HomePage_Banner
HomePage_Banner
HomePage_Banner
HomePage_Banner

ಟೋಕನ್ ವ್ಯವಸ್ಥೆ ರದ್ದು: ಪಾರದರ್ಶಕವಾದ ಲಸಿಕೆ ಹಂಚುವ ಕಾರ್ಯ -ಸುದ್ದಿ’ಯ ಜನಪರ ಕಾಳಜಿ ವರದಿಗೆ ಸಾರ್ವಜನಿಕರ ಮೆಚ್ಚುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೋವಿಶೀಲ್ಡ್ ಲಸಿಕೆ ನೀಡುವ ಸಂದರ್ಭ ಇದ್ದ ಟೋಕನ್ ವ್ಯವಸ್ಥೆಯನ್ನು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ರದ್ದು ಮಾಡಿ ಸರದಿ ಸಾಲಿನ ವ್ಯವಸ್ಥೆ ಮಾಡಲಾಗಿದ್ದು, ಇದರಿಂದಾಗಿ ಈಗ ಸಾರ್ವಜನಿಕರಿಗೆ ಯಾವುದೇ ಗೊಂದಲ, ಗದ್ದಲಗಳಿಲ್ಲದೆ ಲಸಿಕೆ ಸಿಗುವಂತಾಗಿದೆ. ಟೋಕನ್ ಅವ್ಯವಸ್ಥೆಯ ಬಗ್ಗೆ `ಸುದ್ದಿ ಬಿಡುಗಡೆ’ ಪತ್ರಿಕೆಯು ಸಮಗ್ರ ವರದಿ ಪ್ರಕಟಿಸಿದ್ದು, ಪತ್ರಿಕೆಯ ಜನಪರ ಕಾಳಜಿಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

ತ್ವರಿತವಾಗಿ ಜನರು ಲಸಿಕೆ ಪಡೆಯುವ ಮೂಲಕ ಶೇ.100  ಗುರಿ ಸಾಧನೆಯ ಹಿನ್ನೆಲೆಯಲ್ಲಿ ಗ್ರಾ.ಪಂ.ಗಳ ನೇತೃತ್ವದಲ್ಲಿ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಹಾಕುವ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ರೂಪಿಸಿತ್ತು. ಇದು ಉತ್ತಮ ಕಾರ್ಯಕ್ರಮವಾದರೂ ಕೆಲವು ಗ್ರಾ.ಪಂ.ಗಳಲ್ಲಿ ಮಾತ್ರ ಈ ಲಸಿಕೆಯನ್ನು ರಾಜಕೀಕರಣಗೊಳಿಸುವ ಮೂಲಕ ಆರೋಗ್ಯ ಇಲಾಖೆಯ ಮೂಲ ಆಶಯಕ್ಕೆ ಧಕ್ಕೆ ತರಲಾಗುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿತ್ತು.

ಗ್ರಾ.ಪಂ. ಸುಪರ್ದಿಯಲ್ಲಿ ಲಸಿಕೆಗಳು ಬಂದರೆ, ಅಲ್ಲಿ ಟೋಕನ್ ವಿತರಿಸುವ ಕಾರ್ಯವನ್ನು ಗ್ರಾ.ಪಂ. ಸದಸ್ಯರೇ ವಹಿಸಿಕೊಳ್ಳುತ್ತಿದ್ದರು. ಕೆಲವು ಕಡೆಗಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಪಾರದರ್ಶಕವಾಗಿ ಟೋಕನ್ ಹಂಚಿಕೆ ಕಾರ್ಯ ನಡೆದರೆ, ಇನ್ನು ಕೆಲವು ಕಡೆಗಳಲ್ಲಿ ಗ್ರಾ.ಪಂ. ಸದಸ್ಯರು ಟೋಕನ್‌ಗಳನ್ನು ತಮ್ಮಲ್ಲಿಟ್ಟುಕೊಂಡು ತಮ್ಮ ಬೆಂಬಲಿಗರಿಗೆ, ತಮ್ಮ ಪಕ್ಷದವರಿಗೆ, ತಮ್ಮ ಧರ್ಮದವರಿಗೆ, ತಮ್ಮ ಜಾತಿಯವರಿಗೆ ಟೋಕನ್ ಹಂಚುತ್ತಾರೆ. ಇದರಿಂದ ಲಸಿಕೆ ಇದೆ ಎಂದು ಸರತಿ ಸಾಲಿನಲ್ಲಿ ನಿಂತ ಜನರು ಅವಕಾಶ ವಂಚಿತರಾಗಿ ವಾಪಸ್ ಹೋಗುವಂತಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.

