HomePage_Banner
HomePage_Banner
HomePage_Banner
HomePage_Banner

ಸರ್ಕಾರಿ ಪ್ರಾಯೋಜಿತ ತಾರತಮ್ಯ ಧೋರಣೆಗೆ ಮುಕ್ತಿ ಯಾವಾಗ?

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರಾಕೇಶ್ ಕುಮಾರ್ ಕಮ್ಮಜೆ
ಮುಖ್ಯಸ್ಥರು
ಪತ್ರಿಕೋದ್ಯಮ ವಿಭಾಗ
ಅಂಬಿಕಾ ಪದವಿ ಮಹಾವಿದ್ಯಾಲಯ
ಬಪ್ಪಳಿಗೆ, ಪುತ್ತೂರು – ೫೭೪೨೦೧

ಪ್ರತಿವರ್ಷ ಶಿಕ್ಷಕ ದಿನಾಚರಣೆಯಂದು ಶಿಕ್ಷಣ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಮೆರೆದ ಅರ್ಹ ಶಿಕ್ಷಕರಿಗೆ ತಾಲೂಕು ಮಟ್ಟದಿಂದ ರಾಜ್ಯಮಟ್ಟದ ವರೆಗಿನ ವಿವಿಧ ಹಂತಗಳಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡುವ ಮೂಲಕ ಸರ್ಕಾರ ಶಿಕ್ಷಕರಿಗೆ ನೈತಿಕ ಬಲವನ್ನು ತುಂಬುತ್ತಾ ಬರುತ್ತಿದೆ. ಪ್ರಸ್ತುತ ವರ್ಷವೂ ಅಂತಹ ಕಾರ್ಯಕ್ರಮಗಳು ನಡೆದಿರುವ ಬಗೆಗೆ ಮಾಧ್ಯಮಗಳಲ್ಲಿನ ವರದಿಗಳನ್ನು ನಾವೆಲ್ಲರೂ ಗಮನಿಸಿದವರೇ ಇದ್ದೇವೆ. ಈ ರೀತಿಯ ಮಾನ-ಸನ್ಮಾನಗಳು ಕೆಲವೇ ಕೆಲವರಿಗೆ ಒಲಿಯುವುದು ಹೌದಾದರೂ ಅದು ಇಡಿಯ ಶಿಕ್ಷಕ ವಲಯಕ್ಕೆ ಹೊಸ ಸ್ಪೂರ್ತಿಯನ್ನೋ, ಪ್ರೇರಣೆಯನ್ನೋ ನೀಡಬಲ್ಲುದೆಂಬುದು ಸರ್ವವಿಧಿತ. ಜತೆಗೆ ಶ್ರೇಷ್ಟ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರೊಬ್ಬರು ಕಾರ್ಯನಿರ್ವಹಿಸುತ್ತಿರುವ ಶಾಲೆಗೂ ಅದೊಂದು ಬಹುದೊಡ್ಡ ಗೌರವವಾಗಿ ವಿದ್ಯಾರ್ಥಿಗಳ ದಾಖಲಾತಿಯ ಮೇಲೂ ಅತ್ಯುತ್ತಮ ಪರಿಣಾಮ ಬೀರಬಲ್ಲುದು. ಜತೆಗೆ ಹೆತ್ತವರಿಗೆ ತಮ್ಮ ಮಕ್ಕಳು ಅತ್ಯುತ್ತಮ ಶಿಕ್ಷಕರಿರುವ ಶಾಲೆಯಲ್ಲಿ ಓದುತ್ತಿದ್ದಾರೆಂಬ ಹೆಮ್ಮೆಯೂ ಮೂಡುವುದಕ್ಕೆ ಸಾಧ್ಯ. ಅದರಲ್ಲೂ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಶಿಕ್ಷಕರಿಗೆ ಐದು ಸಾವಿರ ನಗದು ಹಾಗೂ ರಾಜ್ಯಮಟ್ಟದಲ್ಲಿ ಆಯ್ಕೆಯಾಗುವವರಿಗೆ ಹತ್ತು ಸಾವಿರ ನಗದಿನ ಜತೆಗೆ ಅವರು ಕಾರ್ಯ ನಿರ್ವಹಿಸುತ್ತಿರುವ ಶಾಲೆಗೂ ಐವತ್ತು ಸಾವಿರ ನಗದನ್ನು ನೀಡಿ ಗೌರವಿಸಲಾಗುತ್ತದೆ. ಹೀಗೆ ವಿವಿಧ ನೆಲೆಗಳಿಂದ ಸಕಾರಾತ್ಮಕ ಪರಿಣಾಮ ಬೀರಬಹುದಾದ ಇಂತಹ ಗೌರವವನ್ನು ಕೊಡಮಾಡುತ್ತಿರುವುದಕ್ಕಾಗಿ ಯಾರೇ ಆದರೂ ಸರ್ಕಾರೀ ವ್ಯವಸ್ಥೆಯನ್ನು ಅಭಿನಂದಿಸಲೇಬೇಕು.ಆದರೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯ ಘೊಷಣೆಯ ಸಂದರ್ಭದಲ್ಲಿ ಆಗುತ್ತಿರುವ ಅಪಚಾರದ ಬಗೆಗೆ ದನಿ ಎತ್ತಬೇಕಾದ ಅನಿವಾರ್ಯತೆಯಿದೆ!

