HomePage_Banner
HomePage_Banner
HomePage_Banner
HomePage_Banner

ವಿದ್ಯಾರ್ಥಿಗಳು ನಿರ್ಮಾಣ ಮಾಡಿದ ದೋಣಿಯಲ್ಲಿ ಗುರುಗಳ ಪ್ರಯಾಣ…!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

                    ದೋಣಿ ನಿರ್ಮಿಸಿದ ಯುವಕರಿಗೆ ಶ್ರೀನಿವಾಸ್ ಹೆಚ್.ಬಿ ನೇತೃತ್ವದ ತಂಡದಿಂದ ವೀರಮಂಗಲದಲ್ಲಿ ಸನ್ಮಾನ

ಪುತ್ತೂರು: ನೀರು ಸಂಗ್ರಹಿಸುವ ಬ್ಯಾರಲ್‌ನಿಂದ ದೋಣಿ ನಿರ್ಮಾಣ ಮಾಡಿ ಸಾಧನೆ ಮಾಡಿರುವ ನರಿಮೊಗರು ಗ್ರಾ.ಪಂ ವ್ಯಾಪ್ತಿಯ ವೀರಮಂಗಲದ ಯುವಕರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸಾಕಷ್ಟು ಜನರು ಕೂಡಾ ವೀರಮಂಗಲಕ್ಕೆ ಭೇಟಿ ನೀಡಿ ದೋಣಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆ.೧೯ರಂದು ಸರ್ವೆ ಎಸ್.ಜಿ.ಎಂ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಶ್ರೀನಿವಾಸ್ ಹೆಚ್.ಬಿ ನೇತೃತ್ವದ ತಂಡ ವೀರಮಂಗಲಕ್ಕೆ ತೆರಳಿ ದೋಣಿ ನಿರ್ಮಾಣ ಮಾಡಿ ಸಾಧನೆ ಮಾಡಿರುವ ಯುವಕರನ್ನು ಸನ್ಮಾನಿಸಿ ಅಭಿನಂದಿಸಿದರು. ಹಿರಿಯ ವಿದ್ಯಾರ್ಥಿಗಳು ನಿರ್ಮಿಸಿದ ದೋಣಿಯಲ್ಲಿ ಸರ್ವೆ ಎಸ್.ಜಿ.ಎಂ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಶ್ರೀನಿವಾಸ್ ಹೆಚ್.ಬಿ ಹಾಗೂ ಈಗಿನ ಮುಖ್ಯಗುರು ಜಯಶ್ರೀ ಅವರು ಸಂಚರಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಎಸ್.ಡಿ ಅವರೂ ದೋಣಿಯಲ್ಲಿ ಸಂಚರಿಸಿ ಖುಷಿ ಪಟ್ಟರು.

ಹಿರಿಯ ವಿದ್ಯಾರ್ಥಿಯ ಸಾಧನೆ ಹೆಮ್ಮೆ ತಂದಿದೆ-ಶ್ರೀನಿವಾಸ್ ಹೆಚ್.ಬಿ
ಶ್ರೀನಿವಾಸ್ ಹೆಚ್.ಬಿ ಮಾತನಾಡಿ ನನ್ನ ಹಿರಿಯ ವಿದ್ಯಾರ್ಥಿ ಜಮಾಲುದ್ದೀನ್ ಮತ್ತು ತಂಡದವರು ಸೇರಿ ನಾವೆಲ್ಲಾ ಹೆಮ್ಮೆ ಪಡುವ ರೀತಿಯ ಸಾಧನೆ ಮಾಡಿದ್ದಾರೆ. ಈ ಸಾಧನೆ ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದು ಮುಂದಕ್ಕೆ ಜನ ನಿಮ್ಮನ್ನು ಹೆಚ್ಚು ಗಮನಿಸುತ್ತಾರೆ, ಸಹಕಾರ ನೀಡಿದವರನ್ನು ನೆನಪಿನಲ್ಲಿಟ್ಟುಕೊಳ್ಳಿ ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡಿ ಎಂದು ಹೇಳಿದರು. ನಿಮ್ಮ ಸಾಧನೆಯನ್ನು ಮೊದಲಿಗೆ ಗುರುತಿಸಿದ್ದು ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ಚಾನೆಲ್ ಆಗಿದ್ದು ಆ ಬಳಿಕ ಇಂಗ್ಲೀಷ್ ಪತ್ರಿಕೆಗಳಲ್ಲೂ ನಿಮ್ಮ ಸಾಧನೆಯ ವರದಿ ಬಿತ್ತರಗೊಂಡಿದೆ, ಮಾಧ್ಯಮದ ಪ್ರಚಾರದಿಂದ ನಿಮ್ಮ ಸಾಧನೆ ಹೊರಜಗತ್ತಿಗೆ ಗೊತ್ತಾಗುವಂತೆ ಆಗಿದೆ ಎಂದು ಅವರು ಹೇಳಿದರು.

