲವೊಮ್ಮೆ ಆಲಂತಾಯದಲ್ಲಿರುವ ಸಂಬಂಧಿಕರ ಮನೆಗೆ ಬಂದು ವಾಸಿಸುತ್ತಿದ್ದರು. ಇವರ ಈ ದಯಾನೀಯ ಸ್ಥಿತಿ ಗಮನಿಸಿದ ಗೋಳಿತೊಟ್ಟು ಗ್ರಾಮ ಪಂಚಾಯಿತಿಯ ಪ್ರಭಾರ ಪಿಡಿಓ ಪಿ.ವೆಂಕಟೇಶ್ ಅವರು, ಸುಂದರ ಮುಗೇರರವರ ಸಂಬಂಧಿಕರನ್ನು ಭೇಟಿಯಾಗಿ ಅವರಿಗೆ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು. ಅದರಂತೆ ಅವರ ಪೋಷಕರ ಸಹಾಯ ಪಡೆದು ಶಿವಮೊಗ್ಗದ ಮಾನಸ ನರ್ಸಿಂಗ್ ಹೋಮ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಶಿರಾಡಿಯ ಯುವತಿಗೂ ಚಿಕಿತ್ಸೆ:
ಸುಂದರ ಮುಗೇರರವರಂತೆ ಶಿರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಯುವತಿಯೋರ್ವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಅಲ್ಲಿಯೂ ಅಭಿವೃದ್ಧಿ ಅಧಿಕಾರಿಯಾಗಿರುವ ಪಿ.ವೆಂಕಟೇಶ್‌ರವರು ಶಿರಾಡಿ ಗ್ರಾ.ಪಂ.ಸದಸ್ಯೆ ಸುಮಿತ್ರರವರ ಸಹಾಯ ಪಡೆದು ಅಸ್ವಸ್ಥ ಮಹಿಳೆಯ ಮನೆಯವರ ಒಪ್ಪಿಗೆ ಪಡೆದುಕೊಂಡು ಶಿವಮೊಗ್ಗದ ಮಾನಸ ನರ್ಸಿಂಗ್ ಹೋಮ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇಬ್ಬರಿಗೂ ಶಿವಮೊಗ್ಗದ ಮಾನಸ ನರ್ಸಿಂಗ್ ಹೋಮ್‌ನ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ೨೦ಸಾವಿರ ರೂಪಾಯಿಗಿಂತ ಹೆಚ್ಚು ಖರ್ಚು ಆಗಿದೆ. ಇದಕ್ಕೆ ತಗಲುವ ಖರ್ಚಿನಲ್ಲಿ ಹೆಚ್ಚಿನ ಮೊತ್ತವನ್ನು ಪಿಡಿಒ ಪಿ.ವೆಂಕಟೇಶ್‌ರವರು ಭರಿಸಿದ್ದಾರೆ. ಇವರಿಗೆ ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆಯ ಸಂಚಾಲಕರೂ ಆಗಿರುವ ಧರ್ಮಗುರು ಫಾ.ಹನಿ ಜೇಕಬ್, ತೋಮಸ್ ಒ.ಎ., ಮನೋಜ್, ಸಚಿನ್, ಗುತ್ತಿಗೆದಾರ ಉಮ್ಮರ್ ಕೊಕ್ಕಡರವರು ಸಹಕರಿಸಿದ್ದರು. ಗೋಳಿತೊಟ್ಟು ಗ್ರಾ.ಪಂ.ಸಿಬ್ಬಂದಿ ದಿನೇಶ್, ಆಲಂತಾಯ ನಿವಾಸಿ ಹರೀಶ್‌ರವರು ಮಾನಸಿಕ ಅಸ್ವಸ್ಥರಿಬ್ಬರನ್ನು ಶಿವಮೊಗ್ಗದ ಮಾನಸ ನರ್ಸಿಂಗ್ ಹೋಮ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಲ್ಲಿ ಪಿಡಿಒಗೆ ಜೊತೆಯಾಗಿದ್ದರು. ಪಿಡಿಒರವರ ಈ ಮಾನವೀಯ ಕೆಲಸಕ್ಕೆ ಗ್ರಾಮಸ್ಥರಿಂದ ಶ್ಲಾಘನೆ ವ್ಯಕ್ತವಾಗಿದೆ.

ಮಾನಸಿಕ ಅಸ್ವಸ್ಥರಾಗಿ ಬಳಲುತ್ತಿರುವ ಸುಂದರ ಮುಗೇರ ಹಾಗೂ ಶಿರಾಡಿಯ ಯುವತಿಯನ್ನು ಶಿವಮೊಗ್ಗಕ್ಕೆ ಕರೆದೊಯ್ದು ಅಲ್ಲಿನ ಮಾನಸ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು ಇಬ್ಬರಿಗೂ ಈಗಾಗಲೇ 40 ದಿನಗಳ ಔಷಧಿ ಕೊಟ್ಟಿದ್ದಾರೆ. ಇದರ ಎಫೆಕ್ಟ್ ನೋಡಿಕೊಂಡು ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧರಿಸಲಾಗುವುದು – ಪಿ.ವೆಂಕಟೇಶ್ ಪಿಡಿಒ, ಶಿರಾಡಿ ಮತ್ತು ಗೋಳಿತ್ತೊಟ್ಟು

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.