HomePage_Banner
HomePage_Banner

ಇಚ್ಲಂಪಾಡಿ ಗ್ರಾಮಕರಣಿಕರ ಕಚೇರಿಗೆ ಇಲ್ಲ ರಕ್ಷಣೆ – ಒದ್ದೆಯಾಗುತ್ತಿರುವ ದಾಖಲೆ…ಸೋರುತ್ತಿರುವ ಕೊಠಡಿಯೊಳಗೆ ಕರ್ತವ್ಯ ನಿರ್ವಹಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವರದಿ: ಹರೀಶ್ ಬಾರಿಂಜ

  • ಹೊಸ ಕಟ್ಟಡ ಕಾಮಗಾರಿ ಅಪೂರ್ಣ
  • ವಸತಿಗೃಹಕ್ಕೆ ಜಾಗ ಕಾದಿರಿಸಿದ್ದರೂ ಕಟ್ಟಡ ನಿರ್ಮಾಣಕ್ಕೆ ಮುಂದೆ ಬಾರದ ಕಂದಾಯ ಇಲಾಖೆ

ನೆಲ್ಯಾಡಿ: ಮಳೆ ನೀರಿನಿಂದ ಒದ್ದೆಯಾಗುತ್ತಿರುವ ದಾಖಲೆಗಳು…ಸೋರುತ್ತಿರುವ ಕೊಠಡಿಯೊಳಗೆ ಕರ್ತವ್ಯ ನಿರ್ವಹಣೆ…ಇದು ನೇರ್ಲದಲ್ಲಿರುವ ಇಚ್ಲಂಪಾಡಿ ಗ್ರಾಮಕರಣಿಕರ ಕಚೇರಿಯ ದುಸ್ಥಿತಿಯಾಗಿದೆ. ಇಲ್ಲಿ ಕೌಕ್ರಾಡಿ ಗ್ರಾಮ ಪಂಚಾಯತ್‌ನಿಂದ ಗ್ರಾಮಕರಣಿಕರ ಕಚೇರಿಗೆ ಹೊಸ ಕಟ್ಟಡ ನಿರ್ಮಾಣಗೊಂಡಿದ್ದರೂ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಗ್ರಾಮ ಲೆಕ್ಕಿಗರಿಗೆ ಗಾಳಿ ಮಳೆಯಿಂದ ರಕ್ಷಣೆ ಇಲ್ಲದ ಕಚೇರಿಯಲ್ಲಿಯೇ ಕೆಲಸ ಮಾಡಬೇಕಾದ ಅನಿವಾರ್ಯತೆ ಒದಗಿಬಂದಿದೆ. ಗ್ರಾಮಕರಣಿಕರ ವಸತಿಗೃಹಕ್ಕೆ ೧೧ ಸೆಂಟ್ಸ್ ಜಾಗ ಕಾದಿರಿಸಿದ್ದರೂ ಕಂದಾಯ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಮುಂದೆ ಬರುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಇಚ್ಲಂಪಾಡಿಯಲ್ಲಿ ಈ ಹಿಂದೆ ಗ್ರಾಮಕರಣಿಕರ ಕಚೇರಿ, ಪಶುಚಿಕಿತ್ಸಾಲಯ ಹಾಗೂ ಅಂಚೆ ಕಚೇರಿ ನೇರ್ಲದಲ್ಲಿರುವ ಗ್ರಾಮ ಪಂಚಾಯತ್ ಕಟ್ಟಡದಲ್ಲಿತ್ತು. ಈ ಕಟ್ಟಡ ನಾದುರಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನಿರ್ಮಾಣಗೊಳಿಸುವ ಉದ್ದೇಶದೊಂದಿಗೆ ಹಳೆ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಇಲ್ಲಿದ್ದ ಪಶು ಚಿಕಿತ್ಸಾಲಯವನ್ನು ಇಚ್ಲಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಅಂಚೆ ಕಚೇರಿಯು ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಗ್ರಾಮಕರಣಿಕರ ಕಚೇರಿಯು ನೇರ್ಲ ಪೇಟೆಯಲ್ಲಿರುವ ಸ್ಯಾಮುಕುಟ್ಟಿ ಎಂಬವರ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡಿತು. ಸ್ಯಾಮುಕುಟ್ಟಿಯವರು ೧ ವರ್ಷದ ಅವಧಿಗೆ ಗ್ರಾಮಕರಣಿಕರ ಕಚೇರಿಗೆ ಉಚಿತವಾಗಿ ಕೊಠಡಿಯೊಂದನ್ನು ನೀಡಿದ್ದರು. ಈಗ ಒಂದೂವರೇ ವರ್ಷ ಕಳೆದರೂ ಗ್ರಾಮಕರಣಿಕರ ಕಚೇರಿ ಇಲ್ಲಿಂದ ಸ್ಥಳಾಂತರಗೊಂಡಿಲ್ಲ. ಈಗ ಗಾಳಿ, ಮಳೆ ಬಂದಲ್ಲಿ ಮಳೆ ನೀರು ಕಚೇರಿಯೊಳಗೆ ಬಂದು ದಾಖಲೆಗಳು ಒದ್ದೆಯಾಗುತ್ತಿವೆ. ನೀರು ಗೋಡೆಗಳ ಮಧ್ಯೆ ಜಿನುಗುತ್ತಿದೆ. ಗಾಳಿ, ಮಳೆ ನೀರಿನಿಂದ ರಕ್ಷಣೆ ಇಲ್ಲದ ಕೊಠಡಿಯೊಳಗೆ ಕರ್ತವ್ಯ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಸಿಬ್ಬಂದಿಗಳಿಗೆ ಒದಗಿಬಂದಿದೆ. ಅಲ್ಲದೇ ಈ ಕೊಠಡಿಯೊಳಗೆ ಸರಿಯಾಗಿ ಗಾಳಿ, ಬೆಳಕು ಸಹ ಇಲ್ಲ. ಗ್ರಾಮಸ್ಥರು ಬಂದಲ್ಲಿ ಕಚೇರಿಯ ಹೊರಗೆ ಕೊಡೆ ಹಿಡಿದು ನಿಂತುಕೊಂಡೇ ತಮ್ಮ ಕೆಲಸ ಮಾಡಿಕೊಳ್ಳಬೇಕಾಗಿದೆ. ಇದರಿಂದಾಗಿ ಅಗತ್ಯ ಕೆಲಸಗಳಿಗೆ ದಿನಂಪ್ರತಿ ಬರುವ ಹತ್ತಾರು ಗ್ರಾಮಸ್ಥರೂ ಸಮಸ್ಯೆ ಎದುರಿಸಬೇಕಾಗಿದೆ.

