HomePage_Banner
HomePage_Banner

ನಮ್ಮ ಊರು ಭ್ರಷ್ಟಾಚಾರ ಮುಕ್ತವಾಗಲು, ಅಭಿವೃದ್ಧಿಯಾಗಲು ಪ್ರಥಮ ಹೆಜ್ಜೆಯಾಗಿ 75ನೇ ಸ್ವಾತಂತ್ರ್ಯವನ್ನು ಊರಿನ ಎಲ್ಲರೂ ಸೇರಿ ನಮ್ಮದೇ ಆಡಳಿತವೆಂದು ಸಂಭ್ರಮಿಸೋಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಎಲ್ಲಾ ಇಲಾಖೆಗಳ ದಕ್ಷರನ್ನು, ಜನಪ್ರತಿನಿಧಿಗಳ ಉತ್ತಮ ಕೆಲಸವನ್ನು ಗುರುತಿಸೋಣ

ನಾವು ವಿಷಯ ಬಂದಾಗ ಅಮೇರಿಕಾ ಅಧ್ಯಕ್ಷರ ಬಗ್ಗೆ, ಪ್ರಧಾನಿ ಮೋದಿಯವರ ಬಗ್ಗೆ, ಮುಖ್ಯ ಮಂತ್ರಿ ಯಡಿಯೂರಪ್ಪರ ಬಗ್ಗೆ, ವಿವಿಧ ನಾಯಕರ ಬಗ್ಗೆ ಮಾತನಾಡುತ್ತೇವೆ. ಅವರು ಹೇಗೆ ಕೆಲಸ ಮಾಡಬೇಕಿತ್ತೆಂದು, ಮಾಡಬಾರದಿತ್ತೆಂದು ಸಲಹೆ ನೀಡುತ್ತೇವೆ, ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡುವಾಗ ಕಾಂಗ್ರೆಸ್, ಬಿಜೆಪಿ, ಜಾತಿ ಧರ್ಮದ ಪರ ವಿರೋಧ ಚರ್ಚೆ ಮಾಡುತ್ತೇವೆ. ಅದರಲ್ಲಿ ತಪ್ಪಿಲ್ಲ. ಆದರೆ ನಾವಾಡುವ ಯಾವುದೇ ಮಾತು ಅದಕ್ಕೆ ಸಂಬಂಧಿಸಿದ ಪ್ರಮುಖರಿಗೆ ಕೇಳುವುದಿಲ್ಲ. ಅದರಿಂದ ಅವರ ಮೇಲೆ ಏನೂ ಪರಿಣಾಮವಾಗುವುದಿಲ್ಲ. ನಮ್ಮದು ಗಾಳಿಯಲ್ಲಿ ಗುದ್ದಾಟ ಮಾತ್ರವಾಗಿರುತ್ತದೆ. ಆ ಸಮಯವನ್ನು, ಚಿಂತನೆಯನ್ನು ನಮ್ಮ ಸುತ್ತಲಿನ ವಿಷಯದ ಬಗ್ಗೆ ಮಾತನಾಡಲು ಮತ್ತು ಅಭಿವೃದ್ಧಿ ಪಡಿಸಲು ಉಪಯೋಗಿಸಿದರೆ ಅದು ಆ ವಿಷಯದ ಜವಾಬ್ದಾರಿ ಇರುವ ನಮ್ಮ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮುಟ್ಟುತ್ತದೆ, ಪರಿಣಾಮವನ್ನೂ ಬೀರುತ್ತದೆ. ಅದನ್ನು ಸುದ್ದಿ ಪತ್ರಿಕೆ ಕಳೆದ 36 ವರ್ಷಗಳಲ್ಲಿ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ಮಾಡಿಕೊಂಡು ಬಂದಿದೆ. ಇತ್ತೀಚಿಗಿನ ಅಧಿಕಾರಿಗಳ ಮತ್ತು ಜನರ ನಡುವಿನ ಸಂಪರ್ಕದ ಜನಾಧಿಕಾರ ಕಾರ್ಯಕ್ರಮ ವಿವಿಧ ಸಮುದಾಯಗಳ ಮತ್ತು ಜನಪ್ರತಿನಿಧಿಗಳ ನಡುವಿನ ಜನಸೇವಾ ಅನಾವರಣ ಕಾರ್ಯಕ್ರಮದಲ್ಲಿಯೂ ಸುದ್ದಿ ಜನರ ಧ್ವನಿಯಾಗಿ ಕೆಲಸ ಮಾಡಿದೆ.

