HomePage_Banner
HomePage_Banner
HomePage_Banner
HomePage_Banner

ನೆಕ್ಕಿಲಾಡಿ ಮೈಂದಡ್ಕ ಮೈದಾನ ಹಾಳುಗೆಡವಿದ ಪ್ರಕರಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

‘ನಮ್ಮೂರು ನೆಕ್ಕಿಲಾಡಿ’ ಅಧ್ಯಕ್ಷ ಎ. ಜತೀಂದ್ರ ಶೆಟ್ಟಿಯವರಿಂದ ಪಿಐಎಲ್ ಸಲ್ಲಿಕೆ

ಎ.ಸಿ, ತಹಶೀಲ್ದಾರ್, ಪಿಡಿಒಗೆ ಹೈಕೋರ್ಟ್ ನೊಟೀಸ್

ಅರ್ಜಿಯ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯದ ಮುಖ್ಯ‌ ನ್ಯಾಯಮೂರ್ತಿ

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈಂದಡ್ಕದ ಸಾರ್ವಜನಿಕ ಮೈದಾನವನ್ನು 34 ನೆಕ್ಕಿಲಾಡಿ ಗ್ರಾಮ ಪಂಚಾಯತಿಯವರು ಚರಂಡಿ ಕಾಮಗಾರಿಯ ನೆಪದಲ್ಲಿ ಹಾಳುಗೆಡವಿದುದರ ವಿರುದ್ಧ `ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಯ ಅಧ್ಯಕ್ಷ ಎ.ಜತೀಂದ್ರ ಶೆಟ್ಟಿ ಅಲಿಮಾರರವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯವರನ್ನೊಳಗೊಂಡ ದ್ವಿಸದಸ್ಯ ಪೀಠವು ಪುತ್ತೂರು ಸಹಾಯಕ ಕಮಿಷನರ್, ತಹಶೀಲ್ದಾರ್ ಮತ್ತು 34 ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ನೊಟೀಸ್ ಜಾರಿಗೊಳಿಸಿದೆ.

ಹೈಕೋರ್ಟ್ ನೋಟಿಸ್:
34 ನೆಕ್ಕಿಲಾಡಿಯ ಮೈಂದಡ್ಕ ಮೈದಾನದ ಎರಡು ಬದಿಯಲ್ಲಿ 34ನೆಕ್ಕಿಲಾಡಿ ಗ್ರಾ.ಪಂ. ನೇತೃತ್ವದಲ್ಲಿ ಜೆಸಿಬಿ ಮೂಲಕ ತೋಡಿನಂತಹ ಚರಂಡಿ ನಿರ್ಮಿಸಲಾಗಿತ್ತು. ಅಲ್ಲದೆ, ಅದರ ಮಣ್ಣನ್ನು ಮೈದಾನದೊಳಗೆ ಅಗಲು(ಅಗರು)ನಂತೆ ರಾಶಿ ಹಾಕಲಾಗಿತ್ತು. ಮೈದಾನದೊಳಗೆ ಹೋಗಲು ಮೊದಲಿದ್ದ ದಾರಿಯನ್ನು ಬಂದ್ ಮಾಡಿ ಚರಂಡಿಗೆ ಅಡ್ಡಲಾಗಿ ಸಣ್ಣ ಪಾಪೊಂದನ್ನು ಹಾಕಲಾಗಿತ್ತು. ಮೈದಾನದ ಇನ್ನೊಂದು ಬದಿಯ ಇಳಿಜಾರು ಪ್ರದೇಶದಲ್ಲಿ ಮೈದಾನಕ್ಕೆ ಅಡ್ಡಲಾಗಿ ಅಗರಿನಂತೆ ಮಣ್ಣನ್ನು ರಾಶಿ ಹಾಕಲಾಗಿತ್ತು. ಗ್ರಾ.ಪಂ.ನ ಈ ಕಾಮಗಾರಿಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇಳಿಜಾರು ಪ್ರದೇಶದಲ್ಲಿ ಮೈದಾನಕ್ಕೆ ಅಡ್ಡಲಾಗಿ ಮಣ್ಣು ರಾಶಿ ಹಾಕಿದ್ದರಿಂದ ಇಲ್ಲಿ ನೀರು ನಿಂತು ಮೈದಾನದೊಳಗೆ ಕೆಸರು ಬರುವಂತಾಗಿದೆ. ಚರಂಡಿ ಕಾಮಗಾರಿಯನ್ನು ಕೂಡಾ ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಅದು ತೋಡಿನಂತಾಗಿದೆ. ದಾರಿಯನ್ನು ಬಂದ್ ಮಾಡಿದ್ದರಿಂದ ಮಕ್ಕಳು, ವೃದ್ಧರು ಮೈದಾನದೊಳಗೆ ಹೋಗಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಮೈದಾನದೊಳಗೆ ಮಣ್ಣು ರಾಶಿ ಹಾಕಿದ್ದರಿಂದ ಮೈದಾನವು ಸಂಪೂರ್ಣ ಹಾಳಾಗುವಂತಾಗಿದೆ. ಆದ್ದರಿಂದ ಸಾರ್ವಜನಿಕ ಮೈದಾನದೊಳಗೆ ಹಾಕಿರುವ ಮಣ್ಣನ್ನು ತೆರವುಗೊಳಿಸಿ ಮೈದಾನದ ರಸ್ತೆಯನ್ನು ಪುನರ್‌ನಿರ್ಮಿಸಿ ಕೊಡಬೇಕೆಂದು ಆಗ್ರಹಿಸಿ ನೆಕ್ಕಿಲಾಡಿಯ ನಮ್ಮೂರು ಸಂಸ್ಥೆಯ ವತಿಯಿಂದ ಸಹಾಯಕ ಕಮಿಷನರ್, ತಹಶೀಲ್ದಾರ್ ಹಾಗೂ 34 ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇವರಿಂದ ಯಾವುದೇ ಸ್ಪಂದನೆ ವ್ಯಕ್ತವಾಗದಿದ್ದ ನಿಟ್ಟಿನಲ್ಲಿ `ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಯ ಅಧ್ಯಕ್ಷ ಎ. ಜತೀಂದ್ರ ಶೆಟ್ಟಿ ಅಲಿಮಾರರವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಈ ಅರ್ಜಿಯು ಉಚ್ಛ ನ್ಯಾಯಾಲಯದ ಏಕಸದಸ್ಯ ಪೀಠದೆದುರು ವಿಚಾರಣೆಗೆ ಬಂದಿತ್ತು. ನ್ಯಾಯಮೂರ್ತಿಯವರು ಈ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ದಾಖಲಿಸಲು ನಿರ್ದೇಶಿಸಿದ್ದರು. ಅದರಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದು, ಈ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ದ್ವಿಸದಸ್ಯ ಪೀಠದಲ್ಲಿ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಪೀಠವು, `ನಮ್ಮೂರು – ನೆಕ್ಕಿಲಾಡಿ’ ಅಧ್ಯಕ್ಷ ಜತೀಂದ್ರ ಶೆಟ್ಟಿಯವರ ಅರ್ಜಿಯನ್ನು ಪುರಸ್ಕರಿಸಿ, ಪ್ರತಿವಾದಿಗಳಾದ ಸಹಾಯಕ ಕಮಿಷನರ್, ತಹಶೀಲ್ದಾರ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ನೊಟೀಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದ್ದಾರೆ.

             ಎ. ಜತೀಂದ್ರ ಶೆಟ್ಟಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.