HomePage_Banner
HomePage_Banner
HomePage_Banner
HomePage_Banner

ಕೋಡಿಂಬಾಡಿ ಗ್ರಾ.ಪಂ. ಕಛೇರಿ ಸುತ್ತ ಗಡಿ ಗುರುತು ನಡೆಸಿ:  ಅಗಲು ನಿರ್ಮಿಸುವ ಸಂದರ್ಭದಲ್ಲಿ ನೆರೆ ಮನೆಯವರಿಂದ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ತಾ.ಪಂ. ಮಾಜಿ ಸದಸ್ಯೆ ಲೀಲಾವತಿ ಲಕ್ಷ್ಮಣ ಗೌಡ ಸಹಿತ ಹಲವರ ವಿರುದ್ಧ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ದೂರು
  •  ಬಿಜೆಪಿ ಮಾಜಿ ನಾಯಕಿ ಮೇಲಿನ ದೂರು ವಾಪಸ್ ಪಡೆಯಲು ಮನವಿ ಮಾಡಿದ ಕಾಂಗ್ರೆಸ್ ನಿಯೋಗ
  • ದೂರು ವಾಪಸ್ ಪಡೆದ ಗ್ರಾಮ ಪಂಚಾಯತ್-ಅಗಲು ನಿರ್ಮಾಣ ಕಾರ್ಯ ಮುಂದುವರಿಕೆ
  • ಕಾನೂನು ಪ್ರಕಾರ ಜಾಗ ಯಾರಿಗೆ ಸಿಗಬೇಕೋ ಅವರಿಗೇ ಸಿಗಬೇಕು

ಪುತ್ತೂರು ಗ್ರಾಮ ಪಂಚಾಯತ್‌ಗೆ ಸಂಬಂಧಿಸಿದ ಜಾಗದ ಗೊಂದಲ ನಿವಾರಿಸಲು ತಾಲೂಕು ಸರ್ವೆಯರ್ ಮೂಲಕ ಅಳತೆ ನಡೆಸಿ, ಜಾಗದ ಗಡಿ ಗುರುತು ಮಾಡಿಸಿ, ಆ ಜಾಗಕ್ಕೆ ಅಗಲು ಹಾಕುವ ಕಾರ್ಯ ನಡೆಸಲಾಗಿದೆ. ಪಂಚಾಯತ್ ಯಾವುದೇ ಜಾಗವನ್ನು ಅತಿಕ್ರಮಣ ಮಾಡಿಲ್ಲ. ತಾಲೂಕು ಸರ್ವೆಯರ್ ಕ್ಲಿಯರ್ ಆಗಿ ಅಳತೆ ನಡೆಸಿ ಗಡಿ ಗುರುತು ಮಾಡಿದ್ದು ಅದರಂತೆ ಅಗಲು ಹಾಕಲಾಗುತ್ತಿದೆ. ಪಂಚಾಯತ್ ಆಸ್ತಿ ರಕ್ಷಣೆಯೇ ನಮ್ಮ ಉದ್ದೇಶ ಇತರರ ಜಾಗಕ್ಕೆ ನಾವು ಕೈ ಹಾಕಿಲ್ಲ. ಗ್ರಾಮದ ಅಭಿವೃದ್ಧಿಯ ದೃಷ್ಠಿಯಿಂದ ಗಡಿ ಗುರುತು ಮಾಡಲಾಗಿದೆ. ಕಾನೂನು ಪ್ರಕಾರ ಯಾರಿಗೆ ಆ ಜಾಗ ದೊರಕಬೇಕೋ ಅವರಿಗೇ ಅದು ಸಿಗಬೇಕು.

