HomePage_Banner
HomePage_Banner
HomePage_Banner
HomePage_Banner

ಒಳಮೊಗ್ರು ಗ್ರಾಪಂ ಸಭೆ: ಅಕ್ರಮ ಸಕ್ರಮದಲ್ಲಿ ಮನೆ ನಿರ್ಮಾಣ, ವಾಸ್ತವ್ಯ ಉದ್ದೇಶಕ್ಕೆ ಕನ್ವರ್ಷನ್ ತಹಶೀಲ್ದಾರ್‌ಗೆ ಬರೆದುಕೊಳ್ಳಲು ನಿರ್ಣಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

 

ಪುತ್ತೂರು: ಅಕ್ರಮ ಸಕ್ರಮ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡವರಿಗೆ ವಾಸ್ತವ್ಯ ಉದ್ದೇಶಕ್ಕಾಗಿ ಐದು ಸೆಂಟ್ಸ್ ಜಾಗವನ್ನು ಪ್ಲಾಟಿಂಗ್ ಇಲ್ಲದೆ ಕನ್ವರ್ಷನ್ ಮಾಡಿಕೊಳ್ಳಲು ಸರಕಾರ ಅವಕಾಶ ಮಾಡಿಕೊಡಬೇಕು ಎಂದು ತಹಶೀಲ್ದಾರ್‌ರವರಿಗೆ ಬರೆದುಕೊಳ್ಳುವುದು ಎಂದು ಒಳಮೊಗ್ರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ಸೆ.1 ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಸಾರ್ವಜನಿಕ ಅರ್ಜಿಯ ಚರ್ಚೆಯ ಸಂದರ್ಭದಲ್ಲಿ ಅಶ್ರಫ್ ಉಜಿರೋಡಿಯವರು ವಿಷಯ ಪ್ರಸ್ತಾಪಿಸಿದರು. ಅಕ್ರಮ ಸಕ್ರಮ ಜಾಗದ ಪ್ಲಾಟಿಂಗ್ ಅನ್ನು ಕಳೆದ ಕೆಲವು ವರ್ಷಗಳಿಂದ ನಿಲ್ಲಿಸಿದ್ದರಿಂದ ಜನರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಪ್ಲಾಟಿಂಗ್ ಇಲ್ಲದೆ ಕನ್ವರ್ಷನ್ ಆಗುತ್ತಿಲ್ಲ, ಕನ್ವರ್ಷನ್ ಇಲ್ಲದೆ ಮನೆ ನಂಬರ್ ಆಗಲಿ, ವಿದ್ಯುತ್ ಸಂಪರ್ಕ ಹೀಗೆ ಎಲ್ಲದ್ದಕ್ಕೂ ಸಮಸ್ಯೆಯಾಗುತ್ತಿದೆ. ಆದ್ದರಿಂದ ಐದು ಸೆಂಟ್ಸ್ ಜಾಗವನ್ನು ಪ್ಲಾಟಿಂಗ್ ಇಲ್ಲದೆ ಕನ್ವರ್ಷನ್ ಮಾಡಿಕೊಳ್ಳುವಲ್ಲಿ ಸರಕಾರ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.

ಅಪಾಯಕಾರಿ ಮರಗಳನ್ನು ತೆರವುಗೊಳಿಸಿ
ಗ್ರಾಮದ ವಿವಿಧ ಕಡೆಗಳಲ್ಲಿ ರಸ್ತೆ ಬದಿಗಳಲ್ಲಿ ಅಪಾಯಕಾರಿ ಮರಗಳಿದ್ದು ಇದನ್ನು ತೆರವು ಮಾಡಿಕೊಡುವಂತೆ ಈಗಾಗಲೇ ಅರಣ್ಯ ಇಲಾಖೆ, ಮೆಸ್ಕಾಂಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಹೇಶ್ ಕೇರಿ, ವಿನೋದ್ ಶೆಟ್ಟಿ, ಉಪಾಧ್ಯಕ್ಷೆ ಸುಂದರಿಯವರು ಹೇಳಿದರು. ಈ ಬಗ್ಗೆ ಚರ್ಚೆ ನಡೆಯಿತು. ಅಪಾಯಕಾರಿ ಮರಗಳನ್ನು ಈ ಕೂಡಲೇ ತೆರವುಗೊಳಿಸುವಂತೆ ಮತ್ತೊಮ್ಮೆ ಅರಣ್ಯ ಇಲಾಖೆ, ಮೆಸ್ಕಾಂಗೆ ಈ ಬಗ್ಗೆ ಮನವಿ ಸಲ್ಲಿಸುವುದು ಎಂದು ನಿರ್ಣಯಿಸಲಾಯಿತು.

