HomePage_Banner
HomePage_Banner
HomePage_Banner
HomePage_Banner

ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ – ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಗೋಳಿತ್ತಟ್ಟು ಶಾಲೆಯ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ್ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ೨೦೨೧ನೇ ಸಾಲಿನ ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಗೊಂಡಿದ್ದು ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಗೋಳಿತ್ತಟ್ಟು ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ, ಬಜತ್ತೂರು ಕ್ಲಸ್ಟರ್‌ನ ಪ್ರಭಾರ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಶೀನಪ್ಪ ನಾಯ್ಕ್ ಎಸ್.,ರವರು ಆಯ್ಕೆಯಾಗಿದ್ದಾರೆ.

ಶೀನಪ್ಪ ನಾಯ್ಕ್‌ರವರು ಕಳೆದ ೩೧ ವರ್ಷಗಳಿಂದ ಸಹಶಿಕ್ಷಕರಾಗಿ, ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ, ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ೧೯೯೦ರಲ್ಲಿ ಪುತ್ತೂರು ತಾಲೂಕಿನ ಪಡುಮಲೆ ಕಿ.ಪ್ರಾ.ಶಾಲೆಗೆ ಸಹಶಿಕ್ಷಕರಾಗಿ ಸೇರ್ಪಡೆಗೊಂಡ ಇವರು ೧೯೯೩ರಲ್ಲಿ ಇಚ್ಲಂಪಾಡಿ ಗ್ರಾಮದ ಕೊರಮೇರು ಸರಕಾರಿ ಕಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡಿದ್ದರು. ಆ ಬಳಿಕ ೧೯೯೪ರಿಂದ ೨೦೦೭ರ ತನಕ ನೆಲ್ಯಾಡಿ ಗ್ರಾಮದ ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸೇವೆ ಸಲ್ಲಿಸಿ ೨೦೦೭ರಲ್ಲಿ ಮುಖ್ಯಶಿಕ್ಷಕರಾಗಿ ಭಡ್ತಿಗೊಂಡು ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ಸರಕಾರಿ ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡಿದ್ದರು. ೨೦೦೭ರಿಂದ ೨೦೧೪ರ ತನಕ ಇವರು ನೆಲ್ಯಾಡಿ ಕ್ಲಸ್ಟರ್‌ನ ಸಿಆರ್‌ಪಿಯಾಗಿಯೂ ನಿಯೋಜನೆಗೊಂಡಿದ್ದರು. ೪-೮-೨೦೧೪ರಂದು ಗೋಳಿತ್ತಟ್ಟು ಸರಕಾರಿ ಹಿ.ಪ್ರಾ.