HomePage_Banner
HomePage_Banner
HomePage_Banner
HomePage_Banner

ವೀಕೆಂಡ್ ಕರ್ಫ್ಯೂ, ಲಾಕ್‌ಡೌನ್ (ಬಲಾತ್ಕಾರದ ಬಂದ್) ಬಗ್ಗೆ ಜನಾಕ್ರೋಶ, ವರ್ತಕರ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಶಾಸಕರಿಂದ ಮುಂದಿನ ವಾರ ತೆರವಿನ ಭರವಸೆ, ಅಧಿಕಾರಿಗಳಿಂದ ಮೀಟಿಂಗ್-ಕಾನೂನು ಪಾಲನೆಗೆ ವಿನಂತಿ
  • ಶಾಸಕರ ವಿನಂತಿಯ ಮೇರೆಗೆ ನೋವಿದ್ದರೂ ಪ್ರತಿಭಟನೆ ಹಿಂತೆಗೆಯಲು ವರ್ತಕರಿಂದ ಒಪ್ಪಿಗೆ
  • ಶಾಸಕರ ಜವಾಬ್ದಾರಿಯ ಅನಾವರಣ, ಅಧಿಕಾರಿಗಳಿಂದ ವರ್ತಕ ಸಂಘದ ಗುರುತಿಸುವಿಕೆ, ವರ್ತಕರಿಗೆ ಗೆಲುವಿನ ಭರವಸೆ

ವೀಕೆಂಡ್ ಕರ್ಫ್ಯೂ, ಲಾಕ್‌ಡೌನ್ (ಬಲಾತ್ಕಾರದ ಬಂದ್) ವಿಷಯದಲ್ಲಿ ಸುಳ್ಯ, ಪುತ್ತೂರು ಬೆಳ್ತಂಗಡಿಗಳಲ್ಲಿ ವರ್ತಕರಿಂದ, ರಿಕ್ಷಾ, ವಾಹನ ಚಾಲಕರಿಂದ, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪುತ್ತೂರಿನ ವರ್ತಕರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ತೊಂದರೆಗಳ ಕುರಿತು ಸಂಘದಲ್ಲಿ ಚರ್ಚಿಸಿ ಕರ್ಫ್ಯೂ ತೆರವುಗೊಳಿಸುವಂತೆ ಅಧಿಕಾರಿಗಳಿಗೂ, ಪುತ್ತೂರಿನ ಶಾಸಕ ಸಂಜೀವ ಮಠಂದೂರುರವರಿಗೆ ಮನವಿ ಸಲ್ಲಿಸಿದ್ದಾರೆ. ಆ ಮನವಿಗೆ ಸೂಕ್ತ ಪರಿಹಾರ ದೊರಕದೇ ಇದ್ದು, ಕರ್ಫ್ಯೂ ಲಾಕ್‌ಡೌನ್ ಮುಂದುವರಿದುದರಿಂದ ಅದನ್ನು ರದ್ದು ಪಡಿಸಲು ಆಗ್ರಹಿಸಿ, ಕೊರೋನಾ ನಿಯಮಾವಳಿಗಳಂತೆ ಅಂಗಡಿ ತೆರೆದು ವ್ಯವಹಾರ ನಡೆಸಿ ಪ್ರತಿಭಟನೆ ನಡೆಸುವುದಾಗಿ ತೀರ್ಮಾನಿಸಿದ್ದರು. ಆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ. ವೀಕೆಂಡ್ ಕರ್ಫ್ಯೂ, ಲಾಕ್‌ಡೌನ್‌ನಿಂದ ಪ್ರಯೋಜನಕ್ಕಿಂತ ತೊಂದರೆಯೇ ಜಾಸ್ತಿ. ಶನಿವಾರ, ಆದಿತ್ಯವಾರ ಬಂದ್ ಇರುವುದರಿಂದ ಶುಕ್ರವಾರ ಮತ್ತು ಸೋಮವಾರ ಜನಸಂದಣಿ ಜಾಸ್ತಿಯಾಗಿ ನಮಗೂ, ಜನರಿಗೂ ತೊಂದರೆಯಾಗುತ್ತಿದೆ. ಕೊರೋನಾ ಹರಡುವ ಸಂಭವ ಜಾಸ್ತಿ. ವಾರವಿಡೀ ಅಂಗಡಿ ತೆರೆದು ವ್ಯವಹಾರ ನಡೆಸಿದರೆ ಜನಸಂದಣಿ ಕಡಿಮೆ ಮಾಡಲು ಕಾರಣವಾಗುತ್ತದೆ. ಜನರಿಗೂ ನಮಗೂ ಪ್ರಯೋಜನವಾಗುತ್ತಿದೆ ನಾವು ಕೊರೋನಾ ನಿಯಮಾವಳಿಯಂತೆ ಅಂಗಡಿ ತೆರೆಯಲಿದ್ದೇವೆ. ಕಾನೂನು ಮಾಡುವವರು ನಮ್ಮ ಶಾಸಕರು ಆಗಿರುವುದರಿಂದ ಪಕ್ಷ ಭೇದವಿಲ್ಲದೆ, ಯಾವುದೇ ರಾಜಕೀಯವಿಲ್ಲದೆ ಆಯಾ ತಾಲೂಕಿನ ಶಾಸಕರ ಗಮನಕ್ಕೆ ತಂದು ಅವರನ್ನು ಮುಂದಿಟ್ಟು ಅವರ ನೇತೃತ್ವದಲ್ಲೇ ಪ್ರತಿಭಟನೆ ನಡೆಸುವ ನಿರ್ಧಾರ ವರ್ತಕರು ಕೈಗೊಂಡಿದ್ದರು. ಪುತ್ತೂರು, ಉಪ್ಪಿನಂಗಡಿ ಮಾತ್ರವಲ್ಲದೆ, ಕಡಬ ತಾಲೂಕಿನ ವರ್ತಕರೂ ಪ್ರತಿಭಟನೆ ನಿರ್ಧಾರಕ್ಕೆ ಸೇರಿಕೊಂಡದ್ದರಿಂದ ಅದು ಜಿಲ್ಲೆಯಾದ್ಯಂತ ಪ್ರಚಾರವಾಗಿ ಜಿಲ್ಲಾಡಳಿತದಲ್ಲಿ ಸಂಚಲನ ಮೂಡಿಸಿ ತಾಲೂಕು ಆಡಳಿತಕ್ಕೂ ಅದರ ಬಿಸಿ ಮುಟ್ಟಿಸಿದೆ.

ತೊಂದರೆಗೆ ಒಳಗಾಗುವ ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನು ರಚಿಸಬೇಕು:
ಇಂತಹ ಕಾನೂನನ್ನು ಮಾಡುವಾಗ ಅದರಿಂದ ತೊಂದರೆಗೊಳಗಾಗಬಹುದಾದ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ತೊಂದರೆಯಾಗದಂತೆ ಕಾನೂನು ಆಚರಣೆಗೆ ಬರಬೇಕು ಎಂಬುದು ಸಾಮಾಜಿಕ ನ್ಯಾಯ. ಆದರೂ ಅದು ಇಷ್ಟರವರೆಗೆ ಅನುಷ್ಠಾನಕ್ಕೆ ಬಂದಿಲ್ಲ ಎಂಬುದು ಈ ಎಲ್ಲಾ ಸಮಸ್ಯೆಗಳಿಗೆ ಕಾರಣ. ಈ ಸಲ ಪ್ರತಿಭಟನೆಯ ಕಾವು ಅಧಿಕಾರಿಗಳಿಗೂ, ಪೊಲೀಸರಿಗೂ ಮುಟ್ಟಿ ವರ್ತಕರ ಸಂಘದವರನ್ನು ಕರೆದು ಮೀಟಿಂಗ್ ಮಾಡಿ ಅವರಿಗೆ ಕಾನೂನುಗಳನ್ನು ವಿವರಿಸಿ ಇವರ ಸಮಸ್ಯೆಗಳನ್ನು ಕೇಳುವಂತೆ ಮಾಡಿದೆ ಅಂದರೆ ಅವರಿಗೆ ಸಲ್ಲಬೇಕಾದ ಗೌರವದ ಒಂದಂಶವನ್ನು ನೀಡಿದೆ. ಶಾಸಕ ಸಂಜೀವ ಮಠಂದೂರುರವರು ವರ್ತಕರ ಸಮಸ್ಯೆ ಅರಿತು ಮುಖ್ಯ ಮಂತ್ರಿಯರೊಂದಿಗೆ ಜಿಲ್ಲೆಯ ಶಾಸಕರ ಮತ್ತು ಮಂತ್ರಿಗಳ ನೇತೃತ್ವದಲ್ಲಿ ಮಾತನಾಡಿ ಮುಂದಿನ ವಾರದಿಂದಲೇ ವೀಕೆಂಡ್ ಕರ್ಫ್ಯೂ, ಲಾಕ್‌ಡೌನ್ ತೆರವುಗೊಳಿಸುವ ಭರವಸೆ ನೀಡಿದ್ದಾರೆ. ಅದಕ್ಕಾಗಿ ಮಾಡಿದ ಪ್ರಯತ್ನಗಳನ್ನು ವಿವರಿಸಿದ್ದಾರೆ. ಸುಳ್ಯದಲ್ಲಿ ಶಾಸಕ, ಸಚಿವರಾದ ಅಂಗಾರರವರು ಮುಖ್ಯ ಮಂತ್ರಿಯವರೊಂದಿಗೆ ಮಾತನಾಡಿ ತೆರವು ಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಕೇಸ್ ಆದರೂ ಆಗಲಿ ಕಾನೂನಿನ ಹೆಸರಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಎದುರಿಸುತ್ತೇವೆ ಎಂದು ತೀರ್ಮಾನ ಕೈಗೊಂಡಿದ್ದ ವರ್ತಕರು ಈ ಮೇಲಿನ ಬೆಳವಣಿಗೆಗಳಿಂದ ಮತ್ತು ಶಾಸಕ ಸಂಜೀವ ಮಠಂದೂರುರವರ ಮೇಲಿನ ವಿಶ್ವಾಸದಿಂದ ಅವರ ಮನವಿಗೆ ಸ್ಪಂದಿಸಿ ತಮ್ಮ ಈ ವಾರದ ಪ್ರತಿಭಟನೆಯನ್ನು ಹಿಂತೆಗದುಕೊಂಡಿದ್ದಾರೆ. ಅದನ್ನು ಪೊಲೀಸರಿಗೆ, ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇದರಿಂದ ವರ್ತಕರಲ್ಲಿ ಶಾಸಕರಲ್ಲಿ ಮತ್ತು ಅಧಿಕಾರಿಗಳಲ್ಲಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಬಗ್ಗೆ ಸಂತಸ ಮೂಡಿದೆ.