ಶ್ರೀಮಂತರಿಗೂ ಕೋವಿಡ್ ಕಿಟ್ ?!
ಕೊರೋನ ಪಾಸಿಟಿವ್ ಬಂದವರಿಗೆ ಗ್ರಾಪಂನಿಂದ ಆಹಾರ ಕಿಟ್ ವಿತರಣೆ ಮಾಡಲಾಗಿದೆ. ಇದರಲ್ಲಿ ಎಪಿಎಲ್ ಕಾರ್ಡ್‌ದಾರರಿಗೂ, ಶ್ರೀಮಂತರಿಗೂ ಕಿಟ್ ವಿತರಣೆ ಮಾಡಲಾಗಿದೆ. ಕೆಲವು ಮಂದಿ ಕಿಟ್ ಬೇಡ ಎಂದರೂ ಕೊಟ್ಟು ಬಂದಿದ್ದಾರೆ ಇದು ಸರಿಯೇ? ಎಂದು ಶೀನಪ್ಪ ನಾಯ್ಕ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಿ.ಸಿ ಚಿತ್ರಾರವರು ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರ ಕಿಟ್ ಕೊಡಬೇಕಿತ್ತಲ್ಲ ಎಂದು ಕೇಳಿದರು. ಸರಕಾರದ ಸುತ್ತೋಲೆಯಂತೆ ಕಿಟ್ ವಿತರಣೆ ಮಾಡಲಾಗಿದೆ ಅಲ್ಲದೆ ಅವಶ್ಯಕತೆ ಇದ್ದವರಿಗೆ, ಬೇಡಿಕೆಯ ಮೇರೆಗೆ ಕಿಟ್ ವಿತರಣೆ ಮಾಡಲಾಗಿದೆ ಎಂದು ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ತಿಳಿಸಿದರು. ಇದಕ್ಕೆ ಮಹೇಶ್ ಕೇರಿ ಧ್ವನಿಗೂಡಿಸಿ ಸರಕಾರದ ಸುತ್ತೋಲೆಯಂತೆ ಕಿಟ್ ವಿತರಣೆ ನಡೆದಿದೆ ಎಂದರು. ಕಿಟ್ ವಿತರಣೆ ಸಂದರ್ಭದಲ್ಲಿ ಆಯಾ ವಾರ್ಡ್‌ನ ಸದಸ್ಯರಿಗೆ ಮಾಹಿತಿ ಕೊಟ್ಟಿಲ್ಲ, ಕಿಟ್ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಅಶ್ರಫ್ ಆರೋಪಿಸಿದರು. ಕೋವಿಡ್ ಪಾಸಿಟಿವ್ ಬಂದ ಎಷ್ಟು ಮಂದಿಗೆ ಕಿಟ್ ವಿತರಣೆ ಮಾಡಲಾಗಿದೆ, ಯಾರಿಗೆಲ್ಲಾ ಮಾಡಲಾಗಿದೆ ಎಂಬ ಬಗ್ಗೆ ಮುಂದಿನ ಸಭೆಯಲ್ಲಿ ಲೆಕ್ಕಚಾರ ಕೊಡಲಾಗುವುದು ಎಂದು ಪಿಡಿಓ ಅವಿನಾಶ್ ಸಭೆಗೆ ತಿಳಿಸಿದರು.

