ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸುದ್ದಿಯ ಸಾಥ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

  • ತಾಲೂಕಿನ ಎಲ್ಲರೂ ಭಾಗವಹಿಸುವಂತೆ ಮಾಡುವ ಸ್ಮರಣೀಯ ಆಚರಣೆಗೆ ಹಲವು ಕಾರ್ಯಕ್ರಮಗಳ ಮೆರುಗು

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಸಂಭ್ರಮಕ್ಕೆ ಕಾರಣವಾಗಲಿದ್ದು, ತಾಲೂಕಿನ ಎಲ್ಲರೂ ಅವರವರ ಸ್ಥಳದಲ್ಲಿಯೇ ಭಾಗವಹಿಸುವಂತೆ ಮಾಡುವ ಸ್ಮರಣೀಯ ಆಚರಣೆಗೆ ಸುದ್ದಿ ಸಾಥ್ ನೀಡಲು ನಿರ್ಧರಿಸಿದೆ. ಅಂದು ಹಾಗೂ ಪೂರ್ವಭಾವಿಯಾಗಿ ಅನೇಕ ಯೋಜನೆಗಳೊಂದಿಗೆ ಈ ದೇಶದ ಹಬ್ಬವನ್ನು ಜನರ ಹಬ್ಬವಾಗಿ ಆಚರಿಸಲು ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ.

ಮೂರೂವರೆ ದಶಕದ ಇತಿಹಾಸ ಹೊಂದಿರುವ ಸುದ್ದಿ ಸಂಸ್ಥೆ ಪತ್ರಿಕೆಯಾಗಿ, ವೆಬ್‌ಸೈಟ್ ಮೂಲಕ ಮತ್ತು ಚಾನೆಲ್ ಮೂಲಕ ಜಗದಗಲ ಪ್ರಚಾರ ಮತ್ತು ಪ್ರಸಾರವಾಗುತ್ತಿದ್ದು, ಜನಪರವಾದ ನಿಲುವುಗಳನ್ನು ಹೊಂದಿ ಕಾರ್ಯಾಚರಿಸುತ್ತಿದೆ. ಅನೇಕ ಹೊಸಹೊಸ ಯೋಚನೆ ಮತ್ತು ಯೋಜನೆಗಳು ಆಂದೋಲನಗಳಾಗಿ ಸುದ್ದಿಯ ಕಾರ್ಯಕ್ಕೆ ಸಾಥ್ ನೀಡಿದೆ.

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ತುಂಬುವ ಈ ಹೊತ್ತಿನಲ್ಲಿ ಊರವರೆಲ್ಲರೂ ಒಂದು ಕಡೆಯಲ್ಲಿ ಸೇರಿ ಒಗ್ಗಟ್ಟಿನೊಂದಿಗೆ ಮತ್ತು ಸಂಭ್ರಮದೊಂದಿಗೆ ಈ ಆಚರಣೆಯನ್ನು ಕೊಂಡಾಡಬೇಕು ಎನ್ನುವುದೇ ಈ ಆಚರಣೆಯ ಮುಖ್ಯ ಧ್ಯೇಯ. ಜನಾಧಿಕಾರ ಮತ್ತು ಜನಾಶಯ ಎನ್ನುವ ವಿಶಿಷ್ಟ ಆಂದೋಲನವನ್ನು ಇತ್ತೀಚೆಗಷ್ಟೇ ಸುದ್ದಿ ಹಮ್ಮಿಕೊಂಡಿತ್ತು. ಜನಪ್ರತಿನಿಧಿಗಳನ್ನು, ವಿವಿಧ ಅಧಿಕಾರಿಗಳನ್ನು ಸುದ್ದಿ ಸ್ಟುಡಿಯೋಗೆ ಆಹ್ವಾನಿಸಿ, ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಧ್ವನಿಯಾಗುವ ಕಾರ್ಯವನ್ನು ಸುದ್ದಿ ಮಾಡಿತು. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಪಟ್ಟ ವಿವಿಧ ಕ್ಷೇತ್ರದವರನ್ನು ಸುದ್ದಿ ಸ್ಟುಡಿಯೋಗೆ ಕರೆಯಿಸಿ ಅವರ ಸಮಸ್ಯೆಗೆ ಸುದ್ದಿ ಧ್ವನಿಯಾಯಿತು. ಇದೇ ಜನಾಶಯದ ಧೋರಣೆಯನ್ನು ಮುಂದುವರೆಸುತ್ತಾ ಸುದ್ದಿ ಸ್ವಾತಂತ್ರ್ಯದ ಅಮೃತ ವರ್ಷಕ್ಕೆ ಸಾಥ್ ನೀಡುತ್ತಿದೆ.

