HomePage_Banner
HomePage_Banner

ನಿರ್ವಹಣೆಯಿಲ್ಲದೆ ಹಾಳಾದ ಲಕ್ಷಾಂತರ ರೂ.ನ ದೋಣಿ – ಏಳೇ ವರ್ಷದಲ್ಲಿ ಉಪಯೋಗಕ್ಕಿಲ್ಲದಂತಾಯಿತು ಫೈಬರ್ ಬೋಟ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ನೆರೆ ಬಾಧಿತ ಪ್ರದೇಶವಾದ ಉಪ್ಪಿನಂಗಡಿಯಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಉಪಯೋಗವಾಗಲೆಂದು ದ.ಕ. ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರವು ನೀಡಿದ್ದ ಫೈಬರ್ ದೋಣಿಯು ಏಳೇ ವರ್ಷದಲ್ಲಿ ಉಪಯೋಗ ಶೂನ್ಯವಾಗಿದೆ. ನಿರ್ವಹಣೆಯ ಕೊರತೆಯೇ ಲಕ್ಷಾಂತರ ರೂ. ಮೌಲ್ಯದ ಈ ದೋಣಿ ಹಾಳಾಗಲು ಪ್ರಮುಖ ಕಾರಣವಾಗಿದ್ದು, ಈ ದೋಣಿ ಇನ್ನೇನಿದ್ದರೂ, ಪ್ರದರ್ಶನಕಷ್ಟೇ ಸೀಮಿತವಾಗುವ ಸಾಧ್ಯತೆ ಇದೆ.

ಸಂಗಮ ಕ್ಷೇತ್ರವೆಂದು ಪ್ರಸಿದ್ಧವಾದ ಉಪ್ಪಿನಂಗಡಿಯು ಮಳೆಗಾಲದಲ್ಲಿ ನೆರೆ ಪೀಡಿತವಾಗುವ ಪ್ರದೇಶ. ನದಿಗಳ ಉಗಮ ಸ್ಥಾನದಲ್ಲಿ ಉತ್ತಮ ಮಳೆಯಾದರೆ ಉಪ್ಪಿನಂಗಡಿಯಲ್ಲಿ ನೇತ್ರಾವತಿ, ಕುಮಾರಧಾರ ನದಿಗಳು ಉಕ್ಕೇರಿ ಹರಿಯುತ್ತವೆ. ಪ್ರವಾಹ ಬಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಪವಿತ್ರ ಸಂಗಮ ಘಟಿಸಿತ್ತೆಂದರೆ, ಇಲ್ಲಿನ ಪಂಜಳ, ಹಿರ್ತಡ್ಕ -ಮಠ, ಹಳೆಗೇಟು, ಕೂಟೇಲು, ಕಡವಿನ ಬಾಗಿಲು, ದೇವಸ್ಥಾನ ಹೀಗೆ ನದಿ ಪಾತ್ರದ ಪ್ರದೇಶಗಳಲ್ಲದೆ, ನದಿಯನ್ನು ಸಂಪರ್ಕಿಸುವ ತೋಡುಗಳ ಬಳಿಯಿರುವ ಪ್ರದೇಶಗಳೂ ಸಂಪೂರ್ಣ ಜಲಾವೃತಗೊಳ್ಳುತ್ತವೆ. ಉಪ್ಪಿನಂಗಡಿಯು ನೆರೆ ಪೀಡಿತ ಪ್ರದೇಶವಾದರೂ, ನೆರೆ ಬಾಧಿತವಾದ ಸಂದರ್ಭ ರಕ್ಷಣಾ ಕಾರ್ಯಕ್ಕೆ ಇಲ್ಲಿ ಬೋಟ್‌ನ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ‘`ಇಲ್ಲಿಗೊಂದು ಬೋಟ್ ಕೊಡಿ…. ಇಲ್ಲಿಗೊಂದು ಬೋಟ್ ಕೊಡಿ….” ಎಂಬ ಕೂಗು ಪ್ರಾಕೃತಿಕ ವಿಕೋಪ ಮುಂಜಾಗೃತ ಸಭೆಯಲ್ಲಿ ನಿತ್ಯ ನಿರಂತರವಾಗಿ ಕೇಳಿ ಬರುತ್ತಿತ್ತು. ಒಂದೆರಡು ಅವಘಡಗಳು ಇಲ್ಲಿ ಘಟಿಸಿದ ಬಳಿ 2014ರಲ್ಲಿ ಇಬ್ರಾಹೀಂ ಅವರು ದ.ಕ. ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ದ.ಕ. ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರದ ವತಿಯಿಂದ ಇಲ್ಲಿಗೊಂದು ಫೈಬರ್ ಬೋಟನ್ನು ನೀಡಲಾಯಿತು.