ವರ್ತಕರು ಭಯೋತ್ಪಾದಕರು ಅಲ್ಲ, ಪ್ರಾಮಾಣಿಕ ದುಡಿಮೆಯವರು, ತೆರಿಗೆ ಕಟ್ಟುವವರು, ಅವರಿಗೆ ಗೌರವ ಸಲ್ಲಬೇಕು:
ವರ್ತಕರು ಅಪರಾಧಿಗಳಲ್ಲ, ಕ್ರಿಮಿನಲ್‌ಗಳಲ್ಲ, ಭಯೋತ್ಪಾದಕರಲ್ಲ. ತೆರಿಗೆ ಕಟ್ಟಿ ಪ್ರಾಮಾಣಿಕವಾಗಿ ದುಡಿಯುವವರು. ಇನ್ನೊಬ್ಬರಿಗಾಗಿ ತೊಂದರೆ ಕೊಡಲಿಕ್ಕಾಗಿ ಪ್ರತಿಭಟನೆಯಲ್ಲ. ಸಾಮಾಜಿಕ ಜವಾಬ್ದಾರಿಯಿಂದ ತಮ್ಮ ತಮ್ಮ ಅಂಗಡಿ ತೆರೆದು ವ್ಯಾಪಾರ ಮಾಡುತ್ತೇವೆ ಎಂದು ವರ್ತಕರು ಹೇಳಿದಾಗ ಅಧಿಕಾರಿಗಳು ಅದನ್ನು ಅರ್ಥ ಮಾಡಿಕೊಂಡು ಅವರಿಗೆ ಗೌರವ ಕೊಟ್ಟು ಮಾನವೀಯತೆಯಿಂದ ನೋಡಿಕೊಳ್ಳಬೇಕಿತ್ತು. ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ ಲಾಕ್‌ಡೌನ್ ವಿರುದ್ಧ ಕಳೆದ ವಾರ ಅಲ್ಲಿಯ ಉದ್ಯಮಿಗಳ ಸಂಘ ಪ್ರತಿಭಟನೆ ನಡೆಸಿದೆ. ಅಲ್ಲಿಯ ಉಸ್ತುವಾರಿ ಮಂತ್ರಿಗಳು ವರ್ತಕರ ಪರ ನಿಂತು ಯಾರ ಮೇಲೂ ಕೇಸು ಆಗದಂತೆ ನೋಡಿಕೊಂಡು ವೀಕೆಂಡ್ ಕರ್ಫ್ಯೂ ಲಾಕ್‌ಡೌನನ್ನು ರದ್ಧು ಪಡಿಸಿದ್ದಾರೆ. ಬೆಳ್ತಂಗಡಿಯಲ್ಲಿ ವರ್ತಕರ ಸಂಘದವರು ಶಾಸಕ ಹರೀಶ್ ಪೂಂಜರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದಾಗ ಅವರು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಅದನ್ನು ತೆರವುಗೊಳಿಸುವ ಭರವಸೆ ನೀಡಿ ಇಲ್ಲಿಯ ಆಡಳಿತ ನಿಮಗೆ ತೊಂದರೆ ಕೊಡುವುದಿಲ್ಲ. ಇತರರಂತೆ ಕಾನೂನು ಪಾಲಿಸಿಕೊಂಡು ವ್ಯಾಪಾರ ನಡೆಸಿ ಎಂದು ತಿಳಿಸಿ ತೊಂದರೆಯಾಗದ ಭರವಸೆ ನೀಡಿದ್ದಾರೆ. ಆ ಪ್ರಕಾರ ಹೆಚ್ಚಿನ ಅಂಗಡಿಗಳು ಬೆಳ್ತಂಗಡಿಯಲ್ಲಿ ಶನಿವಾರ ಇತರರಂತೆ ವ್ಯಾಪಾರ, ವ್ಯವಹಾರ ನಡೆಸಿದ್ದಾರೆ. ಅದನ್ನು ಪುತ್ತೂರಿನಲ್ಲಿಯೂ, ಸುಳ್ಯದಲ್ಲಿಯೂ ಮಾಡಿದ್ದರೆ ಲೋಕವೇನು ಅಡಿಮೇಲು ಆಗುತ್ತಿರಲಿಲ್ಲ. ಪುತ್ತೂರು, ಸುಳ್ಯಗಳಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಕಡಿಮೆ ಇರುವುದರಿಂದ ಅದನ್ನು ಉದಾಹರಿಸಿಕೊಂಡು ಮಾನವೀಯತೆಯಿಂದ ಅಧಿಕಾರಿಗಳು ನೋಡಬೇಕಿತ್ತು. ಸುಳ್ಯದಲ್ಲಂತೂ ಅಧಿಕಾರಿಗಳು ಅಂಗಡಿ ಮುಚ್ಚಿಸಿದ್ದರೆ ಪರವಾಗಿರಲಿಲ್ಲ, ದಂಡ ವಿಧಿಸಿದ್ದಾರೆ ಎಂಬುದು ಸಾಮಾನ್ಯರ ಮೇಲೆ ಅವರ ಅಧಿಕಾರದ ದರ್ಪವನ್ನು ತೋರಿಸುತ್ತಿದೆ.

