HomePage_Banner
HomePage_Banner
HomePage_Banner
HomePage_Banner

ಕರಾವಳಿ ಕ್ರೈಸ್ತರ ಕುಟುಂಬದ ಹಬ್ಬ-ಮೊಂತಿ ಫೆಸ್ತ್ ಹೆತ್ತವರನ್ನು ಗೌರವಿಸುವುದು ಮೇರಿ ಮಾತೆಗೆ ಸಲ್ಲುವ ಗೌರವ-ವಂ|ಅಶೋಕ್ ಕ್ರಾಸ್ತಾ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಮಾನವನಾಗಿ ಹುಟ್ಟಿದ ಮೇಲೆ ಹೆತ್ತವರಿಗೆ ಪ್ರೀತ್ಯಾದರ ಹಾಗೂ ಗೌರವ ನೀಡಿದಾಗ ಸಮಾಜದಲ್ಲೂ ಗೌರವ ಸಿಗುತ್ತದೆ. ಆ ನಿಟ್ಟಿನಲ್ಲಿ ಪ್ರಭು ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯು ಪ್ರಪಂಚದಲ್ಲಿ ಕುಟುಂಬದ ತ್ಯಾಗದ ಸಂಕೇತವಾದ ವಿಶೇಷ ಮಹಿಳೆಯಾಗಿ ಗುರುತಿಸಿಕೊಂಡಿದ್ದು ಮಾತ್ರವಲ್ಲದೆ ಮಾನವನ ಜೀವನದಲ್ಲಿ ಪ್ರತೀ ಹೆಜ್ಜೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಾಳೆ. ಆದ್ದರಿಂದ ಹೆತ್ತವರನ್ನು ಗೌರವ ಭಾವನೆಯಿಂದ ಕಾಣುವುದು ಮೇರಿ ಮಾತೆಗೆ ಸಲ್ಲುವ ಗೌರವವಾಗಿದೆ ಎಂದು ಮಾಯಿದೆ ದೇವುಸ್ ಚರ್ಚ್ ಆಧೀನದಲ್ಲಿರುವ ಸಂತ ಫಿಲೋಮಿನಾ ಕಾಲೇಜು ಪುರುಷರ ವಸತಿನಿಲಯದ ವಾರ್ಡನ್ ವಂ|ಅಶೋಕ್ ರಾಯನ್ ಕ್ರಾಸ್ತಾರವರು ಹೇಳಿದರು.

ಮರೀಲು ಚರ್ಚ್

ಅವರು ಕರಾವಳಿ ಕ್ರೈಸ್ತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಸೆ.೮ರಂದು ಆಚರಿಸಲ್ಪಡುವ ಪ್ರಭು ಏಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನವನ್ನು ಸಾರುವ ‘ಮೊಂತಿ ಫೆಸ್ತ್-ತೆನೆ ಹಬ್ಬ-ಕುರಲ್ ಪರ್ಬ-ಕುಟುಂಬದ ಹಬ್ಬ’ ಆಚರಣೆಯ ಸಂದರ್ಭ ಮಾಯಿದೆ ದೇವುಸ್ ಚರ್ಚ್‌ನಲ್ಲಿ ಬೈಬಲ್ ವಾಚಿಸಿ ಹಬ್ಬದ ಸಂದೇಶ ನೀಡಿದರು. ಮೇರಿ ಮಾತೆಯ ಹಬ್ಬವಾಗಿರುವ ಮೊಂತಿ ಹಬ್ಬವು ಮಕ್ಕಳಲ್ಲಿ, ಹಿರಿಯರಲ್ಲಿ ವಿವಿಧ ಸ್ತರದಲ್ಲಿ ಸಂಭ್ರಮ ಮನೆಮಾಡುತ್ತದೆ. ಮೇರಿ ಮಾತೆಗೆ ಹೂಗಳನ್ನು ಅರ್ಪಿಸಿದರೆ ಸಿಹಿಯ ಪ್ರತೀಕವಾದ ಕಬ್ಬು ಸಿಗುತ್ತದೆ ಎನ್ನುವ ಸಂಭ್ರಮ ಮಕ್ಕಳಿಗೆ ಒಂದೆಡೆಯಾದರೆ, ಹಿರಿಯರಿಗೆ ತಮ್ಮ ಮಕ್ಕಳೊಡನೆ ಗದ್ದೆಯಲ್ಲಿ ಬೆಳೆದಂತಹ ಹೊಸ ಭತ್ತದ ತೆನೆ ಹಾಗೂ ತರಕಾರಿ ಭೋಜನವನ್ನು ಒಟ್ಟಾಗಿ ಸವಿಯು ಸಂಭ್ರಮ ಮತ್ತೊಂದೆಡೆಯಾಗಿದೆ. ಪ್ರತಿಯೋರ್ವರ ತಾಯಿಯಂದಿರು ಮಗುವನ್ನು ಹೆತ್ತು ಸಾಕಿ ಸಲಹುವ ತ್ಯಾಗದ ಸಂಕೇತವಾಗಿದ್ದಾರೆ. ತಾಯಿ ಎನಿಸಿಕೊಂಡವರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಯಿಂದ ಸಲಹುತ್ತಾರೆ ಎನ್ನುವುದು ನಮ್ಮ ನಮ್ಮ ತಾಯಿಯ ಮುಖ ನೋಡಿದಾಗ ತಿಳಿಯುತ್ತದೆ. ನಮ್ಮ ತಾಯಿಯ ಸ್ಥಾನದಲ್ಲಿ ಪ್ರಭು ಯೇಸುಕ್ರಿಸ್ತರ ತಾಯಿ ಮರಿಯಮ್ಮರವರನ್ನು ಕಾಣುತ್ತೇವೆ ಎಂದ ಅವರು ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯು ಜೀವನದಲ್ಲಿ ಬಂದಂತಹ ಯಾವುದೇ ಕಷ್ಟಗಳಿಗೆ ಅಂಜುವ ಬದಲು ಹೂವಿನಂತೆ ಅರಳಿ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಆದ್ದರಿಂದಲೇ ಮೇರಿ ಮಾತೆಯು ನಮ್ಮೆಲ್ಲರ ತಾಯಿ ಎಂದು ಕರೆಸಿಕೊಂಡದ್ದಾಗಿದೆ. ಕುಟುಂಬಗಳಲ್ಲಿ ಎಲ್ಲಿ ಪ್ರೀತಿ ನೆಲೆಸುತ್ತಿದೆಯೋ ಅಂತಹ ಕುಟುಂಬಗಳು ಸಮಾಜದಲ್ಲಿ ಬಾಳ್ವಿಕೆಯನ್ನು ಪಡೆಯುತ್ತದೆ. ಅದರಂತೆ ಮೇರಿ ಮಾತೆಯ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿ ಕುಟುಂಬವನ್ನು ಸಮೃದ್ಧಿಗೊಳಿಸೋಣ ಎಂದು ಅವರು ಹೇಳಿದರು.

ಮನೆಲ ಚರ್ಚ್



ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ದಿವ್ಯ ಬಲಿಪೂಜೆಯ ನೇತೃತ್ವ ವಹಿಸಿದ್ದು, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್, ಧರ್ಮಗುರುಗಳಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋ, ಬಲ್ನಾಡು ನಿವಾಸಿ ಪ್ರಸ್ತುತ ರೋಮ್ ವ್ಯಾಟಿಕನ್ ಸಿಟಿಯಲ್ಲಿ ಧರ್ಮಗುರುವಾಗಿರುವ ವಂ|ನೋರ್ಬರ್ಟ್ ಸಿಕ್ವೇರಾರವರು ಸಹ ಬಲಿಪೂಜೆಯಲ್ಲಿ ಪಾಲ್ಗೊಂಡರು.