ಜೊತೆ ಸೇರಿ ಊಟ, ಉಪಾಹಾರ: ಇಂದು ಬೇರೆಬೇರೆ ಬ್ಯಾನರ್‌ನಡಿ ಜನ ಸೇರುತ್ತಾರೆ. ಜಾತಿ, ಧರ್ಮ, ಪಕ್ಷ, ಸಂಘಟನೆಗಳ ಹೆಸರಿನಲ್ಲಿ ಒಂದುಗೂಡುತ್ತಾರೆ. ಆದರೆ ಸ್ವಾತಂತ್ರ್ಯದ ಹೆಸರಿನಲ್ಲಿ ಎಲ್ಲರನ್ನೂ ಒಂದುಗೂಡಿಸಿ ಸಂಭ್ರಮಿಸಬೇಕೆನ್ನುವುದು ಸುದ್ದಿಯ ಆಶಯ. ಈ ನಿಟ್ಟಿನಲ್ಲಿ ಆಗಸ್ಟ್ ೧೫ ರಂದು ಬೆಳಿಗ್ಗೆ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ಸೇರಿದವರೆಲ್ಲ ಜೊತೆಯಲ್ಲೆ ಸೇವಿಸಿ ಖುಷಿ ಪಡುವುದು ಕಾರ್ಯಕ್ರಮದ ಉದ್ದೇಶ. ಪರಸ್ಪರ ಸಹಕಾರ ಧೋರಣೆಯಿಂದ, ಕೊಡುಗೆಯಿಂದ ಈ ಕಾರ್ಯಕ್ರಮ ಅನುಷ್ಠಾನಗೊಳ್ಳಬೇಕಿದೆ. ಪ್ರತಿಯೊಬ್ಬರು ತಮ್ಮ ಮನೆಗಳಿಂದ ತಿನಿಸು, ಆಹಾರ ಪದಾರ್ಥಗಳನ್ನು ನೀಡಿ ಈ ವ್ಯವಸ್ಥೆಯನ್ನು ಯಶಸ್ವಿಗೊಳಿಸಬಹುದು.

ಪ್ರತೀ ಗ್ರಾಮ ಪಂಚಾಯತಿನಲ್ಲಿ ಸುದ್ದಿ ಪ್ರತಿನಿಧಿಗಳಿಂದ ಸೇವೆ: ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಗ್ರಾಮ ಪಂಚಾಯತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸುದ್ದಿ ಪ್ರತಿನಿಧಿಗಳು ಕೆಲಸ ಮಾಡಲಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ಕಾರ್ಯಕ್ರಮದ ಬಗ್ಗೆ ಪ್ರಚಾರ ನೀಡಲಿದ್ದಾರೆ.

ವಿವಿಧ ಸ್ಪರ್ಧೆಗಳ ಮೆರುಗು: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸಂಭ್ರಮಕ್ಕೆ ಪೂರ್ವಭಾವಿಯಾಗಿ ಸುದ್ದಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಲು ನಿರ್ಧರಿಸಿದ್ದು, ಈಗಾಗಲೇ ಇದಕ್ಕೆ ಚಾಲನೆ ನೀಡಲಾಗಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಸಾರ್ವಜನಿಕರಿಗಾಗಿ ಭಾಷಣ ಸ್ಪರ್ಧೆಯಿರುತ್ತದೆ.