ಜನಾಡಳಿತ ನಮ್ಮದು ಈ ಊರು ನಮ್ಮದು, ಇಲ್ಲಿಯ ನೆಲ, ಜಲ, ವಾಯು, ಸಂಪತ್ತು ಎಲ್ಲವೂ ನಮ್ಮದು. ಜನಾಡಳಿತ ನಮ್ಮದು ಈ ಊರು ನಮ್ಮದು, ಇಲ್ಲಿಯ ನೆಲ, ಜಲ, ವಾಯು, ಸಂಪತ್ತು ಎಲ್ಲವೂ ನಮ್ಮದು. ನಮಗಾಗಿ ಕೆಲಸ ಮಾಡಲು ಪಂಚಾಯತ್‌ನಲ್ಲಿ ಪಂಚಾಯತ್ ಸದಸ್ಯರು ಇರುತ್ತಾರೆ. ನಗರ ಸಭೆಯಲ್ಲಿ ಕೌನ್ಸಿಲರ್‌ಗಳು ಇರುತ್ತಾರೆ. ತಾಲೂಕಿನಲ್ಲಿ ನಮಗಾಗಿ ಕೆಲಸ ಮಾಡಲು ತಾ.ಪಂ. ಸದಸ್ಯರು ಇರುತ್ತಾರೆ. ಜಿಲ್ಲೆಯಲ್ಲಿ ಕೆಲಸ ಮಾಡಲು ಜಿ.ಪಂ. ಸದಸ್ಯರು ಇರುತ್ತಾರೆ. ರಾಜ್ಯದಲ್ಲಿ (ವಿಧಾನ ಸಭೆಯಲ್ಲಿ) ಕೆಲಸ ಮಾಡಲು ಶಾಸಕರು ಇರುತ್ತಾರೆ. ಕೇಂದ್ರದಲ್ಲಿ (ಸಂಸತ್‌ನಲ್ಲಿ) ಕೆಲಸ ಮಾಡಲು ಸಂಸದರು ಇರುತ್ತಾರೆ. ಅವರೆಲ್ಲರೂ ನಮ್ಮ ಪರವಾಗಿ ಕೆಲಸ ಮಾಡಲು ನಮ್ಮ ಓಟಿನಿಂದ ಆಯ್ಕೆಯಾಗಿರುತ್ತಾರೆ. ಹೀಗೆ ನಮ್ಮ ಆಡಳಿತ ಹಳ್ಳಿಯಿಂದ ಡೆಲ್ಲಿಗೆ ಹೋಗಲು ಅಲ್ಲಿಯವರೇಗೂ ನಮ್ಮ ಧ್ವನಿ ಮುಟ್ಟಿಸಲು ನಮಗೆ ಬೇಕಾದಂತೆ ವ್ಯವಸ್ಥೆ ಮಾಡಲು ಆಯಾ ಕ್ಷೇತ್ರದಲ್ಲಿ ನಮ್ಮಿಂದ ಆಯ್ಕೆಯಾದ ಪ್ರತಿನಿಧಿಗಳು, ಅಧಿಕಾರಿಗಳು ಇರುತ್ತಾರೆ. ಹೀಗಿರುವಾಗ ನಾವು ಊರಿನ ಎಲ್ಲರೂ ಸೇರಿ ಒಂದಾಗಿ ನಮ್ಮ ಜನಪ್ರತಿನಿಧಿ, ನಮ್ಮ ಆಡಳಿತ ನಮ್ಮದೇ. ಜನಪ್ರತಿನಿಧಿ ನಮ್ಮ ಸೇವೆಗಾಗಿ ಆರಿಸಿ ಬಂದವ. ಅಧಿಕಾರಿ ನಮ್ಮ ಸೇವೆಗಾಗಿ ಇರುವವರು. ಈ ಊರು ನಮ್ಮದು, ಇಲ್ಲಿಯ ನೆಲ, ಜಲ, ವಾಯು, ಸಂಪತ್ತು ಎಲ್ಲವೂ ನಮ್ಮದು. ಇಲ್ಲಿರುವ ಶಾಲೆ, ಸಂಸ್ಥೆ, ಪಂಚಾಯತ್, ಕಟ್ಟಡಗಳು, ಕಛೇರಿಗಳು, ಆಸ್ಪತ್ರೆ, ರಸ್ತೆ, ಸಂಕ ಎಲ್ಲವೂ ನಮಗಾಗಿ ಇರುವಂತದ್ದು. ಅದು ಯಾವುದೇ ಪಕ್ಷದ್ದಲ್ಲ, ವ್ಯಕ್ತಿಯದ್ದಲ್ಲ. ಮುಖ್ಯಮಂತ್ರಿಯವರದ್ದೂ ಅಲ್ಲ. ಪ್ರಧಾನಿಯವರದ್ದೂ ಅಲ್ಲ. ನಮ್ಮ ಊರಿನ ಎಲ್ಲರದ್ದೂ ಆಗಿದೆ. ಊರಿನ ಅಭಿವೃದ್ಧಿ ನಮ್ಮಿಂದಾಗಿ, ನಮಗಾಗಿ ಎಂದು ನಾವು ಗಟ್ಟಿಯಾಗಿ ಹೇಳಿದರೆ, ಘೋಷಣೆ ಮಾಡಿದರೆ ಆ ಧ್ವನಿ ನಮ್ಮ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜಿಲ್ಲೆಗೂ, ರಾಜ್ಯಕ್ಕೂ, ದೇಶಕ್ಕೂ ಮುಟ್ಟುತ್ತದೆ. ಕೆಲಸವೂ ಆಗುತ್ತದೆ. ಹಾಗೆ ಮಾಡಿದರೆ ಊರು ಅಭಿವೃದ್ಧಿಯಾಗುವುದು ಖಂಡಿತವಲ್ಲವೇ?. ನಮ್ಮ ಊರನ್ನು ಹಾಳು ಮಾಡಲು ಯಾರಿಂದಲೂ ಸಾಧ್ಯವೇ?. ಅಲ್ಲಿ ಭ್ರಷ್ಟಾಚಾರ ನಡೆದೀತೆ. ಭ್ರಷ್ಟಾಚಾರ ಮುಕ್ತ ಊರು ನಮ್ಮದಾಗಲಿಕ್ಕಿಲ್ಲವೇ?. ಆ ಕಾರಣಕ್ಕಾಗಿಯಾದರೂ ಮತ್ತು ಮಹಾತ್ಮ ಗಾಂಧಿಯವರ ಗ್ರಾಮಸ್ವರಾಜ್ಯದ, ಹಳ್ಳಿಯಿಂದ ಡೆಲ್ಲಿಗೆ ಆಡಳಿತದ ಆಶಯ ಈಡೇರಲಿಕ್ಕಾದರೂ ಈ ಸಲದ ಸ್ವಾತಂತ್ರ್ಯ ಸಂಭ್ರಮವನ್ನು ಎಲ್ಲರೂ ಸೇರಿ ಒಗ್ಗಟ್ಟಾಗಿ ಆಚರಿಸೋಣ.