 

ಹೌದು, ಅತ್ಯುತ್ತಮ ಶಿಕ್ಷಕ ಎಂದು ಗುರುತಿಸುವಾಗ ‘ಸರ್ಕಾರಿ ಶಾಲಾ ಶಿಕ್ಷಕರಿಗೆ ಮಾತ್ರ’ ಎನ್ನುವ ಧೋರಣೆ ಯಾಕಾಗಿ? ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಏನು ಪಾಪ ಮಾಡಿದ್ದಾರೆ? ಅಷ್ಟಕ್ಕೂ ಅತ್ಯುತ್ತಮ ಶಿಕ್ಷಕರಿರುವುದು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಅಂದ ಮಹಾನುಭಾವ ಯಾರು? ಸರ್ಕಾರಿ ಶಿಕ್ಷಕರು ಮತ್ತು ಖಾಸಗಿ ಶಿಕ್ಷಕರ ಬೋಧನಾ ವಿಧಾನದಲ್ಲೇನಾದರೂ ವ್ಯತ್ಯಾಸವಿದೆಯಾ? ಇಬ್ಬರೂ ಸರ್ಕಾರದಿಂದ ಉಕ್ತವಾದ ವಿಷಯಗಳನ್ನೇ ಪಾಠ ಮಾಡುವುದು ತಾನೇ? ಹೇಗೆ ‘ಅತ್ಯುತ್ತಮ’ ಎನಿಸಿಕೊಳ್ಳಬೇಕಾದರೆ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ವಿವಿಧ ಮಾನದಂಡಗಳಿಂದ ಅರ್ಹರಾಗುತ್ತಾರೋ ಅಂತಹ ಅರ್ಹತೆ ಹೊಂದಿರುವ ಖಾಸಗಿ ಶಾಲಾ ಶಿಕ್ಷಕರೇಕೆ ಸರ್ಕಾರದ ಗಮನಕ್ಕೆ ಕಾಣಿಸುತ್ತಿಲ್ಲ? ಹಾಗಾದರೆ ಖಾಸಗಿ ಶಾಲಾ ಶಿಕ್ಷಕರು ದ್ವಿತೀಯ ದರ್ಜೆ ಶಿಕ್ಷಕರಾ?