2014ರಿಂದ 2020ರವರೆಗೆ ಸೇವೆ ನೀಡಿದ್ದ ಈ ಫೈಬರ್ ಬೋಟ್ ಈ ಬಾರಿ ಮಾತ್ರ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಲಕ್ಷಾಂತರ ರೂಪಾಯಿಯ ಈ ಬೋಟ್ ಬಾಳಿಕೆ ಬಂದಿದ್ದು ಮಾತ್ರ ಆರು ವರ್ಷಗಳು ಮಾತ್ರ. ಈ ಬೋಟ್‌ನ ಒಳಗಿನ ಪ್ಲಾಟ್‌ಫಾರಂ ಮೇಲೆ ಈಗ ನಡೆಯುವಾಗ ಅದರೊಳಗೆ ನೀರು ತುಂಬಿಕೊಂಡು ಸ್ಪಂಜಿನ ಮೇಲೆ ನಡೆದಂತೆ ಭಾಸವಾಗುತ್ತದೆ. ಅದಕ್ಕೆ ಜೋಡಿಸಿರುವ ಮರದ ಹಲಗೆಗಳು ಅಲ್ಲಲ್ಲಿ ಮುರಿದು ಹೋಗಿವೆ. ಬೋಟಿನಲ್ಲಿ ಒಬಿಎಂ ಮೆಷಿನ್ ಇಡುವ ಜಾಗ ಕೂಡಾ ಸಂಪೂರ್ಣ ಶಿಥಿಲಾವಸ್ಥೆಯನ್ನು ಮರದ ಜೋಡಣೆಗಳು ಕಿತ್ತು ಹೋಗಿವೆ. ಒಟ್ಟಿನಲ್ಲಿ ಈ ಬೋಟನ್ನು ಈಗ ಚಲಾಯಿಸಿಕೊಂಡು ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ.

ಈ ಬೋಟ್ ಈ ಅವಸ್ಥೆಗೆ ತಲುಪಲು ನಿರ್ವಹಣೆ ಕೊರತೆಯೇ ಮುಖ್ಯ ಕಾರಣ. ವರ್ಷದ ಎಲ್ಲಾ ದಿನಗಳಲ್ಲಿಯೂ ಈ ಬೋಟ್ ನದಿಯಲ್ಲಿಯೇ ಇರುತ್ತಿತ್ತು. ಬೇಸಿಗೆಯಲ್ಲಿ ನದಿಯು ನೀರಿಲ್ಲದೆ ಬತ್ತಿ ಹೋಗಿದ್ದರೂ, ಬೋಟ್ ಮಾತ್ರ ಮರಳ ಮೇಲೆ ಬಿದ್ದುಕೊಂಡಿರುತ್ತಿತ್ತು. ಇದರ ಮೇಲೆ ಒಂದು ಮಾಡು ಮಾಡಿ ಈ ಬೋಟನ್ನು ಬಿಸಿಲಿನಿಂದ ರಕ್ಷಿಸುವ ಕೆಲಸವೂ ನಡೆದಿರಲಿಲ್ಲ. ನದಿಯಲ್ಲಿ ನೀರು ಬರುವಾಗ ಈ ಬೋಟ್ ಕೂಡಾ ಮೇಲೆ ಬರುತ್ತಿತ್ತು. ಒಂದೊಮ್ಮೆ ಸಂಗಮವಾಗಿ ದೇವಾಲಯದ ವಠಾರಕ್ಕೆ ನೀರು ಪ್ರವೇಶಿದರೆ, ಈ ಬೋಟನ್ನು ಅಲ್ಲಿಗೆ ತರಲಾಗುತ್ತಿತ್ತು. ಬಳಿಕ ನದಿಯಲ್ಲಿ ನೀರು ಇಳಿಕೆಯಾದಾಗ ದೇವಾಲಯದ ವಠಾರದಿಂದ ಕ್ರೇನ್‌ನ ಸಹಾಯದಿಂದ ಎತ್ತಿ ನೀರಿಗೆ ಹಾಕಲಾಗುತ್ತಿತ್ತು. ಈ ಬೋಟ್‌ಗೆ ವರ್ಷದಲ್ಲಿ ಮೂರು ತಿಂಗಳಿಗೆ ಮಾತ್ರ ಅಪರೇಟರ್‌ನನ್ನು ಕಂದಾಯ ಇಲಾಖೆ ನೇಮಕ ಮಾಡುತ್ತದೆ. ಆದ್ದರಿಂದ ಬಳಿಕದ ದಿನಗಳಲ್ಲಿ ಅಪರೇಟರ್ ಇಲ್ಲದೆ ಬೋಟ್ ಅನಾಥ ಸ್ಥಿತಿಯಲ್ಲಿರುತ್ತದೆ. ಈ ಫೈಬರ್ ಬೋಟ್ ಡ್ಯಾಮೇಜ್ ಆಗಲು ಇವೆಲ್ಲವೂ ಕಾರಣವಾಗಿರುವ ಸಾಧ್ಯತೆ ಇದೆ. ಅಂದು ಈ ಬೋಟ್ ನೀಡುವಾಗ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಇಡುವಂತೆ ಜಿಲ್ಲಾಡಳಿತ ತಿಳಿಸಿದ್ದು, ಈ ಬೋಟ್ ಅನ್ನು ನಿರ್ವಹಣೆ ಮಾಡುವಂತೆ ಅಧಿಕಾರಿಗಳು ದೇವಾಲಯದ ಆಡಳಿತಕ್ಕೆ ಮೌಖಿಕವಾಗಿ ತಿಳಿಸಿದ್ದರು. ಅದರಂತೆ ದೇವಸ್ಥಾನದ ಆಡಳಿತವು ಬೋಟ್‌ನ ಒಬಿಎಂ ಮೆಷಿನ್ ಅನ್ನು ರಕ್ಷಿಸುವ ಜವಾಬ್ದಾರಿ ಮಾಡುತ್ತಿತ್ತು. ಬಳಿಕ ಅದು ಕೆಟ್ಟು ಹೋಗಿದ್ದು, ಸುಮಾರು ೭೦ ಸಾವಿರ ರೂ. ವೆಚ್ಚ ಭರಿಸಿ, ಗೃಹ ರಕ್ಷಕ ದಳದವರು ಅದನ್ನು ರಿಪೇರಿ ಮಾಡಿಸಿ, ಅವರ ಪ್ರಾಕೃತಿಕ ವಿಕೋಪ ರಕ್ಷಣಾ ತಂಡದಲ್ಲಿರುವ ರಬ್ಬರ್ ಬೋಟ್‌ಗೆ ಸಿಕ್ಕಿಸಿದ್ದಾರೆ. ಈಗ ಇದರ ನಿರ್ವಹಣೆಯನ್ನೂ ಅವರೇ ಮಾಡುತ್ತಿದ್ದಾರೆ.

ಫೈಬರ್ ಬೋಟ್‌ಗಿಂತ ರಬ್ಬರ್ ಬೋಟೇ ಪ್ರವಾಹ ರಕ್ಷಣೆಯ ಸಂದರ್ಭದಲ್ಲಿ ಇಲ್ಲಿ ಹೆಚ್ಚು ಉಪಕಾರಕ್ಕೆ ಬರುತ್ತಿದೆ. ಯಾಕೆಂದರೆ ಬೇರೆ ಕಡೆಗಳಲ್ಲಿ ನೆರೆ ಬಂದರೂ ಇದನ್ನು ಅಲ್ಲಿಗೆ ತಕ್ಷಣವೇ ಸ್ಥಳಾಂತರಿಸಲೂ ಸಾಧ್ಯವಿದೆ. ಆದರೆ ಈ ಘನ ಗಾತ್ರದ ಫೈಬರ್ ಬೋಟನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸ್ಥಳಾಂತರಿಸಲು ಕ್ರೇನ್ ಸಹಾಯವೇ ಬೇಕು. ಆದ್ದರಿಂದ ಉಪಯೋಗಕ್ಕಿಲ್ಲದಂತಿರುವ ಈ ಫೈಬರ್ ಬೋಟ್‌ನ ಬದಲಾಗಿ ಇಲ್ಲಿಗೆ ರಬ್ಬರ್ ಬೋಟೊಂದನ್ನು ನೀಡಬೇಕು. ಅದರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಗ್ರಾ.ಪಂ.ಗೆ ಅಥವಾ ಇನ್ಯಾವುದಾದರೂ ಸಂಸ್ಥೆಗಳಿಗೆ ವಹಿಸಬೇಕು ಎನ್ನುವುದೇ ಸಾರ್ವಜನಿಕರ ಆಗ್ರಹವಾಗಿದೆ.