ಎನ್‌ಓಸಿ ಇಲ್ಲದಿದ್ದರೆ ಪರವಾನಗೆ ನವೀಕರಣ ಇಲ್ಲ!
ರಸ್ತೆ ಬದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕೋಳಿ ತ್ಯಾಜ್ಯ ಹಾಕುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಕೋಳಿ ಮಾಂಸ ಮಾರಾಟ ಅಂಗಡಿಯವರು ತಮ್ಮ ಅಂಗಡಿ ಪರವಾನಗೆ ನವೀಕರಣ ಮಾಡಬೇಕಿದ್ದರೆ ಅಥವಾ ಹೊಸ ಕೋಳಿ ಮಾಂಸದ ಅಂಗಡಿ ತೆರೆಯಬೇಕಿದ್ದರೂ ಕಡ್ಡಾಯವಾಗಿ ಆರೋಗ್ಯ ಇಲಾಖೆಯಿಂದ ಎನ್‌ಒಸಿ ತರಬೇಕು ಇಲ್ಲದಿದ್ದರೆ ಪರವಾನಗೆ ಮತ್ತು ಪರವಾನಗೆ ನವೀಕರಣ ಮಾಡಲಾಗುವುದಿಲ್ಲ ಎಂದು ಗ್ರಾಪಂನಲ್ಲಿ ಮಹತ್ವದ ನಿರ್ಣಯವನ್ನು ಮಾಡಲಾಯಿತು.

ತಳ್ಳು ಗಾಡಿಗಳಿಗೆ ಪರವಾನಗೆ ಇಲ್ಲ
ತಳ್ಳು ಗಾಡಿಗೆ ಪರವಾನಗೆ ನೀಡಬೇಕು ಎಂದು ಗ್ರಾಪಂಗೆ ಬಂದ ಅರ್ಜಿಯ ಮೇಲೆ ಚರ್ಚೆ ನಡೆಯಿತು. ತಳ್ಳುವ ಗಾಡಿಗಳಿಗೆ ಪರವಾನಗೆ ಪಡೆದುಕೊಂಡವರು ಕ್ರಮೇಣ ಗಾಡಿಯನ್ನು ಒಂದೇ ಕಡೆ ನಿಲ್ಲಿಸಿ ಕಂಬ ಹಾಕಿ, ಕಲ್ಲು ಕಟ್ಟಿ ಅಂಗಡಿಯನ್ನಾಗಿ ಮಾಡಿಕೊಳ್ಳುತ್ತಾರೆ. ಮುಂದೆ ಅಕ್ರಮ ಕಟ್ಟಡಗಳ ತೆರವು ವೇಳೆ ಗ್ರಾಪಂಗೆ ತೊಂದರೆಯಾಗುತ್ತದೆ ಆದ್ದರಿಂದ ತಳ್ಳುವ ಗಾಡಿಗಳಿಗೆ ಪರವಾನಗೆ ಕೊಡಬಾರದು ಎಂದು ಮಹೇಶ್ ಕೇರಿ ಹೇಳಿದರು.ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುವ ವ್ಯಾಪಾರ ಗಾಡಿಗಳಾದರೆ (ವಾಹನಗಳಲ್ಲಿ) ಅದಕ್ಕೆ ಪರವಾನಗೆ ಕೊಡಬಹುದಲ್ಲವೇ ಎಂದು ಅಶ್ರಫ್ ಪ್ರಶ್ನಿಸಿದರು. ಸಂಚಾರಿ ಗಾಡಿಗಳಿಗೆ ಮಾತ್ರ ಪರವಾನಗೆ ಕೊಡಬಹುದು ಅದು ಬಿಟ್ಟು ಯಾವುದೇ ತಳ್ಳು ಗಾಡಿಗೆ ಪರವಾನಗೆ ಇಲ್ಲ ಎಂದು ನಿರ್ಣಯಿಸಲಾಯಿತು.