ನೀವು ಹೀರೋಗಳು-ಡಾ.ಕೆ.ಎಸ್ ಭಟ್
ಕಲ್ಲಮ ರಾಘವೇಂದ್ರ ಮಠದ ವ್ಯವಸ್ಥಾಪಕ ಡಾ.ಕೆ.ಎಸ್ ಭಟ್ ಮಾತನಾಡಿ ದೋಣಿ ನಿರ್ಮಿಸಿದ ನಿಮ್ಮ ಸಾಧನೆ ದೊಡ್ಡದು. ನೀವು ನಿಜವಾಗಿಯೂ ಹೀರೋಗಳು. ಮುಂದಕ್ಕೆ ದೊಡ್ಡ ದೋಣಿ ನಿರ್ಮಾಣ ಮಾಡುವ ಮೂಲಕ ನದಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗವಂತಾಗಬೇಕು, ಸೋಲಾರ್ ಮತ್ತು ಎಲೆಕ್ಟ್ರಿಕಲ್ ಬ್ಯಾಟರಿ ಮೂಲಕ ಪ್ರಯತ್ನಿಸಿ, ಎಲೆಕ್ಟ್ರಿಕಲ್‌ಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದ್ದು ಆ ರೀತಿ ಮಾಡಿದರೆ ಸರಕಾರದ ಅನುದಾನ ಕೂಡಾ ಸಿಗುವ ಸಾಧ್ಯತೆಯಿದೆ ಎಂದು ಹೇಳಿದರು.


ಜೀವ ರಕ್ಷಣೆಗೂ ಸಹಕಾರಿ-ಭಾಸ್ಕರ ಕೋಡಿಂಬಾಳ
ನ್ಯಾಯವಾದಿ, ಲೇಖಕ ಭಾಸ್ಕರ ಕೋಡಿಂಬಾಳ ಮಾತನಾಡಿ ಕೋವಿಡ್ ಸಮಯವನ್ನು ಸದುಪಯೋಗಪಡಿಸಿದ ಇಲ್ಲಿನ ಯುವಕರ ಕಾರ್ಯ ಮಾದರಿ. ದೋಣಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು, ಜೀವ ರಕ್ಷಣೆಗೂ ಇದು ಸಹಕಾರಿಯಾಗಬಲ್ಲದು. ಇನ್ನಷ್ಟು ದೋಣಿಗಳು ನಿಮ್ಮಿಂದ ನಿರ್ಮಾಣಗೊಳ್ಳಲಿ ಎಂದು ಹಾರೈಸಿದರು.