ಕೆ. ರಾಮಚಂದ್ರ ಪೂಜಾರಿ, ಅಧ್ಯಕ್ಷರು ಕೋಡಿಂಬಾಡಿ ಗ್ರಾ.ಪಂ.
ಪುತ್ತೂರು: ಗ್ರಾಮ ಪಂಚಾಯತ್ ಕಛೇರಿ ಸುತ್ತಮುತ್ತ ಗಡಿ ಗುರುತು ನಡೆಸಿ ಜೆಸಿಬಿ ಮೂಲಕ ಅಗಲು ನಿರ್ಮಿಸುತ್ತಿದ್ದ ವೇಳೆ ನೆರೆಯ ಮನೆಯ ನಿವಾಸಿಗಳಾದ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಲೀಲಾವತಿ ಲಕ್ಷ್ಮಣ ಗೌಡ ಮತ್ತು ಅವರ ಮನೆಯವರು ಜೆಸಿಬಿ ಮೇಲೆ ಹತ್ತಿ ಪ್ರತಿಭಟನೆ ನಡೆಸಿ ಅಗಲು ಮಾಡುವ ಕಾರ್ಯಕ್ಕೆ ಅಡ್ಡಿ ಪಡಿಸಿದ ಹಾಗೂ ಬಿಜೆಪಿ ಮಾಜಿ ನಾಯಕಿ ಲೀಲಾವತಿ ಲಕ್ಷ್ಮಣ ಗೌಡ ಮತ್ತವರ ಬಳಗದ ವಿರುದ್ಧ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪೊಲೀಸರಿಗೆ ದೂರು ನೀಡಿದಾಗ ಕಾಂಗ್ರೆಸ್ ಮುಖಂಡರ ನಿಯೋಗ ಭೇಟಿ ನೀಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯವರು ದೂರು ವಾಪಸ್ ಪಡೆದುಕೊಂಡು ಪಂಚಾಯತ್ ಕಛೇರಿ ಸುತ್ತ ಅಗಲು ನಿರ್ಮಿಸುವ ಕಾರ್ಯ ಮುಂದುವರಿಸಿರುವ ಘಟನೆ ಕೋಡಿಂಬಾಡಿಯಲ್ಲಿ ನಡೆದಿದೆ.

ಕೋಡಿಂಬಾಡಿಯಲ್ಲಿ ಗಡಿ ವಿವಾದ : ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಗಳನ್ನೊಳಗೊಂಡ ಕೋಡಿಂಬಾಡಿ ಗ್ರಾಮ ಪಂಚಾಯತ್ ಕಛೇರಿ ಸಮೀಪವಿರುವ 50 ಸೆಂಟ್ಸ್ ಜಾಗದ ಕುರಿತು ಇರುವ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ನಿಂದ ಕಳೆದ 10 ದಿನಗಳ ಹಿಂದೆ ತಾಲೂಕು ಸರ್ವೆಯರ್ ಮೂಲಕ ಅಳತೆ ನಡೆಸಿ ಗ್ರಾಮ ಪಂಚಾಯತ್‌ಗೆ ಸೇರಿದ ಜಾಗಕ್ಕೆ ಗಡಿ ಗುರುತು ಹಾಕಲಾಗಿತ್ತು. ಇದಾದ ಬಳಿಕ ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಮೂಲಕ ಜೆಸಿಬಿಯಲ್ಲಿ ಗಡಿ ಗುರುತು ಮಾಡಿದ ಜಾಗಕ್ಕೆ ಅಗಲು ಹಾಕುವ ಕಾರ್ಯ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ನೆರೆಯ ಮನೆ ನಿವಾಸಿಗಳು ನಮಗೆ ಮಾಹಿತಿ ನೀಡದೆ ಏಕಾಏಕಿಯಾಗಿ ಜಾಗವನ್ನು ಅಳತೆ ಮಾಡಿ ನಮ್ಮ ಜಾಗವನ್ನು ಪಂಚಾಯತ್ ಅತಿಕ್ರಮಣ ನಡೆಸುತ್ತಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ನೆರೆ ಮನೆಯ ನಿವಾಸಿಗಳಾದ ಈ ಹಿಂದೆ ಬಿಜೆಪಿಯ ಮುಂದಾಳು ಆಗಿದ್ದ ತಾಲೂಕು ಪಂಚಾಯತ್ ಮಾಜಿ ಸದಸ್ಯರೂ, ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಲೀಲಾವತಿ ಲಕ್ಷ್ಮಣ ಗೌಡ, ಅವರ ಅಳಿಯ ಮೋಹನ ಗೌಡ, ಮಗ ದೀಕ್ಷಿತ್, ಮಗಳು ಪವಿತ್ರ ಮೊದಲಾದವರು ಜೆಸಿಬಿ ಮೇಲೇರಿ ಅದರ ಬಕೆಟ್‌ನಲ್ಲಿ ನೇತಾಡುವ ಮೂಲಕ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅವರನ್ನು ಎಸ್.ಐ.ನೇತೃತ್ವದಲ್ಲಿ ಪೊಲೀಸ್ ಜೀಪ್‌ನಲ್ಲಿ ಕುಳ್ಳಿರಿಸಿ ಪಂಚಾಯತ್‌ಗೆ ಸಂಬಂಧಿಸಿದ ಜಾಗಕ್ಕೆ ಅಗಲು ನಿರ್ಮಿಸುವ ಕಾರ್ಯ ನಡೆಯಿತು.