ಇಲಾಖೆಯವರ, ಜನಪ್ರತಿನಿಧಿಗಳ ಉತ್ತಮ ಕೆಲಸವನ್ನು ಜನರಿಂದ ಗುರುತಿಸಿ, ಪ್ರೋತ್ಸಾಹಿಸಿ ಭ್ರಷ್ಟಾಚಾರ ನಿರ್ಮೂಲನ ಮಾಡೋಣ
ತಾಲೂಕಿನ ಎಲ್ಲಾ ಇಲಾಖೆಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ನಮಗಾಗಿ ಸೇವೆ ನೀಡುತ್ತಿರುವಾಗ ಅವರಲ್ಲಿ ಉತ್ತಮ ಕೆಲಸ ಮಾಡುವವರನ್ನು ಈ ಸ್ವಾತಂತ್ರ್ಯ ದಿನದಂದು ಗುರುತಿಸಿ ಗೌರವಿಸುವುದು ಪ್ರಜೆಗಳಾದ (ರಾಜರುಗಳಾದ) ನಮ್ಮ ಕರ್ತವ್ಯವಾಗಿದೆ. ಅಮೇರಿಕಾದ ಮಾಜಿ ಅಧ್ಯಕ್ಷ ಸರ್.ಬೆಂಜಮಿನ್ ಫ್ರ್ಯಾಂಕ್ಲಿನ್ ಹೇಳಿದಂತೆ `ಉತ್ತಮ ಕೆಲಸ ಮಾಡುವವರನ್ನು ಗುರುತಿಸಿದರೆ ಅದು ಉತ್ತಮ ಕೆಲಸ ಮಾಡಿದವರಿಗೆ ಪ್ರೋತ್ಸಾಹ ಸಿಗುವುದು ಮಾತ್ರವಲ್ಲ ತಪ್ಪು ಕೆಲಸ ಮಾಡಿದವರಿಗೆ ಮಾನಸಿಕ ಶಿಕ್ಷೆಗೂ ಕಾರಣವಾಗುತ್ತದೆ. ಅಂದರೆ ಉಳಿದವರಿಗೂ ಉತ್ತಮ ಕೆಲಸ ಮಾಡಲು ಪ್ರೋತ್ಸಾಹ ನೀಡಿದಂತೆ ಆಗುತ್ತದೆ.’ ಅದಕ್ಕಾಗಿ ಊರಿನ ಜನರೆಲ್ಲರೂ ಸೇರಿ, ಪ್ರತಿಯೊಂದು ಇಲಾಖೆಯಲ್ಲಿ ಜನತೆಗೆ ಉತ್ತಮ ಸೇವೆ ನೀಡುವ ಅಧಿಕಾರಿ/ಸಿಬ್ಬಂದಿಯವರನ್ನು, ತಾಲೂಕಿನ ಅತ್ಯುತ್ತಮ ಸೇವೆ ನೀಡುವ ಇಲಾಖೆಯನ್ನು ಗುರುತಿಸಿ ಪ್ರೋತ್ಸಾಹಿಸೋಣ. ಹಾಗೆ ಮಾಡಿದರೆ ಆ ಇಲಾಖೆಗಳ ಎಲ್ಲರೂ ಉತ್ತಮ ಕೆಲಸ ಮಾಡುವಂತಾಗಿ ತಾಲೂಕು ಭ್ರಷ್ಟಾಚಾರ ಮುಕ್ತವಾಗುವುದು ಖಂಡಿತ. ಅದೇ ರೀತಿ ಶಾಸಕರು ಮಾಡಿರುವ ಎರಡು ಅತ್ಯುತ್ತಮ ಕೆಲಸವನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡೋಣ. ಅವರು ಮಾಡಲೇ ಬೇಕಾಗಿದ್ದ 2 ಕೆಲಸಗಳನ್ನು ಗುರುತಿಸಿ ಜನರ ಧ್ವನಿಯಾಗಿ ಅದನ್ನು ಮಾಡಲು ಒತ್ತಾಯಿಸೋಣ, ಸಹಕಾರ ನೀಡೋಣ. ಅದರೊಂದಿಗೆ ಅತ್ಯಂತ ಕೆಟ್ಟದಾಗಿರುವ 1 ಕೆಲಸವನ್ನು ಗುರುತಿಸಬಹುದು. ಅದು ಮುಂದಕ್ಕೆ ಎಚ್ಚರಿಕೆಯಾಗಿ ಪ್ರಯೋಜನವಾಗಬಹುದು. (ಇದನ್ನು ಪ್ರತೀ ಪಂಚಾಯತ್‌ನಲ್ಲೂ ಮಾಡಬಹುದು. 2 ಉತ್ತಮ ಕೆಲಸ, 2 ಆಗಬೇಕಾದ ಕೆಲಸ, ಕೆಟ್ಟದಾಗಿ ಆಗಿರುವ ಒಂದು ಕೆಲಸ.) ಇದು ಜನರ ಧ್ವನಿಯಾಗಿ ಬರಬೇಕೇ ಹೊರತು ಯಾವುದೇ ಪಕ್ಷದ, ಆಡಳಿತದ ಧ್ವನಿಯಾಗಬಾರದು.

