HomePage_Banner
HomePage_Banner

ನೆಲ್ಯಾಡಿ: ಫರ್ನಿಶ್ ಆಯಿಲ್ ಮಿಕ್ಸಿಂಗ್ ಅಡ್ಡೆಗೆ ಪೊಲೀಸ್ ದಾಳಿ | 35 ಲಕ್ಷ ರೂ.ಮೌಲ್ಯದ ಸೊತ್ತು ವಶ

Puttur_Advt_NewsUnder_1
Puttur_Advt_NewsUnder_1
  • ಡಿವೈಎಸ್‌ಪಿ ಗಾನ ಪಿ. ಕುಮಾರ್ ನೇತೃತ್ವದಲ್ಲಿ ದಾಳಿ, ನಾಲ್ವರ ಬಂಧನ

ನೆಲ್ಯಾಡಿ: ನೆಲ್ಯಾಡಿ ಸಮೀಪ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ತಾರಸಿ ಮನೆಯೊಂದರ ಹಿಂಭಾಗದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಫರ್ನಿಶ್ ಆಯಿಲ್ ಮಿಕ್ಸಿಂಗ್ ಅಡ್ಡೆಗೆ ಜೂ.೨೯ರಂದು ಮಧ್ಯಾಹ್ನದ ವೇಳೆಗೆ ದಾಳಿ ನಡೆಸಿದ ಪುತ್ತೂರು ಡಿವೈಎಸ್‌ಪಿ ಡಾ.ಗಾನ ಪಿ.ಕುಮಾರ್ ನೇತೃತ್ವದ ಪೊಲೀಸರ ತಂಡ ಆಯಿಲ್ ಮಿಕ್ಸಿಂಗ್ ದಂಧೆಯಲ್ಲಿ ನಿರತರಾಗಿದ್ದ ನಾಲ್ವರನ್ನು ಬಂಧಿಸಿ, ನಗದು ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ೩೫.೨೧ ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.

ಜಿ.ದಾಸ್ (೩೭ವ.) ಸಿಂಗರಾಜ್(೪೨ವ.), ಎಸ್.ಕಾರ್ತಿ (೨೭) ಹಾಗೂ ಸೆಲ್ವರಾಜ್ (೬೦) ಬಂಧಿತ ಆರೋಪಿಗಳಾಗಿದ್ದಾರೆ. ತಮಿಳುನಾಡು ಮೂಲದ ರಘುನಾಥನ್ ಮತ್ತು ಮುತ್ತುಪಾಂಡಿ ಎಂಬವರು ಈ ದಂಧೆಯ ಪ್ರಮುಖ ಸೂತ್ರರಾಗಿದ್ದು ಇವರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಮುಖ ಆರೋಪಿತರಾದ ರಘುನಾಥ್ ಮತ್ತು ಮುತ್ತುಪಾಂಡಿಯವರು ಮಣ್ಣಗುಂಡಿಯಲ್ಲಿ ಜಾಗ ಖರೀದಿಸಿ ಹಲವು ಸಮಯಗಳಿಂದ ಫರ್ನಿಶ್ ಆಯಿಲ್ ಮಿಕ್ಸಿಂಗ್ ದಂಧೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ.

