HomePage_Banner
HomePage_Banner
HomePage_Banner
HomePage_Banner

ಗುರಿ ತೋರುವ ಗುರುಗಳೇ ಪರಮ ಶ್ರೇಷ್ಠ..

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

“ಗುರು” ಎಂದರೆ ಎಲ್ಲಕ್ಕಿಂತಲೂ ಮಿಗಿಲಾದುದು. ಗುರುವಿನ ಕೃಪಾಕಟಾಕ್ಷ ಒಂದಿದ್ದರೆ ಸಾಕು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು.ನಮ್ಮ ಭವಿತವ್ಯಕ್ಕೆ ಅಗತ್ಯವಾಗುವ ಸಂಸ್ಕಾರಗಳನ್ನು ತಂದೆ ತಾಯಿ ನಮಗೆ ಧಾರೆಯೆರೆದರೆ, ಗುರುಗಳು ಶಿಕ್ಷಣದ ಮುಖಾಂತರ ನಮ್ಮ ಬದುಕನ್ನು ರೂಪಿಸುವವರು.ಹಾಗಾಗಿ “ತಾಯಿ ಜೀವ ನೀಡಿದರೆ ಶಿಕ್ಷಕರು ಜೀವನವನ್ನೇ ನೀಡ ಬಲ್ಲರು” ಎಂಬುವುದು ಸಾರ್ವಕಾಲಿಕ ಸತ್ಯ.ವೃತ್ತಿಯಲ್ಲೇ ಅತ್ಯಂತ ಶ್ರೇಷ್ಠ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ. ತಾನು ಕಲಿತು ತನ್ನೊಳಗಿರುವ ಅರಿವನ್ನು ಸಮಾಜಕ್ಕೆ ಪಸರಿಸುವ ಏಕೈಕ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ ಮಾತ್ರ. ಅಲ್ಲದೇ ಒಬ್ಬ ಶಿಕ್ಷಕ ಪಾಠವನ್ನಷ್ಟೇ ಮಾಡುವುದಿಲ್ಲ. ಬದಲಾಗಿ ನಿರ್ದಿಷ್ಟವಾದ ಗುರಿಯ ಕಡೆಗೆ ನಮ್ಮ ಕೈ ಹಿಡಿದು ಗುರುವಾಗಿ ಕೊಂಡೊಯ್ಯಬಲ್ಲ ಒಂದು ಅಪರಿಮಿತ ಶಕ್ತಿ. ಅಂತೆಯೇ ಬದುಕಿಗೆ ನಿಷ್ಕಲ್ಮಶವಾಗಿ ಆಶಿರ್ವದಿಸಿ ಕಷ್ಟಗಳನ್ನು ಎದುರಿಸುವ ಧೈರ್ಯವನ್ನು ಕಲಿಸುವವರು ಶಿಕ್ಷಕರು. ಪ್ರತಿಯೊಬ್ಬರ ಬದುಕಿನಲ್ಲೂ ಶಿಕ್ಷಕನ ಪಾತ್ರ ಅಭೂತಪೂರ್ವ ವಾದುದು..ಶಿಲೆಯೊಂದಕ್ಕೆ ಉಳಿ ಪೆಟ್ಟು ನೀಡಿ ಸುಂದರ ರೂಪ ನೀಡುವ ಶಿಲ್ಪಿಗೂ ಶಿಕ್ಷಕನಿಗೂ ಖಂಡಿತವಾಗಿಯೂ ವ್ಯತ್ಯಾಸ ಇಲ್ಲ.ಯಾಕೆಂದರೆ ಖಾಲಿ ಮೆದುಳಿನೊಳಗೆ ಶಾಲೆಗೆ ಅಡಿ ಇಡುವ ಒಂದು ಮುಗ್ಧ ಮಗು ಶಿಕ್ಷಣ ಮುಗಿಸಿ ಪ್ರಬುದ್ಧನಾಗಿ ಹೊರಬರುತ್ತಾನೆಂದರೆ ಅದಕ್ಕೂ ಮೂಲ ಕಾರಣ ಶಿಕ್ಷಕರು.

