HomePage_Banner
HomePage_Banner

ಟಿವಿ, ರೇಡಿಯೋ, ಮೊಬೈಲ್ ಸೌಲಭ್ಯವಿಲ್ಲದಿದ್ದರೇನು – ವಿದ್ಯಾರ್ಥಿಗಳ ಮನೆಗೇ ಹೋಗಿ ವಿದ್ಯೆ ಕಲಿಸಲು ಶಿಕ್ಷಕರು ರೆಡಿ

Puttur_Advt_NewsUnder_1
Puttur_Advt_NewsUnder_1
  • ಪುತ್ತೂರು, ಕಡಬದಲ್ಲಿ ಸೌಲಭ್ಯವಿರುವ ವಿದ್ಯಾರ್ಥಿಗಳು 39971, ವಂಚಿತರು 1,887
  • ಗೂಗಲ್ ಮೀಟ್‌ನಲ್ಲಿ ಶಿಕ್ಷಕರಿಗೆ ಮಾರ್ಗದರ್ಶನ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ
  • ಖಾಸಗಿಯಿಂದ ಸರ್ಕಾರಿ ದಾಖಲಾತಿಗೆ ಶರತ್ತು ವಿಧಿಸುವಂತಿಲ್ಲ
  • ಶಾಲೆಯಲ್ಲಿ ಬುಕ್ ಬ್ಯಾಂಕ್ ಸ್ಥಾಪನೆ ಪ್ರೋತ್ಸಾಹ

ಪುತ್ತೂರು: ಕೋವಿಡ್-೧೯ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಿದೆ. ಆನ್‌ಲೈನ್, ಆಫ್‌ಲೈನ್ ತರಗತಿಗಳು ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಪುತ್ತೂರು ಕ್ಷೇತ್ರ ಶಿಕ್ಷಣ ಇಲಾಖೆ ವ್ಯಾಪ್ತಿಯ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಶೇ.೯೫ರಷ್ಟು, ೨ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಟಿವಿ, ರೇಡಿಯೋ, ಮೊಬೈಲ್ ಸೌಲಭ್ಯವಿದೆ. ಉಳಿದಂತೆ ಶೇ.೫ ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯ ಇಲ್ಲದಿದ್ದರೂ ಆ ವಿದ್ಯಾರ್ಥಿಗಳ ಮನೆಗೆ ಹೋಗಿಯಾದರೂ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಶಿಕ್ಷಕರು ಸಿದ್ಧತೆ ನಡೆಸಿದ್ದಾರೆ. ಈ ವ್ಯವಸ್ಥೆಯ ಅಡಿಯಲ್ಲಿ ಮೊಬೈಲ್, ಟ್ಯಾಬ್ ಬೇಡ, ಹಣವೂ ಖರ್ಚಾಗುವುದಿಲ್ಲ.

ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ೨ ರಿಂದ ೧೦ನೇ ತರಗತಿಯ ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಅಂಕಿ ಅಂಶವನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಸಂಗ್ರಹ ಮಾಡಲಾಗಿದ್ದು, ಈ ಅಂಕಿಅಂಶದಲ್ಲಿ ಟಿವಿ, ರೇಡಿಯೋ, ಮೊಬೈಲ್ ಸೌಲಭ್ಯವನ್ನು ಹೊಂದಿದವರು ಸರಿ ಸುಮಾರು ೩೯೯೭೧ ಇದ್ದು, ಯಾವುದೇ ಸೌಲಭ್ಯ ಇಲ್ಲದವರು ಅಂದಾಜು ೧,೮೮೭ ಮಂದಿ ಇದ್ದಾರೆ.ಈ ನಡುವೆ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದ ಕೆಲ ವಿದ್ಯಾರ್ಥಿಗಳು ಈಗ ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆಗಳತ್ತ ಮುಖ ಮಾಡಿರುವುದು ಒಂದು ಮಹತ್ವದ ಬದಲಾವಣೆಯಾಗಿದೆ. ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಬಹುತೇಕ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದರೆ ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ವಿದ್ಯಾರ್ಥಿನಿಯರೂ ಖಾಸಗಿ ಶಾಲೆಗಳತ್ತ ಚಿತ್ತ ಹರಿಸಿದ್ದರು.ಖಾಸಗಿ ಸ್ಕೂಲ್‌ಗಳು ವಿದ್ಯಾರ್ಥಿಗಳನ್ನು ಕರೆತರಲು ಹಳ್ಳಿಹಳ್ಳಿಗಳಿಗೆ ವಾಹನಗಳನ್ನು ಕಳುಹಿಸುತ್ತಿದ್ದವು.ಕೋವಿಡ್ -೧೯ ಪ್ರಭಾವದಿಂದ ಖಾಸಗಿ ಶಾಲೆಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಸ್ವಲ್ಪ ಮಟ್ಟಿಗೆ ಸರ್ಕಾರಿ ಶಾಲೆಗಳಿಗೆ ತೆರಳಲು ಮನಸ್ಸು ಮಾಡಿದ್ದಾರೆ.ಲಾಕ್‌ಡೌನ್ ಅವಧಿಯಲ್ಲಿ ಪಾಲಕರ ಆರ್ಥಿಕ ಮಟ್ಟ ಕುಸಿದಿದೆ.ಖಾಸಗಿ ಶಾಲೆಗಳ ಫೀಸ್‌ಕಟ್ಟಲು ಸಮಸ್ಯೆ ಉಂಟಾಗಿದೆ.ಖಾಸಗಿ ಶಾಲೆಗಳು ನಗರ ಪ್ರದೇಶದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿವೆ.ಕೊರೋನಾ ಇರುವುದರಿಂದ ದೂರದ ಶಾಲೆಗಳಿಗೆ ವಾಹನಗಳಲ್ಲಿ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುವಂತಾಗಿದೆ.ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವ ಮಾಹಿತಿ ಲಭಿಸಿದೆ.

