HomePage_Banner
HomePage_Banner
HomePage_Banner
HomePage_Banner

ಕೋವಿಡ್‌ನಿಂದಾಗಿ ರಾಜ್ಯ ಸರಕಾರದ ಅನುದಾನದಲ್ಲಿ ಕಡಿತ: ವಿಶೇಷ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ನಗರಸಭೆ ಸದಸ್ಯರ ನಿಯೋಗ ಮನವಿಗೆ ನಿರ್ಣಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ತ್ಯಾಜ್ಯ ನೀರು ಸಂಗ್ರಹಿಸುವವರು ನಗರಸಭೆ ನೋಂದಾವಣೆ ಕಡ್ಡಾಯ
  • ನಗರಸಭೆ ವ್ಯಾಪ್ತಿಯಲ್ಲಿ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಪದ್ದತಿ ಇಲ್ಲ
  • ತುರ್ತು ಕೆಲಸಕ್ಕೆ ಪ್ರಥಮ ಆದ್ಯತೆ ನೀಡಿ
  • ಬಿಡ್ಡುದಾರರ ಮೊಬಲಗು ಕಡಿತಕ್ಕಾಗಿ ಮಾತುಕತೆ ನಡೆಸಿ ನಿರ್ಧಾರ
  • ಖಾಸಗಿ ಸ್ಥಳದಲ್ಲಿ ಪೊದೆಗಳ ತೆರವಿಗೆ ಕ್ರಮ

ಪುತ್ತೂರು: ಕೋವಿಡ್‌ನಿಂದಾಗಿ ರಾಜ್ಯ ಸರಕಾರದ ಅನುದಾನದಲ್ಲಿ ಕಡಿತಗೊಳಿಸಲಾಗಿದೆ. ಇದರ ಬಗ್ಗೆ ಈಗಾಗಲೇ ಶಾಸಕರಲ್ಲಿ ಮಾತನಾಡಿದ್ದೇವೆ. ಅಧಿವೇಶನ ಕಳೆದ ತಕ್ಷಣ ನಗರೋತ್ಥಾನ ಅನುದಾನ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ಹಾಗಾಗಿ ಸದಸ್ಯರೆಲ್ಲರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಕುರಿತು ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸೆ. ೧೪ರಂದು ನಗರಸಭೆ ವಿಶೇಷ ಸಾಮಾನ್ಯ ಸಭೆಯು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೊರೋನಾದಿಂದಾಗಿ ಅನುದಾನ ಬರುವುದು ಕಡಿಮೆ ಆಗಿದ್ದು, ಅದನ್ನು ಶಾಸಕರ ಮೂಲಕ ಮುಖ್ಯಮಂತ್ರಿಗೆ ನಿಯೋಗ ಹೋಗಿ ಮನವ ಮಾಡುವುದು ಉತ್ತಮ, ರಸ್ತೆ, ಡ್ರೈನ್ ಸೇರಿದಂತೆ ಅನೇಕ ಕಾಮಗಾರಿಗೆ ಪ್ರಯೋಜನ ಆಗಬಹುದು. ಹಾಗೆಂದು ಇವತ್ತಿನ ಪರಿಸ್ಥಿಯಲ್ಲಿ ಅನುದಾನಕ್ಕೆ ತೊಂದರೆ ಎಂಬುದು ಗೊತ್ತಿದೆ. ಆದರೂ ಇವತ್ತಲ್ಲದಿದ್ದರೂ ನಾಳೆ ಅನುದಾನ ಬರಬಹುದು. ನಾವು ಕೇಳುವುದನ್ನು ಕೇಳಬೇಕು ಎಂದು ಭಾಮಿ ಅಶೋಕ್ ಶೆಣೈ ಸಭೆಯಲ್ಲಿ ಪ್ರಸ್ತಾಪಿಸಿದಂತೆ ನಗರಸಭೆ ಅಧ್ಯಕ್ಷರು ಎಲ್ಲಾ ಸದಸ್ಯರು ನಿಯೋಗದಲ್ಲಿ ತೆರಳುವ ಕುರಿತು ಪ್ರಸ್ತಾವನೆ ಮಾಡಿದರು. ಇದಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ಅಧಿಕಾರ ಸಿಕ್ಕಿ ೧ ವರ್ಷ ಆದದ್ದು, ೩ ವರ್ಷ ಅಲ್ಲ:
ನಗರಸಭೆ ಸದಸ್ಯ ಮಹಮ್ಮದ್ ರಿಯಾಜ್ ಅವರು ಮಾತನಾಡಿ ನಗರಭೆಯಲ್ಲಿ ಮೂರು ವರ್ಷದಿಂದ ನಮ್ಮ ಪ್ರೋಗ್ರೆಸ್ ಝೀರೋ ಎಂದರು. ಆಕ್ಷೇಪಿಸಿದ ಭಾಮಿ ಅಶೋಕ್ ಶೆಣೈ ಅವರು ಝೀರೋ ಎಂದು ಹೇಳುವುದು ಬೇಡ. ನಮಗೆ ಅಧಿಕಾರ ಸಿಕ್ಕಿಯೇ ಆಗಿದ್ದು ೧ ವರ್ಷ ಹೊರತು ೩ ವರ್ಷ ಆಗಿಲ್ಲ. ಮಾತನಾಡಬೇಕೆಂದು ಏನೆಲ್ಲಾ ಮಾತನಾಡಬೇಡಿ. ಇಲ್ಲಿನ ವ್ಯವಸ್ಥೆ ಬಗ್ಗೆ ಮಾತನಾಡಿ ಎಂದಾಗ ಮಹಮ್ಮದ್ ರೀಯಾಜ್ ಅವರು ಒಟ್ಟು ನಗರಸಭೆಯಲ್ಲಿ ಮೂರು ವರ್ಷದಲ್ಲಿ ಎಷ್ಟು ವರ್ಕ್ ಅಗಿದೆ ಎಂದು ನಾನು ಪ್ರಸ್ತಾಪಿಸಿರುವುದು. ಆಡಳಿತದ ಅವಧಿಯ ಕುರಿತಲ್ಲ ಎಂದರು. ಅಧ್ಯಕ್ಷರು ಮಾತನಾಡಿ ಕಳೆದ ಭಾರಿ ಶಾಸಕರ ಪ್ರದೇಶಾಭಿವೃದ್ದಿ ಅನುದಾನದಿಂದ ಕೆಲವು ವಾರ್ಡ್‌ಗಳಿಗೆ ಅನುದಾನ ಕೊಟ್ಟಿದೆ. ವಿಶೇಷ ಅನುದಾನದಿಂದ ರೂ. ೫ ಕೋಟಿಯಲ್ಲಿ ಶಾಸಕರು ರೂ. ೧ ಕೋಟಿಯನ್ನು ವಿಟ್ಲಕ್ಕೆ ಕೊಟ್ಟಿದ್ದಾರೆ. ರೂ. ೨ ಕೋಟಿಯನ್ನು ನಗರಸಭೆಯ ಮುಖ್ಯರಸ್ತೆ ಅಭಿವೃದ್ಧಿಗೆ ಕೊಟ್ಟಿದ್ದಾರೆ. ರೂ. ೨ ಕೋಟಿ ಕಟ್ಟಡಕ್ಕೆ ಇಟ್ಟಿದ್ದಾರೆ. ಈ ರೀತಿಯಲ್ಲಿ ನಮಗೆ ಅಧಿಕಾರ ಸಿಗುವ ಮೊದಲೇ ಅನುದಾನ ಕೊಟ್ಟಿದ್ದಾರೆ. ಈಗ ಅಧಿಕಾರ ನಮಗೆ ಸಿಕ್ಕಿದ ಬಳಿಕ ನಗರಸಭೆ ನಿಧಿಯಿಂದ ತಲಾ ರೂ. ೫ ಲಕ್ಷವನ್ನು ಎಲ್ಲಾ ವಾರ್ಡ್‌ಗಳಿಗೆ ಕೊಟ್ಟಿದ್ದೇವೆ. ಮೊನ್ನೆ ಕೇಂದ್ರ ಸರಕಾರದ ಅನುದಾನ ೧೫ನೇ ಹಣಕಾಸು ಯೋಜನೆಯಲ್ಲಿ ರೂ. ೨.೬೯ ಕೋಟಿ ಬಂದಿದೆ. ಅದರಿಂದ ತಲಾ ರೂ. ೨ ಲಕ್ಷದಂತೆ ಎಲ್ಲಾ ವಾರ್ಡ್‌ಗಳಿಗೆ ಸಿಗಲಿದೆ. ಅನುದಾನದ ಪಟ್ಟಿ ಬರುವಾಗಲೇ ಅದರ ಜೊತೆ ವಿಂಗಡನೆಯ ಸರ್ಕ್ಯೂಲರ್ ಕೂಡಾ ಬರುತ್ತದೆ. ಘನ ತ್ಯಾಜಕ್ಕೆ , ನೀರಿಗೆ ಸೇರಿದಂತೆ ಅನುದಾನ ವಿಂಗಡಣೆ ಆಗಿ ಬಳಿಕ ಕೊನೆಗೆ ಶೇ.೪೦ ಮಾತ್ರ ನಗರಸಭೆ ಕಾಮಗಾರಿ ಲಭ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ ದಿನ ಅನುದಾನ ವಿಂಗಡಣೆ ಮಾಡದಂತೆಯೂ ಶಾಸಕರಲ್ಲಿ ಮನವಿ ಮಾಡಬೇಕಾಗಿದೆ ಎಂದರು.