ಘಟನೆ ವಿವರ: ನೆಲ್ಯಾಡಿಗೆ ಸಮೀಪದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ತಾರಸಿ ಮನೆಯೊಂದರ ಹಿಂಭಾಗದಲ್ಲಿ ಫರ್ನಿಶ್ ಆಯಿಲ್ ದಾಸ್ತಾನು ಮಾಡಿರುವ ಬಗ್ಗೆ ಪುತ್ತೂರು ಡಿವೈಎಸ್‌ಪಿ ಡಾ.ಗಾನ ಪಿ.ಕುಮಾರ್‌ರವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಅವರು ಜೂ.೨೯ರಂದು ಮಧ್ಯಾಹ್ನದ ವೇಳೆಗೆ ಕಡಬ ತಹಶೀಲ್ದಾರ್ ಹಾಗೂ ಗಣಿ ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿಯವರನ್ನು ಸ್ಥಳಕ್ಕೆ ಕರೆಸಿಕೊಂಡು ಉಪ್ಪಿನಂಗಡಿ ಹಾಗೂ ಪುತ್ತೂರು ನಗರ ಠಾಣಾ ಪಿ.ಎಸ್.ಐ. ಮತ್ತು ಸಿಬ್ಬಂದಿಯವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಪೊಲೀಸ್ ದಾಳಿಯ ವೇಳೆ ಟಿಎನ್ ೧೨ ಯು ೪೨೭೯ ಮತ್ತು ಸಿಎಎ ೯೩೯೪ ನಂಬ್ರದ ಎರಡೂ ಟ್ಯಾಂಕರ್‌ಗಳು ನಿಂತುಕೊಂಡಿದ್ದು ಜೊತೆಗೆ ನಾಲ್ವರು ಟ್ಯಾಂಕರ್‌ನಿಂದ ಪಂಪು ಮೂಲಕ ಟ್ಯಾಂಕರ್‌ಗೆ ಮತ್ತು ನೆಲ ಟ್ಯಾಂಕರ್‌ನಿಂದ ಪಂಪು ಮೂಲಕ ಇನ್ನೊಂದು ಟ್ಯಾಂಕರ್‌ಗೆ ಫರ್ನಿಶ್ ಆಯಿಲ್ ಲೋಡ್ ಅನ್ ಲೋಡ್ ಮಾಡುತ್ತಿದ್ದರು. ಈ ಅಕ್ರಮ ದಂಧೆಯಲ್ಲಿ ನಿರತರಾಗಿದ್ದ ಜಿ.ದಾಸ್, ಸಿಂಗರಾಜ್, ಎಸ್.ಕಾರ್ತಿ ಹಾಗೂ ಸೆಲ್ವರಾಜ್‌ರನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ. ಈ ಅಕ್ರಮ ಅಡ್ಡೆಯನ್ನು ಮುತ್ತುಪಾಂಡಿ ಮತ್ತು ರಘುನಾಥನ್ ನಡೆಸುತ್ತಿರುವುದಾಗಿ ಬಂಧಿತ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು ಇವರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇಲ್ಲಿ ನೆಲದ ಒಳಗೆ ನಿರ್ಮಿಸಿದ ೨ ಟ್ಯಾಂಕ್‌ಗಳ ೪ ಕಂಪಾರ್ಟ್‌ಮೆಂಟ್‌ನಿಂದ ಸುಮಾರು ೧೦,೫೦೦ ಲೀಟರ್ ದಾಸ್ತಾನು ಇರಿಸಿದ ಫರ್ನಿಶ್ ಆಯಿಲ್, ಸ್ಥಳದಲ್ಲಿದ್ದ ಎರಡು ಟ್ಯಾಂಕರ್ (ಸಿಎಎ ೯೩೯೪ ಹಾಗೂ ಟಿಎನ್೧೨ ಯು ೪೨೭೯), ಕೃತ್ಯಕ್ಕೆ ಬಳಸುತ್ತಿದ್ದ ಫೀಲ್ಡ್ ಮಾರ್ಷಲ್ ಡೀಸೆಲ್ ಪಂಪು ಸೆಟ್, ಪ್ರೈಮ್ ಕಂಪನಿಯ ವಿದ್ಯುತ್ ಚಾಲಿತ ಪಂಪ್‌ಸೆಟ್, ಆಯಿಲ್ ಮಿಶ್ರಣ ಮಾಡಲು ಉಪಯೋಗಿಸುವ ೨ ಸಲಕರಣೆಗಳು, ೨೫ ಲೀಟರ್ ಸಾಮರ್ಥ್ಯದ ತಗಡಿನ ೨ ಕ್ಯಾನ್, ೧ ಅಳತೆ ಗೇಜ್ ರಾಡ್, ಕೆಎ ೧೨ ಹೆಚ್ ೨೪೮೯ ನಂಬ್ರದ ಮೋಟಾರ್ ಸೈಕಲ್, ೨೪ ಸಾವಿರ ರೂ., ನಗದು, ತಾರಸಿ ಮನೆಯ ಹಿಂಭಾಗದ ಮೇಜಿನ ಡ್ರಾವರಿನಲ್ಲಿದ್ದ ಮನೆ ಮತ್ತು ಸ್ಥಳದ ಅಗ್ರಿಮೆಂಟ್ ಪ್ರತಿ, ನಕ್ಷೆ ಪ್ರತಿ, ಕೌಕ್ರಾಡಿ ಪಂಚಾಯಿತಿನಿಂದ ಪಡೆದುಕೊಂಡಿದ್ದ ಕಟ್ಟಡ ಅಳತೆ ಕಾರ್ಯದ ಪತ್ರ, ರಘುನಾಥನ್‌ರವರ ಆಧಾರ್ ಜೆರಾಕ್ಸ್ ಕಾರ್ಡ್‌ನ ೩ ಪ್ರತಿಗಳು, ಬಿಳಿ ಹಾಳೆಯಲ್ಲಿ ವಾಹನ ನಂಬ್ರ, ಸಂಖ್ಯೆಗಳು ಮತ್ತು ತಮಿಳು ಭಾಷೆಯಲ್ಲಿ ಹೆಸರು ಬರೆದು ಲೆಕ್ಕಾಚಾರ ಮಾಡಿದ ೫ ಹಾಳೆಗಳು, ನಾಲ್ವರು ಆರೋಪಿತರಿಗೆ ಸಂಬಂದಿಸಿದ ವಿವಿಧ ಮಾದರಿಯ ಒಟ್ಟು ೫ ಮೊಬೈಲ್ ಸೆಟ್‌ಗಳು, ಕೆನರಾ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಿದ ೧೮ ಕೌಂಟರ್ ರಶೀದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ೩೫,೨೧,೪೦೦ ರೂ., ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ, ಎಎಸ್ಪಿ ವಿ.ಬಿ.ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುತ್ತೂರು ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್‌ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಡಬ ತಹಶೀಲ್ದಾರ್ ಅನಂತಶಂಕರ್, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಸುಷ್ಮಾ, ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಉಪ್ಪಿನಂಗಡಿ ಠಾಣಾ ಪಿಎಸ್‌ಐ ಕುಮಾರ್ ಕೆ.ಕಾಂಬ್ಲೆ, ಪುತ್ತೂರು ನಗರ ಠಾಣಾ ಪಿಎಸ್‌ಐ ಜಂಬೂರಾಜ್ ಮಹಾಜನ್, ಉಪ್ಪಿನಂಗಡಿ ಠಾಣಾ ಎಎಸ್‌ಐ ಚೋಮ, ಕೌಕ್ರಾಡಿ ಗ್ರಾ.ಪಂ.ಪಿಡಿಒ ಮಹೇಶ್, ಉಪ್ಪಿನಂಗಡಿ, ಪುತ್ತೂರು ನಗರ ಠಾಣೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