ಲೀಲಾವತಿ ಬಳಗದ ವಿರುದ್ಧ ದೂರು-ಕಾಂಗ್ರೆಸ್ ಪ್ರಮುಖರ ಭೇಟಿ: ಜೆಸಿಬಿ ಮೂಲಕ ಅಗಲು ನಿರ್ಮಿಸುತ್ತಿದ್ದಾಗ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಲೀಲಾವತಿ ಲಕ್ಷ್ಮಣ ಗೌಡ ಮತ್ತಿತರರ ವಿರುದ್ಧ ದೂರು ನೀಡಿದರು. ಜಾಮೀನು ರಹಿತ ಕೇಸು ದಾಖಲಿಸಿ ಲೀಲಾವತಿ ಮತ್ತವರ ಜತೆಗಿದ್ದವರನ್ನು ಬಂಧಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸುದ್ದಿಯಾಗುತ್ತಿದ್ದಂತೆಯೇ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜರಾಮ್ ಕೆ.ಬಿ., ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಜಾಗದ ತಕರಾರಿನ ಬಗ್ಗೆ ನಮ್ಮದು ಅಭ್ಯಂತರ ಇಲ್ಲ, ಆದರೆ ಕೇಸ್ ದಾಖಲಿಸುವ ವಿಚಾರಕ್ಕೆ ನಮ್ಮ ವಿರೋಧ ಇದೆ ಎಂದು ಕಾಂಗ್ರೆಸ್ ನಿಯೋಗ ತಾ.ಪಂ. ಇ.ಓ. ನವೀನ್ ಕುಮಾರ್ ಭಂಡಾರಿ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ರಾಮಚಂದ್ರ ಪೂಜಾರಿ ಶಾಂತಿನಗರರವರ ಗಮನಕ್ಕೆ ತಂದರು.