ಮಾಯಿದೆ ದೇವುಸ್ ಚರ್ಚ್



ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್, ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದಲ್ಲಿ ಪ್ರಧಾನ ಧರ್ಮಗುರು ವಂ|ಅಬೆಲ್ ಲೋಬೊ, ಮನೆಲ ಕ್ರಿಸ್ತರಾಜ ದೇವಾಲಯ ಚರ್ಚ್‌ನಲ್ಲಿ ವಂ|ಪಾವ್ಲ್ ಪ್ರಕಾಶ್ ಡಿ’ಸೋಜ, ಮಂಗಳೂರು ಜೆಪ್ಪು ಸೆಮಿನರಿಯ ಪ್ರಾಧ್ಯಾಪಕ ವಂ|ಐವನ್ ಡಿ’ಸೋಜ ಸೇರಿದಂತೆ ಕರಾವಳಿಯ ಚರ್ಚ್‌ಗಳಲ್ಲಿ ಧರ್ಮಭಗಿನಿಯರು, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್. ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಬನ್ನೂರು ಸಂತ ಅಂತೋನಿ ಚರ್ಚ್‌ನ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಸಿರಿಲ್ ವಾಸ್, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನ ಉಪಾಧ್ಯಕ್ಷ ಜೋನ್ ಸಿರಿಲ್ ರೊಡ್ರಿಗಸ್, ಕಾರ್ಯದರ್ಶಿ ನ್ಯಾನ್ಸಿ ಮಾಡ್ತಾ, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯ ಚರ್ಚ್ ಉಪಾಧ್ಯಕ್ಷ ನವೀನ್ ಬ್ರ್ಯಾಗ್ಸ್, ಕಾರ್ಯದರ್ಶಿ ವಿನ್ಸೆಂಟ್ ಮೊರಾಸ್, ಮನೆಲ ಚರ್ಚ್ ಉಪಾಧ್ಯಕ್ಷ ಸಿರಿಲ್ ಫೆರಾವೋ, ಕಾರ್ಯದರ್ಶಿ ಉರ್ಬಾನ್ ಡಿ’ಸೋಜ, ಆಯಾ ಚರ್ಚ್‌ನ ವಾಳೆ ಗುರಿಕಾರರು, ಸ್ಯಾಕ್ರಿಸ್ಟಿಯನ್, ವೇದಿ ಸೇವಕರು, ಗಾಯನ ಮಂಡಳಿ ಹಾಗೂ ಭಕ್ತಾಧಿಗಳೊಂದಿಗೆ ಹಬ್ಬದ ದಿವ್ಯ ಬಲಿಪೂಜೆಯನ್ನು ನೆರವೇರಿಸಲಾಯಿತು.

ಭತ್ತದ ತೆನೆಗಳ ಪವಿತ್ರೀಕರಣ, ಕಬ್ಬು ವಿತರಣೆ:
ರೈತರು ಬೆಳೆಸಿದ ಭತ್ತದ ತೆನೆ(ಹೊಸ ಅಕ್ಕಿ ಊಟ)ಗಳನ್ನು ಆಯಾ ಚರ್ಚ್‌ನಲ್ಲಿ ಪ್ರಮುಖರು ಸಂಗ್ರಹಿಸಿ, ಈ ಹಬ್ಬದ ದಿನದಂದು ಅವನ್ನು ಧರ್ಮಗುರುಗಳು ಪವಿತ್ರೀಕರಿಸಿ ಭಕ್ತರಿಗೆ ಹಂಚುವುದು ಸಂಪ್ರದಾಯವಾಗಿದ್ದು, ಈ ನಿಟ್ಟಿನಲ್ಲಿ ಪವಿತ್ರೀಕರಿಸಿದ ಭತ್ತದ ತೆನೆಗಳನ್ನು ಆಯಾ ಚರ್ಚ್‌ಗಳಲ್ಲಿ ಭಕ್ತರಿಗೆ ದಿವ್ಯ ಬಲಿಪೂಜೆಯ ಬಳಿಕ ಹಂಚಲಾಯಿತು ಹಾಗೂ ಜೀವನದುದ್ದಕ್ಕೂ ಬಾಳಿನಲ್ಲಿ ಸಿಹಿಯು ಮನೆ ಮಾಡಲಿ ಎಂದು ಸಿಹಿಯ ಪ್ರತೀಕವಾದಂತಿರುವ ಕಬ್ಬನ್ನು ಹಬ್ಬದ ಸಂದರ್ಭದಲ್ಲಿ ಆಯಾ ಚರ್ಚ್‌ನಲ್ಲಿ ವಿತರಿಸುವುದು ಸಂಪ್ರದಾಯವಾಗಿದ್ದು, ಅದರಂತೆ ತಾಲೂಕಿನ ಆಯಾ ಚರ್ಚ್‌ಗಳಲ್ಲಿ ಭಕ್ತರಿಗೆ ಸಿಹಿತಿಂಡಿ ಹಾಗೂ ಕಬ್ಬನ್ನು ವಿತರಿಸಲಾಯಿತು.

