HomePage_Banner
HomePage_Banner

ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಕೋವಿಡ್ ವ್ಯಾಕ್ಸಿನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಗಾಗಲೇ ಬಾಣಂತಿಯರಿಗೆ ಕೋವಿಡ್ ವ್ಯಾಕ್ಸಿನ್ ಅಭಿಯಾನ ಶುರುವಾಗಿದ್ದು, ಜು. 3ರಿಂದ ಗರ್ಭಿಣಿಯರಿಗೆ ಕೂಡಾ ಕೋವಿಡ್ ವ್ಯಾಕ್ಸಿನ್ ಕೊಡಿಸುವುದು ಸೂಕ್ತ ಎಂದು ಕೇಂದ್ರ ಸರ್ಕಾರದ ಆದೇಶ ಬಂದಿದೆ.

ಬಾಣಂತಿಯರಿಗೆ ವ್ಯಾಕ್ಸಿನ್ ಕೊಡುವುದರಿಂದ ಕೋವಿಡ್ ರೋಗ ತೀವ್ರ ತರಹದ ರೀತಿಯಲ್ಲಿ ಬಾರದಂತೆ ಹಾಗೂ ಮಕ್ಕಳಿಗೆ ಮೊಲೆಹಾಲಿನ ಮೂಲಕ ಪ್ರತಿಕಾಯ ವರ್ಗಾವಣೆ ಆಗುವುದರಿಂದ ನವಜಾತ ಶಿಶುಗಳಲ್ಲಿ ಕೊರೋನಾ ರೋಗ ಬಾರದಂತೆ ಮಾಡಬಹುದು.

ಗರ್ಭಿಣಿಯರಿಗೆ ವ್ಯಾಕ್ಸಿನ್ ಅಭಿಯಾನ ಅಮೇರಿಕಾದಲ್ಲಿ ಎಂ.ಆರ್.ಎನ್.ಏ. ವ್ಯಾಕ್ಸಿನ್ ನ್ನು 1 ಲಕ್ಷಕ್ಕೂ ಹೆಚ್ಚು ಗರ್ಭಿಣಿಯರಿಗೆ ಕೊಟ್ಟು ಅದು ಸುರಕ್ಷಿತವೆಂದು ಧೃಢಪಟ್ಟಿದೆ.

ಭಾರತದಲ್ಲಿ ಉಪಯೋಗಿಸುವ ವ್ಯಾಕ್ಸಿನ್ ಗಳಾದ ಕೊವೀಶೀಲ್ಡ್ ಹಾಗೂ ಕೋವ್ಯಾಕ್ಸಿನ್ “ ಜೀವಂತ ವೈರಸ್ ಗಳ ವ್ಯಾಕ್ಸಿನ್ “ (LIVE VACCINE) ಅಲ್ಲವಾದ್ದರಿಂದ ಗರ್ಭಿಣಿಯರಿಗೆ ಸುರಕ್ಷಿತ. ಈಗಾಗಲೇ ಇಂತಹ ವ್ಯಾಕ್ಸಿನ್ ಗಳು ಗರ್ಭಿಣಿಯರಿಗೆ ಕೊಟ್ಟು ಸುರಕ್ಷಿತವೆಂದು ಧೃಢಪಟ್ಟಿದೆ.

(1) ಯಾವ ಗರ್ಭಿಣಿಯರಿಗೆ ಅತೀ ಅವಶ್ಯ
ಹೆಚ್ಚಾಗಿ ಆರೋಗ್ಯ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು, 35 ವರ್ಷದ ನಂತರ ಗರ್ಭವತಿಯಾಗುವವರು , ಅಧಿಕ ರಕ್ತ ಒತ್ತಡ, ಮಧುಮೇಃ, ಗರ್ಭಿಣಿಯರಿಗೆ ಬರುವ ಮಧುಮೇಹ, ಬೊಜ್ಜು (ಬಿ,ಮಂ. ಐ 40ಕ್ಕಿಂತ ಜಾಸ್ತಿ) ಇರುವವರಿಗೆ ಪ್ರಾಶಸ್ತ್ಯ ಅಗತ್ಯ.