ಪ್ರತಿ ಗ್ರಾಮಗಳ ದಾಖಲೀಕರಣ ಕಾರ್ಯ: ಅಮೃತಮಹೋತ್ಸವಕ್ಕೆ ಪೂರ್ವಭಾವಿಯಾಗಿ ಪ್ರತಿಗ್ರಾಮಗಳ ವೀಡಿಯೋ ದಾಖಲೀಕರಣ ನಡೆಯುತ್ತದೆ. 75 ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಈ ಗ್ರಾಮ ಹೇಗಿದೆ? ಗ್ರಾಮದ ವಿಶೇಷತೆಗಳೇನು? ಗ್ರಾಮದಲ್ಲಿರುವ ಸೌಕರ್ಯ ಮತ್ತು ಸೌಲಭ್ಯಗಳೇನು? ಎಂಬಿತ್ಯಾದಿ ವಿವರಗಳನ್ನು ದಾಖಲೀಕರಣ ಮಾಡಲಾಗುವುದು. ಇದರ ಜೊತೆಗೆ ಈ ಗ್ರಾಮಗಳು ಹಿಂದೆ ಯಾವ ರೀತಿ ಇತ್ತು ಎನ್ನುವುದನ್ನು ಹಿರಿಯರ ಅನುಭವದ ಮಾತುಗಳೊಂದಿಗೆ ಪ್ರಸ್ತುತಪಡಿಸಲಾಗುವುದು.

ಆಗಸ್ಟ್ 1ರಿಂದಲೇ ಕಾರ್ಯಕ್ರಮ ಪ್ರಾರಂಭ, ಆಗಸ್ಟ್ 15 ರಂದು ದಿನ ಪೂರ್ತಿ ಕಾರ್ಯಕ್ರಮ: ಸ್ವಾತಂತ್ರ್ಯೋತ್ಸವದ ಚಟುವಟಿಕೆಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಪೂರ್ವಭಾವಿ ಕಾರ್ಯಕ್ರಮಗಳನ್ನು ಆಗಸ್ಟ್ ೧ ರಿಂದಲೇ ಪ್ರಾರಂಭಿಸಲಾಗುವುದು. ಆಗಸ್ಟ್ ೧೫ ರಂದು ಸುದ್ದಿ ಚಾನೆಲ್ ದಿನಪೂರ್ತಿ ನೇರಪ್ರಸಾರದ ಮೂಲಕ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವಕ್ಕೆ ಸಾಕ್ಷಿಯಾಗಲಿದೆ. ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ಪುತ್ತೂರು ನಗರದಲ್ಲಿ ನಡೆಯುವ ಆಚರಣೆ ಮಾತ್ರವಲ್ಲದೆ, ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ನಡೆಯುವ ಕಾರ್ಯಕ್ರಮಗಳ ನೇರಪ್ರಸಾರ ಮಾಡಲಾಗುವುದು. ಜನ ಮೆಚ್ಚಿದ ತಾಲೂಕಿನ ಪ್ರತಿಯೊಂದು ಇಲಾಖೆಯ ಅಧಿಕಾರಿ, ಪ್ರತೀ ಗ್ರಾಮ ಪಂಚಾಯತಿನಲ್ಲಿ ಆಯ್ಕೆಯಾದ 10 ಜನ ಸಾಧಕರು. ಶಾಸಕರ ಅತ್ಯುತ್ತಮ ೨ ಪ್ರಮುಖ ಕೆಲಸಗಳು, ಮಾಡಲು ಬಾಕಿಯಾಗಿರುವ 2 ಪ್ರಮುಖ ಕೆಲಸಗಳನ್ನು ಘೋಷಣೆ ಮಾಡಿ ನೇರ ಪ್ರಸಾರ ಮಾಡಲಾಗುವುದು. ಆ ಬಳಿಕ ಅಮರ ಕ್ರಾಂತಿ ಹೋರಾಟದ ಕಥೆ, ದೇಶಭಕ್ತಿಗೀತೆಗಳು, ವಿಶೇಷ ಚರ್ಚಾ ಕಾರ್ಯಕ್ರಮಗಳು, ಹಿರಿಯರ ಅಭಿಪ್ರಾಯಗಳು, ದೇಶ ಗಾನ ನಮನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸುದ್ದಿ ಚಾನೆಲ್‌ನಲ್ಲಿ ಪ್ರಸ್ತುತಪಡಿಸಲಾಗುವುದು.

ಪಂಚಾಯತ್ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮ: ಈ ವಿನೂತನ ಕಾರ್ಯಕ್ರಮಕ್ಕೆ ಸ್ಥಳೀಯ ಸಂಘಸಂಸ್ಥೆಗಳ ಸಹಕಾರ ಪಡೆಯಲಾಗುವುದು. ಗ್ರಾಮ ಪಂಚಾಯತ್, ಸಹಕಾರಿ ಸಂಘ, ಶಾಲೆ, ಕಾಲೇಜು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಸೇರಿ ಈ ಕಾರ್ಯಕ್ರಮ ರೂಪಿಸಲಾಗುವುದು.