ಶಾಲೆಗೆ ಮುಖ್ಯಶಿಕ್ಷಕರಾಗಿ ವರ್ಗಾವಣೆಗೊಂಡು ಆಗಮಿಸಿದ್ದ ಇವರು ಇಲ್ಲಿ ಕಳೆದ ೭ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಕಲಿಕೆಗೆ ಪೂರಕವಾಗಿ ಶಾಲೆಯಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇವರು ಬಜತ್ತೂರು ಕ್ಲಸ್ಟರ್‌ನ ಪ್ರಭಾರ ಸಿಆರ್‌ಪಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಕ್ಷಣ ಇಲಾಖೆಯ ಅಜಾತಶತ್ರು, ಹೆಸರು ಬಯಸದ ಕಾಯಕ ಯೋಗಿ ಎಂದು ಕರೆಸಿಕೊಂಡಿರುವ ಇವರು, ಯಶಸ್ವಿ ಸಂಘಟಕರಾಗಿ, ವಿಜ್ಞಾನದ ಕುರಿತು ಅಪಾರ ಜ್ಞಾನವನ್ನು ಹೊಂದಿದ್ದಾರೆ. ಗೋಳಿತ್ತಟ್ಟು ಶಾಲೆಯಲ್ಲಿ ಹಿಂದಿನ ಎಸ್‌ಡಿಎಂಸಿ ಅಧ್ಯಕ್ಷರಾದ ಆಯುರ್ವೇದ ವೈದ್ಯ ಡಾ.ರಾಮಕೃಷ್ಣ ಭಟ್‌ರವರ ಮಾರ್ಗದರ್ಶನದಲ್ಲಿ ಸುಮಾರು ೮೦ ಔಷಧೀಯ ಗಿಡಗಳಿರುವ ಧನ್ವಂತರಿ ಔಷಧೀಯ ವನ ನಿರ್ಮಾಣ, ಇದಕ್ಕೆ ಸ್ವಂತ ಖರ್ಚಿನಲ್ಲಿ ತಂತಿ ಬೇಲಿ ನಿರ್ಮಾಣ ಮಾಡಿದ್ದರು. ಸುಮಾರು ೫೦ಸಾವಿರ ರೂ.ವೆಚ್ಚದಲ್ಲಿ ಶಾಲೆಗೆ ಪ್ರೊಜೆಕ್ಟರ್ ಅಳವಡಿಸಿ ಕಲಿಕೆಗೆ ಆಧುನಿಕ ಸ್ಪರ್ಶ ನೀಡಿದ ಹೆಗ್ಗಳಿಕೆ ಇವರದ್ದಾಗಿದೆ. ಅನುದಾನ ಸಮರ್ಪಕವಾಗಿ ಬಳಸಿಕೊಂಡು ಶಾಲೆಗೆ ಸುಸಜ್ಜಿತ ಕೊಠಡಿ ನಿರ್ಮಾಣ, ಅನ್ನಪೂರ್ಣ ಅಕ್ಷರದಾಸೋಹ ಕೊಠಡಿ, ಉದ್ಯೋಗ ಖಾತರಿ ಯೋಜನೆಯಡಿ ಸುಸಜ್ಜಿತ ಶೌಚಾಲಯ ನಿರ್ಮಾಣ, ೧ ಲಕ್ಷ ರೂ.,ಅನುದಾನದ ನೀರಿನ ಟ್ಯಾಂಕ್ ನಿರ್ಮಾಣ, ೩ ಲಕ್ಷ ರೂ.,ಅನುದಾನದಲ್ಲಿ ತಡೆಗೋಡೆ ನಿರ್ಮಾಣ, ಧ್ವಜಸ್ತಂಭ ಕಟ್ಟೆ ನಿರ್ಮಾಣ ಮಾಡಿದ್ದಾರೆ. ೨೦೧೮-೧೯ನೇ ಶೈಕ್ಷಣಿಕ ವರ್ಷದಲ್ಲಿ ಸರ್ವಶಿಕ್ಷಣ ಅಭಿಯಾನದ ನಲಿ-ಕಲಿ ಕೋಶದ ವತಿಯಿಂದ ನಡೆಸಲಾದ ‘ಮ್ಯಾಕ್ರೋ ಮತ್ತು ಮೈಕ್ರೋ’ಅಧ್ಯಯನದಲ್ಲಿ ತಾಲೂಕಿನ ೩ ಅತ್ಯುತ್ತಮ ಶಾಲೆಗಳಲ್ಲಿ ೧ ಎನ್ನುವ ಹೆಗ್ಗಳಿಕೆಯೂ ಗೋಳಿತ್ತಟ್ಟು ಶಾಲೆಗೆ ಸಿಕ್ಕಿದೆ. ವಿಶೇಷ ಬೇಸಿಗೆ ಶಿಬಿರದ ಮೂಲಕ ವಿದ್ಯಾರ್ಥಿಗಳಿಗೆ ಸಂಗೀತ ವಾದ್ಯ ಕಲಿಕೆ, ಸಹಪಠ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ವಿವಿಧ ಮೂಲಗಳಿಂದ ಸಂಗ್ರಹಿಸಿದ ಸಾವಿರಾರು ಪುಸ್ತಕಗಳನ್ನೊಳಗೊಂಡ ಪುಸ್ತಕಾಲಯ, ಬಾಲವನದ ನಿರ್ಮಾಣ, ತರಕಾರಿ ತೋಟ ನಿರ್ಮಾಣ, ಶಾಲೆಯ ಜಾಗದಲ್ಲಿ ೨೦೦ ಅಡಿಕೆ ಸಸಿನೆಟ್ಟು ಕಲಿಕೆಯೊಂದಿಗೆ ಕೃಷಿಯ ಅರಿವು, ಸುಮಾರು ೨೫ಕ್ಕೂ ಹೆಚ್ಚು ಬಗೆಯ ಅರಣ್ಯ ಉತ್ಪನ್ನಗಳ ಹಾಗೂ ವಿವಿಧ ಹಣ್ಣುಗಳನ್ನು ಬೆಳೆಯುವ ಸುಮಾರು ೬೦೦ರಷ್ಟು ಗಿಡಗಳನ್ನು ‘ಮಿಯಾವಾಕಿ ಅರಣ್ಯ’ ಎನ್ನುವ ಪರಿಕಲ್ಪನೆ ಪ್ರಯೋಗದ ಪ್ರೇರಕ, ಪರಿಸರ ಪ್ರೇಮಿ ದುರ್ಗಾಸಿಂಗ್‌ರವರ ಮಾರ್ಗದರ್ಶನದಲ್ಲಿ ಶಾಲೆಯಲ್ಲಿ ಅನುಷ್ಠಾನ ಮಾಡಿದ ಕೀರ್ತಿ ಇವರದ್ದಾಗಿದೆ.