ಸ್ವಾತಂತ್ರ್ಯದ ಆಚರಣೆಯ ಬಗ್ಗೆ ಒಂದು ಮಾಹಿತಿ ಮತ್ತು ವಿಮರ್ಶೆ:
75ನೇ ಸ್ವಾತಂತ್ರ್ಯದ ಅನುಭವವನ್ನು ಊರಿನ ಎಲ್ಲರೂ ಒಗ್ಗಟ್ಟಾಗಿ, ಒಟ್ಟಾಗಿ ಸಂಭ್ರಮಿಸಬೇಕು ಎಂಬುವುದು ನಮ್ಮ ಉದ್ದೇಶ. ಅದಕ್ಕಾಗಿ ಸರಳವಾಗಿ ಖರ್ಚಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಮಾಡಬಹುದಾದ ಕೆಲವು ಅಭಿಪ್ರಾಯಗಳನ್ನು ಜನರ ಮುಂದಿಡುತ್ತಿದ್ದೇನೆ. ಸ್ವಾಂತಂತ್ರ್ಯವನ್ನು ಊರಿನ ಎಲ್ಲರೂ ಸೇರಿ ಗಮ್ಮತ್ತಿನಲ್ಲಿ ಆಚರಿಸೋಣ. ನಾವೆಲ್ಲರೂ ಒಂದು, ಈ ಊರು ನಮ್ಮದು, ಆಡಳಿತ ನಮ್ಮದು ಎಂದು ಹೇಳೋಣ. ಅದುವೇ ಸ್ವಾತಂತ್ರ್ಯದ ಘೋಷಣೆ ಮತ್ತು ಆಚರಣೆ. ಅದು ಊರಿನ ಪ್ರತಿಯೊಬ್ಬನ ಕಾರ್ಯಕ್ರಮವಾಗಲಿಕ್ಕಾಗಿ ಕೆಲವು ಆಚರಣೆಗಳನ್ನು ಈ ಕೆಳಗೆ ನೀಡಿದ್ದೇನೆ. ಅದುವೇ ಸಾಮೂಹಿಕ ಓಟ ಅಥವಾ ನಡಿಗೆ, ಆಟ, ಸಾಂಸ್ಕೃತಿಕ ಚಟುವಟಿಕೆ, ತಿಂಡಿ ಮತ್ತು ಊಟ, ಗ್ರಾ.ಪಂ.ನ ಸಾಧಕರಿಗೆ ಸನ್ಮಾನ, ಊರಿನ ಬಗ್ಗೆ ಮತ್ತು ಸ್ವಾತಂತ್ರ್ಯದ ಕುರಿತು ಘೋಷಣೆ ಮತ್ತು ಅಭಿವೃದ್ಧಿಯ ಚಿಂತನೆ.

