ದೇವಳದ ಕೃಷಿಕಾರ್ಯಕ್ಕೆ ಗದ್ದೆ ಬಿಟ್ಟುಕೊಟ್ಟ ಮುಸ್ಲೀಂ ಬಾಂಧವರು | ಎಲಿಯ ಶ್ರೀ ವಿಷ್ಣುಮೂರ್ತಿ ಸನ್ನಿಧಿಯಲ್ಲಿ ನಡೆಯಿತು ಕೋಮು ಸಾಮರಸ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

@ ಸಿಶೇ ಕಜೆಮಾರ್


ಪುತ್ತೂರು: ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾದ ಸರ್ವೆ ಗ್ರಾಮವು ಇದೀಗ ಮತ್ತೊಮ್ಮೆ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಭರದಿಂದ ಜೀರ್ಣೋದ್ಧಾರಗೊಳ್ಳುತ್ತಿರುವ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವತಿಯಿಂದ ಎಲಿಯ ಗದ್ದೆ ಕೃಷಿ ಕ್ಷೇತ್ರ ಎಂಬ ಹೆಸರಿನಲ್ಲಿ ನಡೆಯಲಿರುವ ಭತ್ತಕೃಷಿಗೆ ಗ್ರಾಮದ ಮೂವರು ಮುಸ್ಲೀಂ ಬಾಂಧವರು ತಮ್ಮ ಸ್ವಂತ ಗದ್ದೆಯನ್ನು ಬಿಟ್ಟುಕೊಡುವ ಮೂಲಕ ಕೋಮು ಸಾಮರಸ್ಯ ಮೆರೆದಿದ್ದಾರೆ. ದೇವಳದ ಬ್ರಹ್ಮಕಲಶೋತ್ಸವಕ್ಕೆ ಗದ್ದೆಯಲ್ಲಿ ಬೆಳೆದ ಭತ್ತದಿಂದಲೇ ಅನ್ನಸಂತರ್ಪಣೆ ಮಾಡುವ ದೇವಳದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿಯವರ ಮನವಿಗೆ ಸ್ಪಂದನೆ ನೀಡಿದ ಗ್ರಾಮದ ಮುಸ್ಲೀಂ ಬಾಂಧವರು ಸುಮಾರು ಮೂರು ಮುಡಿ ಗದ್ದೆ ಅಂದರೆ ಸುಮಾರು ಎರಡೂವರೆ ಎಕರೆ ಗದ್ದೆಯನ್ನು ಬಿಟ್ಟುಕೊಟ್ಟದ್ದು ಅಲ್ಲದೆ ಸ್ವತಃ ಗದ್ದೆಗಿಳಿದು ನೇಜಿ ನಾಟಿ ಮಾಡುವ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಮೂರುವರೆ ಎಕರೆ ಗದ್ದೆ ಬಿಟ್ಟುಕೊಟ್ಟರು.

ಹಿಂದೂ ದೇವಳದ ಉತ್ಸವಕ್ಕೆ ಬಳಸುವ ಅಕ್ಕಿ ತಯಾರಿಸಲು ಮುಸ್ಲೀಂ ಬಾಂಧವರು ತಮ್ಮ ಬೇಸಾಯದ ಗದ್ದೆಯನ್ನು ಬಿಟ್ಟುಕೊಟ್ಟಿದ್ದು ಈಗ ಎಲ್ಲೆಡೆ ಸುದ್ದಿಯಾಗಿದೆ. ಇಷ್ಟಕ್ಕೂ ದೇವಳದ ಕೃಷಿ ಕಾರ್ಯಕ್ಕೆ ತಮ್ಮ ಬೇಸಾಯದ ಗದ್ದೆ ಬಿಟ್ಟುಕೊಟ್ಟ ಮುಸ್ಲೀಂ ಬಾಂಧವರು ಯಾರು ಗೊತ್ತಾ? ಮಜಲುಗದ್ದೆ ಪ್ರದೇಶದ ಪುತ್ತು ಮಜಲುಗದ್ದೆ, ಅಬ್ಬಾಸ್ ಮಜಲುಗದ್ದೆ ಮತ್ತು ಕೂಡುರಸ್ತೆ ಅಬೂಬಕ್ಕರ್ ಮಜಲುಗದ್ದೆ ಇವರುಗಳೇ ತಮ್ಮ ಬೇಸಾಯದ ಗದ್ದೆಯನ್ನು ಬಿಟ್ಟುಕೊಟ್ಟ ಮಹನೀಯರು ಆಗಿದ್ದಾರೆ. ಈ ಮೂವರು ತಮ್ಮ ಎರಡೂವರೆ ಎಕ್ರೆಯಷ್ಟು ಬೇಸಾಯದ ಗದ್ದೆಯನ್ನು ತಮ್ಮೂರಿನ ದೇವಸ್ಥಾನಕ್ಕೆ ಬಿಟ್ಟುಕೊಟ್ಟಿದ್ದು ಈಗ ದೇವಳದ ವತಿಯಿಂದ ಗದ್ದೆ ಕೃಷಿ ಮಾಡಲಾಗುತ್ತಿದೆ.

