ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆದವರ ಮೇಲೆ ಕ್ರಮಕ್ಕೆ ಆಗ್ರಹ – ಹಿರೇಬಂಡಾಡಿ ಗ್ರಾ.ಪಂ. ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ರಸ್ತೆ ಬದಿಯ ಚರಂಡಿಗಳಿಗೆ ತ್ಯಾಜ್ಯ ಎಸೆದು ಹೋಗುವ ಪರಿಪಾಠ ಹೆಚ್ಚಾಗುತ್ತಿದ್ದು, ಅಲ್ಲಿನ ಸ್ಥಳೀಯರು ತ್ಯಾಜ್ಯದ ದುರ್ನಾತವನ್ನು ಸಹಿಸಿಕೊಂಡು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ದರಿಂದ ರಸ್ತೆ ಬದಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಗ್ರಹ ಹಿರೇಬಂಡಾಡಿ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಕೇಳಿಬಂತು.

ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಹಿರೇಬಂಡಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಕೋಳಿ ಸಾಕಾಣಿಕ ಘಟಕಕ್ಕೆ ಪರವಾನಿಗೆ ನೀಡುವ ಕುರಿತು ಚರ್ಚೆ ನಡೆದಾಗ ವಿಷಯ ಪ್ರಸ್ತಾಪಿಸಿದ ಸದಸ್ಯೆ ಗೀತಾ ದಾಸರಮೂಲೆ, ಕೆಲವರು ಕೋಳಿ ತ್ಯಾಜ್ಯವನ್ನು ರಸ್ತೆ ಬದಿಯ ಚರಂಡಿಗೆ ಮೋರಿ ಇರುವಲ್ಲಿ ಎಸೆದು ಹೋಗುತ್ತಾರೆ. ಇನ್ನಿತರ ತ್ಯಾಜ್ಯವನ್ನು ಕೆಲವರು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಇದು ಪರಿಸರದ ಅಶುಚಿತ್ವಕ್ಕೆ ಕಾರಣವಾಗುತ್ತಿದ್ದು, ಪರಿಸರವಿಡೀ ದುರ್ನಾತ ಬೀರಿ ಸಾಂಕ್ರಾಮಿಕ ರೋಗದ ಭೀತಿ ನಿರ್ಮಾಣವಾಗುವಂತಾಗಿದೆ. ಆದ್ದರಿಂದ ಕೋಳಿ ಸಾಕಾಣಿಕ ಘಟಕಕ್ಕೆ ಪರವಾನಿಗೆ ನೀಡುವಾಗ ಅವರಿಗೆ ಮೊದಲು ಶುಚಿತ್ವ ಪಾಲಿಸಲು ಕಟ್ಟುನಿಟ್ಟಾಗಿ ಅವರಿಗೆ ತಿಳಿಸಬೇಕು ಎಂದರು.

ಇದಕ್ಕೆ ಉತ್ತರಿಸಿದ ಗ್ರಾ.ಪಂ. ಪಿಡಿಒ ದಿನೇಶ್ ಶೆಟ್ಟಿ, ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುವವರ ಬಗ್ಗೆ ಗ್ರಾ.ಪಂ.ಗೆ ಮಾಹಿತಿ ನೀಡಿದ್ದಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಂತಹ ತ್ಯಾಜ್ಯ ಬಿಸಾಡುವವರ, ಅವರ ವಾಹನದ ವಿಡಿಯೋ ಚಿತ್ರೀಕರಣ ಮಾಡಿ ಎಂದರು. ಮೊದಲು ತ್ಯಾಜ್ಯ ಎಸೆಯುವ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸೋಣ. ಬಳಿಕ ತ್ಯಾಜ್ಯ ಬಿಸಾಡುವುದು ಕಂಡು ಬಂದಲ್ಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳೋಣ ಎಂದು ಸಲಹೆ ನೀಡಿದರು. ಇದೇ ವಿಷಯವಾಗಿ ಮಾತನಾಡಿದ ಗ್ರಾ.ಪಂ. ಸದಸ್ಯ ಶೌಕತ್ ಅಲಿ, ನಮ್ಮ ಗ್ರಾಮ ಸ್ವಚ್ಛವಾಗಿರಬೇಕು ಎಂಬ ಯೋಚನೆ ಎಲ್ಲರಿಗೂ ಇರಬೇಕು. ಕೇವಲ ಗ್ರಾ.ಪಂ. ನಿಂದ ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ. ಸಾರ್ವಜನಿಕರೂ ಇದಕ್ಕೆ ಸಹಕಾರ ನೀಡಬೇಕು, ಟೀಂ ವರ್ಕ್ ಇದಕ್ಕೆ ಅಗತ್ಯ ಎಂದರು. ಅಲಲ್ಲಿ ಸಾರ್ವಜನಿಕರ ಸಭೆ ಕರೆದು ಜಾಗೃತಿ ಮೂಡಿಸುವ ಕೆಲಸ ನಾವು ಮಾಡೋಣ ಎಂದು ಈ ಸಂದರ್ಭ ಪಿಡಿಒ ತಿಳಿಸಿದರು.