1. 75ನೇ ಸ್ವಾತಂತ್ರ್ಯದ ದಿನ ಬೆಳಿಗ್ಗೆ ೭ರಿಂದ ೮ ಗಂಟೆಯವರೇಗೆ ಸ್ವಾತಂತ್ರ್ಯದ ನಡಿಗೆ ಅಥವಾ ಓಟ. ಇದಕ್ಕೆ ಏನೂ ಖರ್ಚಿಲ್ಲ. ವಿಶೇಷ ತಯಾರಿಯೂ ಬೇಕಾಗಿಲ್ಲ. ಅವರವರ ಮನೆಯಿಂದ, ವಾರ್ಡ್‌ನಿಂದ ಅಥವಾ ಸಾರ್ವಜನಿಕ ಸ್ಥಳದಿಂದ ಸಾಧ್ಯವಾದಷ್ಟು ಜನರು ನಿರ್ದಿಷ್ಟ ದೂರದವರೇಗೆ ಅಥವಾ ಸಮಯದವರೇಗೆ ನಡೆಯುವುದು ಅಥವಾ ಓಡುವುದು. ಅದನ್ನು ಸ್ವಾತಂತ್ರ್ಯದ ಘೋಷಣೆಯೊಂದಿಗೆ ಫಲಕಗಳನ್ನು ಹಿಡಿದುಕೊಂಡು ಅಥವಾ ಹಿಡಿಯದೆಯೂ ಮಾಡಬಹುದು. ಅದರ ಚಿತ್ರೀಕರಣ ಮಾತ್ರ ಮಾಡಿಕೊಳ್ಳಬೇಕು. ಅದನ್ನು ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸರಿಸಲಾಗುವುದು, ಪತ್ರಿಕೆಯಲ್ಲಿ ಮುದ್ರಿಸಲಾಗುವುದು.