`ಸುದ್ದಿ’ಯಲ್ಲಿ ವರದಿ: ಈ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆಯು ವಿಸ್ತೃತ ವರದಿ ಪ್ರಕಟಿಸಿದ್ದು, ಬಳಿಕ ಉಪ್ಪಿನಂಗಡಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮುಶಾಕಿರ್ ಹುಸೈನ್ ಅವರಿಗೆ `ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಯು ಮನವಿ ಸಲ್ಲಿಸಿ, ಟೋಕನ್ ವ್ಯವಸ್ಥೆಯನ್ನು ಮಾಡಿಕೊಂಡು ಲಸಿಕೆ ನೀಡಿದ ದಿನ 34  ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಆದ ಗೊಂದಲ- ಗದ್ದಲದ ಬಗ್ಗೆ ಪ್ರಸ್ತಾಪಿಸಿತ್ತಲ್ಲದೆ, ಯಾವುದೇ ಕಾರಣಕ್ಕೂ ಟೋಕನ್ ವ್ಯವಸ್ಥೆ ಬೇಡ. ಕೆಲವು ಗ್ರಾ.ಪಂ. ಸದಸ್ಯರ ರಾಜಕೀಯಭರಿತ ನಡೆಯಿಂದಾಗಿ `ಮೊದಲು ಬಂದವನಿಗೆ ಮೊದಲ ಆದ್ಯತೆ’ ಎಂಬ ಆರೋಗ್ಯ ಇಲಾಖೆಯ ಆಶಯ ಈಡೇರುತ್ತಿಲ್ಲ. ಆದ್ದರಿಂದ ಟೋಕನ್ ವ್ಯವಸ್ಥೆಯನ್ನು ರದ್ದುಗೊಳಿಸಿ, ಸರದಿ ಸಾಲಿನಲ್ಲಿ ನಿಂತವರಿಗೆ ಆದ್ಯತೆ ನೀಡಿ ಲಸಿಕೆ ನೀಡಬೇಕು ಎಂದು ತಿಳಿಸಿತು ಹಾಗೂ ಅನಾರೋಗ್ಯದ ಕಾರಣದಿಂದ ಮನೆಯಿಂದ ಹೊರಗೆ ಬರಲು ಸಾಧ್ಯವಿಲ್ಲದೆ, ಮಲಗಿಕೊಂಡೇ ಇರುವಂತವರಿಗೆ ಮನೆಯಲ್ಲಿಯೇ ಲಸಿಕೆ ಕೊಡುವ ವ್ಯವಸ್ಥೆಯನ್ನು ಮಾಡಬೇಕೆಂದು ಮನವಿ ಮಾಡಿತ್ತು.

ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಉಪ್ಪಿನಂಗಡಿ, 34 ನೆಕ್ಕಿಲಾಡಿ, ಕೋಡಿಂಬಾಡಿ, ಬನ್ನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಟೋಕನ್ ವ್ಯವಸ್ಥೆಯನ್ನು ರದ್ದುಗೊಳಿಸಿರುವ ಆರೋಗ್ಯ ಇಲಾಖೆಯು ಅಲ್ಲಿ ಸರದಿ ಸಾಲಿನಲ್ಲಿ ನಿಂತವರಿಗೆ ಕ್ರಮಪ್ರಕಾರವಾಗಿ ಲಸಿಕೆ ಕೊಡುವ ವ್ಯವಸ್ಥೆಯನ್ನು ಮಾಡಿದೆ ಹಾಗೂ ಗರ್ಭೀಣಿಯರು, ವಿಕಲಾಂಗರು, ವೃದ್ಧರು, ಎರಡನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡುತ್ತಿದೆ. ಆರೋಗ್ಯ ಇಲಾಖೆಯ ಈ ನಿಲುವಿನಿಂದಾಗಿ ಈಗ ಲಸಿಕೆ ವಿಚಾರದಲ್ಲಿ ಮೂರನೇಯವರಿಗೆ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲವಾಗಿದ್ದು, ಇದರಿಂದ ಯಾವುದೇ ಗಲಾಟೆ, ಗದ್ದಲ, ಗೊಂದಲಗಳಿಲ್ಲದೆ ಜನರು ಸರದಿ ಸಾಲಿನಲ್ಲಿ ನಿಂತು ಲಸಿಕೆ ಪಡೆದುಕೊಂಡು ಹೋಗುತ್ತಿದ್ದಾರೆ. ಆರೋಗ್ಯ ಇಲಾಖೆಯ ಈ ನಡೆಗೆ ಹಾಗೂ `ಸುದ್ದಿ ಬಿಡುಗಡೆ’ ಪತ್ರಿಕೆಯ ಜನಪರ ಕಾಳಜಿಯು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.