ಹಾಗೆ ನೋಡಿದರೆ ಫಲಿತಾಂಶದಲ್ಲಾಗಲೀ, ಸೌಲಭ್ಯಗಳ ನೆಲೆಯಿಂದಾಗಲೀ, ಕಲಿಕೆಯ ವಾತಾವರಣದಿಂದಾಗಲೀ ಖಾಸಗಿ ಶಾಲೆಗಳು ಸಾಕಷ್ಟು ಸಾಧನೆ ಮಾಡುತ್ತಿವೆ. ಹತ್ತನೆಯ ತರಗತಿ ಫಲಿತಾಂಶದಲ್ಲಿ ಬಹುತೇಕ ಪ್ರತಿ ಬಾರಿಯೂ ಖಾಸಗಿ ಶಾಲಾ ಮಕ್ಕಳಿಗೇ ಮೊದಲ ಸ್ಥಾನಗಳು ಪ್ರಾಪ್ತಿಯಾಗುತ್ತಿವೆ. ಇವೆಲ್ಲ ‘ಅತ್ಯುತ್ತಮ’ ಶಿಕ್ಷಕರಿದ್ದದ್ದರಿಂದಲೇ ಸಾಧ್ಯವಾಯಿತೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದೂ ಅಲ್ಲದೆ ಖಾಸಗಿ ಶಾಲಾ ಆಡಳಿತ ಮಂಡಳಿಗಳೂ, ಸರ್ಕಾರಿ ಶಾಲೆಗಳಿಂದ ಸಂದಾಯವಾಗುವಷ್ಟೇ ಅಲ್ಲದೆ ಅದಕ್ಕಿಂತಲೂ ಎಷ್ಟೋ ಹೆಚ್ಚಿನ ಶುಲ್ಕಗಳನ್ನೂ ಸರ್ಕಾರಕ್ಕೆ ಪಾವತಿಸುತ್ತಲೇ ಇದ್ದಾರೆ. ಇಂದು ಸರ್ಕಾರ ತಾನು ನಡೆಸುತ್ತಿರುವ ಶಾಲೆಗಳ ಶಿಕ್ಷಕರಿಗೆ ವೇತನ ಕೊಡುವಲ್ಲಿಯೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಂದ ದೊರಕುವ ಶುಲ್ಕಗಳ ಮೊತ್ತ ಗಣನೀಯ ಪಾತ್ರ ವಹಿಸುತ್ತಿದೆ. ಹೀಗಿರುವಾಗ ಅತ್ಯುತ್ತಮ ಶಿಕ್ಷಕರನ್ನು ಆಯ್ಕೆ ಮಾಡುವಾಗ ಖಾಸಗಿ ಶಾಲೆಗಳ ಬಗೆಗೆ ಅವಜ್ಞೆಯಾದರೂ ಯಾಕಾಗಿ?
ಇನ್ನು, ವೇತನದ ವಿಚಾರಕ್ಕೆ ಬಂದರಂತೂ ಸರ್ಕಾರಿ ವೇತನ ಆಕರ್ಷಕವಾಗಿಯೇ ಇದೆ. ಉದ್ಯೋಗಿಯ ಬದುಕನ್ನು ಸಂಪೂರ್ಣವಾಗಿ ನಿರ್ಣಯಿಸುವಂತಹ ಅತ್ಯುತ್ತಮ ವೇತನ ಸರ್ಕಾರದಿಂದ ಪ್ರಾಪ್ತವಾಗುತ್ತಿದೆ. ಇತ್ತ, ಖಾಸಗಿ ಶಾಲಾ ಶಿಕ್ಷಕರಿಗೆ ಅಂತಹ ಉನ್ನತ ವೇತನಗಳೂ ಲಭ್ಯವಾಗುತ್ತಿಲ್ಲ. ಕೆಲವೊಂದು ಖಾಸಗಿ ಆಡಳಿತ ಮಂಡಳಿಗಳು ಗೌರವಯುತ ವೇತನ ಕೊಡುತ್ತಿವೆಯಾದರೂ ಹಲವು ಸಂಸ್ಥೆಗಳಲ್ಲಿ ದೊರಕುವ ವೇತನವನ್ನು ಬಹಿರಂಗಗೊಳಿಸಿದರೆ ಗೌರವಕ್ಕೇ ಧಕ್ಕೆಯಾಗುವಂತಿದೆ! ಅದರಲ್ಲೂ ಪ್ರಸ್ತುತ ಕೊರೋನಾ ಸಂದರ್ಭದಲ್ಲಿ ಖಾಸಗಿ ಶಾಲಾ ಶಿಕ್ಷಕರ ಪರಿಸ್ಥಿತಿ ಎಂತಹ ಅಧಃಪತನಕ್ಕಿಳಿದಿದೆ ಎಂಬುದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಈ ತೆರನಾದ ಮಾನಸಿಕ ಒತ್ತಡದ ನಡುವೆಯೂ ಖಾಸಗಿ ಶಾಲಾ ಶಿಕ್ಷಕರು ಅತ್ಯುತ್ಕೃಷ್ಟ ಫಲಿತಾಂಶವನ್ನೂ, ವ್ಯಕ್ತಿತ್ವ ನಿರ್ಮಾಣವನ್ನು ಸಾಧ್ಯ ಮಾಡುತ್ತಿದ್ದಾರೆಂದರೆ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ಗೆ ಅವರು ಅರ್ಹರಾಗುವುದಿಲ್ಲವೇ?
ಅತ್ಯುತ್ತಮ ಶಿಕ್ಷಕ ಸರ್ಕಾರೀ ಶಾಲೆಗಳಲ್ಲಿರಲಿ, ಅನುದಾನಿತ ಶಾಲೆಗಳಲ್ಲಿರಲಿ ಅಥವ ಖಾಸಗಿ ಶಾಲೆಗಳಲ್ಲೇ ಇರಲಿ, ಗೌರವಕ್ಕೆ ಅರ್ಹರಾಗಲೇಬೇಕು. ಇಲ್ಲಿ ‘ವ್ಯಕಿ’ಯನ್ನು ಗೌರವಿಸುವುದಕ್ಕಿಂತ ‘ಗುಣ’ವನ್ನು ಗೌರವಿಸುವುದೆಂಬ ಕಲ್ಪನೆ ಸರ್ಕಾರಕ್ಕೆ ಬರಬೇಕಿದೆ. ಗುಣ ಎಲ್ಲಿದ್ದರೂ ಗುಣವೇ ತಾನೇ? ಆ ಗುಣಗಳೆಲ್ಲವೂ ಸರ್ಕಾರಿ ಶಾಲೆಗಳಲ್ಲಿ ಮಾತ್ರ ನಿಕ್ಷೇಪಿಸಿರುತ್ತವೆ ಎಂಬ ಧೋರಣೆ ಅಧಿಕಾರಶಾಯಿಯಲ್ಲಿದ್ದರೆ ಅವರ ಮೂರ್ಖತನಕ್ಕೆ ಕರುಣೆ ತೋರಬಹುದು ಅಷ್ಟೆ. ಇದರ ಜತೆಗೆ, ಕೇವಲ ಸರ್ಕಾರಿ ಶಾಲೆಗಳ ಶಿಕ್ಷಕರನ್ನಷ್ಟೇ ಗುರುತಿಸುವ ಸರ್ಕಾರದ ನಡೆ ಖಾಸಗಿ ಶಾಲೆಯ ಶಿಕ್ಷಕರಿಗೆ ಮಾಡುವ ಪರೋಕ್ಷ ಅವಮಾನವಾಗಿಯೂ ಕಾಣಿಸಿಕೊಳ್ಳುತ್ತದೆ. ಇಂದು ಸರ್ಕಾರವನ್ನು ನಡೆಸುತ್ತಿರುವ ನೇತಾರರಲ್ಲಿ, ಅಧಿಕಾರಿ ವರ್ಗದಲ್ಲಿ, ಸಮಾಜದ ಪ್ರತಿಷ್ಟಿತರಲ್ಲಿ ಬಹುಪಾಲು ಮಂದಿಯ ಮಕ್ಕಳು ಖಾಸಗಿ ಶಾಲೆಯಲ್ಲಿಯೇ ಓದುತ್ತಿದ್ದಾರೆ. ಹಾಗಾದರೆ ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸಲು ಖಾಸಗಿ ಶಿಕ್ಷಕರು ಬೇಕು, ಆದರೆ ಅವರನ್ನು ಗುರುತಿಸುವಲ್ಲಿ ಮಾತ್ರ ಜಾಣ ಕುರುಡು ಯಾಕಾಗಿ?