ತ್ಯಾಜ್ಯ ನೀರು ಸಂಗ್ರಹಿಸುವವರು ನಗರಸಭೆ ನೋಂದಾವಣೆ ಕಡ್ಡಾಯ:
ಖಾಸಗಿಯವರು ಕೂಡಾ ತ್ಯಾಜ್ಯ ನೀರು ಸಂಗ್ರಹಿಸಿ ಹೋಗುತ್ತಿದ್ದಾರೆ. ಆದರೆ ಈ ಕೆಲಸವನ್ನು ಯಾರು ಮಾಡುತ್ತಿದ್ದಾರೆ. ಸಂಗ್ರಹಿಸಿದ ನೀರನ್ನು ಎಲ್ಲಿ ಡಂಪ್ ಮಾಡುತ್ತಾರೆ ಎಂಬ ಮಾಹಿತಿ ನಗರಸಭೆಗೆ ಬೇಕಾಗುತ್ತದೆ. ಅವರು ಖಾಲಿ ಮಾಡುವಾಗ ನಗರಸಭೆಗೆ ಒಂದಷ್ಟು ನಿಗದಿತ ಮೊತ್ತ ಪಾವತಿಸಬೇಕು. ಆ ಪಾವತಿ ಮಾಡಲು ಶುಲ್ಕ ನಿಗದಿಯಾಗಬೇಕು. ಈ ಕುರಿತು ನಗರಸಭೆಯಿಂದ ನೋಂದಾವಣೆಗೊಂಡವರು ಯಾವ ಮನೆಯಿಂದ ತ್ಯಾಜ್ಯ ನೀರು ಸಂಗ್ರಹಿಸಿದ್ದಾರೆ. ಎಲ್ಲಿ ಡಂಪ್ ಮಾಡಿದ್ದಾರೆ ಎಂಬ ಕುರಿತು ವರದಿ ನಗರಸಭೆಗೆ ಕೊಡಬೇಕು ಎಂದು ಪೌರಾಯುಕ್ತರು ಮಾಹಿತಿ ನೀಡಿದರು. ತ್ಯಾಜ್ಯ ನೀರು ಸಂಗ್ರಹಿಸುವ ವಾಹನದಾರರಿಗೆ ನೋಂದಾವಣೆ ವೇಳೆ ಶುಲ್ಕ ಕಡಿಮೆ ಇರಲಿ. ಯಾಕೆಂದರೆ ನಮ್ಮಲ್ಲಿ ಕೂಡಾ ಒಂದೇ ವಾಹನ ಇರುವುದು. ಏನಾದರೂ ಸಮಸ್ಯೆ ಬಂದಾಗ ತೊಂದರೆ ಆಗಬಾರದು ಎಂದು ಸದಸ್ಯ ಭಾಮಿ ಅಶೋಕ್ ಶೆಣೈ ಸಭೆಯಲ್ಲಿ ಪ್ರಸ್ತಾಪಿಸಿದರು. ಜೊತೆಗೆ ಯಾರು ಬೇಕಾದರೂ ಮಾಡುವ ಮತ್ತು ಟ್ರಾನ್ಸ್‌ಪೋರ್ಟ್ ಚಾರ್ಜ್ ಕುರಿತು ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಮಹಮ್ಮದ್ ರಿಯಾಝ್ ಪ್ರಸ್ತಾಪಿಸಿದಾಗ ಉತ್ತರಿಸಿದ ಅಧ್ಯಕ್ಷರು ನಗರಸಭೆಯೊಂದಿಗೆ ಎಗ್ರಿಮೆಂಟ್ ಮಾಡಿಕೊಂಡು ಕಾನೂನು ರೀತಿಯಲ್ಲಿ ಕೆಲಸ ಮಾಡಬೇಕೆಂದರು.