(2) ಯಾವಾಗ ಸೂಕ್ತ ?
ಈ ವ್ಯಾಕ್ಸಿನ್ ಮೊದಲ ಮೂರು ತಿಂಗಳಲ್ಲಿ ಕೊಡಬಹುದಾದರೂ, 3 ತಿಂಗಳ ಒಳಗೆ ಯಾವುದೇ ಔಷಧವನ್ನು ಕೊಡುವಾಗ ಮಗುವಿನ ಅಂಗಾಂಗ ರಚನೆಗೆ ಆಗುವ ತೊಂದರೆಯನ್ನೂ ಗಮನಿಸಬೇಕಾಗುತ್ತದೆ. ಮೊದಲ ಮೂರು ತಿಂಗಳು ಈ ವ್ಯಾಕ್ಸಿನ್ ನ್ನು ಮಧುಮೇಹಿಗಳು, ಅಧಿಕ ರಕ್ತ ಒತ್ತಡ , ಬೊಜ್ಜು ಇರುವವರಿಗೆ ಕೊಡುವುದು ಸೂಕ್ತ.

(3) ಯಾವಾಗ ಗರ್ಭಿಣಿಯರಿಗೆ ಸೂಕ್ತ ?
3 ತಿಂಗಳ ನಂತರ ಈ ವ್ಯಾಕ್ಸಿನ್ ಯಾವುದೇ ಕಾಯಿಲೆ ಇಲ್ಲದವರು ತೆಗೆದುಕೊಳ್ಳುವುದು ಸೂಕ್ತ. ಕಾರಣ ಇದರಿಂದ ಮಗುವಿನ ಅಂಗಾಂಗ ರಚನೆಗೆ ತೊಂದರೆ ಉಂಟಾಗುವುದಿಲ್ಲ.ಹಾಗೂ ಪ್ರತೀಕಾಯ 17 ವಾರದ ನಂತರ ಮಗುವಿಗೆ ವರ್ಗಾವಣೆ ಆಗುವುದರಿಂದ 3 ತಿಂಗಳು ಕಳೆದ ನಂತರ ವ್ಯಾಕ್ಸಿನ್ ಅತೀ ಸುರಕ್ಷಿತ ಹಾಗೂ ಸೂಕ್ತ.

(4) ಗರ್ಭಿಣಿಯರಿಗೆ ವ್ಯಾಕ್ಸಿನ್ ಅವಶ್ಯವೇ?
ಶೇಕಡಾ 50 ಕ್ಕಿಂತ ಹೆಚ್ಚು ಗರ್ಭಿಣಿಯರಲ್ಲಿ ಯಾವುದೇ ಲಕ್ಷಣವಿಲ್ಲದೇ ಈ ರೋಗ ಕಾಣಿಸಬಹುದಾದರೂ ಕೊನೆಯ ಹಂತದ ಗರ್ಭಿಣಿಯರಲ್ಲಿ ಶೇಕಡಾ 10 ರಷ್ಟು ಜನರಲ್ಲಿ ತೀವ್ರ ತರಹದ ರೋಗ ಬಂದು, ಪ್ರಸವ ಪೂರ್ವ ಹೆರಿಗೆ, ಕಡಿಮೆ ತೂಕದ ಮಗುವಿನ ಜನನ, ಹಾಗೂ ಅಪರೂಪವಾಗಿ ಮಗು ಗರ್ಭದಲ್ಲೇ ಸಾಯುವ ನಿದರ್ಶನಗಳಿವೆ.

(5) ಯಾವ ವ್ಯಾಕ್ಸಿನ್ ಸೂಕ್ತ ?
ಇದುವರೆಗೆ ಎಂ.ಆರ್.ಎನ್.ಎ ವ್ಯಾಕ್ಸಿನ್ ಗಳಾದ ಫೈಸರ್ ಮತ್ತು ಮಾಡರ್ನಾವ್ಯಾಕ್ಸಿನ್ ನ ಬಳಕೆ ಸುರಕ್ಷಿತವೆಂದು ಧೃಢಪಟ್ಟಿದೆಯಾದರೂ ಭಾರತದಲ್ಲಿ ವ್ಯಾಕ್ಸಿನ್ ಪ್ರಾಯೋಗಿಕ ಹಂತದಲ್ಲಿದೆ. ನಮ್ಮಲ್ಲಿರುವ ವ್ಯಾಕ್ಸಿನ್ ಜೀವಂತ ವೈರಾಣು ವ್ಯಾಕ್ಸಿನ್ ಅಲ್ಲದ್ದರಿಂದ, ಇದರಿಂದ ಅಡ್ಡಪರಿಣಾಮದ ಸಂದರ್ಭ ಕಡಿಮೆ.ಕೊವೀಶೀಲ್ಡ್ ನಲ್ಲಿ ರಕ್ತ ಹೆಪ್ಪುಗಟ್ಟುವ ಅಪರೂಪದ ಅಡ್ಡಪರಿಣಾಮ ಇರುವುದರಿಂದ ಇದನ್ನು ಕೊಡುವಾಗ ಜಾಗ್ರತೆ ಅಗತ್ಯ. ಆದರೂ ಇದು ಕೇವಲ ಕೆಲವರಲ್ಲಿ ಮಾತ್ರ ಕಂಡುಬಂದಿದೆ. ಕೋವ್ಯಾಕ್ಸಿನ್ ಅತ್ಯಂತ ಸುರಕ್ಷಿತ.