ಇತ್ತ ಖಾಸಗಿ ಶಾಲಾ ಶಿಕ್ಷಕರೂ ತಮಗಾಗುತ್ತಿರುವ ಇಂತಹ ಅನ್ಯಾಯ ಹಾಗೂ ಅವಮಾನಗಳ ವಿರುದ್ಧ ಧ್ವನಿ ಎತ್ತಬೇಕಿದೆ. ತಮ್ಮ ಪರವಾಗಿ ಇನ್ಯಾರೋ ಕೆಲಸ ಮಾಡಲಿ ಎಂಬ ಧೋರಣೆ ಬಿಟ್ಟು, ತಮ್ಮ ಹಕ್ಕಿಗಾಗಿ ಕನಿಷ್ಟ ಸಾಮಾಜಿಕ ಜಾಲತಾಣಗಳಲ್ಲಾದರೂ ನಾಲ್ಕು ವಾಕ್ಯ ಬರೆದು ಆಡಳಿತವರ್ಗಕ್ಕೆ ತಲಪಿಸುವ ಕಾರ್ಯ ಆಗಬೇಕಿದೆ. ಇಲ್ಲದಿದ್ದರೆ ಇಂತಹ ಅವಮಾನಗಳು ಮುಂದೆಯೂ ಚಾಲ್ತಿಯಲ್ಲೇ ಇರುತ್ತವೆ. ಹಾಗೆಂದು ಪ್ರಶಸ್ತಿ ಸಿಕ್ಕಾಕ್ಷಣ ಅದರಿಂದ ಉಬ್ಬುವುದಕ್ಕೇನೂ ಇಲ್ಲ, ಸಿಗದಿದ್ದರೆ ಕುಗ್ಗುವುದಕ್ಕೂ ಇಲ್ಲ. ಆದರೆ ಶಿಕ್ಷಕರ ನಡುವೆ ಇಂತಹ ತಾರತಮ್ಯ ಯಾಕಾಗಿ? ಈ ಪ್ರಶ್ನೆಯನ್ನು ಸರ್ಕಾರದ ಮುಂದೆ ಇಡಬೇಕಾದ್ದು ಅಗತ್ಯ.