ನಗರಸಭೆ ವ್ಯಾಪ್ತಿಯಲ್ಲಿ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಪದ್ದತಿ ಇಲ್ಲ:
ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಸರ್ವೆ ಮಾಡಿದಾಗ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಪದ್ಧತಿ ಮತ್ತು ಅನೈರ್ಮಲ್ಯ ಶೌಚಾಲಯ ಅಸ್ತಿತ್ವದಲ್ಲಿ ಇಲ್ಲ ತಿಳಿದು ಬಂದಿದೆ. ನಗರಮಂಡಲ ಸಮೀಕ್ಷಾ ಸಮಿತಿ ಈ ಕುರಿತು ಸರ್ವೆ ಮಾಡಿದ್ದಾರೆ. ಈ ಕುರಿತು ಸರ್ವೆ ದೃಡೀಕರಣಕ್ಕಾಗಿ ನಾವು ಜಿಲ್ಲಾಡಳಿತಕ್ಕೆ ಮಾಹಿತಿ ಕಳುಹಿಸಬೇಕಾಗಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು. ಸದಸ್ಯರು ಒಪ್ಪಿಗೆ ಸೂಚಿಸಿದರು.

ತುರ್ತು ಕೆಲಸಕ್ಕೆ ಪ್ರಥಮ ಆದ್ಯತೆ ನೀಡಿ:
ಎಪಿಎಂಸಿ ರೈಲ್ವೇ ಬ್ರಿಡ್ಜ್ ಬಳಿ ತಡೆಗೋಡೆ ಕುಸಿದು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿರುವುದರಿಂದ ಅದನ್ನು ಪರಿಶೀಲಿಸಿ ತಡೆಗೋಡೆಗೆ ಸಂಬಂಧಿಸಿ ಈಗಾಗಲೇ ರೂ. ೧.೬೦ ಲಕ್ಷ ಮೊತ್ತಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಈ ಕುರಿತು ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ ಈ ಕಾಮಗಾರಿಯನ್ನು ತುರ್ತು ಕಾರ್ಯವಾಗಿ ಟೆಂಡರ್ ಕರೆದು ಅಧ್ಯಕ್ಷರ ಘಟನೋತ್ತರ ಮಂಜೂರಾತಿ ಪಡೆದು ಮಾಡಬೇಕಾಗಿತ್ತು. ಕೌನ್ಸಿಲ್ ಸಭೆಗೆಯಲ್ಲಿ ಇಡುವಷ್ಟು ಸಮಯ ಕಾಯಬೇಕಾಗಿಲ್ಲ ಎಂದು ಭಾಮಿ ಅಶೋಕ್ ಶೆಣೈ ಪ್ರಸ್ತಾಪಿಸಿದರು. ಉತ್ತರಿಸಿದ ಅಧ್ಯಕ್ಷರು ಈ ಹಿಂದೆ ರಸ್ತೆ ವಿಚಾರಕ್ಕೆ ಸಂಬಂಧಿಸಿ ತುರ್ತಾಗಿ ಕೆಲಸ ಮಾಡಿದ್ದೆವು. ಈ ಕುರಿತು ಕ್ರೀಯಾಯೋಜನೆ ಮಾಡಿ, ಕೌನ್ಸಿಲ್ ಸಭೆಯಲ್ಲಿ ಇಟ್ಟು ಪೈನಲ್ ಕಾನೂನು ಬದ್ಧವಾಗಿಯೇ ಮಾಡಿದ್ದರೂ ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇದರಿಂದ ಅಧಿಕಾರಿಗಳಿಗೂ ಸಮಸ್ಯೆ, ಜೊತೆಗೆ ನಮ್ಮ ಮೇಲೆ ತಪ್ಪು ಮಾಹಿತಿ ನೀಡುವ ಕೆಲಸ ಆಗುತ್ತಿದೆ. ಅದಕ್ಕಾಗಿ ಕೌನ್ಸಿಲ್ ಅಭಿಪ್ರಾಯ ತೆಗೆದು ಕೊಂಡೆ ಕೆಲಸ ಮಾಡುತ್ತಿದ್ದೇವೆ ಎಂದರು. ನಗರಸಭೆ ಸ್ಥಳೀಯ ಸದಸ್ಯ ಪದ್ಮನಾಭ ನಾಯ್ಕ್ ಅವರು ತಡೆಗೋಡೆ ಕುಸಿತ ಕುರಿತು ಈಗಾಗಲೇ ನಗರಸಭೆಗೆ ಮಾಹಿತಿ ನೀಡಲಾಗಿದೆ ಎಂದರು.