ಕೆಲವರು ನಾವು ಎನ್‌ಜಿಒ ಸಂಸ್ಥೆಯವರು ಜನರಿಗೆ ಸೇವೆ ನೀಡುತ್ತೇವೆ ಎಂದು ಹೇಳಿಕೊಂಡು ಬಂದು ವಂಚನೆ ಮಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಹಿರೇಬಂಡಾಡಿ ಗ್ರಾ.ಪಂ. ಬಂದ ತಂಡವೊಂದು ನಾವು ಎನ್‌ಜಿಒ ಸಂಸ್ಥೆಯವರು ಗ್ರಾಮದ ಜನರಿಗೆ ಕಾರ್ಮಿಕ ಕಾರ್ಡ್ ಮಾಡಿಕೊಡುತ್ತೇವೆ ಎಂದು ಹೇಳಿದ್ದರು. ಅವರಿಗೆ ಕಾರ್ಯಕ್ರಮ ನಡೆಸಲು ಗ್ರಾ.ಪಂ. ಅನುಮತಿಯನ್ನೂ ನೀಡಿತ್ತು. ಆದರೆ ಕಾರ್ಡ್ ಮಾಡಿಸಲು ಬಂದವರಿಂದ ತಲಾ ೭೫ ರೂ.ನಂತೆ ಪಡೆದ ಆ ತಂಡ ಇನ್ನೂ ಅವರಿಗೆ ಕಾರ್ಡ್ ನೀಡಿಲ್ಲ. ಆ ತಂಡದಲ್ಲಿದ್ದ ಮುಖ್ಯ ವ್ಯಕ್ತಿಯ ಮೊಬೈಲ್ ಸ್ವಿಚ್ ಆಫ್ ಬರ್‍ತಿದೆ ಎಂದರಲ್ಲದೆ, ಆ ವ್ಯಕ್ತಿಯ ಬಗ್ಗೆ ಪೊಲೀಸರಿಗೆ ದೂರು ನೀಡಿ ಎಂದು ಈ ಹಿಂದೆ ಹೇಳಿದ್ದರೂ, ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಕೆಲವು ದಿನಗಳ ಹಿಂದೆ ಎನ್‌ಜಿಒ ಸಂಸ್ಥೆಯವರೆಂದು ಹೇಳಿಕೊಂಡು ಬಂದ ತಂಡವೊಂದು ಗ್ರಾ.ಪಂ. ವ್ಯಾಪ್ತಿಯವರಿಗೆ ಕೋವಿಡ್ ಲಸಿಕೆ ನಾವು ನೀಡುತ್ತೇವೆ ಎಂದಿದ್ದರು. ಆದರೆ ನೀವು ಇಒ ಅವರಿಂದ ಪರ್ಮಿಶನ್ ತರಬೇಕು ಎಂದು ಹೇಳಿದಾಗ ಅವರು ವಾಪಸ್ ಹೋಗಿದ್ದಾರೆ. ಈ ಎಲ್ಲಾ ಘಟನೆಗಳು ಸಂಶಯಕ್ಕೆ ಕಾರಣವಾಗುತ್ತಿದ್ದು, ಈ ಬಗ್ಗೆ ಎಚ್ಚರಿಕೆಯಿಂದಿರುವುದು ಅಗತ್ಯ ಎಂದರು.