2. ತಮ್ಮ ದಿನ ನಿತ್ಯದ ಕೆಲಸಗಳನ್ನು, ಸ್ವಾತಂತ್ರ್ಯದ ಆಚರಣೆಗಳನ್ನು ಮುಗಿಸಿಕೊಂಡು ಒಟ್ಟಾಗಿ ಎಲ್ಲರು ಸೇರಿ ಒಂದು ಕಡೆ ಅಥವಾ ಹಲವು ಕಡೆ 9ರಿಂದ 10.30ರ ವರೇಗೆ ತಿಂಡಿ ತಿನಿಸುಗಳನ್ನು ಮಾಡುವುದು. ಆ ಅನುಭವವನ್ನು ಸಂಭ್ರಮಿಸುವುದು, ಚಿತ್ರೀಕರಿಸಿಕೊಳ್ಳುವುದು. ತಿಂಡಿ ಅವರವರ ಮನೆಯಿಂದ ತರಬಹುದು ಅಥವಾ ಎಲ್ಲರೂ ಸೇರಿಕೊಂಡು ಮಾಡಿ ಹಂಚಿಕೊಂಡು ತಿನ್ನಬಹುದು. ಆ ಊರಿನ ಎಲ್ಲರೂ ಬೆಳಿಗ್ಗೆಯ ತಿಂಡಿ ಮಾಡಿಯೇ ಮಾಡುತ್ತಾರೆ. ಆ ಊರಿನ ಎಲ್ಲರೂ ಒಟ್ಟಿಗೆ ಸೇರಿ ಹಂಚಿಕೊಂಡು ಮಾಡುವುದೇ ಅದರ ಉದ್ದೇಶ ಹೊರತು ಅದು ಯಾರಿಗೂ ಹೊರೆಯಾಗಬಾರದು, ಖರ್ಚಿಗೆ ಹೊಣೆಗಾರಿಕೆಗೆ ದಾರಿ ಆಗಬಾರದು. ಮನಃ ಪೂರ್ವಕವಾಗಿ ಮಾಡುವ ಕೆಲಸವಾಗಬೇಕು.