ಗದ್ದೆಯಿಂದಲೇ ಉತ್ಸವಕ್ಕೆ ಬೇಕಾದ ಅಕ್ಕಿ
ಗ್ರಾಮದ ಅತೀ ಪ್ರಾಚೀನ ದೇವಾಲಯವಾಗಿರುವ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನವು ತನ್ನದೇ ಕಾರಣಿಕತೆಯನ್ನು ಹೊಂದಿದೆ. ಪ್ರಸ್ತುತ ದೇವಳದ ಜೀರ್ಣೋದ್ಧಾರ ಕೆಲಸ ಭರದಿಂದ ನಡೆಯುತ್ತಿದ್ದು ಮುಂದಿನ ವರ್ಷದ ಫೆಬ್ರವರಿಯಲ್ಲಿ ಬ್ರಹ್ಮಕಲಶೋತ್ಸವ ಮಾಡಲು ಸಮಿತಿ ನಿರ್ಧರಿಸಿದೆ. ಉತ್ಸವದ ಸಮಯದಲ್ಲಿ ಅನ್ನಸಂತರ್ಪಣೆಗೆ ಬೇಕಾದ ಅಕ್ಕಿಯನ್ನು ಸ್ವತಃ ಈ ಪರಿಸರದ ಗದ್ದೆಯಿಂದಲೇ ಬೆಳೆದರೆ ಹೇಗೆ ಎಂದು ಜೀರ್ಣೋದ್ಧಾರ ಸಮಿತಿಯವರ ಆಲೋಚನೆಗೆ ಗ್ರಾಮದ ವೆಂಕಪ್ಪ ನಾಯ್ಕ ಎಂಬವರು ತಮ್ಮ ಹಡೀಲು ಬಿದ್ದ ಗದ್ದೆಯನ್ನು ಬಿಟ್ಟುಕೊಡುವುದಾಗಿ ತಿಳಿಸಿದರು. ಅದರಂತೆ ಸಮಿತಿಯವರು ಗದ್ದೆ ಕೃಷಿಗೆ ಮುಂದಾದರು ಇದೇ ಸಮಯದಲ್ಲಿ ಮಜಲುಗದ್ದೆ ಪರಿಸರದ ಮೂವರು ಮುಸ್ಲೀಂ ಬಾಂಧವರು ತಾವು ತಮ್ಮ ಗದ್ದೆಯನ್ನು ಈ ವರ್ಷ ದೇವಸ್ಥಾನಕ್ಕೆ ಬಿಟ್ಟುಕೊಡುವುದಾಗಿ ತಿಳಿಸಿದರು ಅದರಂತೆ ಬಿಟ್ಟು ಕೊಟ್ಟಿದ್ದಾರೆ, ಈಗ ನೇಜಿ ನಾಟಿ ಕೂಡ ಮಾಡಲಾಗಿದೆ ಎಂದು ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು ತಿಳಿಸಿದ್ದಾರೆ.