ಕೇಸ್ ವಾಪಸ್: ಗಡಿ ಗುರುತು ಮಾಡಿದ ಜಾಗಕ್ಕೆ ಅಗಲು ಹಾಕುವ ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದರ ಕುರಿತು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದ ವಿಚಾರಕ್ಕೆ ಸಂಬಂಧಿಸಿ ಸ್ಥಳಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಪ್ರಮುಖರು ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ದೂರನ್ನು ಹಿಂಪಡೆಯವಂತೆ ಪಂಚಾಯತ್‌ನವರನ್ನು ಮನವೊಲಿಸುವ ಪ್ರಯತ್ನ ನಡೆಸಿದಾಗ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರು ಅಡ್ಡಿ ಪಡಿಸಿದವರೇ ದೂರನ್ನು ಹಿಂಪಡೆಯುವಂತೆ ಮನವಿ ಮಾಡಿದರೆ ನಾವು ದೂರು ಹಿಂಪಡೆಯುವುದಾಗಿ ತಿಳಿಸಿದರು. ನಂತರ ಮಾತುಕತೆ ನಡೆದು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ನೀಡಲಾಗಿದ್ದ ದೂರು ವಾಪಸ್ ಪಡೆದುಕೊಳ್ಳಲಾಗಿದ್ದು ಅಗಲು ನಿರ್ಮಿಸುವ ಕಾರ್ಯ ಮುಂದುವರಿಯಿತು. ಈ ಮಧ್ಯೆ, ಲೀಲಾವತಿ ಲಕ್ಷ್ಮಣ ಗೌಡರವರನ್ನು ಆಸ್ಪತ್ರೆಗೆ ದಾಖಲಿಸಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿನವರ ವಿರುದ್ಧ ದೂರು ಕೊಡಿಸುವ ಯೋಚನೆಯೂ ನಡೆದಿತ್ತು. ಆದರೆ, ಲೀಲಾವತಿಯವರ ಮೇಲಿನ ದೂರು ವಾಪಸ್ ಪಡೆದುಕೊಂಡ ಹಿನ್ನೆಲೆಯಲ್ಲಿ ಈ ಪ್ರಯತ್ನ ಕೈ ಬಿಡಲಾಯಿತು ಎಂದು ಮಾಹಿತಿ ಲಭ್ಯವಾಗಿದೆ. ಮಾತುಕತೆ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಉಷಾ ಲಕ್ಷ್ಮಣ ಪೂಜಾರಿ ಕೋರ್ಯ, ಸದಸ್ಯರಾದ ರಾಮಣ್ಣ ಗೌಡ ಗುಂಡೋಳೆ, ಜಯಪ್ರಕಾಶ್ ಬದಿನಾರು ಮತ್ತಿತರರು ಉಪಸ್ಥಿತರಿದ್ದರು.

ಹಲವು ವರ್ಷದ ವಿವಾದ: ಗ್ರಾಮ ಪಂಚಾಯತ್ ಕಛೇರಿಯ ಸುತ್ತದ ಜಾಗದ ವಿವಾದ ಹಲವು ವರ್ಷಗಳಿಂದ ಜೀವಂತವಿದೆ. ಹಿಂದೆ ಎ.ಮುರಳೀಧರ ರೈ ಮಠಂತಬೆಟ್ಟುರವರ ನೇತೃತ್ವದಲ್ಲಿದ್ದ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ.ಆಡಳಿತ ಮಂಡಳಿಯವರು ಜಾಗದ ಅಳತೆ ಮಾಡುವ ಸಂದರ್ಭದಲ್ಲಿ ಲೀಲಾವತಿರವರು ಬಿಜೆಪಿಯಲ್ಲಿ ಸಕ್ರಿಯವಾಗಿದ್ದರು. ಆಗ ಬಿಜೆಪಿ ನಾಯಕರು ಲೀಲಾವತಿ ಪರ ನಿಂತಿದ್ದರು. ಇದೀಗ ರಾಮಚಂದ್ರ ಪೂಜಾರಿ ನೇತೃತ್ವದ ಬಿಜೆಪಿ ಬೆಂಬಲಿತ ಗ್ರಾ.ಪಂ.ಆಡಳಿತ ಮಂಡಳಿಯವರು ಜಾಗದ ಅಳತೆ ಮಾಡುವ ಸಂದರ್ಭದಲ್ಲಿ ಲೀಲಾವತಿಯವರು ಬಿಜೆಪಿಯಿಂದ ದೂರವಾಗಿದ್ದಾರೆ. ಕಳೆದ ಗ್ರಾಮ ಪಂಚಾಯತ್ ಚುನಾವಣೆಗಿಂತ ಮೊದಲೇ ಅವರು ಬಿಜೆಪಿಯಿಂದ ದೂರವಾಗಿದ್ದರು. ಇದೀಗ ಜಾಗದ ತಕರಾರು ಬಂದಾಗ ಅವರೊಂದಿಗೆ ಕಾಂಗ್ರೆಸ್ ನಾಯಕರು ಕೈ ಜೋಡಿಸಿದ್ದಾರೆ. ಪ್ರಬಲ ಪ್ರತಿರೋಧದ ಮಧ್ಯೆಯೇ ಗ್ರಾಮ ಪಂಚಾಯತಿಗೆ ಸೇರಿದ ಜಾಗಕ್ಕೆ ಅಗಲು ಹಾಕುವ ಕಾರ್ಯ ನಡೆದಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.