ಮೊದಲಿಗೆ ಟೋಕನ್ ವ್ಯವಸ್ಥೆಯಡಿ ಲಸಿಕೆ ಹಂಚುವ ಕಾರ್ಯ ನಡೆಯುತ್ತಿತ್ತು. ಆ ಸಂದರ್ಭ ಹಲವು ಗೊಂದಲಗಳು, ಕೆಲವರ ಹಸ್ತಕ್ಷೇಪದ ಆರೋಪ ಕೇಳಿಬಂತಲ್ಲದೆ, ಟೋಕನ್ ವ್ಯವಸ್ಥೆಯಿಂದಾಗಿ ಪಾರದರ್ಶಕವಾಗಿ ಲಸಿಕೆ ಹಂಚಿಕೆಯಾಗುವ ಕಾರ್ಯ ನಡೆಯುತ್ತಿಲ್ಲ ಎಂಬ ದೂರು ಬಂದಿತ್ತು. ಅಲ್ಲದೇ, ಸಮುದಾಯ ಆರೋಗ್ಯ ಕೇಂದ್ರದ ಸೀಲ್ ಇರುವ ಹಲವು ಡೂಬ್ಲಿಕೇಟ್ ಟೋಕನ್‌ಗಳು ನಮಗೆ ಪತ್ತೆಯಾಯಿತು. ಟೋಕನ್ ವ್ಯವಸ್ಥೆಯ ಸಂದರ್ಭ ಕೆಲವರು ಕೆಲವು ಟೋಕನ್‌ಗಳನ್ನು ಎತ್ತಿಟ್ಟುಕೊಳ್ಳುವುದು, ಟೋಕನ್ ಪಡೆದುಕೊಂಡ ಕೆಲವರು ಸಂಜೆ ಲಸಿಕೆ ಹಂಚಿಕೆ ಕಾರ್ಯಕ್ರಮ ಮುಗಿದ ನಂತರ ಬರುವುದು, ಆ ಸಮಯದಲ್ಲಿ ಲಸಿಕೆ ಕೊಡದಿದ್ದರೆ ಗಲಾಟೆ ಮಾಡುವುದು, ಕೆಲವರು ಟೋಕನ್ ಪಡೆದುಕೊಂಡು ಬಾರದೇ ಕುಳಿತುಕೊಳ್ಳುವುದು ಹೀಗೆಲ್ಲಾ ನಡೆಯುತ್ತಿತ್ತು. ಇದರಿಂದಾಗಿ ಕೆಲವೊಮ್ಮೆ ಟೋಕನ್ ಖಾಲಿಯಾಗಿದ್ದರೂ, ಲಸಿಕೆಗಳು ಖಾಲಿಯಾಗುತ್ತಿರಲಿಲ್ಲ. ಟೋಕನ್ ಹಂಚಿದ ಮೇಲೆ ಅವರು ಬಾರದಿದ್ದರೂ ಉಳಿದಿರುವ ಆ ಲಸಿಕೆಯನ್ನು ಬೇರೆಯವರಿಗೆ ಕೊಡುವುದಕ್ಕೂ ನಮಗೆ ಕಷ್ಟಸಾಧ್ಯವಾಗುತ್ತಿತ್ತು. ಯಾಕೆಂದರೆ ಸಂಜೆಯ ವೇಳೆಗೆ ಆ ವ್ಯಕ್ತಿ ಟೋಕನ್‌ನೊಂದಿಗೆ ಬಂದು ಲಸಿಕೆ ಕೇಳಿದರೆ ನಾವೇನು ಮಾಡೋಣ ಹೀಗೆ ಹತ್ತು ಹಲವು ಸಮಸ್ಯೆಗಳಾಗುತ್ತಿತ್ತು. ಇದರಿಂದಾಗಿ ಇಲ್ಲಿ ಸರದಿ ಸಾಲಿನಲ್ಲಿ ನಿಂತವರು ಲಸಿಕೆ ಸಿಗದೇ ಮರಳುವಂತಾಗುತ್ತಿತ್ತು. ಇದನ್ನೆಲ್ಲಾ ಮನಗಂಡು ಪಾರದರ್ಶಕವಾಗಿ ಲಸಿಕೆ ಹಂಚಿಕೆ ನಡೆಯಬೇಕೆನ್ನುವ ಉದ್ದೇಶದಿಂದ ಮೊದಲಾಗಿ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರದಿ ಸಾಲಿನಲ್ಲಿ ಬಂದವರಿಗೆ ಆದ್ಯತೆ ನೀಡಿದೆವು. ಇದರಲ್ಲೂ ಗರ್ಭೀಣಿಯರು, ವಿಕಲಾಂಗರು, ವೃದ್ಧರು, ಎರಡನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಬಳಿಕ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಉಪ್ಪಿನಂಗಡಿ, ಕೋಡಿಂಬಾಡಿ, ಬನ್ನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಇದನ್ನು ಜಾರಿಗೆ ತರಲಾಯಿತು. ಮತ್ತೆ ೩೪ ನೆಕ್ಕಿಲಾಡಿ ಗ್ರಾ.ಪಂ.ನಲ್ಲೂ ಟೋಕನ್ ವ್ಯವಸ್ಥೆಯ ಸಂದರ್ಭ ಗೊಂದಲಗಳು ಉಂಟಾಗಿವೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಅಲ್ಲೂ ನಿನ್ನೆ ಟೋಕನ್ ವ್ಯವಸ್ಥೆಯನ್ನು ಕೈಬಿಟ್ಟು ಸರದಿ ಸಾಲಿನ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಸರದಿ ಸಾಲಿನ ವ್ಯವಸ್ಥೆಯಡಿ ಇಲ್ಲಿ ಸೆ.೮ರಂದು ಯಾವುದೇ ಗದ್ದಲ, ಗಲಾಟೆ, ಗೊಂದಲಗಳಿಲ್ಲದೆ ಪಾರದರ್ಶಕವಾಗಿ ಲಸಿಕೆ ಹಂಚಿಕೆ ಕಾರ್ಯ ನಡೆದಿದೆ. ಅಲ್ಲಿ ೨೦೦ ಡೋಸ್ ಲಸಿಕೆ ಬಂದಿದ್ದು, ಅದು ಮುಗಿದ ಬಳಿಕ ಉಳಿದ ಕೆಲವರಿಗೆ ಹೆಚ್ಚುವರಿಯಾಗಿ ಇದ್ದ ಲಸಿಕೆಯನ್ನೂ ಕೊಡಲಾಗಿದೆ. ಅಲ್ಲದೇ, ಅನಾರೋಗ್ಯ ಪೀಡಿತರಾಗಿ ಮಲಗಿದ್ದಲ್ಲಿರುವ ಮೂವರ ಮನೆಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ, ಲಸಿಕೆ ನೀಡಿದ್ದಾರೆ. ಒಟ್ಟಾರೆಯಾಗಿ ಸರದಿ ಸಾಲಿನ ವ್ಯವಸ್ಥೆಯಿಂದಾಗಿ ಲಸಿಕೆ ಹಂಚಿಕೆಯಲ್ಲಿ ಯಾವುದೇ ಗೊಂದಲಗಳಾಗುತ್ತಿಲ್ಲ. ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬಂತೆ ಎಲ್ಲಾ ಕಡೆ ಪಾರದರ್ಶಕವಾಗಿ ಲಸಿಕೆ ಹಂಚಿಕೆ ಕಾರ್ಯ ನಡೆಯುತ್ತಿದೆ.
– ಡಾ. ಮುಶಾಕಿರ್ ಹುಸೈನ್
ಆಡಳಿತ ವೈದ್ಯಾಧಿಕಾರಿ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ

34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಈ ಮೊದಲು ಟೋಕನ್ ವ್ಯವಸ್ಥೆಯಿದ್ದಾಗ ನಾನು ಲಸಿಕೆ ಪಡೆದುಕೊಳ್ಳಲು ಹೋಗಿದ್ದೆ. ಆದರೆ ಆ ವ್ಯವಸ್ಥೆಯ ಅವ್ಯವಸ್ಥೆಯಿಂದಾಗಿ ಬೆಳಗ್ಗೆ ಹೋದ ನಾನು ಸಂಜೆಯ ತನಕ ಲಸಿಕೆಗಾಗಿ ಕಾಯಬೇಕಾದ ಸ್ಥಿತಿ ಬಂದಿತ್ತು. ಆದರೆ ಸೆ.೮ರಂದು ನನ್ನ ಪತ್ನಿಗೆ ಲಸಿಕೆ ಕೊಡಿಸಲು 34  ನೆಕ್ಕಿಲಾಡಿ ಗ್ರಾ.ಪಂ.ಗೆ ಹೋಗಿದ್ದೆ. ಅಂದು ಟೋಕನ್ ವ್ಯವಸ್ಥೆ ರದ್ದುಗೊಳಿಸಿ ಸರದಿ ಸಾಲು ಮಾಡಿದ್ದ ಕಾರಣ. ಯಾವುದೇ ಗೊಂದಲ, ಗದ್ದಲಗಳು ಇರಲಿಲ್ಲ. ಸರದಿ ಸಾಲಿನಲ್ಲಿ ನಿಂತ ನನ್ನ ಪತ್ನಿ ಅವಳ ಸರದಿ ಬಂದಾಗ ಲಸಿಕೆ ಪಡೆದುಕೊಂಡಿದ್ದಾಳೆ. ಸಾಲು ನಿಂತು ಎರಡು ಗಂಟೆಯಾಗುವುದರೊಳಗೆ ಆಕೆ ಲಸಿಕೆಯನ್ನು ಪಡೆದುಕೊಂಡಿದ್ದಾಳೆ. ಟೋಕನ್ ವ್ಯವಸ್ಥೆ ಇದ್ದಾಗ ಮಾತ್ರ ಹಂಚಿಕೆಯ ವಿಚಾರದಲ್ಲಿ ಗೊಂದಗಳು ಆಗುತ್ತವೆ. ಆದ್ದರಿಂದ ಆರೋಗ್ಯ ಇಲಾಖೆಯು ಈ ವ್ಯವಸ್ಥೆಯನ್ನು ರದ್ದುಗೊಳಿಸಿ ಸರದಿ ಸಾಲಿನ ವ್ಯವಸ್ಥೆ ಮಾಡಿರುವುದರಿಂದ ಪಾರದರ್ಶಕವಾಗಿ ಲಸಿಕೆ ಹಂಚಿಕೆ ಕಾರ್ಯ ನಡೆಯುತ್ತಿದೆ. ಇಲ್ಲಿ ಖಾಸಗಿ ವ್ಯಕ್ತಿಗಳ ಮಧ್ಯಪ್ರವೇಶಕ್ಕೆ ಅವಕಾಶ ಸಿಗುವುದಿಲ್ಲ. ಮೊದಲು ಬಂದವನಿಗೆ ಮೊದಲ ಆದ್ಯತೆ ಸಿಗುತ್ತದೆ. ಟೋಕನ್ ವ್ಯವಸ್ಥೆಯನ್ನು ರದ್ದುಗೊಳಿಸುವ ಮೂಲಕ ಉತ್ತಮ ಕಾರ್ಯ ಮಾಡಿರುವ ಆರೋಗ್ಯ ಇಲಾಖೆಗೆ ಅಭಿನಂದನೆಗಳು.
– ಅಬ್ದುಲ್ ಮಜೀದ್, ಆದರ್ಶನಗರ