ಸಾಮೂಹಿಕ ಸ್ವಾತಂತ್ರ್ಯ ನಡಿಗೆ: ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಅತಿ ವಿಶಿಷ್ಟವಾದ ನಡಿಗೆ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ ಸೇರಿರುವ ಎಲ್ಲರೂ ಸ್ವಾತಂತ್ರ್ಯ ನಡಿಗೆ ಉದ್ಘೋಷದಡಿ ಸ್ವಲ್ಪ ದೂರ ಸಾಮೂಹಿಕವಾಗಿ ನಡೆಯುವ ಕಾರ್ಯಕ್ರಮ ಯೋಜಿಸಲಾಗಿದೆ. ಇದರ ಜೊತೆಗೆ ಸ್ವಾತಂತ್ರ್ಯ ಓಟ ಕಾರ್ಯಕ್ರಮವನ್ನೂ ಹೊಂದಿಸಲು ತೀರ್ಮಾನಿಸಲಾಗಿದ್ದು, ಹಲವು ಮೌಲಿಕವಾದ ಘೋಷಣೆಗಳೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ತಾಲೂಕು ಮಟ್ಟದಲ್ಲಿ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಏಕ ಕಾಲದಲ್ಲಿ ಈ ನಡಿಗೆ ಮತ್ತು ಓಟ ನಡೆಯುವ ಮೂಲಕ ಇತಿಹಾಸ ನಿರ್ಮಾಣವಾಗಲಿದೆ.

ಭ್ರಷ್ಟಾಚಾರ ಮುಕ್ತ ತಾಲೂಕು ಘೋಷಣೆ: ಸುದ್ದಿ ಪತ್ರಿಕೆ ಆರಂಭದ ಹಿಂದಿನ ಇತಿಹಾಸವೇ ಭ್ರಷ್ಟಾಚಾರ ವಿರೋಧಿ ಪರಿಕಲ್ಪನೆ. ಆ ಬಳಿಕವೂ ಸಂಪಾದಕೀಯಗಳ ಮುಖಾಂತರ ನಿರಂತರವಾಗಿ ಈ ಕುರಿತ ಜಾಗೃತಿ ಮೊಳಗಿಸಲಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸ್ಮರಣೀಯ ಸಂದರ್ಭದಲ್ಲಿ ಭ್ರಷ್ಟಾಚಾರ ಮುಕ್ತ ತಾಲೂಕು ಎಂಬ ಪ್ರತಿಜ್ಞೆ ಕೈಗೊಳ್ಳಲು ತೀರ್ಮಾನಿಸಲಾಗಿದ್ದು, ಈಗಾಗಲೇ ಇದಕ್ಕೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಾತ್ಮ ಗಾಂಧಿಯವರ ಗ್ರಾಮಸ್ವರಾಜ್ಯ, ಹಳ್ಳಿಯಿಂದ ಡೆಲ್ಲಿಗೆ ಆಡಳಿತ ಎಂಬ ಆಶಯವನ್ನೂ ಅಲ್ಲಿ ಘೋಷಿಸಲಾಗುವುದು.

ಸ್ವಾತಂತ್ರ್ಯೋತ್ಸವ ವಿಶೇಷ ಸಂಚಿಕೆ: ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಸಂದರ್ಭದಲ್ಲಿ ಸುದ್ದಿ ಬಿಡುಗಡೆ ವತಿಯಿಂದ ವಿಶೇಷವಾದ ಸಂಗ್ರಾಹ್ಯ ಸಂಚಿಕೆಯನ್ನು ಹೊರತರಲಾಗುವುದು. ಪುತ್ತೂರಿನ ಗತಇತಿಹಾಸ ಮತ್ತು ವಾಸ್ತವ ಚಿತ್ರಣವನ್ನು ತೆರೆದಿಡುವ ಮಾಹಿತಿ ಪೂರ್ಣ ಸಂಚಿಕೆ ಇದಾಗಲಿದ್ದು, ಸಾರ್ವಜನಿಕರಿಂದ ಮಾಹಿತಿ ಆಹ್ವಾನಿಸಲಾಗುತ್ತಿದೆ.