“ಗುರು -ಶಿಷ್ಯ ಪರಂಪರೆ” ಎನ್ನುವುದು ನಮ್ಮ ದೇಶದ ವಿಶೇಷವಾದ ವೈಶಿಷ್ಟ್ಯವೂ ಹೌದು. ನಮಗೆ ಶಿಕ್ಷಣ ನೀಡಿದ ಪ್ರತಿಯೊಬ್ಬ ಶಿಕ್ಷಕರನ್ನು ನಾವು ಜೀವನದುದ್ದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಸದಾ ನೆನೆಯುತ್ತೇವೆ. ನಮ್ಮ ಸರ್ವಾಂಗೀಣ ಬೆಳವಣಿಗೆಗೆ ಅವರು ಬೋಧಿಸುವ ಮಾರ್ಗದರ್ಶನ ನಮ್ಮ ಅಂತ್ಯಕಾಲದವರೆಗೂ ನಮ್ಮ ಕೈ ಬಿಡಲಾರವು. ಇಂದು ಸಮಾಜದ ಮಧ್ಯೆ ನಾವು ಎಲ್ಲರೊಳಗೆ ಒಂದಾಗಿ ಬೆರೆಯಲು ಸಾಧ್ಯವಾಗುತ್ತಿದೆ ಎಂದರೆ ಅದು ಕೂಡ ನಮ್ಮ ಶಿಕ್ಷಕರು ನೀಡಿದ ಸಂಸ್ಕಾರ ಭರಿತ ಶಿಕ್ಷಣದಿಂದಲೇ ಎಂದರೆ ತಪ್ಪಲ್ಲ…

ಶಿಕ್ಷಿಸಿ..ಕ್ಷಮಿಸಿ..ಕಲಿಸುವವನೇ ನಿಜವಾದ ಗುರು. ಯಾಕೆಂದರೆ ಶಾಲೆಯೆಂಬ ನಾಲ್ಕು ಗೋಡೆಯೊಳಗೆ ಕಲಿಸಿದ, ಬೋಧಿಸಿದ ಪ್ರತಿಯೊಂದು ವಿಚಾರಗಳು ಮುಂದೆ ನಮ್ಮ ಬದುಕಿನುದ್ದಕ್ಕೂ ದಾರಿ ದೀಪವಾಗುವ ಬಗೆ ಸೋಜಿಗ ಎಂದೆಸಿಸುತ್ತದೆ.ಅದರಲ್ಲೂ ಮುಖ್ಯವಾಗಿ ಪ್ರಾಥಮಿಕ ಹಂತದಿಂದ ಪ್ರೌಢ ಹಂತದವರೆಗೆ ಪಡೆದ ಶಿಕ್ಷಣ ಪರಮ ಅದ್ಭುತ. ಪಠ್ಯದೊಂದಿಗೆ ಬದುಕಿಗೆ ಬೇಕಾಗುವ ಅನೇಕ ಸಂಸ್ಕಾರಗಳನ್ನು, ಆಚಾರ ವಿಚಾರಗಳನ್ನು ಕಲಿಸಿ ಸಮಾಜದೊಂದಿಗೆ ಏಕರೂಪವಾಗಲು ಕಲಿಸುವ ಶಿಕ್ಷಕರಿಗೆ ಬಹುಶಃ ಸರಿ ಸಾಟಿ ಬೇರಾವುದಿಲ್ಲ ಎಂದೆನಿಸುತ್ತದೆ. ಹಾಗಾಗಿ ನಮ್ಮ ಬದುಕಿನಲ್ಲಿ ಅರಿವೆಂಬ ಬೆಳಕನ್ನು ಚೆಲ್ಲಿದ ನನ್ನೆಲ್ಲ ಶಿಕ್ಷಕರನ್ನು ನಾನು ಅನುದಿನವೂ ನೆನೆಯುತ್ತೇನೆ.ಅದರಲ್ಲೂ ನನಗೆ ಪ್ರಾಥಮಿಕ ಹಂತದಲ್ಲಿ ಬೋಧಿಸಿದ ಎಲ್ಲಾ ಗುರುಗಳು ಒಂದು ರೀತಿಯಲ್ಲಿ ನನ್ನ ತಂದೆ ತಾಯಿಯ ಇನ್ನೊಂದು ರೂಪ ಎಂದೇ ಹೇಳುತ್ತೇನೆ.ಮನೆಯಲ್ಲಿಯೇ ಆಡಿ ಬೆಳೆದು ನಂತರ ಶಾಲೆಗೆ ಹೆಜ್ಜೆ ಇಟ್ಟಾಗ ಅಲ್ಲಿಯ ವಾತಾವರಣ ಹಿಡಿಸದೆ ರಚ್ಚೆ ಹಿಡಿದು ಅತ್ತಾಗ ಎತ್ತಿ ಮುದ್ದಾಡಿದ ಟೀಚರ್, ಅಕ್ಷರ ತಲೆಗೆ ಹತ್ತದೇ ಇದ್ದಾಗ ನೋವಾಗದಂತೆ ಮೆಲ್ಲನೆ ಪೆಟ್ಟು ಕೊಟ್ಟು ಗದರಿದ ಪರಿ, ತುತ್ತು ಬಾಯಿಗಿಟ್ಟು ಕಣ್ಣೀರು ಒರೆಸಿದ ದಿನಗಳು ಓಹ್ ಇವೆಲ್ಲವೂ ನೆನಪಿನಂಗಳದಿಂದ ಎಂದೆಂದೂ ಮಾಸದ ನೆನಪುಗಳು.ಶಿಕ್ಷಣ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಹೊರಟು ನಿಂತಾಗ, ತಮ್ಮ ಕಾಲಿಗೆ ಎರಗಿ ಆಶಿರ್ವಾದ ಬಯಸಿದಾಗ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟಂತೆ ಅತ್ತ ಶಿಕ್ಷಕರು ಎಂದೆಂದಿಗೂ ಅಜರಾಮರ.

ಹಾಗಾಗಿ ನನ್ನ ಪ್ರಕಾರ ಶಿಕ್ಷಕ ಎಂದರೆ ಪದಗಳಿಗೆ ನಿಲುಕದ್ದು.ಆದರೆ ಬೇಸರದ ಸಂಗತಿ ಏನೆಂದರೆ ಜಾಗತೀಕರಣದ ಈ ಯುಗದಲ್ಲಿ ಗುರು ಹಾಗೂ ವಿದ್ಯಾರ್ಥಿಗಳ ನಡುವಣ ಸಂಬಂಧ ಹದೆಗೆಡುತ್ತಿರುವುದು ಒಂದು ಖೇದಕರ ಸಂಗತಿ. ದಾರಿ ಮಧ್ಯೆ ಅಥವಾ ಬಸ್ ನಲ್ಲೋ ಗುರುಗಳನ್ನು ಕಂಡಾಗ ಓಡೋಡಿ ಬಂದು ಮಾತನಾಡುತ್ತಿದ್ದ ಕಾಲ ಇಂದು ನೆನಪು ಮಾತ್ರ. ‘ಹೇಗಿದ್ದೀರ ಮಾಷ್ಟ್ರೇ’ ಎಂದು ಕಾಳಜಿಯಿಂದ ಮನದಾಳದಿಂದ ಬರುತ್ತಿದ್ದ ಸಂಸ್ಕಾರ ಇಂದು ಮೂಲೆಗುಂಪಾಗಿದೆ.ತರಗತಿಯಿಂದ ಹೊರಬಂದಾಗ ಹಿಂದಿನಿಂದ ಶಿಕ್ಷಕರನ್ನು ಏಕವಚನದಲ್ಲಿ ಸಂಭೋದಿಸುವ ಇಂದಿನ ಕಾಲಘಟ್ಟದ ಕೆಲವು ವಿದ್ಯಾರ್ಥಿಗಳನ್ನು ಗಮನಿಸಿದರೆ ಮನಸ್ಸಿಗೆ ಬಹಳ ನೋವಾಗುತ್ತದೆ.

ಏನೇ ಆಗಲಿ ಜಗತ್ತು ಎಷ್ಟೇ ಮುಂದುವರಿದರೂ ಗುರು ಗೌರವ, ಪರಂಪರೆ, ಆಚಾರ ವಿಚಾರ ಎಂದೆಂದಿಗೂ ನಿಲ್ಲದಿರಲಿ.ಗುರುವಿನ ಅರಿವನ್ನು ಪಡೆದುಕೊಳ್ಳುವ ದಾಹ ಇಂದಿನ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಇರಲಿ.ಅಲ್ಲದೇ ಪ್ರತಿಯೊಬ್ಬ ಶಿಕ್ಷಕರು ತನ್ನ ಮಹತ್ವವಾದ ಜವಾಬ್ದಾರಿ ಯನ್ನು ಎಂದೆಂದಿಗೂ ಮರೆಯದೆ ಭವ್ಯ ಭಾರತದ ಪ್ರಜೆಗಳನ್ನು ರೂಪಿಸುವಂತಾಗಲಿ ಎಂಬುವುದು ನನ್ನ ಸದಾಶಯ…

ಭವ್ಯಾ.ಪಿ.ಆರ್ ನಿಡ್ಪಳ್ಳಿ
ಉಪನ್ಯಾಸಕಿ,
ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.