ಆಚಾರ್ಯ ದೇವೋಭವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬ್ಬದ ಹಸರ. ಮನದ ಮೂಲೆಯಲ್ಲಿ ಒಂದಷ್ಟು ಸಡಗರ. ಮೌನವಾಂತ ತಲೆ ತುಂಬ ಕಲಿಕೆಯಾಲಯ ತೆರೆಯಲೆಂಬಾಶಯ. ಕಾಲಗೆಜ್ಜೆಗಳ ದನಿಯಿಲ್ಲ. ಚಪ್ಪಲಿಗಳ ಚರ ಪರ ಸದ್ದಿಲ್ಲ. ಸರ್, ಮೇಡಂ ಉಲಿಗಳ ತುಡಿತವಿಲ್ಲ. ಮನೆ ಕೆಲಸ ಮಾಡಿದೆಯಾ ಓದಿ ಬಂದಿರುವೆಯಾ, ಪರೀಕ್ಷೆ ಬರೆಯಿರಿ, ಮೆದು ಮಾತಿನ ತಾಕೀತುಗಳ ಉಚ್ಚಾರವಿಲ್ಲ. ಆದರೂ ಯುಗ ಕಳೆದು ಯುಗಾದಿ ಬಂದಂತೆ ಮತ್ತೆ ಬಂದಿದೆ ಅಕ್ಷರ ಪ್ರಭುವಿನ ಸಾಧನೆಯ ನೆನೆದು ಸಂಭ್ರಮಿಸುವ ಶಿಕ್ಷಕರ ದಿನ.

ಕೊರೊನಾ ಕಾರಣ ಗರಬಡಿದ ಶಿಕ್ಷಣ ವ್ಯವಸ್ಥೆಯನ್ನೆಂದೂ ಏಕಾಂಗಿಯಾಗಿಸದೆ ಶ್ರಮದ ಬೆವರ ಹರಿಸಿ ಶಕ್ತಿ ಯುಕ್ತಿಗಳ ಬೆಸೆದು ವಿಧವಿಧ ರೂಪಗಳ ಮೂಲಕ ಅಧ್ಯಾಪನ ಕಾಯಕದಲ್ಲಿ ಅಲ್ಪ ತೃಪ್ತಿ ಕಂಡರೂ ಸಾಲದೆಂಬಂತೆ ತಮ್ಮ ಶಿಷ್ಯರ ಉನ್ನತಿಗಾಗಿ ಎಡೆಬಿಡದೆ ಶ್ರಮಿಸುತ್ತಿರುವ ಕಾಯಕಯೋಗಿ ಗುರುಗಳಿಗಿಂದು ಪರಮಶ್ರೇಷ್ಠ ಗುರು ಡಾ| ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನುಮದಿನ, ತಾವೇ ಡಾ| ರಾಧಾಕೃಷ್ಣನ್ ರೆಂಬ ಪುಟ್ಟ ಅಹಮಿಕೆಯ ಸಂತಸದ ಶಿಕ್ಷಕರ ದಿನ. ಹಿಂದಕ್ಕೆ ಗುರುವಿದ್ದು ಮುಂದಕ್ಕೆ ಗುರಿಯಿರಲು ಸಾಗಿದುದು ಧೀರದಂಡು ಎಂಬ ಕುವೆಂಪುರವರ ಕವಿವಾಣಿಯಂತೆ ಗುರಿ ತಲುಪುವ ಓಟದಲ್ಲಿ ಶಿಷ್ಯನಿಗೆ ಗುರುವಿನಾಶಯ ಅವಶ್ಯ, ಅನಿವಾರ್ಯ. ತಪ್ಪಿದಲ್ಲಿ ಮುಗ್ಗರಿಸುವ ಪಾಡು ಕೂಡಾ ಕಟ್ಟಿಟ್ಟ ಬುತ್ತಿ. ಆದುದರಿಂದಲೇ ಗುರುವೆಂದೂ ಹಿಂಬಾಲಕ, ಪ್ರೇರಕ, ಪ್ರೋತ್ಸಾಹಕ. ತನ್ನ ಶಿಷ್ಯ ಗೆಲುವಿನ ಶಿಖರವೇರಿದಾಗ ತೃಪ್ತ ಆಸ್ವಾದಕ.

ಬದಲಾವಣೆಯ ಜಗದ ನಿಯಮದೊಳು ನಿತ್ಯ ಸಂಚಾರಿಗಳು ನಾವು. ಗುರು-ಶಿಷ್ಯ ಪರಂಪರೆಯ ಬೆಸೆವ ಕೊಂಡಿ ಸಡಿಲಗೊಳ್ಳುತ್ತಿದೆ. ತಂತ್ರಜ್ಞಾನ, ಸಮಾಜದ ವಿಭಿನ್ನ ಸ್ಥರಗಳ ವೈರುಧ್ಯತೆ, ಚಿಕ್ಕ ಕುಟುಂಬಗಳು, ಪೋಷಕರ ಅತೀವ ಕಾಳಜಿ. ಹೀಗೆ ಕಾರಣಗಳು ಹಲವು. ಆದರೆ ಗುರು ಮುಖೇನ ಪಡೆದ ಶಿಕ್ಷಣ ಮಾತ್ರವೇ ಚಿರಸ್ಥಾಯಿ. ಈ ನಿಟ್ಟಿನಲ್ಲಿ ಅನ್ಯ ವಚನವಿಲ್ಲ. ಆದರ್ಶ ಶಿಕ್ಷಕ ಜ್ಞಾನ ವಾಂಛೆಯ ಮಗುವಿನ ಮೃದು ಮನಕ್ಕೆ ಸೆವ ಅರಿವಿನ ಕುಸುಮ ಶರ ಫಸಲಾಗದಿರದು. ಆದುದರಿಂದಲೇ ಅಧ್ಯಾಪನ ಪ್ರಪಂಚದ ಅತಿ ಶ್ರೇಷ್ಠ ವೃತ್ತಿ!.

ಕಾಯಕ ಶ್ರೇಷ್ಠತೆಗೆ ಭಾಜನರಾದಾಗ ಅದನ್ನು ಉಳಿಸುವ ಕಾರ್ಯವೂ ನಮ್ಮದಾಗಬೇಕಿದೆ. ಅಧ್ಯಾಪಕರೆಂದೂ ನಿತ್ಯ ಅಧ್ಯಯನಶೀಲರಾಗಿರಬೇಕು. ಶಿಷ್ಯರು, ಸಹೋದ್ಯೋಗಿಗಳು, ಇಲಾಖೆ, ಸಮಾಜ ಗುರುತಿಸುವ ಗುರುಗಳಾಗಬೇಕು. ಅಧ್ಯಾಪನವೇ ದಾಸೋಹವಾಗಬೇಕು. ಕಾಯಕ ಮಾತನಾಡಬೇಕು. ತಾಂತ್ರಿಕತೆಯ ಮಾಂತ್ರಿಕತನಕ್ಕಾಂತು ಮಾತಿಗೆ ವಿರಾಮ ನೀಡಬಾರದು. ತರಗತಿಯಲ್ಲರೆ ಘಳಿಗೆಯಾದರೂ ಮೌಲ್ಯ ಮಾತನಾಡಬೇಕು. ನಡೆ, ನುಡಿ ಆಚಾರ ವಿಚಾರಗಳಲ್ಲಿ ಶಿಷ್ಯ ಮೆಚ್ಚುವ ಗುರುವಾಗಬೇಕು. ಹೌದು ಆಗಲೇ ಸಾರ್ಥಕ ಆಚಾರ್ಯ ದೇವೋಭವ ಎಂಬ ಬಲ್ಲವರ ಉಕ್ತಿ. ‘ಗುರು’ ದಿನಾಚರಣೆಯ ಶ್ರೇಷ್ಠತೆಗೆ ಅದುವೇ ಶಕ್ತಿ! 

✍️ಪುಷ್ಪಲತಾ.ಎಂ
ಸಹ ಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು
ಪುತ್ತೂರು.ದ. ಕ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.