ಪರವಾನಗೆ ರಹಿತ ಮನೆ ನಿರ್ಮಾಣಕ್ಕೆ ದಂಡ!
ಮನೆ ನಿರ್ಮಾಣ ಮಾಡಬೇಕಾದರೆ ಗ್ರಾಪಂನಿಂದ ಪರವಾನಗೆ ಪಡೆದುಕೊಳ್ಳುವುದು ಖಂಡಯ. ಒಂದು ವೇಳೆ ಪರವಾನಗೆ ಪಡೆಯದೇ ಮನೆ ನಿರ್ಮಾಣ ಮಾಡಿದರೆ ಅವರಿಗೆ ಪರವಾನಗೆಯ ಶೇ.25ದಂಡನೆ ಹಾಕುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಕಬಕ ರಥಯಾತ್ರೆಗೆ ಅಡ್ಡಿ: ಮತಕ್ಕೆ ಬಿದ್ದ ಖಂಡನೆ
ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಅಂಗವಾಗಿ ಕಬಕ ಗ್ರಾಮ ಪಂಚಾಯತ್ ಹಮ್ಮಿಕೊಂಡಿದ್ದ ರಥಯಾತ್ರೆಗೆ ಅಡ್ಡಿ ಪಡಿಸಿದ ವಿಚಾರದಲ್ಲಿ ಒಳಮೊಗ್ರು ಗ್ರಾಪಂ ಖಂಡನಾ ನಿರ್ಣಯ ಮಾಡಬೇಕು ಎಂದು ಪ್ರದೀಪ್ ಆಗ್ರಹಿಸಿದರು. ಇದಕ್ಕೆ ಮಹೇಶ್ ಕೇರಿ ಧ್ವನಿಗೂಡಿಸಿ ಸ್ವಾತಂತ್ರ್ಯ ದಿನದಂದು ನಡೆದ ಈ ಬೆಳವಣಿಗೆಯನ್ನು ನಾನು ಖಂಡಿಸುತ್ತೇನೆ ಮತ್ತು ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಸರಕಾರಕ್ಕೆ ಒತ್ತಾಯ ಮಾಡಬೇಕು ಎಂದು ಹೇಳಿದರು. ಇದು ನಮ್ಮ ಗ್ರಾಮಕ್ಕೆ ಸೇರಿದ ವಿಷಯವಲ್ಲ, ಕಬಕದಲ್ಲಿ ನಡೆದ ಘಟನೆಯ ಬಗ್ಗೆ ಪೊಲೀಸ್ ಕೇಸು, ಕೋರ್ಟ್ ಎಲ್ಲಾ ಆಗಿದೆ. ಅದನ್ನು ಅವರು ನೋಡಿಕೊಳ್ಳುತ್ತಾರೆ ಇದು ಇಲ್ಲಿಗೆ ಅಗತ್ಯವಿಲ್ಲದ ವಿಷಯ, ಇದೊಂದು ವಿವಾದಾತ್ಮಕ ವಿಷಯ ಇದು ಇಲ್ಲಿಗೆ ಅಗತ್ಯವಿಲ್ಲ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ, ವಿರೋಧ,ತಡೆಯೊಡ್ಡುವುದು ಇತ್ಯಾದಿ ಸಹಜ, ಇದು ನಮ್ಮ ಪಂಚಾಯತ್ ವ್ಯಾಪ್ತಿಗೆ ಬರದ ವಿಷಯ, ಇದಕ್ಕೆ ಪೊಲೀಸ್ ಇಲಾಖೆ ಇದೆ ಎಂದು ಅಬ್ದುಲ್ ಸಿರಾಜುದ್ದೀನ್ ಹೇಳಿದರು. ಇದಕ್ಕೆ ಅಶ್ರಫ್ ಧ್ವನಿಗೂಡಿಸಿ ಇದು ನಮ್ಮ ಗ್ರಾಮಕ್ಕೆ ಸಂಬಂಧಿಸಿದ ವಿಷಯವಲ್ಲ ಎಂದರು. ಇಂತಹ ಘಟನೆಗಳು ಮುಂದಕ್ಕೆ ನಮ್ಮ ಗ್ರಾಮದಲ್ಲೂ ಬರಬಹುದು ಆದ್ದರಿಂದ ಇಂತಹ ಘಟನೆಯನ್ನು ಖಂಡಿಸಬೇಕು ಎಂದು ಅಧ್ಯಕ್ಷೆ ತ್ರಿವೇಣಿ ಆಗ್ರಹಿಸಿದರು. ಈ ಬಗ್ಗೆ ವಾದ ವಿವಾದ ನಡೆಯಿತು. ಕೊನೆಗೆ ಈ ವಿಷಯವನ್ನು ಮತಕ್ಕೆ ಹಾಕಲಾಯಿತು. ಒಟ್ಟು 15 ಮಂದಿ ಸದಸ್ಯರಲ್ಲಿ 7 ಮಂದಿ ಸದಸ್ಯರು ಖಂಡನೆ ಮಾಡಬೇಕು ಎಂದು ಆಗ್ರಹಿಸಿ ಕೈ ಎತ್ತುವ ಮೂಲಕ ಸಹಮತ ಸೂಚಿಸಿದರು. ಅದರಂತೆ ನಿರ್ಣಯಿಸಲಾಯಿತು.