ಬಿಡ್ಡುದಾರರ ಮೊಬಲಗು ಕಡಿತಕ್ಕಾಗಿ ಮಾತುಕತೆ ನಡೆಸಿ ನಿರ್ಧಾರ:
ಸೋಮವಾರ ಸಂತೆ ಮಾರುಕಟ್ಟೆಯ ಬಿಡ್ಡುದಾರರು ಕೋವಿಡ್-೧೯ ನಿಂದಾಗಿ ೨ ವಾರ ಮಾತ್ರ ಸಂತೆ ನಡೆದಿದೆ. ಉಳಿದಂತೆ ಸಂತೆ ಮಾರುಕಟ್ಟೆ ಸ್ಥಗಿತಗೊಂಡಿದೆ ಹಾಗಾಗಿ ನಾವು ಕಟ್ಟಿದ ಇಎಮ್‌ಡಿ ಮೊತ್ತ ಹಿಂದಿರುಗಿಸುವಂತೆ ಬಿಡ್ಡುದಾರ ಅಬೂಬಕ್ಕರ್ ಸಿದ್ದೀಕ್ ಅವರು ನಗರಸಭೆ ಮನವಿ ಮಾಡಿದ್ದಾರೆ. ಅದೇ ರೀತಿ ಇತರ ಮಾರುಕಟ್ಟೆಗಳ ಬಿಡ್ಡುದಾರರು ಕೋವಿಡ್ ಸಂದರ್ಭದಲ್ಲಿ ವ್ಯಾಪಾರ ಇಲ್ಲದ ಹಿನ್ನಲೆಯಲ್ಲಿ ಬಿಡ್ಡಿನ ಉಳಿಕೆ ಮೊತ್ತ ಪಾವತಿಗೆ ಸಮಯಾವಕಾಶ ಕೋರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಸಭೆಯಲ್ಲಿ ಪ್ರಸ್ತಾಪ ಆದಂತೆ ನಗರಭೆ ಅಧ್ಯಕ್ಷರು ಮಾತನಾಡಿ ಕಾನೂನು ಪ್ರಕಾರ ಪಾವತಿಸಿದ ಹಣವನ್ನು ಹಿಂದಿರುಗಿಸಲು ಅವಕಾಶವಿಲ್ಲ. ಆದರೆ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಮತ್ತು ಸಂತೆ ನಡೆಸದಿದ್ದರೆ ರೂ. ೬.೪೩ ಲಕ್ಷ ಉಳಿಕೆ ಮೊತ್ತ ಏನು ಮಾಡಬಹುದು ಎಂದು ಸದಸ್ಯರ ಅಭಿಪ್ರಾಯಕ್ಕೆ ಅವಕಾಶ ನೀಡಿದರು. ಸದಸ್ಯ ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ ಬಿಡ್ಡುದಾರರನ್ನು ಕರೆದು ಪುನಃ ಮಾತನಾಡಿಸಿ. ಜೊತೆಗೆ ರಸ್ತೆ ಬದಿಯಲ್ಲಿ ಕೂತು ವ್ಯಾಪಾರ ಮಾಡುವವರನ್ನು ಮೈದಾನಕ್ಕೆ ಕರೆಸುವುದು ಉತ್ತಮ ಮತ್ತು ಬಿಡ್ಡುದಾರರನ್ನು ಒಮ್ಮೆ ನಗರಸಭಗೆ ಕರೆಸಿ ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳುವ ಎಂದರು.