ಅಧಿಕಾರಿಗಳು ಕಾನೂನನ್ನು ಮಾನವೀಯತೆಯಿಂದ ನಿಭಾಯಿಸಬೇಕು:
ಅಧಿಕಾರಿಗಳ ಈ ಮೇಲಿನ ಕ್ರಮ ನಾಯಕರಿಗೆ ಒಂದು ಕಾನೂನು, ಜನಸಾಮಾನ್ಯರಿಗೆ ಒಂದು ಕಾನೂನು ಎಂಬುದನ್ನು ಎತ್ತಿ ತೋರಿಸುತ್ತದೆ. ಜನಾಶೀರ್ವಾದದ ಕಾರ್ಯಕ್ರಮವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುಳ್ಯ, ಪುತ್ತೂರುಗಳಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಬೆಳ್ತಂಗಡಿಯ ಕನ್ಯಾಡಿಯಲ್ಲಿ ಸಚಿವ ಎಂ.ಟಿ.ಬಿ. ನಾಗರಾಜ್ ಸೇರಿದಂತೆ ಸಾವಿರಾರು ಜನರು ಹಲವಾರು ಮಂತ್ರಿಗಳು, ನಾಯಕರುಗಳು, ಅಧಿಕಾರಿಗಳು ಕನ್ಯಾಡಿ ಸ್ವಾಮೀಜಿಗಳ ಚಾರ್ತುಮಾಸ್ಯ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದಾರೆ. ಕರ್ಫ್ಯೂ ಇರುವ ಪಕ್ಕದ ಜಿಲ್ಲೆ ಹಾಸನದಲ್ಲಿ ಬಿಜೆಪಿ ಅಧ್ಯಕ್ಷರ ಕಾರ್ಯಕ್ರಮದಲ್ಲಿ ಸಾವಿರಾರು ಜನ ಸೇರಿದ್ದು ಮಾತ್ರವಲ್ಲದೆ, ರಾತ್ರಿ ಡಿಜೆ ಪಾರ್ಟಿ ನಡೆದಿದೆ ಎಂಬುದು ಚಾನೆಲ್‌ಗಳಲ್ಲಿ ಬಿತ್ತರವಾಗಿದೆ. ಅಲ್ಲಿ ಎಲ್ಲಿಯೂ ಕೂಡ ಕೊರೋನಾ ನಿಯಮಗಳ ಪಾಲನೆಯಾಗಿರಲಿಲ್ಲ. ಯಾರ ಮೇಲೂ ಕೇಸ್ ಆಗಲಿಲ್ಲ. ಅವರ ಮೇಲೆ ಕೇಸ್ ಮಾಡಬೇಕೆಂಬುದು ನಮ್ಮ ವಾದವಲ್ಲ. ಕೋವಿಡ್ ನಿಯಮಾವಳಿಗಳೊಂದಿಗೆ ಜೀವನಕ್ಕಾಗಿ ತಮ್ಮ ಅಂಗಡಿ ತೆರೆಯುವುದು, ರಿಕ್ಷಾ ವಾಹನ ಚಲಾಯಿಸುವುದು ತಪ್ಪಾಗಿ ಕಂಡು ಕಠಿಣ ಶಿಕ್ಷೆಗೆ ಕಾರಣವಾಗುವುದಿದ್ದರೆ ಇಲ್ಲಿ ಕಾನೂನು ಪಾಲನೆ, ಶಿಕ್ಷೆ, ದಂಡ ಜನಸಾಮಾನ್ಯರಿಗೆ ಮಾತ್ರವೇ, ನಾಯಕರುಗಳಿಗೆ ಇಲ್ಲವೇ? ಕಾನೂನುಗಳು ಎಲ್ಲರಿಗೂ ಒಂದೇ ರೀತಿ ಅನ್ವಯವಾಗಬೇಕು. ಅವುಗಳು ಜನರ ಒಳಿತಿಗಾಗಿ ಇರುವಂತದ್ದು, ಮಾನವೀಯತೆಯಿಂದ ಅದನ್ನು ನೋಡಿ ಅಧಿಕಾರಿಗಳು ಜವಾಬ್ದಾರಿ ನಿಭಾಯಿಸುವಂತಾಗಬೇಕು ಎಂಬ ಕಾರಣಕ್ಕೆ ಮೂರು ತಾಲೂಕುಗಳಲ್ಲಿಯೂ ಕೂಡ ಜನಮೆಚ್ಚಿದ ಅಧಿಕಾರಿ, ಜನಮೆಚ್ಚಿದ ಇಲಾಖೆಯನ್ನು ಜನರ ಓಟಿನ ಮೂಲಕ ಆಯ್ಕೆ ಮಾಡಿ ಗೌರವಿಸಿದ್ದೇವೆ. ಆ ಆಯ್ಕೆ ಜನರ ಮೇಲಿನ ದಬ್ಬಾಳಿಕೆಗೆ ಜನರು ನೀಡಿದ ಪ್ರಶಸ್ತಿಯಲ್ಲ ಎಂಬುದನ್ನು ಅಧಿಕಾರಿಗಳ ಗಮನಕ್ಕೆ ತರಲು ಇಚ್ಚಿಸುತ್ತೇನೆ.

ಶಾಸಕರು ನಮ್ಮ ಸರ್ವೋಚ್ಛ ನಾಯಕರು, ಅಧಿಕಾರಿಗಳ ಉತ್ತಮ ಕೆಲಸಕ್ಕೂ ಕೆಟ್ಟ ಕೆಲಸಕ್ಕೂ ಅವರೇ ಜವಾಬ್ದಾರರು:
ನಮ್ಮ ಶಾಸಕರು ಮತ್ತು ಸಂಸದರು, ಸರಕಾರದಿಂದ ಇಂತಹ ಅಚಾತುರ್ಯಗಳು ಆಗಿ ಜನರಿಗೆ ತೊಂದರೆ ಉಂಟಾಗುವ ಮೊದಲೇ ತಮ್ಮೂರಿಗೆ ಅಂತಹ ಕಾನೂನು ಬಾರದಂತೆ ನೋಡಿಕೊಳ್ಳಬೇಕು. ಇಂತಹ ಸಂದರ್ಭಗಳಲ್ಲಿ ಅವರಿಗೆ ಕಾನೂನು ಸರಿ ಇಲ್ಲ. ನನ್ನನ್ನು ಗೆಲ್ಲಿಸಿ ನನ್ನನ್ನು ನಂಬಿರುವ ಜನರಿಗೆ ತೊಂದರೆಯಾಗುತ್ತದೆ ಎಂದು ಕಂಡುಬಂದರೆ ಜನರ ಪರವಾಗಿ ನಿಂತು ಯಾವುದೇ ಸರಕಾರದ ವಿರುದ್ಧ ತಮ್ಮದೇ ಸರಕಾರ ಆಗಿದ್ದರೂ ಅದನ್ನು ಸರಿಪಡಿಸುವ, ಹೋರಾಡುವ ಶಕ್ತಿ ಇರಬೇಕು. ಅಲ್ಲಿ ಯಾವುದೇ ಪಕ್ಷ, ಜಾತಿ, ಧರ್ಮ ಬರಬಾರದು ಯಾಕೆಂದರೆ ಆ ಜವಾಬ್ದಾರಿಗಾಗಿಯೇ ಜನತೆ ಅವರನ್ನು ಆರಿಸಿರುತ್ತಾರೆ. ಅವರು ಪ್ರತಿಜ್ಞೆ ಸ್ವೀಕರಿಸಿರುತ್ತಾರೆ. ಅವರು ಆ ಕೆಲಸ ಮಾಡದಿದ್ದರೆ ಜನರ ಕಡೆ ನಿಲ್ಲದಿದ್ದರೆ ಅದು ಅಧಿಕಾರಿಗಳಿಂದ ಜನರ ಶೋಷಣೆಗೆ ಅಂಧ ದರ್ಬಾರಿಗೆ ಕಾರಣವಾಗುತ್ತದೆ. ಶಾಸಕರ ಅಣತಿಯ ಮತ್ತು ಒಪ್ಪಿಗೆಯ ಮೇಲೆ ಇಲ್ಲಿಯ ಅಧಿಕಾರಿಗಳು ಕೆಲಸ ಮಾಡುವುದರಿಂದ ಶಾಸಕರಿಗೆ ಅಸಮಾಧಾನವಾದರೆ ಅವರು ಇಲ್ಲಿಂದ ವರ್ಗಾವಣೆಯಾಗುತ್ತಾರೆ. ಶಾಸಕರು ಜನರ ಅಸಮಾಧಾನ, ಒಳಿತು, ಕೆಡುಕು ಅಧಿಕಾರಿಗಳ ಉತ್ತಮ ಕೆಲಸಕ್ಕೂ, ಕೆಟ್ಟ ಕೆಲಸಕ್ಕೂ ಜವಾಬ್ದಾರರು. ಅವರೇ ನಮ್ಮ ಸರ್ವೋಚ್ಛ ನಾಯಕರು. ಆದುದರಿಂದ ಜನತೆ ವೀಕೆಂಡ್ ಕರ್ಫ್ಯೂ ಸೇರಿದಂತೆ ತಮಗಿರುವ ಸಮಸ್ಯೆಗಳನ್ನು, ತಮಗೆ ಬೇಕಾದ ಕೆಲಸಗಳನ್ನು ಶಾಸಕರ ಗಮನಕ್ಕೆ ತಂದು ಅವರ ಕೈ ಬಲಪಡಿಸಿ, ಅವರ ಬೆಂಬಲಕ್ಕೆ ನಿಂತು ಅವರ ನೇತೃತ್ವದಲ್ಲಿಯೇ ಹೋರಾಟ ನಡೆಸಬೇಕು ಎಂಬುದನ್ನು ಜನತೆಯ ಮುಂದಿಡಲು ಇಚ್ಚಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಅಂತಹ ನಾಯಕರ ಆಯ್ಕೆಗಾಗಿಯೇ ಚುನಾವಣೆಗಳು ಇರುತ್ತವೆ ಇಲ್ಲಿ ನಾವು ರಾಷ್ಟ್ರೀಯ ಮಟ್ಟದ, ರಾಜ್ಯಮಟ್ಟದ ನಾಯಕರನ್ನಲ್ಲ. ನಮ್ಮ ಸ್ಥಳೀಯ ನಾಯಕನನ್ನು ಆರಿಸುವುದು, ಆತ ಮುಂದಕ್ಕೆ ಏನು ಬೇಕಾದರೂ ಆಗಲಿ. ಆದರೆ ಇಲ್ಲಿ ಸದಾ ನಮ್ಮವನಾಗಿರಬೇಕು ಎಂಬುದನ್ನು ಜನತೆ ಮತ್ತು ಆಯ್ಕೆಯಾದ ನಮ್ಮ ಪ್ರತಿನಿಧಿಗಳು ಅರಿತುಕೊಳ್ಳಬೇಕು

ವೀಕೆಂಡ್ ಕರ್ಫ್ಯೂ ಲಾಕ್‌ಡೌನ್ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಕೊರೋನಾ ಹರಡಲು ಸಹಕಾರಿ – ಜನವಿರೋಧಿ

ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಮಹಾತ್ಮಾಗಾಂಧಿ ರಥ ಚಾಲನೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.