ಗೂಗಲ್ ಮೀಟ್‌ನಲ್ಲಿ ಶಿಕ್ಷಕರಿಗೆ ಮಾರ್ಗದರ್ಶನ: ೧ನೇ ತರಗತಿಯಿಂದಲೇ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಈಗಾಗಲೇ ಗೂಗಲ್ ಮೀಟ್ ಮೂಲಕ ಎಲ್ಲಾ ಶಾಲೆಯ ಮುಖ್ಯಶಿಕ್ಷಕರು, ಸಹಶಿಕ್ಷಕರಿಗೆ ಮಾರ್ಗದರ್ಶನ ನೀಡಲಾಗಿದೆ. ಸರಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ಪ್ರವೇಶಾತಿ ಆಗಿದೆ.ಜೂ.೧೫ರಿಂದಲೇ ಇಲಾಖೆಯ ನಿಯಮಾನುಸಾರ ಪ್ರವೇಶಾತಿ ಆರಂಭಗೊಂಡಿದೆ. ಯಾವ ರೀತಿ ಮುಂದೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕೆಂಬುದರ ಕುರಿತು ಆಗಾಗ್ಗೆ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಮಾಹಿತಿ ನೀಡುತ್ತಿದ್ದಾರೆ.

ಖಾಸಗಿಯಿಂದ ಸರ್ಕಾರಿ ದಾಖಲಾತಿಗೆ ಶರತ್ತು ವಿಧಿಸುವಂತಿಲ್ಲ: ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗೆ ದಾಖಲಾತಿ ಆಗುವ ಸಂದರ್ಭದಲ್ಲಿ ಯಾವುದೇ ಶರತ್ತು ಅಥವಾ ಫೀಸ್ ಕೇಳುವಂತಿಲ್ಲ. ಈಗಾಗಲೇ ಖಾಸಗಿ ಶಾಲೆಯಿಂದ ತೊಂದರೆಗೊಳಪಟ್ಟ ಹಲವು ವಿದ್ಯಾರ್ಥಿಗಳನ್ನು ಸ್ಟುಡೆಂಟ್ ಅಚೀವ್‌ಮೆಂಟ್ ಟ್ರಾಕಿಂಗ್ ಸಿಸ್ಟಮ್ ಮೂಲಕ ವಿದ್ಯಾರ್ಥಿಗಳ ಟಿ.ಸಿ ತರಿಸುವ ಕೆಲಸವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಮಾಡಿದ್ದು, ಸಮಸ್ಯೆಗೆ ಸಿಲುಕಿದ್ದ ೭ ಮಂದಿ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗೆ ದಾಖಲಾತಿ ಮಾಡಲಾಗಿದೆ.

ಸರ್ಕಾರಿ ಶಾಲೆಗಳಿಗೆ ಲಾಭ: ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿದ್ದವು. ವರ್ಷದಿಂದ ವರ್ಷಕ್ಕೆ ಮಕ್ಕಳ ಪ್ರವೇಶಾತಿ ಕಡಿಮೆಯಾಗುತ್ತಿತ್ತು. ಈ ಬಾರಿಯ ವಿದ್ಯಮಾನ ಶಿಕ್ಷಣ ಇಲಾಖೆಯಲ್ಲಿ ಹೊಸ ಭರವಸೆ ಮೂಡಿಸಿದೆ.ಸರಕಾರಿ ಶಾಲೆಗೆ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತಿದೆ.ಮಕ್ಕಳ ಕೊರತೆಯಿಂದಾಗಿ ಹೆಚ್ಚುವರಿ ಶಿಕ್ಷಕರಾಗುವ ಆತಂಕವೂ ಶಿಕ್ಷಕರಿಗೆ ತಪ್ಪಿದೆ.ಮಕ್ಕಳೇ ಇಲ್ಲದೆ ಶಾಲೆಯನ್ನು ಸಮೀಪದ ಶಾಲೆಗೆ ವಿಲೀನಗೊಳಿಸುವ ಅವಕಾಶವೂ ಕಡಿಮೆಯಾಗಿದೆ.

ಶಾಲೆಯಲ್ಲಿ ಬುಕ್ ಬ್ಯಾಂಕ್ ಸ್ಥಾಪನೆ ಪ್ರೋತ್ಸಾಹ
ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ ಈ ವರ್ಷದಿಂದ ‘ ಬುಕ್ ಬ್ಯಾಂಕ್ ‘ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.ಕಳೆದ ವರ್ಷ ಪೂರೈಸಿದ ಅಥವಾ ಹಿರಿಯ ವಿದ್ಯಾರ್ಥಿಗಳು ಒಂದೆರಡು ವರ್ಷ ಬಳಸಿದ ಪುಸ್ತಕಗಳನ್ನು ಹಾಲಿ ವ್ಯಾಸಂಗ ಮಾಡುವವರಿಗೆ ಒದಗಿಸುವ ಮೂಲಕ ಪುಸ್ತಕಗಳ ಕೊರತೆಯನ್ನು ನೀಗಿಸಲು ಉದ್ದೇಶಿಸಲಾಗಿದೆ.ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೂಡ ಈ ಪುಸ್ತಕಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಪೋಷಕರು ಆದಷ್ಟು ತಮ್ಮ ಮಕ್ಕಳ ಪುಸ್ತಕವನ್ನು ಮುಂದಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರಯೋಜನವಾಗಲು ಸಹಕರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.