ಪ್ರತಿಭೆ ಹೊರಹೊಮ್ಮಿದೆ-ಜಯಶ್ರೀ
ಸರ್ವೆ ಎಸ್.ಜಿ.ಎಂ ಪ್ರೌಢಶಾಲೆಯ ಮುಖ್ಯಗುರು ಜಯಶ್ರೀ ಮಾತನಾಡಿ ಯಾವ ವಿದ್ಯಾರ್ಥಿಯಲ್ಲಿ ಯಾವ ಪ್ರತಿಭೆಯಿದೆ ಎನ್ನಲು ಸಾಧ್ಯವಿಲ್ಲ, ಇದೀಗ ನಮ್ಮ ಹಿರಿಯ ವಿದ್ಯಾರ್ಥಿಯ ಪ್ರತಿಭೆ ಹೊರ ಹೊಮ್ಮಿದೆ, ಜಮಾಲುದ್ದೀನ್ ಮತ್ತು ತಂಡದ ಸಾಧನೆಯನ್ನು ಎಲ್ಲರೂ ಗುರುತಿಸುವಂತಾಗಲಿ, ತಂತ್ರಜ್ಞಾನ ಅಳವಡಿಸಿಕೊಂಡು ದೊಡ್ಡ ದೋಣಿ ನಿರ್ಮಿಂದ ನಿರ್ಮಾಣವಾಗಲಿ ಎಂದು ಹೇಳಿದರು.

ನೆರವು ನೀಡಲೂ ಸಿದ್ಧ-ಕಮಲೇಶ್ ಎಸ್.ವಿ
ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ ಮಾತನಾಡಿ ತಮ್ಮ ಸಾಮಾನ್ಯ ಜ್ಞಾನವನ್ನು ಉಪಯೋಗಿಸಿ ದೋಣಿ ನಿರ್ಮಿಸಿದ ಇಲ್ಲಿನ ಯುವಕರು ದೊಡ್ಡ ಸಾಧನೆ ಮಾಡಿದ್ದಾರೆ. ಕುಮಾರಧಾರ ನದಿಯ ಇನ್ನೊಂದು ತಟದಲ್ಲಿ ಬಹಳ ಹತ್ತಿರದಲ್ಲೇ ಆತೂರು, ಕೊಯಿಲ ಸಂಪರ್ಕಿಸುವಂತಿದ್ದರೂ ಸರಕಾರ ಯಾಕೆ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಚಿಂತಿಸಿಲ್ಲ ಎಂದ ಅವರು ಯುವಕರು ಮುಂದಕ್ಕೆ ದೊಡ್ಡ ದೋಣಿ ನಿರ್ಮಾಣ ಮಾಡುವುದಾದರೆ ಇವರಿಗೆ ನಮ್ಮಿಂದಾಗುವ ಆರ್ಥಿಕ ನೆರವು ನೀಡಲು ಸಿದ್ದರಿದ್ದೇವೆ ಎಂದು ಭರವಸೆ ನೀಡಿದರು.

ಪ್ರಚಾರದಿಂದ ಚಿತ್ರಣವೇ ಬದಲಾಗಿದೆ-ಫಾರೂಕ್ ಆನಾಜೆ
ದೋಣಿ ನಿರ್ಮಿಸಿದ ಯುವಕರ ಪರವಾಗಿ ಫಾರೂಕ್ ಆನಾಜೆ ಮಾತನಾಡಿ ನದಿಯ ಒಂದು ತಟದಿಂದ ಇನ್ನೊಂದು ತಟಕ್ಕೆ ಹೋಗುವ ಉದ್ದೇಶಕ್ಕೆ ದೋಣಿ ನಿರ್ಮಿಸಲಾಗಿದೆ. ಪ್ರಚಾರದ ಉದ್ದೆಶವೂ ನಮಗಿರಲಿಲ್ಲ. ಆದರೆ ಸುದ್ದಿ ಪತ್ರಿಕೆ ಮತ್ತು ಚಾನೆಲ್‌ನಲ್ಲಿ ಯಾವಾಗ ವರದಿ ಪ್ರಸಾರವಾಯಿತೋ ಅಲ್ಲಿಂದ ಇದರ ಚಿತ್ರಣವೇ ಬದಲಾಗಿದೆ. ಬಿಡುವಿಲ್ಲದೇ ಕರೆ ಬರುತ್ತಿದೆ, ದೋಣಿ ವೀಕ್ಷಿಸಲು ಜನ ಬರುತ್ತಿದ್ದಾರೆ. ಸಾಧನೆ ಬಗ್ಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ ಎಂದರು. ಪುತ್ತೂರು ನ್ಯಾಯಾಲಯದ ಸಿಬ್ಬಂದಿ ಮಂಜುನಾಥ್, ಭರತ್ ಪ್ರಿಂಟರ್‍ಸ್‌ನ ಮಾಲಕ ಭರತ್, ಪುತ್ತೂರು ದರ್ಬೆ ಯುನೈಟೆಡ್ ಹೋಂ ಡೆಕೋರ್‌ನ ಮಾಲಕ ಹಕೀಂ ಮಾಚಾರ್, ಫಾರೂಕ್ ವೀರಮಂಗಲ, ಸಮೀರ್, ರಫೀಕ್ ವೀರಮಂಗಲ ಮತ್ತಿತರರು ಉಪಸ್ಥಿತರಿದ್ದರು.