ಲಕ್ಷಾಂತರ ರೂಪಾಯಿಯ ದೋಣಿ ಕೆಲವೇ ವರ್ಷಗಳಲ್ಲಿ ಉಪಯೋಗಕ್ಕೆ ಬಾರದಂತೆ ಆಗಿದ್ದು ಅಧಿಕಾರಿಗಳ ಬೇಜಾವಬ್ದಾರಿಯಿಂದ. ಕಟ್ಟುನಿಟ್ಟಾಗಿ ಯಾರಿಗಾದರೂ ಇದರ ನಿರ್ವಹಣೆಯ ಹೊಣೆ ವಹಿಸಬೇಕಾಗಿತ್ತು. ಆದರೆ ಅದು ಇಲ್ಲಿ ಆಗಿಲ್ಲ. ಸರಿಯಾದ ನಿರ್ವಹಣೆಯಿಲ್ಲದೆ ಈ ದೋಣಿ ಇಂದು ಉಪಯೋಗಶೂನ್ಯವಾಗುವಂತಾಗಿದೆ. ಇದರಲ್ಲಿ ರಕ್ಷಣಾ ಕಾರ್ಯ ಕೈಗೊಂಡರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯ ಸಂಗಮ ಕ್ಷೇತ್ರವು ಪಿಂಡ ಪ್ರಧಾನಕ್ಕೆ ಪ್ರಸಿದ್ಧಿಯನ್ನು ಪಡೆದಿರುವುದರಿಂದ ದೇವಾಲಯದ ಬಳಿ ದೋಣಿಯ ಅಗತ್ಯತೆ ಮಳೆಗಾಲದ ನಂತರವೂ ನದಿಯಲ್ಲಿ ಹೆಚ್ಚು ನೀರಿರುವ ತನಕ ಇರುತ್ತದೆ. ಇಲ್ಲಿ ಈಗ ಗೃಹರಕ್ಷಕ ದಳದವರನ್ನೊಳಗೊಂಡ ಪ್ರಾಕೃತಿಕ ವಿಕೋಪ ರಕ್ಷಣಾ ತಂಡದಲ್ಲಿ ಅವರ ರಬ್ಬರ್ ದೋಣಿಯೊಂದು ಇದ್ದರೂ, ಅದು ಇಲ್ಲಿರುವುದು ಮಳೆಗಾಲದ ಮೂರೇ ತಿಂಗಳು. ನೆರೆ ಬಂದಾಗ ಇತರ ಪ್ರದೇಶಗಳಿಗೂ ಅದನ್ನು ಕೊಂಡೊಯ್ಯಲಾಗುತ್ತದೆ. ಆದ್ದರಿಂದ ಇಲ್ಲಿ ಎರಡು ದೋಣಿಗಳ ಅವಶ್ಯಕತೆ ಇದ್ದೇ ಇದೆ. ಈಗ ಫೈಬರ್ ದೋಣಿಯು ಬಳಕೆಗೆ ಯೋಗ್ಯವಲ್ಲದಿರುವುದರಿಂದ ಜಿಲ್ಲಾಡಳಿತ ಇಲ್ಲಿಗೆ ಇನ್ನೊಂದು ರಬ್ಬರ್ ಬೋಟನ್ನು ನೀಡಬೇಕು. ಅದರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಗ್ರಾ.ಪಂ.ಗೆ ಅಥವಾ ದೇವಸ್ಥಾನಕ್ಕೆ ಕಟ್ಟುನಿಟ್ಟಾಗಿ ವಹಿಸಿಕೊಡಬೇಕು. ಇದಕ್ಕೆ ಅಪರೇಟರನ್ನು ಮಳೆಗಾಲದ ಮೂರು ತಿಂಗಳಿಗೆ ನೇಮಿಸದೇ ನದಿಯಲ್ಲಿ ಹೆಚ್ಚು ನೀರಿರುವ ತನಕ ಉಳಿಸಿಕೊಳ್ಳಬೇಕು. ಅವರಿಗೆ ಪ್ರಾಕೃತಿಕ ವಿಕೋಪ ನಿಧಿಯಿಂದ ನೀಡಬೇಕು – ರೂಪೇಶ್ ರೈ ಅಲಿಮಾರ್ ದ.ಕ. ಜಿಲ್ಲಾ ಸಂಚಾಲಕರು, ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.