(6) ಕೊವೀಶೀಲ್ಡ್ ಕೊಟ್ಟಲ್ಲಿ ಯಾವ ಸೂಚನೆ ಕೊಡಬೇಕು ?
ಈ ವ್ಯಾಕ್ಸಿನ್ ತೆಗೆದುಕೊಂಡು 4 ದಿನದಿಂದ 4 ವಾರದ ಒಳಗೇ ಅತಿಯಾದ ತಲೆನೋವು, ಕಣ್ಣು ಕತ್ತಲೆ ಬರುವುದು, ಕಾಲಿನಲ್ಲಿ ಊತ, ಅಪಸ್ಮಾರ, ಅತಿಯಾದ ವಾಂತಿ, ಚರ್ಮ ರಕ್ತಸ್ರಾವ ಆದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

(7) ಗರ್ಭಿಣಿಯಾಗುವ ಸಂದರ್ಭ ವ್ಯಾಕ್ಸಿನ್ ತೆಗೆದುಕೊಳ್ಳಬಹುದೇ?
ಈ ವ್ಯಾಕ್ಸಿನ್ ಗರ್ಭಿಣಿಯಾಗುವ ಸಂದರ್ಭ ಇದ್ದರೂ ತೆಗೆದುಕೊಳ್ಳಬಹುದು ಹಾಗೂ ಮೊದಲ ಡೋಸ್ ಗರ್ಭಿಣಿಯಾಗುವ ಮೊದಲೇ ತೆಗೆದುಕೊಂಡಿದ್ದಲ್ಲಿ, 3 ತಿಂಗಳ ನಂತರ 2ನೇ ಡೋಸ್ ತೆಗೆದುಕೊಳ್ಳಬಹುದಾದರೂ, ಅಷ್ಟರ ಒಳಗೆ ತೆಗೆದುಕೊಂಡಲ್ಲಿ ತೊಂದರೆ ಇಲ್ಲ.

(8) ಪ್ರನಾಳ ಶಿಶು ತಯಾರಿ, ಸಂತಾನಹೀನ ಚಿಕಿತ್ಸೆಯವರಿಗೆ ?
ಈ ವರ್ಗದವರೂ ಈ ವ್ಯಾಕ್ಸಿನ್ ತೆಗೆದುಕೊಳ್ಳಬಹುದು ಹಾಗೂ ಕೆಲವೊಮ್ಮೆ ರೋಗ ನಿರೋಧಕ ಶಕ್ತಿ ಕಡಿಮೆ ಮಾಡುವ ಔಷಧ ಸೇವಿಸುತ್ತಿದ್ದರೆ ಅದರ ಪರಿಣಾಮ ಕಡಿಮೆಯಾದ ನಂತರ ತೆಗೆದುಕೊಳ್ಳವುದು ಸೂಕ್ತ.

(9) ತೆಗೆದುಕೊಳ್ಳುವ ಕ್ರಮ:-
ಈಗಾಗಲೇ ಉಳಿದವರಿಗೆ ವ್ಯಾಕ್ಸಿನ್ ಕೊಡುವ ಹಾಗೇ ಪೋರ್ಟಲ್ ನಲ್ಲಿ ನಮೂದಿಸಿ ತೆಗೆದುಕೊಳ್ಳಬಹುದು ಹಾಗೂ ಗರ್ಭಿಣಿಯರಿಗೆ ಪ್ರತ್ಯೇಕ ದಿನ ನಿಗದಿ ಮಾಡುವುದು ಸೂಕ್ತ. ಕಾರಣ ಗರ್ಭಿಣಿಯರಿಗೆ ಉಳಿದವರ ಜೊತೆಗೆ ವ್ಯಾಕ್ಸಿನ್ ಕೊಟ್ಟರೆ ರೋಗ ಹಬ್ಬುವ ಸಾಧ್ಯತೆ ಇದೆ.