ಅಪೂರ್ಣ ಕಟ್ಟಡ:
ನೇರ್ಲದಲ್ಲಿರುವ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡದ ಪಕ್ಕದಲ್ಲೇ ಗ್ರಾಮಕರಣಿಕರ ಕಚೇರಿಗೆ ಹಾಗೂ ಅಂಚೆ ಕಚೇರಿಗಾಗಿ ಕೌಕ್ರಾಡಿ ಗ್ರಾಮ ಪಂಚಾಯತ್ ವತಿಯಿಂದ ಎರಡು ಕೊಠಡಿಯ ಕಟ್ಟಡ ನಿರ್ಮಿಸಲಾಗಿದೆ. ಆದರೆ ಇದರ ಕಾಮಗಾರಿ ಪೂರ್ಣಗೊಂಡಿಲ್ಲ. ಹೊಸ ಕಟ್ಟಡವಾಗಿದ್ದರೂ ಇಲ್ಲೂ ಮಳೆ ನೀರು ಕೊಠಡಿಯೊಳಗೆ ಬರುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಆದಷ್ಟೂ ಬೇಗ ಈ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಗ್ರಾಮಕರಣಿಕರ ಕಚೇರಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಗ್ರಾಮಸ್ಥರದ್ದಾಗಿದೆ.