ಕಾರ್ಯದರ್ಶಿ ಜಯಂತಿ ಸರಕಾರದ ಸುತ್ತೋಲೆಗಳನ್ನು ಓದಿದರು. ಅಭಿವೃದ್ಧಿ ಅಧಿಕಾರಿ ಅವಿನಾಶ್ ಮೇರ್ಲ ಸಾರ್ವಜನಿಕರ ಅರ್ಜಿಗಳನ್ನು ಓದಿ ಸದಸ್ಯರ ಅಭಿಪ್ರಾಯಗಳನ್ನು ಆಲಿಸಿ ವಿವಿಧ ನಿರ್ಣಯಗಳನ್ನು ಮಾಡಿಕೊಂಡರು. ಸದಸ್ಯರುಗಳಾದ ಎಸ್.ಲತೀಫ್, ಶಾರದಾ, ರೇಖಾ, ನಿಮಿತಾ ಬಿ, ವನಿತಾ ಕುಮಾರಿ, ನಳಿನಾಕ್ಷಿಯವರುಗಳು ಚರ್ಚೆಯಲ್ಲಿ ಪಾಲ್ಗೊಂಡರು. ಗ್ರಾಪಂ ಸಿಬ್ಬಂದಿಗಳು ಸಹಕರಿಸಿದ್ದರು.

ಇಂದು ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ
ಪಶು ವೈದ್ಯಕೀಯ ಆಸ್ಪತ್ರೆ ಸಹಯೋಗದೊಂದಿಗೆ ಒಳಮೊಗ್ರು ಗ್ರಾಪಂ ವ್ಯಾಪ್ತಿಯ ಸಾಕು ನಾಯಿಗಳಿಗೆ ರೇಬಿಸ್ ಲಸಿಕಾ ಕಾರ್ಯಕ್ರಮ ಸೆ.4ರಂದು ಮಾಡುವುದು ಎಂದು ನಿರ್ಣಯಿಸಲಾಯಿತು. ಬೆಳಿಗ್ಗೆ ಲಸಿಕಾ ಕಾರ್ಯಕ್ರಮ ಆರಂಭಗೊಂಡು ಗ್ರಾಮದ ಪ್ರಮುಖ ಕಡೆಗಳಲ್ಲಿ ನಡೆಯಲಿದೆ. ಗ್ರಾಮಸ್ಥರು ತಮ್ಮ ಸಾಕು ನಾಯಿಗಳನ್ನು ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಬಂದು ಲಸಿಕೆ ಹಾಕಿಸಿಕೊಳ್ಳುವಂತೆ ಅಧ್ಯಕ್ಷರು ತಿಳಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.