ಮಕ್ಕಳಿಂದ ಹೂ ಅರ್ಪಣೆ..
ಕರಾವಳಿ ಕ್ರೈಸ್ತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಮೊಂತಿ ಫೆಸ್ತ್-ಕುಟುಂಬದ ಹಬ್ಬ ಆಚರಣೆಯು ಒಂಭತ್ತು ದಿವಸದ ಹಿಂದೆಯೇ ಆರಂಭಗೊಂಡಿದ್ದು, ಕರಾವಳಿಯ ಎಲ್ಲಾ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಯ ಜೊತೆಗೆ ಪುಟ್ಟ ಮಕ್ಕಳು ಮೇರಿ ಮಾತೆಗೆ ಹೂಗಳನ್ನು ಅರ್ಪಿಸುವ ಕಾರ‍್ಯ ಪ್ರಾರಂಭಗೊಂಡಿತ್ತು. ಆಯಾ ಚರ್ಚ್‌ಗಳಲ್ಲಿ ಪುಟ್ಟ ಮಕ್ಕಳು ಪ್ರಕೃತಿಯಲ್ಲಿ ದೊರೆಯುವ ಚೆಂದದ ಹೂಗಳನ್ನು ಹೆಕ್ಕಿ, ಆರಿಸಿ ಬುಟ್ಟಿಯಲ್ಲಿ ಸೊಗಸಾಗಿ ಜೋಡಿಸಿ ಚರ್ಚ್‌ಗೆ ಬಂದು ತಾವು ತಂದ ಹೂಗಳನ್ನು ಧಾರ್ಮಿಕ ವಿಧಿವಿಧಾನದೊಂದಿಗೆ ಮೇರಿ ಮಾತೆಗೆ ಅರ್ಪಿಸುವುದು ಸಂಪ್ರದಾಯವಾಗಿದೆ.

ಸಿಎಲ್‌ಸಿಯಿಂದ ಆಹಾರ ಕಿಟ್..
ಮಾಯಿದೆ ದೇವುಸ್ ಚರ್ಚ್‌ನ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್‌ಸಿ)ಯು ಮೊಂತಿ ಹಬ್ಬದ ಪ್ರಯುಕ್ತ ಚರ್ಚ್ ವ್ಯಾಪ್ತಿಯಲ್ಲಿನ ೧೦೦, ಮನೆಲ ಚರ್ಚ್ ಹಾಗೂ ನಿಡ್ಪಳ್ಳಿ ಚರ್ಚ್‌ನ ೧೦೦ ಬಡ ಕುಟುಂಬಗಳನ್ನು ಗುರುತಿಸಿ, ಹಬ್ಬಕ್ಕೆ ಬೇಕಾದ ಸಿರಿಧಾನ್ಯಗಳು ಮತ್ತು ವಿವಿಧ ತರಕಾರಿ ವಸ್ತುಗಳನ್ನು ವಿತರಿಸಿ ಹಬ್ಬಕ್ಕೆ ವಿಶೇಷ ಮೆರುಗನ್ನು ತಂದಿತ್ತಿದ್ದಾರೆ. ಸಿಎಲ್‌ಸಿ ಎಜ್ಯುಕೇರ್ ಸೊಸೈಟಿಯ ಗೌರವಾಧ್ಯಕ್ಷರಾದ ಸಿಎ ಆಲ್ವಿನ್ ರೊಡ್ರಿಗಸ್‌ರವರು ಪ್ರಮುಖ ದಾನಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷವೂ ಇದೇ ಸಿಎಲ್‌ಸಿ ಸಂಘದವರು ಬಡ ಕುಟುಂಬಗಳಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಮನೆಮಾತಾಗಿದ್ದರು.