(10)ಅಡ್ಡ ಪರಿಣಾಮ ?
ಉಳಿದವರಂತೆಯೇ ಗರ್ಭಿಣಿಯರಲ್ಲಿ 2-3 ದಿನ ಜ್ವರ, ತಲೆನೋವು, ಮೈಕೈನೋವು, ವಾಂತಿ, ಇಂಜಕ್ಷನ್ ಚುಚ್ಚಿದ ಜಾಗದಲ್ಲಿ ನೋವು, ಪ್ಯಾರಸಿಟಮಾಲ್ ಮಾತ್ರೆಯಿಂದ ಶಮನ ಸಾಧ್ಯ

(11)ಮಕ್ಕಳಲ್ಲಿ ವ್ಯಾಕ್ಸಿನ್ ಏಕೆ ಇಲ್ಲ ?
ಕೋವಿಡ್ ರೋಗ ಮಕ್ಕಳಲ್ಲಿ ತೀವ್ರ ಸ್ವರೂಪ ತಾಳುವುದಿಲ್ಲ ಕಾರಣ ಈ ವೈರಾಣುವಿಗೆ ಮನುಷ್ಯರ ಏಸ್ ರಿಸೆಪ್ಟಾರ್ ಅವಶ್ಯ ಹಾಗೂ ಇದು ಮಕ್ಕಳಲ್ಲಿ ಹೆಚ್ಚು ಇಲ್ಲವಾದ್ದರಿಂದ ಮತ್ತು ಮಕ್ಕಳಲ್ಲಿ ಥೈಮನ್ ಗ್ರಂಥಿಯಲ್ಲಿನ ಪ್ರತೀಕಾಯ ಈ ರೋಗ ತಡೆಗಟ್ಟಲು ಸಹಾಯಕಾರಿ. ಆದರೆ ಈಗಿನ ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣುವಿನ ಬಗ್ಗೆ ಮಕ್ಕಳಲ್ಲಿ ಎಚ್ಚರ ಅಗತ್ಯ. ಇದು ತೀವ್ರ ತರಹದ ನ್ಯೂಮೋನಿಯಾಕ್ಕೆ ಕಾರಣವಾಗಬಹುದು. ಮಕ್ಕಳಲ್ಲಿ ಈಗಿನ ದೆಹಲಿಯ ಸರ್ವೆ ಪ್ರಕಾರ ಶೇಕಡಾ 70 ಜನರಲ್ಲಿ ಪ್ರತೀಕಾಯವಿರುವುದು ಕಂಡುಬಂದಿದ್ದು ಈಗಾಗಲೇ ಇವರಲ್ಲಿ ಯಾವುದೇ ಲಕ್ಷಣವಿಲ್ಲದೇ ಕೋವಿಡ್ ಬಂದಿರುವುದು ಧೃಢಪಟ್ಟಿದೆ.

ವ್ಯಾಕ್ಸಿನ್ ಎಷ್ಟು ಮುಖ್ಯವೂ ಅಷ್ಟೇ ಮುಖ್ಯ ಸೂಕ್ತ ಮಾಸ್ಕ್ ಸರಿಯಾಗಿ ಧರಿಸುವುದು, 6 ಅಡಿ ಅಂತರ ಇರುವುದು, ಕೈಗಳ ಶುಚಿತ್ವ, ಅನಾವಶ್ಯಕ ತಿರುಗಾಟ ಮಾಡದಿರುವುದು ಆಗಿದೆಯಾದ್ದರಿಂದ ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ 3ನೇ ಅಲೆ ತಪ್ಪಿಸುವುದು ಸಾಧ್ಯ. ಸರಕಾರದ ಕ್ರಮ ಪರಿಣಾಮಕಾರಿಯಾಗಬೇಕಾದರೆ ಜನರ ಸಹಕಾರ ಈ ನಿಟ್ಟಿನಲ್ಲಿ ಅತೀ ಅಗತ್ಯ. ವ್ಯಾಕ್ಸಿನ್ ಬಗ್ಗೆ ಸಂದೇಹ ನಿವಾರಿಸಿ ಎಲ್ಲರೂ ವ್ಯಾಕ್ಸಿನ್ ಅಭಿಯಾನದಲ್ಲಿ ಭಾಗಿಯಾಗಿರಿ.

✒️ಡಾ ಜೆ.ಸಿ.ಅಡಿಗ
ವೈದ್ಯಕೀಯ ತಜ್ಞರು
ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.