ಅಭಿನಂದನಾ ಸನ್ಮಾನ:
ದೋಣಿ ನಿರ್ಮಿಸಿದ ಜಮಾಲುದ್ದೀನ್ ವೀರಮಂಗಲ ಹಾಗೂ ಅಶ್ರಫ್ ವೀರಮಂಗಲ ಅವರನ್ನು ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲ ಹಾಗೂ ಸರ್ವೆ ಎಸ್.ಜಿ.ಎಂ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಪರವಾಗಿ ಶಾಲು ಹಾಕಿ, ಹೂಗುಚ್ಚ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ದೋಣಿ ಚಾಲಕ ಮಮ್ಮು ವೀರಮಂಗಲ ಹಾಗೂ ಸಹಕಾರ ನೀಡಿದ ಉನೈಸ್‌ರವರನ್ನು ಅಭಿನಂದಿಸಲಾಯಿತು.

ಸರಕಾರ ಪ್ರೋತ್ಸಾಹಿಸಲಿ:
ಮೂವರು ಯುವಕರು ಸೇರಿಕೊಂಡು ದೋಣಿ ನಿರ್ಮಿಸಿ ಯಶಸ್ವಿಯಾಗಿದ್ದು ಮುಂದಕ್ಕೆ ದೊಡ್ಡ ಮಟ್ಟದ ದೋಣಿ ನಿರ್ಮಾಣ ಮಾಡುವ ಇರಾದೆ ಹೊಂದಿದ್ದಾರೆ. ಹಾಗಿರುವಾಗ ಇವರಿಗೆ ಸರಕಾರ ಹಾಗೂ ಸಂಘ ಸಂಸ್ಥೆಗಳು ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಯಾವುದೇ ಆವಿಷ್ಕಾರ ಮಾಡುವವರಿಗೆ ಸಹಕಾರ ಮತ್ತು ಪ್ರೋತ್ಸಾಹ ಸಿಕ್ಕರೆ ಅವರು ಮುಂದಕ್ಕೆ ದೊಡ್ಡ ಸಾಧನೆ ಮಾಡಬಲ್ಲರು, ಹಾಗಾಗಿ ನಮ್ಮೂರಿನಲ್ಲಿ ದೋಣಿ ನಿರ್ಮಿಸಿ ಸಾಧನೆ ಮಾಡಿದ ಯುವಕರಿಗೆ ಅಂತಹ ಪ್ರೋತ್ಸಾಹ ದೊರೆಯಬೇಕಾದ ಅವಶ್ಯಕತೆಯಿದೆ, ಈ ಬಗ್ಗೆ ಸ್ಥಳೀಯಾಡಳಿತ ಮತ್ತು ಶಾಸಕರು ಗಮನಹರಿಸಬೇಕಾಗಿದೆ ಎನ್ನುವ ಮಾತುಗಳು ಗ್ರಾಮದಲ್ಲಿ ಕೇಳಿ ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.