ಮನೆಲ ಚರ್ಚ್

ಸರಳ ರೀತಿಯಲ್ಲಿ ಆಚರಣೆ…
ಹಬ್ಬದ ಇನ್ನೊಂದು ವಿಶೇಷವೆಂದರೆ ‘ಹೊಸ ಅಕ್ಕಿ ಊಟ’ ನವ ದಂಪತಿಗಳಿಗೆ, ಒಂದು ವರ್ಷ ತುಂಬುವ ಮಗುವಿಗೆ ಈ ಹಬ್ಬ ಇನ್ನೂ ವಿಶೇಷವಾಗಿದೆ. ಪೂರ್ವಿಕರಿಂದಲೇ ಅಚರಿಸುವ ಈ ಹಬ್ಬವು ತನ್ನದೇ ವಿಶಿಷ್ಟ ಸಂಸ್ಕೃತಿಯಿಂದ, ಸಂಪ್ರದಾಯವನ್ನು ಎತ್ತಿ ಹಿಡಿಯಲಾಗುತ್ತದೆ. ಚರ್ಚುಗಳಲ್ಲಿ ಭಕ್ತಿಪೂರ್ವಕವಾಗಿ ತೆನೆಯನ್ನು ಮೆರವಣಿಗೆಯ ಮೂಲಕ ದೇವಾಲಯದ ಒಳಗೆ ತಂದು ಧರ್ಮಗುರುಗಳಿಂದ ಆಶೀರ್ವಾದದ ಬಳಿಕ ಮನೆಗೆ ತಂದು ಮೇಣದ ಭತ್ತಿಯನ್ನು ಉರಿಸಿ ಆ ಭತ್ತದ ತೆನೆಯನ್ನು ಬೆಸಸಂಖ್ಯೆ ಆಧಾರದಲ್ಲಿ ಪುಡಿಮಾಡಿ ಹಾಲು ಅಥವಾ ಪಾಯಸದಲ್ಲಿ ಸೇರಿಸಿ ಮನೆಯ ಎಲ್ಲಾ ಸದಸ್ಯರು ಸೇವಿಸುತ್ತಾರೆ. ಅಂದಿನ ಹಬ್ಬದ ಎಲ್ಲಾ ಅಡುಗೆ ರುಚಿಗಳು ಸಸ್ಯಾಹಾರವಾಗಿದ್ದು ಸಾಂಬಾರು ಅಥವಾ ಪದಾರ್ಥಗಳು ಬೆಸ ಸಂಖ್ಯೆ ಆಧಾರದಲ್ಲಿ ಇರುತ್ತದೆ. ವಿದೇಶದಲ್ಲಿರುವ ಕುಟುಂಬದ ಸದಸ್ಯರಿಗೆ ಪೋಸ್ಟ್ ಮೂಲಕ ಕಳುಹಿಸಿ ಕೊಡಲಾಗುತ್ತದೆ. ಹೀಗೆ ಕೌಟುಂಬಿಕ ಸಾಮರಸ್ಯವನ್ನು ಈ ಹಬ್ಬದ ಮೂಲಕ ಸಾರಲಾಗುತ್ತದೆ. ಆದರೆ ಕೋವಿಡ್ ಸಂಕಷ್ಟದಿಂದಾಗಿ ಈ ಬಾರಿ ಚರ್ಚ್‌ಗಳಲ್ಲಿ ಯಾವುದೇ ಸಂಭ್ರಮದ ಮೆರವಣಿಗೆಯನ್ನು ಹಮ್ಮಿಕೊಳ್ಳದೆ ಜೊತೆಗೆ ಒಂದು ಪ್ರಧಾನ ದಿವ್ಯ ಬಲಿಪೂಜೆಯ ಬದಲು ಎರಡು ಪ್ರಧಾನ ದಿವ್ಯ ಬಲಿಪೂಜೆಯನ್ನು ಏರ್ಪಡಿಸಿ ಭಕ್ತರ ಸಾಮಾಜಿಕ ಅಂತರಕ್ಕೆ ಅನುವು ಮಾಡಿ ಕೊಡಲಾಗಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.