 

ಈ ನಡುವೆ, ಸರ್ಕಾರದ ಅಧೀನದಲ್ಲಿರುವ ಆಡಳಿತ ವ್ಯವಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜನೆಗೊಳ್ಳಬೇಕಿರುವ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ಪ್ರದಾನ ಸಮಾರಂಭಕ್ಕೆ ತಾಲೂಕು ಮಟ್ಟದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಂದ ದೇಣಿಗೆ ಸಂಗ್ರಹಿಸುವ ಕಾರ್ಯವೂ ಕೆಲವು ಕಡೆಗಳಲ್ಲಿ ನಡೆಯುತ್ತಿದೆ. ಹಾಗಾದರೆ ಅತ್ಯುತ್ತಮ ಶಿಕ್ಷಕರಿಗೆ ಒಂದು ಶಾಲು, ಸನ್ಮಾನಪತ್ರ, ಸ್ಮರಣಿಕೆ, ಹೂ – ಹಣ್ಣು ತಟ್ಟೆಗಳನ್ನು ಕೊಡಲಾರದಷ್ಟೂ ದೈನೇಸಿ ಸ್ಥಿತಿ ತಾಲೂಕಿನ ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಇದೆಯಾ? (ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದಲ್ಲೂ ಹೀಗೆ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆಯಾ ಗೊತ್ತಿಲ್ಲ) ಅತ್ಯುತ್ತಮ ಶಿಕ್ಷಕರಿಗೆ ಸರ್ಕಾರದಿಂದ ಅದಕ್ಕೆ ಅನುದಾನ ಬರುತ್ತಿಲ್ಲವಾ? ಬರುವುದಿಲ್ಲ ಅಥವ ಬರುತ್ತಿರುವುದು ಸಾಲುತ್ತಿಲ್ಲ ಎಂದಾದರೆ ಹೀಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಂದ ಒಂದಷ್ಟು ಮೊತ್ತವನ್ನು ಸಂಗ್ರಹಿಸಿ ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ಕೊಟ್ಟು ಸಾಧಿಸುವುದಾದರೂ ಏನನ್ನು? ಇದಕ್ಕಿಂತಲೂ ಮುಖ್ಯವಾಗಿ, ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ದೇಣಿಗೆ ಸ್ವೀಕಾರಾರ್ಹ ಎಂದಾದರೆ ಆಯ್ಕೆ ಪ್ರಕ್ರಿಯೆಗೆ ಖಾಸಗಿ ಶಾಲಾ ಶಿಕ್ಷಕರೇಕೆ ಅರ್ಹರಲ್ಲ?