ಉಪ್ಪಿನಂಗಡಿ – ಹಿರೇಬಂಡಾಡಿ ರಸ್ತೆಯ ಅಗಲೀಕರಣ ಕಾಮಗಾರಿಯ ಸಂದರ್ಭ ಚರಂಡಿಯನ್ನು ಅವೈಜ್ಞಾನಿಕವಾಗಿ ಮಾಡಿದ್ದರಿಂದ ದಾಸರಮೂಲೆಯಲ್ಲಿ ಕೃಷಿ ತೋಟಕ್ಕೆ ಕೆಸರು ನೀರು ಹರಿದು ಬಂದು ಕೃಷಿ ಹಾನಿಗೀಡಾಗುವಂತಾಗಿದೆ. ಇದರಿಂದ ಈ ಬಾರಿ ಅಲ್ಲಿನ ಕೆಲವು ಭತ್ತದ ಕೃಷಿಕರು ಗದ್ದೆ ಬೇಸಾಯದಿಂದಲೇ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಪಿಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆಯಬೇಕು ಎಂದು ಸದಸ್ಯೆ ಗೀತಾ ದಾಸರಮೂಲೆ ಆಗ್ರಹಿಸಿದರು. ಈ ಸಂದರ್ಭ ಶೌಕತ್ ಅಲಿ ಮಾತನಾಡಿ, ಮೇಲ್ಗಡೆ ಪ್ರದೇಶದ ನೀರು ಕೆಳಗಡೆ ಪ್ರದೇಶದತ್ತ ಹರಿದು ಹೋಗಲೇ ಬೇಕು. ಮಳೆ ನೀರನ್ನು ಕೃಷಿ ಜಾಗದಲ್ಲಿ ಹರಿಯುತ್ತದೆ ಎಂದು ತಡೆಗಟ್ಟಲು ಸಾಧ್ಯವೇ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗೀತಾ ದಾಸರಮೂಲೆ ಇಲ್ಲಿ ಮೊದಲು ಇದ್ದ ಮೋರಿಯನ್ನು ಅಲ್ಲಿಂದ ತೆಗೆಯಲಾಗಿದೆ. ಈಗ ಅಲ್ಲೇ ಬೇರೆ ಕಡೆ ಕೃಷಿ ತೋಟವಿರುವ ಕಡೆ ಚರಂಡಿ ನೀರನ್ನು ಹರಿಯಬಿಡಲಾಗಿದೆ. ಒಬ್ಬ ವ್ಯಕ್ತಿಗೆ ಲಾಭ ಮಾಡಿಕೊಡುವುದಕ್ಕಾಗಿ ಹಲವು ಕೃಷಿ ತೋಟಗಳನ್ನು ಬಲಿಕೊಟ್ಟಿದ್ದು ಯಾಕೆ ಎಂದು ಪ್ರಶ್ನಿಸಿದರು. ಈ ಸಂದರ್ಭ ಶೌಕತ್ ಅಲಿ ಹಾಗೂ ಗೀತಾ ದಾಸರಮೂಲೆ ಅವರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಈ ಬಗ್ಗೆ ನಿಮ್ಮಲ್ಲಿ ನಾನು ಚರ್ಚೆ ಮಾಡುವುದಿಲ್ಲ. ಸ್ಥಳಕ್ಕೆ ಪಿಡಬ್ಲ್ಯೂಡಿ ಇಲಾಖೆಯ ಎಂಜಿನಿಯರ್ ಬರಲಿ. ಅವರಲ್ಲಿ ಮಾತನಾಡುತ್ತೇನೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ಶಾಂಭವಿ, ಕೆ. ಸವಿತಾ, ಗೀತಾ, ನಾರಾಯಣ ಎಸ್., ಸದಾನಂದ ಶೆಟ್ಟಿ, ಸತೀಶ ಎನ್. ಶೆಟ್ಟಿ, ಲಕ್ಷ್ಮೀಶ, ಹೇಮಾವತಿ, ನಿತಿನ್, ವಾರಿಜಾ ರೈ, ಹೇಮಂತ್ ಭಾಗವಹಿಸಿದರು. ಗ್ರಾ.ಪಂ. ಕಾರ್ಯದರ್ಶಿ ಪರಮೇಶ್ವರ್ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿ ಸೋಮನಾಥ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.