ಬಜತ್ತೂರು ಹಾಗೂ ನೆಲ್ಯಾಡಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕ್ಲಸ್ಟರ್ ಮಟ್ಟದ ಹಲವಾರು ಪ್ರತಿಭಾ ಕಾರಂಜಿ ಕಾರ್ಯಕ್ರಮ, ಕಲಿಕೋತ್ಸವ, ಮುಖ್ಯಶಿಕ್ಷಕರಾಗಿರುವ ಗೋಳಿತ್ತಟ್ಟು ಶಾಲೆಯಲ್ಲಿ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ ಆಯೋಜಿಸಿದ್ದರು. ಮಕ್ಕಳನ್ನು ಕಲಿಕೆಯ ಮುಖ್ಯ ವಾಹಿನಿಗೆ ಕರೆತರುವ ಉದ್ದೇಶದೊಂದಿಗೆ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿದ್ದ ಶೀನಪ್ಪ ನಾಯ್ಕ್‌ರವರ ನೇತೃತ್ವದಲ್ಲಿ ಆಯೋಜನೆಗೊಂಡ ‘ಮನವರಿಕೆ’ ಎಂಬ ವಿನೂತನ ಕಾರ್ಯಕ್ರಮ ಶಾಲೆಯಿಂದ ದೂರ ಉಳಿದ ಮಕ್ಕಳ ಮನಪರಿವರ್ತಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ವಿದ್ಯಾರ್ಥಿಗಳ ಸಾಹಿತ್ಯಾಸಕ್ತಿಗೆ ಪ್ರೇರಣೆ ನೀಡುವ ಸಲುವಾಗಿ ‘ಚಿತ್ತಾರ’ಎಂಬ ಮಾಸ ಪತ್ರಿಕೆಯನ್ನು ಶಿಕ್ಷಕರ ಸಹಕಾರದೊಂದಿಗೆ ನಿರ್ವಹಿಸಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ತಲುಪಿಸಿದ ಕೀರ್ತಿಯೂ ಇವರದ್ದಾಗಿದೆ.

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಸರೋಳಿಯ ಕೃಷಿಕ ದಿ.ರಾಮ ನಾಯ್ಕ್ ಹಾಗೂ ಸೀತಮ್ಮ ದಂಪತಿಯ ಪುತ್ರನಾದ ಶೀನಪ್ಪ ನಾಯ್ಕ್‌ರವರು, ಕರ್ನೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ, ಪುತ್ತೂರು ಜೂನಿಯರ್ ಕಾಲೇಜು ಮತ್ತು ಈಶ್ವರಮಂಗಲ ಪಂಚಲಿಂಗೇಶ್ವರ ಪ್ರೌಢಶಾಲೆಯಲ್ಲಿ ಹೈಸ್ಕೂಲ್, ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಪಡೆದುಕೊಂಡಿದ್ದಾರೆ. ಮಂಗಳೂರಿನ ಕೋಡಿಯಲ್‌ಬೈಲ್‌ನಲ್ಲಿರುವ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ೧೯೯೫ರಲ್ಲಿ ಟಿಸಿಹೆಚ್ ಪಡೆದುಕೊಂಡ ಇವರು ಬಳಿಕ ೫ ವರ್ಷ ಮನೆಯಲ್ಲಿ ಕೃಷಿ ಕೆಲಸದಲ್ಲಿ ತೊಡಗಿಕೊಂಡು ೧೯೯೦ರಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದ್ದರು. ಪ್ರಸ್ತುತ ಕೌಕ್ರಾಡಿ ಗ್ರಾಮದ ಬರೆಗುಡ್ಡೆ ‘ವಾತ್ಸಲ್ಯ’ದಲ್ಲಿ ವಾಸವಾಗಿದ್ದಾರೆ. ಇವರ ಪತ್ನಿ ಜಯಂತಿ ಎಸ್.,ರವರು ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಪುತ್ರ ವಂದನ್ ಕುಮಾರ್‌ರವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಕಾಣಿಯೂರು ಶಾಖೆಯ ಉದ್ಯೋಗಿಯಾಗಿದ್ದಾರೆ. ಸೊಸೆ ಜ್ಯೋತಿವಂದನ್ ಗೃಹಿಣಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.