ಗದ್ದೆ ಬೇಸಾಯವನ್ನು ದೇವಳಕ್ಕೆ ತ್ಯಾಗ ಮಾಡಿದರು
ಅಣ್ಣ ತಮ್ಮಂದಿರಾದ ಅಬ್ಬಾಸ್ ಮತ್ತು ಅಬೂಬಕ್ಕರ್ ಅವರ ಗದ್ದೆ ಹಾಗೂ ಇವರ ಅಣ್ಣನ ಮಗನಾದ ಪುತ್ತು ಇವರ ಗದ್ದೆ ಅಕ್ಕಪಕ್ಕದಲ್ಲಿದೆ. ಒಟ್ಟು ೨.೫ ಎಕರೆ ಗದ್ದೆ ಇದೆ.ಪ್ರತಿ ವರ್ಷ ಇವರು ಮುಂಗಾರು ಬೇಸಾಯ ಮಾಡುತ್ತಿದ್ದಾರೆ.ಈ ಬಾರಿ ಮಾತ್ರ ಗದ್ದೆ ಬೇಸಾಯವನ್ನು ಎಲಿಯ ಶ್ರೀ ವಿಷ್ಣುಮೂರ್ತಿ ದೇವಳಕ್ಕಾಗಿ ತ್ಯಾಗ ಮಾಡಿದ್ದಾರೆ. ಗ್ರಾಮಸ್ಥರೆಲ್ಲ ಸೇರಿಕೊಂಡು ನೇಜಿ ನಾಟಿ ಮಾಡಿದ್ದಾರೆ. ಈ ಗದ್ದೆಯಲ್ಲಿ ಬೆಳೆದ ಅಕ್ಕಿ ದೇವಳದ ಉತ್ಸವಕ್ಕೆ ಬಳಕೆಯಾಗಲಿದೆ. ಜಮೀನು ಮಾತ್ರ ವಾರೀಸುದಾರರಲ್ಲೇ ಉಳಿಯಲಿದೆ.

ನಾಟಿ ಕಾರ್ಯದಲ್ಲೂ ಸಾಮರಸ್ಯ
ಮುಸ್ಲೀಂ ಬಾಂಧವರು ದೇವಳಕ್ಕೆ ಭತ್ತ ಬೇಸಾಯ ಮಾಡಲು ನೀಡಿದ ಗದ್ದೆಯಲ್ಲಿ ನೇಜಿ ನಾಟಿ ನಡೆದಾಗ ಸ್ವತಃ ಅಬ್ಬಾಸ್, ಪುತ್ತು, ಸತ್ತಾರ್ ಕುಟುಂಬಸ್ಥರು ಗದ್ದೆಗಿಳಿದು ನೇಜಿ ನಾಟಿಯಲ್ಲಿ ತೊಡಗಿಕೊಂಡರು.ಬೆಳ್ತಂಗಡಿಯ ಕಳೆಂಜ ಗಿರೀಶ್ ಗೌಡ ೮೦೦ ಸೂಡಿ ನೇಜಿ ಉಚಿತವಾಗಿ ನೀಡಿದ್ದಾರೆ. ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀಧರ ರಾವ್ ಕೆ.ನೇತೃತ್ವದಲ್ಲಿ ೧೬ ಮಂದಿ ಬಂದು ಉಚಿತ ನೇಜಿ ನಾಟಿ ಮಾಡಿದ್ದಾರೆ. ಇದಲ್ಲದೆ ಎಲಿಯ ಪರಿಸರದ ೪೦ ಕ್ಕೂ ಅಧಿಕ ಗ್ರಾಮಸ್ಥರು ಗದ್ದೆಗಿಳಿದು ಹಿಂದೂ ಮುಸ್ಲೀಂ ನಾವೆಲ್ಲರೂ ಒಂದೇ ಎಂಬುದನ್ನು ಭೂಮಿ ತಾಯಿಯ ಹಸಿರಗದ್ದೆಯಲ್ಲಿ ಸಾರಿ ತೋರಿಸಿದ್ದಾರೆ.