ಊರ ಸಾಧಕರಿಗೆ ಸನ್ಮಾನ:
ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮಾಜದ ಎಲ್ಲರಿಂದ ಗೌರವಕ್ಕೆ ಪಾತ್ರರಾದ ವಿವಿಧ ಕ್ಷೇತ್ರಗಳ ಹತ್ತು ಮಂದಿ ಸಾಧಕರನ್ನು ಸನ್ಮಾನಿಸಿ, ಗೌರವಿಸುವ ಕಾರ್ಯಕ್ರಮ ಉದ್ದೇಶಿಸಲಾಗಿದೆ. ಊರವರೇ ಈ ಆಯ್ಕೆಯನ್ನು ನಡೆಸಲಿದ್ದಾರೆ. ಇವರಲ್ಲಿ ಓರ್ವ ಗ್ರಾಮ ಪಂಚಾಯತ್ ಸಿಬ್ಬಂದಿ, ಓರ್ವ ಗ್ರಾಮ ಪಂಚಾಯತ್ ಸದಸ್ಯರು ಸೇರಲಿದ್ದಾರೆ.

ಶಾಸಕರ ಕೆಲಸಕ್ಕೆ ಗೌರವ:
ಕ್ಷೇತ್ರದ ಶಾಸಕರು ಮಾಡಿರುವ ಎರಡು ಅತ್ಯುತ್ತಮ ಕೆಲಸಗಳನ್ನು ಗುರುತಿಸಲಾಗುವುದು. ಅದೇ ರೀತಿ ಶಾಸಕರು ಮಾಡಬೇಕಾಗಿರುವ 2 ಪ್ರಮುಖ ಕೆಲಸವನ್ನು ನೆನಪಿಸಲಾಗುವುದು. ಇದು ಕೂಡ ಸಾರ್ವಜನಿಕರ ಅಭಿಪ್ರಾಯದ (ಓಟಿನ ಮೂಲಕ) ಆಧಾರಿತವಾಗಿ ನಡೆಯಲಿದೆ.

ಜನಪದ ಆಟಗಳ ಮೆರುಗು:
ಆಗಸ್ಟ್ 15 ರಂದು ಬೆಳಿಗ್ಗೆ ಧ್ವಜಾರೋಹಣ ಮತ್ತು ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಬಳಿಕ ವಿವಿಧ ರೀತಿಯ ಜನಪದ ಆಟಗಳನ್ನು ನಡೆಸಲು ಕೂಡ ತೀರ್ಮಾನಿಸಲಾಗಿದೆ. ಜನಪದ ಆಟಗಳಾದ ಲಗೋರಿ, ಕುಂಟೆಬಿಲ್ಲೆ, ಕುಟ್ಟಿದೊಣ್ಣೆ, ಕಲ್ಲಾಟ, ಚೆನ್ನೆಮಣೆ ಮತ್ತಿತರ ಆಟಗಳನ್ನು ನಡೆಸಲು ಯೋಚಿಸಲಾಗುತ್ತಿದೆ.

ಪ್ರತಿ ಇಲಾಖೆಯ ದಕ್ಷ ಅಧಿಕಾರಿಗೆ ಗೌರವ:
ಪುತ್ತೂರು ತಾಲೂಕಿನ ಪ್ರತಿ ಇಲಾಖೆಯ ಓರ್ವ ಅಧಿಕಾರಿ ಅಥವಾ ಸಿಬ್ಬಂದಿಯನ್ನು ದಕ್ಷ ಅಥವಾ ಪ್ರಾಮಾಣಿಕತೆಗಾಗಿ ಗೌರವಿಸಲಾಗುವುದು. ಸಾರ್ವಜನಿಕರ ಅಭಿಪ್ರಾಯದ ಆಧಾರಿತವಾಗಿ (ಓಟಿನ ಮೂಲಕ) ಈ ಆಯ್ಕೆ ನಡೆಯಲಿದೆ.

ಅಭಿಪ್ರಾಯಗಳನ್ನು ಸ್ವಾತಂತ್ರ್ಯ ಸುವರ್ಣ ಮಹೋತ್ಸವ-ಜನರ ಹಬ್ಬ ಸುದ್ದಿ ಅಂಕಣಕ್ಕೆ ಬರೆದು ಕಳುಹಿಸಿರಿ.

            ✍🏻 ದುರ್ಗಾಕುಮಾರ್ ನಾಯರ್‌ಕೆರೆ

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.