34  ನೆಕ್ಕಿಲಾಡಿಯಲ್ಲಿ ಸೆ.೮ರಂದು ಲಸಿಕೆ ನೀಡುವ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿದೆ.89ರ ಹರೆಯದ ನನ್ನ ಅತ್ತೆಗೆ ಲಸಿಕೆ ಕೊಡಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಕರೆದುಕೊಂಡು ಬರಲು ನಾನು ಮಧ್ಯಾಹ್ನ ಎರಡೂವರೆ ಗಂಟೆಯ ಸುಮಾರಿಗೆ ನೆಕ್ಕಿಲಾಡಿ ಗ್ರಾ.ಪಂ.ಗೆ ಹೋಗಿದ್ದೆ. ಅಗ ಅಲ್ಲಿ ನೂಕು ನುಗ್ಗಾಟವಾಗಲಿ, ಗದ್ದಲ- ಗೊಂದಲಗಳಾಗಲಿ ಇರಲಿಲ್ಲ. ಸರದಿ ಸಾಲಿನಲ್ಲಿ ನಿಂತವರು ಕ್ರಮ ಪ್ರಕಾರವಾಗಿ ಲಸಿಕೆ ಪಡೆದುಕೊಂಡು ಹೋಗುತ್ತಿದ್ದರು. ನಾನು ಹೋದ ಸ್ವಲ್ಪ ಹೊತ್ತಿನಲ್ಲಿ ಆರೋಗ್ಯ ಸಹಾಯಕಿಯೋರ್ವರು ನಮ್ಮ ಮನೆಗೆ ಬಂದು ಲಸಿಕೆ ಕೊಡುವ ಕಾರ್ಯ ಮಾಡಿದ್ದಾರೆ. ಆರೋಗ್ಯ ಇಲಾಖೆಯ ಈ ಕಾರ್ಯ ಪ್ರಶಂಸನೀಯ.
– ಚಂದ್ರಹಾಸ ಶೆಟ್ಟಿ ಅಲಿಮಾರ್

 

 


Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.