ಕಂದಾಯ ಇಲಾಖೆಗೆ ಜಾಗವಿದೆ:
ನೇರ್ಲದಲ್ಲಿ ಗ್ರಾಮಕರಣಿಕರ ವಸತಿಗೃಹಕ್ಕೆ ೧೧ ಸೆಂಟ್ಸ್ ಜಾಗ ಕಾದಿರಿಸಲಾಗಿದೆ. ಆದರೆ ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆ ಮುಂದೆ ಬರುತ್ತಿಲ್ಲ ಎಂಬ ಆರೋಪವೂ ಇದೆ. ಕಂದಾಯ ಇಲಾಖೆಗೆಂದೇ ಕಾದಿರಿಸಿರುವ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅಲ್ಲೇ ಗ್ರಾಮಕರಣಿಕರ ಕಚೇರಿಯೂ ಆರಂಭಿಸಬೇಕೆಂಬ ಬೇಡಿಕೆಯೂ ಗ್ರಾಮಸ್ಥರಿಂದ ಕೇಳಿಬಂದಿದೆ. ಒಟ್ಟಿನಲ್ಲಿ ಗಾಳಿ, ಮಳೆಯಿಂದ ರಕ್ಷಣೆ ಇಲ್ಲದೆ, ಗ್ರಾಮಸ್ಥರ ಅಮೂಲ್ಯ ದಾಖಲೆಗಳೆಲ್ಲವೂ ಒದ್ದೆಯಾಗಿ ಹರಿದು ಹೋಗುವ ಮುನ್ನ ಗ್ರಾಮಕರಣಿಕರ ಕಚೇರಿಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮಕರಣಿಕರ ಈಗಿರುವ ತಾತ್ಕಾಲಿಕ ಕಚೇರಿಯೊಳಗೆ ಮಳೆ ನೀರು ಬರುತ್ತಿದೆ. ದಾಖಲೆಗಳು ಒದ್ದೆಯಾಗುತ್ತಿವೆ. ಇದೊಂದು ಸಣ್ಣ ಕೊಠಡಿಯಾಗಿದ್ದು ಅದರೊಳಗೆ ಹೊಂದಾಣಿಕೆ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕಾಗಿದೆ. ಆದಷ್ಟೂ ಬೇಗ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡಿದ್ದೇವೆ ಶಶಿಕಲಾ, ಗ್ರಾಮಕರಣಿಕರು ಇಚ್ಲಂಪಾಡಿ

ಇಚ್ಲಂಪಾಡಿ ಗ್ರಾಮಕರಣಿಕರ ಕಚೇರಿಗೆ ಗಾಳಿ, ಮಳೆಯಿಂದ ಸರಿಯಾದ ರಕ್ಷಣೆ ಇಲ್ಲ. ದನದ ಕೊಟ್ಟಿಗೆ ಸಹ ಈ ರೀತಿ ಇರುವುದಿಲ್ಲ. ಗ್ರಾಮ ಪಂಚಾಯತ್‌ನಿಂದ ಹೊಸ ಕಟ್ಟಡವಾಗಿದ್ದರೂ ಅದರ ಕೆಲಸ ಪೂರ್ಣಗೊಂಡಿಲ್ಲ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಗ್ರಾಮಕರಣಿಕರ ಕಚೇರಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಕುರಿಯಾಕೋಸ್ ಯಾನೆ ರೋಹಿ ಟಿ.ಎಂ. ಸದಸ್ಯರು, ಗ್ರಾ.ಪಂ.ಕೌಕ್ರಾಡಿ

ಗ್ರಾಮಕರಣಿಕರ ಹಾಗೂ ಅಂಚೆ ಕಚೇರಿಗೆ ನೇರ್ಲದಲ್ಲಿರುವ ರಾಜೀವ್‌ಗಾಂಧಿ ಸೇವಾಕೇಂದ್ರದ ಬಳಿಯಲ್ಲಿಯೇ ೧೫ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಹೊಸ ಕಟ್ಟಡ ಮಾಡಲಾಗಿದೆ. ಹಣ ಕಡಿಮೆಯಾದ ಕಾರಣ ಕಟ್ಟಡ ಅಪೂರ್ಣವಾಗಿದೆ. ವಿದ್ಯುತ್, ವಯರಿಂಗ್ ಹಾಗೂ ಇತರೇ ಕೆಲಸಗಳು ಪೆಂಡಿಂಗ್ ಆಗಿವೆ. ಈಗ ಮತ್ತೆ ೧೫ನೇ ಹಣಕಾಸು ಯೋಜನೆಯಲ್ಲಿ ಕ್ರೀಯಾಯೋಜನೆ ತಯಾರಿಸಲಾಗಿದೆ. ಶೀಘ್ರ ಕೆಲಸ ಪೂರ್ಣಗೊಳಿಸಿ ಹಸ್ತಾಂತರಿಸಲಾಗುವುದು ಮಹೇಶ್ ಪಿಡಿಒ ಗ್ರಾ.ಪಂ.ಕೌಕ್ರಾಡಿ

(ಫೋಠೋ ಇದೆ-ನೇರ್ಲ ೧, ನೇರ್ಲ ೨, ನೇರ್ಲ ೩, ನೇರ್ಲ ೪)

ನೇರ್ಲ ೧,
ನೇರ್ಲ ೩: ಮಳೆನೀರಿನಿಂದ ರಕ್ಷಣೆ ಇಲ್ಲದ ತಾತ್ಕಾಲಿಕ ಕಚೇರಿ
ನೇರ್ಲ ೩: ದಾಖಲೆಗಳು

ನೇರ್ಲ ೪- ಅಪೂರ್ಣಗೊಂಡಿರುವ ಹೊಸ ಕಟ್ಟಡ

============================================================================

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.