೭ ವರ್ಷದ ಹಿಂದೆ ಜಾಗ ಖರೀದಿ: ಅಕ್ರಮ ದಂಧೆಯ ರೂವಾರಿಗಳಾದ ತಮಿಳುನಾಡು ಮೂಲದ ರಘುನಾಥನ್, ಮುತ್ತುಪಾಂಡಿಯವರು ಸುಮಾರು ೭ ವರ್ಷದ ಹಿಂದೆ ಮಣ್ಣಗುಂಡಿಯ ಈ ಜಾಗ ಖರೀದಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅಬೂಬಕ್ಕರ್ ಎಂಬವರಿಗೆ ಸೇರಿದ ಸುಮಾರು ೩೦ ಸೆಂಟ್ಸ್ ಜಾಗವನ್ನು ಇವರು ಖರೀದಿಸಿದ್ದರು. ಇಲ್ಲಿನ ಮನೆಯ ಡೋರ್ ನಂಬ್ರ ಈಗಾಲೂ ಅಬೂಬಕ್ಕರ್ ಎಂಬವರ ಹೆಸರಿನಲ್ಲಿಯೇ ಇದೆ. ಜಾಗ ಮಾರಾಟ ಮಾಡಿದ ಅಬೂಬಕ್ಕರ್ ಹಾಗೂ ಅವರ ಕುಟುಂಬ ಈಗ ಬೇರೆ ಗ್ರಾಮದಲ್ಲಿ ಜಾಗ ಖರೀದಿಸಿ ಮನೆ ಮಾಡಿ ವಾಸ್ತವ್ಯವಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಿಂದ ಕೂಗಳತೆ ದೂರದಲ್ಲಿರುವ ಈ ಜಾಗದ ಪ್ರವೇಶದಲ್ಲಿಯೇ ಗೇಟ್ ಇದ್ದು ಯಾರಿಗೂ ಒಳಗೆ ಪ್ರವೇಶಕ್ಕೆ ಅವಕಾಶ ನೀಡುತ್ತಿರಲಿಲ್ಲ. ಇವರ ಅಕ್ರಮ ದಂಧೆಗೆ ಕೈಜೋಡಿಸಿದ ಆರೋಪದಲ್ಲಿ ಪೊಲೀಸ್ ವಶವಾಗಿರುವ ನಾಲ್ವರು ತಮಿಳುನಾಡು ಮೂಲದವರೇ ಆಗಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ದಂಧೆ? ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ದಿನಂಪ್ರತಿ ಫರ್ನಿಶ್ ಆಯಿಲ್ ಸಾಗಾಟದ ನೂರಾರು ಲಾರಿಗಳು ಓಡಾಟ ನಡೆಸುತ್ತಿರುತ್ತವೆ. ಫರ್ನಿಶ್ ಆಯಿಲ್ ಸಾಗಾಟದ ಟ್ಯಾಂಕರ್‌ಗಳ ಚಾಲಕರೊಂದಿಗೆ ಆರೋಪಿಗಳು ಒಪ್ಪಂದ ಮಾಡಿಕೊಂಡು ಟ್ಯಾಂಕರ್‌ಗಳನ್ನು ರಾಷ್ಟ್ರೀಯ ಹೆದ್ದಾರಿಯಿಂದ ಕೂಗಳತೆ ದೂರದಲ್ಲಿರುವ ತಮ್ಮ ಅಡ್ಡೆಗೆ ಕರೆಸಿಕೊಂಡು ಚಾಲಕರಿಗೆ ಹಣಕೊಟ್ಟು ಪ್ರತಿ ಟ್ಯಾಂಕರ್‌ನಿಂದ ೫೦ ರಿಂದ ೨೦೦ ಲೀಟರ್‌ವರೆಗೆ ಆಯಿಲ್ ಕಳ್ಳತನ ಮಾಡಿ ತಮ್ಮ ಅಡ್ಡೆಯಲ್ಲಿರುವ ಭೂಗತ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿಡುತ್ತಾರೆ. ಹೆಚ್ಚು ಸಂಗ್ರಹಣೆ ಆದ ಬಳಿಕ ತಮ್ಮ ಟ್ಯಾಂಕರ್‌ಗೆ ತುಂಬಿಸಿ ಯಾವುದೇ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಚೆನ್ನೈ ಸೇರಿದಂತೆ ಇತರೆಡೆಗೆ ಸಾಗಾಟ ಮಾಡಿ ಹೆಚ್ಚು ಹಣಗಳಿಸುವುದೇ ಇವರ ದಂಧೆಯಾಗಿದೆ. ಈ ರೀತಿಯಾಗಿ ಕೌಕ್ರಾಡಿಯ ಮಣ್ಣಗುಂಡಿಯಲ್ಲಿದ್ದ ಫರ್ನಿಶ್ ಆಯಿಲ್ ಮಿಕ್ಸಿಂಗ್ ದಂಧೆಯನ್ನು ಮುತ್ತುಪಾಂಡಿ ಮತ್ತು ರಘನಾಥನ್ ನಡೆಸುತ್ತಿರುವುದು ಪೊಲೀಸ್ ತನಿಖೆ ವೇಳೆ ಬಹಿರಂಗಗೊಂಡಿದೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.