 

ಹಾಗೆಂದು ಸರ್ಕಾರಿ ಶಾಲಾ ಶಿಕ್ಷಕರನ್ನು ಗುರುತಿಸಬಾರದೆಂದೇನೂ ಹೇಳುತ್ತಿರುವುದಲ್ಲ. ಅಂತಹ ತಪ್ಪು ಭಾವನೆಯನ್ನು ಯಾರೂ ಹೊಂದಬೇಕಿಲ್ಲ. ಖಂಡಿತಾ ಸರ್ಕಾರಿ ಶಾಲೆಗಳಲ್ಲೂ ಅತ್ಯುತ್ತಮ ಶಿಕ್ಷಕರಿದ್ದಾರೆ. ಅವರ ಸಾಧನೆಯನ್ನು ಗೌರವಿಸುವುದಾಗಲೀ, ಸನ್ಮಾನಿಸುವುದಾಗಲೀ ಖಂಡಿತಾ ಸ್ವಾಗತಾರ್ಹವೇ. ಆದರೆ ಅವರಿಗೆ ಮಾತ್ರ ಎಂಬ ಸರ್ಕಾರದ ಧೋರಣೆಯನ್ನಷ್ಟೇ ಪ್ರಶ್ನಿಸಬೇಕಾಗಿದೆ. ಅಥವ ಸರ್ಕಾರಿ ಶಾಲಾ ಶಿಕ್ಷಕರನ್ನಷ್ಟೇ ಗುರುತಿಸುವುದಾದರೆ ‘ಸರ್ಕಾರಿ ಶಾಲಾ ಅತ್ಯುತ್ತಮ ಶಿಕ್ಷಕ’ ಎಂದು ಪ್ರಶಸ್ತಿಯ ಹೆಸರನ್ನು ಮಾರ್ಪಾಡು ಮಾಡುವುದೊಳಿತು.

 