3. ತಿಂಡಿ ತಿಂದ ನಂತರ ಅಪರಾಹ್ನ 12 ಗಂಟೆಯವರೇಗೆ ಸಮಯ ವಿರುವುದರಿಂದ ಆ ಸಮಯವನ್ನು ಮರೆತು ಹೋಗಿರುವ ಗ್ರಾಮೀಣ ಆಟಗಳು, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಊರಿನ ಎಲ್ಲರೂ ಸಂಭ್ರಮಿಸುವುದು. ಉದಾ: ಸಂಗೀತ ಕುರ್ಚಿ, ಬುಗರಿಯಾಟ, ಕಲ್ಲಾಟ, ಅಟ್ಟಮುಟ್ಟಾ, ಕಡ್ಡಿಯಾಟ, ಉಪ್ಪುಗೋಣಿ, ಗುಂಡಿಕಲ್ಲು, ಲಗೋರಿ, ಗುರಿಗೆ ಕಲ್ಲೆಸೆತ, ರಿಂಗ್, ಬಾಲ್ ಹಿಡಿಯುವಂತದ್ದು, ಚೆನ್ನೆಮಣೆ, ಗೋಳಿಯಾಟ, ಕಳ್ಳ ಪೊಲೀಸ್ ಆಟ, ಗೇರುಬೀಜ ಆಟ, ಕುಂಟಿಬಿಲ್ಲೆ, ಅಂತಾಕ್ಷರಿ, ಹಾಡು, ಕಥೆ, ಸಣ್ಣ ಮಟ್ಟಿನ ನೃತ್ಯ, ಏಕಾಭಿನಯ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಊರಿನ ಮಕ್ಕಳಿಂದ ಹಿಡಿದು ವಯೋವೃದ್ಧರಿಗೆ, ಮಹಿಳೆಯರಿಗೆ ಎಲ್ಲರಿಗೂ ಮನರಂಜನೆ ನೀಡುವಂತಹ, ಭಾಗವಹಿಸುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬಹುದು. ಅದು ಊರಿನ ಒಳಗಿನ ಅಂದರೆ ಕುಟುಂಬದ ಒಳಗಿನ ಮನರಂಜನೆ ಕಾರ್ಯಕ್ರಮದಂತೆ ಆಗಬೇಕು. ಇದನ್ನು ಅಲ್ಲಲ್ಲಿ ಮಾಡಬಹುದು.

4. 12ರಿಂದ 1.00ರವರೆಗೆ ಊರಿನ ಹತ್ತು ಸಾಧಕರ ಸನ್ಮಾನ, ಊರಿನ ಅಭಿವೃದ್ಧಿಗೆ ಕೊಡುಗೆ ಕೊಟ್ಟವರ ಗುರುತಿಸುವಿಕೆ ಮತ್ತು ಸ್ಮರಣೆ. ಸ್ವಾತಂತ್ರ್ಯದ ಘೋಷಣೆ, ನಮ್ಮ ಊರು, ನಮ್ಮ ನೆಲ, ಜಲ, ವಾಯು, ಸಂಪತ್ತು ಎಲ್ಲವೂ ನಮ್ಮದು ಅದನ್ನು ರಕ್ಷಿಸುವುದು, ಉಳಿಸುವುದು, ಅಭಿವೃದ್ಧಿ ಪಡಿಸುವುದು ನಮ್ಮ ಕರ್ತವ್ಯ, ಹಕ್ಕು ಮತ್ತು ಜವಾಬ್ದಾರಿ, ಭ್ರಷ್ಟಾಚಾರ ಮುಕ್ತ ಊರು ನಮ್ಮದಾಗಲಿ ಎಂಬ ಸಾಮೂಹಿಕ ಘೋಷಣೆ. ಆ ನಿಟ್ಟಿನಲ್ಲಿ ಇತರ ಯಾವುದೇ ಜನಪರ ಘೋಷಣೆಗಳು.

5. 1ರಿಂದ 2.30ರವರೇಗೆ ಸಾಮೂಹಿಕ ಊಟ. ಅದು ಕೂಡ ತಿಂಡಿ ತಿನಿಸು ಮಾಡಿದಂತೆ ಊರಿನ ಎಲ್ಲರ ಭಾಗವಹಿಸುವಿಕೆಯಿಂದ ಕೊಡುಗೆಯಿಂದ ಒಟ್ಟಾಗಿ ಯಾವುದೇ ಜಾತಿ, ಧರ್ಮ, ಮೇಲು ಕೀಳು, ಪಕ್ಷ ಭೇದವಿಲ್ಲದೆ ನಡೆಯುವಂತಿರಬೇಕು. ಏನನ್ನು ಸೇವಿಸುತ್ತೇವೆ ಎಂಬುದಕ್ಕಿಂತ ಎಲ್ಲರೂ ಒಟ್ಟಾಗಿ ಊಟ ಮಾಡಿದ್ದೇವೆ ಎಂಬುವುದೇ ಮುಖ್ಯವಾಗಬೇಕು.

ಈ ರೀತಿಯ ಕಾರ್ಯಕ್ರಮದಲ್ಲಿ ಆಯಾ ಗ್ರಾಮದವರು ತಮಗೆ ಬೇಕಾದಂತೆ ಚಟುವಟಿಕೆಗಳಲ್ಲಿ ವ್ಯತ್ಯಾಸವನ್ನು ಮಾಡಬಹುದು. ಆದರೆ ಅದು ಎಲ್ಲದರ ಚಿತ್ರೀಕರಣ ಮಾತ್ರ ಮುಖ್ಯ. ಅದನ್ನು ಅಂದಿನ ದಿವಸ ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಸನ್ಮಾನಿತ ಗ್ರಾಮಸ್ಥರ ಫೊಟೋ ಮತ್ತು ವೀಡಿಯೋವನ್ನು ಪ್ರಸಾರ ಮಾಡಲಾಗುವುದು. ಹಾಗೆಯೇ ತಾಲೂಕಿನ ಪ್ರತಿಯೊಂದು ಇಲಾಖೆಯ ಜನಮೆಚ್ಚಿದ ಅಧಿಕಾರಿಯ ಅಥವಾ ಸಿಬ್ಬಂದಿಯ ಹೆಸರನ್ನು, ಜನ ಮೆಚ್ಚಿದ ಇಲಾಖೆಯನ್ನು ಘೋಷಿಸಲಾಗುವುದು. ಶಾಸಕರು ಮಾಡಿರುವ ಅತ್ಯುತ್ತಮ ಎರಡು ಕೆಲಸವನ್ನು, ಮಾಡಲೇ ಬೇಕಾಗಿರುವ ಎರಡು ಕೆಲಸಗಳನ್ನು ಘೋಷಿಸಲಾಗುವುದು. ಈ ಮೇಲಿನ ಎಲ್ಲಾ ವಿಚಾರಗಳನ್ನು ಸಾರ್ವಜನಿಕರ ಓಟಿನ ಮುಖಾಂತರ ಆಯ್ಕೆ ಮಾಡಲಾಗುವುದು. ಅದು ಜನಾಭಿಪ್ರಾಯವೇ ಆಗಿರುತ್ತದೆ. ಈ ಮೇಲಿನ ಎಲ್ಲಾ ಕಾರ್ಯಕ್ರಮಗಳು 75ನೇ ಸ್ವಾತಂತ್ರ್ಯ ವರ್ಷಕ್ಕೆ ಅರ್ಥವನ್ನು ಕೊಡುವುದು ಮಾತ್ರವಲ್ಲ ಅದನ್ನು ಜನರ ಸ್ವಾತಂತ್ರ್ಯವನ್ನಾಗಿ ಮಾಡುತ್ತದೆ ಮತ್ತು ಮಾಡಬೇಕು ಎಂಬುವುದೇ ನಮ್ಮ ಆಶಯ.

About The Author

Related posts

1 Comment

  1. ನಿರಂಜನ್ ಅಜ್ಜಾವರ

    ಅತ್ಯುತ್ತಮ ಕಾರ್ಯಕ್ರಮ. ಸಂಪಾದಕೀಯ ಲೇಖನ ಅಭಿನಂದನಾರ್ಹ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.