ಖಾಸಗಿ ಸ್ಥಳದಲ್ಲಿ ಪೊದೆಗಳ ತೆರವಿಗೆ ಕ್ರಮ:
ನಗರಸಭೆ ವ್ಯಾಪ್ತಿಯಲ್ಲಿರುವ ಖಾಸಗಿ ಸ್ಥಳಗಳಲ್ಲಿ ಪೊದೆಗಳು ಬೆಳೆದು ವಿಷಕಾರಿ ಜಂತುಗಳು ಅದರೊಳಗೆ ಸೇರಿ ಅಪಾಯ ಸಂಭವಿಸುವ ಭೀತಿ ಮತ್ತು ಅಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಕುರಿತು ನಗರಭೆಯಿಂದ ಖಾಸಗಿ ಸ್ಥಳದ ಮಾಲಕರಿಗೆ ನೋಟೀಸ್ ಮಾಡುವಂತೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಪ್ರಸ್ತಾಪಿಸಿದರು. ಉತ್ತರಿಸಿದ ಅಧ್ಯಕ್ಷರು ಎಲ್ಲೆಲ್ಲಿ ಖಾಲಿ ಸ್ಥಗಳಿವೆಯೋ ಅದನ್ನು ಆರೋಗ್ಯ ಇಲಾಖೆಯಿಂದ ಜಾಗ ಗುರುತಿಸಿ ಸಂಬಂಧಪಟ್ಟವರಿಗೆ ಸೂಚನೆ ನೀಡುವ ಕೆಲಸ ಮಾಡಲಿದ್ದೇವೆ ಎಂದರು. ನಗರಸಭಾ ವ್ಯಾಪ್ತಿಯಲ್ಲಿನ ಒಟ್ಟು ೩೮ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ಅನುದಾನ ಬಿಡುಗಡೆಯಾಗಿದ್ದು ದರ ವ್ಯತ್ಯಾಸವಾಗಿದ್ದರಿಂದ ಅನುದಾನಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡಬೇಕಾಗಿದೆ.

ದ.ಕ. ಜಿಲ್ಲಾಧಿಕಾರಿಯವರ ಸೂಚನೆಯಂತೆ ವ್ಯತ್ಯಾಸದ ದರ ರೂ. ೨೪೩೪೯ನ್ನು ಪುತ್ತೂರು ಶಿಶು ಅಭಿವೃದ್ಧಿ ಇಲಾಖೆಗೆ ಪಾವತಿಸಲು ಸಭೆ ಒಪ್ಪಿಗೆ ಸೂಚಿಸಲಾಯಿತು. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಪೌರಾಯುಕ್ತ ಮಧು ಎಸ್ ಮನೋಹರ್, ಸದಸ್ಯರಾದ ಶಿವರಾಮ ಎಸ್, ವಸಂತ ಕಾರೆಕ್ಕಾಡು, ಕೆ.ಫಾತಿಮತ್ ಝೋರಾ, ಮೋಹಿನಿ ವಿಶ್ವನಾಥ ಗೌಡ, ಲೀಲಾವತಿ ಅಣ್ಣು ನಾಯ್ಕ, ಸುಂದರ ಪೂಜಾರಿ ಬಡಾವು, ರೋಬಿನ್ ತಾವ್ರೋ, ಪ್ರೇಂ ಕುಮಾರ್, ಪದ್ಮನಾಭ ನಾಯ್ಕ್, ಪಿ.ಜಿ.ಜಗನ್ನಿವಾಸ ರಾವ್, ಪ್ರೇಮಲತಾ ಜಿ, ಕೆ.ಸಂತೋಷ್ ಕುಮಾರ್, ನವೀನ್ ಕುಮಾರ್, ಭಾಮಿ ಅಶೋಕ್ ಶೆಣೈ, ಯಶೋಧ ಹರೀಶ್ ಪೂಜಾರಿ, ದೀಕ್ಷಾ ಪೈ, ಇಂದಿರಾ ಪಿ, ಶಶಿಕಲಾ ಸಿ ಎಸ್, ಮನೋಹರ್ ಕಲ್ಲಾರೆ, ಬಾಲಚಂದ್ರ ಕೆ, ರೋಹಿಣಿ ಕೇಶವ ಪೂಜಾರಿ, ಮಮತಾ ರಂಜನ್, ಬಿ.ಶೈಲಾ ಪೈ, ಇಸುಬು, ಮಹಮ್ಮದ್ ರಿಯಾಜ್, ಬಿ.ಶೀನಪ್ಪ ನಾಯ್ಕ, ಪೂರ್ಣಿಮ ಕೋಡಿಯಡ್ಕ ಉಪಸ್ಥಿತರಿದ್ದರು. ಸಭೆಯ ಕೊನೆಯಲ್ಲಿ ನಗರಸಭೆ ಸ್ವಚ್ಛತಾ ಜಾಗೃತಿ ಮೂಡಿಸುವ ಕಾರ್ಯಕ್ರಮ ಕುರಿತು ಆಂಟಿ ಪೊಲೀಷನ್ ಟೀಮ್ ಮಂಗಳೂರು ಇದರ ವಾಣಿ ಮತ್ತು ನವೀನ್ ಅವರು ಪುತ್ತೂರಿನಲ್ಲಿ ಮುಂದೆ ಹಮ್ಮಿಕೊಳ್ಳುವ ಜಾಗೃತಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.