ಅರ್ಜಿ ಸಲ್ಲಿಸುವುದಕ್ಕೆ ಅದೇನು ಮಾಸಾಶನವಾ? : ತನ್ಮಧ್ಯೆ, ಈ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯ ಆಯ್ಕೆಯ ಪ್ರಕ್ರಿಯೆಯೂ ಬಹುಪಾಲು ಶಿಕ್ಷಕರಿಗೆ ಮುಜುಗರ ತರುವಂತಹದ್ದು. ಯಾವುದೇ ಪ್ರಶಸ್ತಿ ವ್ಯಕ್ತಿಯನ್ನು ಅರಸಿ ಬರಬೇಕೇ ವಿನಃ ವ್ಯಕ್ತಿಯೇ ‘ತನಗೆ ಕೊಡಿ’ ಎಂದು ಅರ್ಜಿ ಸಲ್ಲಿಸುವಂತಾಗಬಾರದು. (ಕನಿಷ್ಟ ಬೇರೆಯವರು ಶಿಫಾರಸ್ಸು ಮಾಡಿ ದೊರಕುವುದಿದ್ದರಾದರೂ ಸಹಿಸಿಕೊಳ್ಳಬಹುದು) ಆದರೆ ಈ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಎಂಬುದು ಅರ್ಜಿ ಸಲ್ಲಿಸಿ ಪಡೆಯಬೇಕಾದ ಗೌರವವಾಗಿದೆಯೇ ಹೊರತು ಅದಾಗಿಯೇ ಗುರುತಿಸಲ್ಪಟ್ಟು ದೊರೆಯುತ್ತಿರುವುದಲ್ಲ ಎಂಬುದು ಇನ್ನೊಂದು ನಾಚಿಕೆಗೇಡಿನ ವಿಚಾರ. ಹಾಗಾದರೆ ಅತ್ಯುತ್ತಮ ಶಿಕ್ಷಕರನ್ನು ಗುರುತಿಸಲಾಗದಷ್ಟೂ ಸಂವೇದನಾಹೀನತೆ ಸರ್ಕಾರಕ್ಕಿದೆಯಾ? ಅತ್ಯುತ್ತಮ ಶಿಕ್ಷಕರು ಯಾರು ಎಂದು ನಿರ್ಣಯಿಸುವುದಕ್ಕೆ ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ ಪ್ರಾಜ್ಞರ ಸಮಿತಿಯೊಂದನ್ನು ಮಾಡಿ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ಮಾನದಂಡಗಳನ್ನು ಪಟ್ಟಿಮಾಡಿಕೊಳ್ಳುವುದೊಳಿತು. ಹಾಗೂ ಬೇಕಾದರೆ ಸರ್ಕಾರಿ ಶಾಲಾ ಎಸ್.ಡಿ.ಎಂಸಿಯವರಿಂದ, ಅನುದಾನಿತ ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಂದ ಅರ್ಹ ಶಿಕ್ಷಕರನ್ನು ಅವರ ಸಾಧನಾಪತ್ರಗಳೊಂದಿಗೆ ಕಳುಹಿಸಿಕೊಡುವಂತೆ ಸರ್ಕಾರ ಕೇಳಿಕೊಳ್ಳಬಹುದು. ಹಾಗೆ ಕಳುಹಿಸಿದ ಸಾಧನಾ ಪತ್ರಗಳಲ್ಲಿನ ಸಾಧನೆ ಮತ್ತು ಅದಕ್ಕೆ ಪೂರಕವಾದ ದಾಖಲೆಗಳನ್ನು ಪರಿಶೀಲಿಸಿ ಪ್ರಶಸ್ತಿ ಕೊಡಮಾಡಬಹುದು. ಇಲ್ಲಿಯೂ ಆಯಾ ಎಸ್‌ಡಿಎಂಸಿ, ಆಡಳಿತ ಮಂಡಳಿಗಳ ಮೇಲೆ ಪ್ರಭಾವ ಬೀರುವ ಮಂದಿಯೂ ಇರಬಹುದು. ಆದರೆ ಕನಿಷ್ಟ ಸ್ವತಃ ತಾವೇ ಕೇಳಿ ಪಡೆಯುವ ಮುಜುಗರವಾದರೂ ತಪ್ಪೀತು. ಇದೂ ಬೇಡದಿದ್ದರೆ ಸರ್ಕಾರವೇ ಯಾವುದಾದರೂ ಯೋಗ್ಯ ಮಾರ್ಗಗಳಿಂದ ಅತ್ಯುತ್ತಮ ಶಿಕ್ಷಕರನ್ನು ಗುರುತಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಬದಲಾಗಿ ಅರ್ಜಿ ಸಲ್ಲಿಸುವಂತೆ ಮಾಡಿ ಇಡಿಯ ಶಿಕ್ಷಕ ಕುಲವನ್ನೇ ಮುಜುಗರಕ್ಕೊಳಗಾಗುವಂತೆ ಮಾಡುವುದಲ್ಲ. ಅಷ್ಟಕ್ಕೂ, ಅರ್ಜಿ ಸಲ್ಲಿಸಿ ಪಡೆಯುವುದಕ್ಕೆ ಇದೇನು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯೋ ಅಥವ ಸರ್ಕಾರದ ಕೃಪೆಗೆ ಒಳಗಾಗಿ ದೊರಕಬೇಕಾದ ಮಾಸಾಶನವೋ?

ಆದ್ದರಿಂದ ಸರ್ಕಾರ ತಾರತಮ್ಯ ಧೋರಣೆ ಮತ್ತು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕೆಂಬ ನಿಯಮ ಎರಡನ್ನೂ ಬದಲಾಯಿಸಿ ಉತ್ಕೃಷ್ಟ ಶಿಕ್ಷಣ ವ್ಯವಸ್ಥೆಯ ನಿರ್ಮಾಣಕ್ಕೆ ಮುಂದಾಗಬೇಕಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.