ಗ್ರಾಮದಲ್ಲಿದೆ ಕೋಮು ಸಾಮರಸ್ಯ
ಸರ್ವೆ ಗ್ರಾಮವು ಪುಟ್ಟದಾದರೂ ಇಲ್ಲಿ ಕೋಮು ಸಾಮರಸ್ಯ ಬಹಳ ಹಿಂದಿನಿಂದಲೇ ಬೆಳೆದುಕೊಂಡು ಬಂದಿದೆ. ಇಲ್ಲಿನ ಯುವಕರು ಸೇರಿಕೊಂಡು ಸೌಹಾರ್ದ ವೇದಿಕೆ ಎಂಬ ಸಂಘಟನೆ ಕಟ್ಟಿಕೊಂಡಿದ್ದು ಈ ವೇದಿಕೆಯ ಮೂಲಕ ನಡೆಯುವ ಕ್ರೀಡಾ ಚಟುವಟಿಕೆಗೆ ಹಿಂದೂ ಮುಸ್ಲೀಂ ಕ್ರೈಸ್ತ ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಸಹಕಾರ ನೀಡುತ್ತಿರುವುದು ಈಗಾಗಲೇ ಎಲ್ಲರ ಮೆಚ್ಚುಗೆ ಗಳಿಸಿದೆ. ಗ್ರಾಮದಲ್ಲಿ ಇದುವರೆಗೆ ಯಾವುದೇ ಕೋಮು ಸಾಮರಸ್ಯ ಕದಡುವ ಘಟನೆಗಳು ನಡೆದಿಲ್ಲ ಎನ್ನುತ್ತಾರೆ ಸ್ಥಳೀಯರು.ಇದೀಗ ಮತ್ತೊಮ್ಮೆ ಗ್ರಾಮವು ಕೋಮು ಸಾಮರಸ್ಯಕ್ಕೆ ಸುದ್ದಿಯಾಗುತ್ತಿದೆ.

ನಮ್ಮ ಹಿರಿಯರಿಂದಲೇ ಬೇಸಾಯ ಮಾಡಿಕೊಂಡು ಬಂದಿದ್ದ ಗದ್ದೆಯಾಗಿದೆ. ಕಳೆದ ವರ್ಷ ಬೇಸಾಯ ಮಾಡಿಲ್ಲ. ಪ್ರತಿ ವರ್ಷ ನಮಗೆ ಸುಮಾರು ೭ ಕ್ವಿಂಟಾಲ್‌ನಷ್ಟು ಅಕ್ಕಿ ಸಿಗುತ್ತಿತ್ತು. ಈ ವರ್ಷ ನಮ್ಮೂರಿನ ದೇವಳಕ್ಕೆ ಗದ್ದೆಯನ್ನು ಬೇಸಾಯ ಮಾಡಲು ಬಿಟ್ಟುಕೊಟ್ಟಿದ್ದೇವೆ. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ.
ಪುತ್ತು ಮಜಲುಗದ್ದೆ, ಗದ್ದೆ ಬಿಟ್ಟುಕೊಟ್ಟವರು

ನಮ್ಮೂರಿನ ದೇವಳಕ್ಕೆ ಗದ್ದೆ ಬೇಸಾಯಕ್ಕೆ ಬಿಟ್ಟುಕೊಟ್ಟಿರುವುದು ಖುಷಿ ತಂದಿದೆ. ನನಗೆ ಪ್ರತಿವರ್ಷ ೬ ಕ್ವಿಂಟಾಲ್‌ನಷ್ಟು ಅಕ್ಕಿ ಸಿಗುತ್ತಿತ್ತು. ಈ ವರ್ಷ ಬಿತ್ತನೆ ಮಾಡುವುದು ಎಂದು ನಿರ್ಧರಿಸಿದ್ದೇ ಈ ಸಮಯದಲ್ಲಿ ದೇವಳಕ್ಕೆ ಕೊಡುವ ಎಂದು ಮನಸ್ಸಾಯಿತು. ನಮ್ಮಲ್ಲಿ ದೇವಸ್ಥಾನಕ್ಕೆ ಕೊಡಲು ಬೇರೆನೂ ಇಲ್ಲ ಆದ್ದರಿಂದ ಗದ್ದೆಯನ್ನೇ ಬೇಸಾಯಕ್ಕೆ ಬಿಟ್ಟುಕೊಟ್ಟಿದ್ದೇವೆ.
ಅಬ್ಬಾಸ್ ಮಜಲುಗದ್ದೆ, ಗದ್ದೆ ಬಿಟ್ಟುಕೊಟ್ಟವರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.