ರಾಮಕುಂಜ ವಿದ್ಯಾಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ

ಸಾಧನೆಗೆ ನಮ್ಮ ಪ್ರಯತ್ನದೊಂದಿಗೆ ಭಗವಂತನ ಅನುಗ್ರಹವೂ ಬೇಕು: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ರಾಮಕುಂಜ: 2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅ.9ರಂದು ನಡೆಯಿತು.

ವಿದ್ಯಾರ್ಥಿಗಳನ್ನು ಗೌರವಿಸಿ ಆಶೀರ್ವಚನ ನೀಡಿದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷರೂ ಆಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ಯಾವುದೇ ಸಾಧನೆಗೆ ನಮ್ಮ ಪ್ರಯತ್ನದ ಜೊತೆಗೆ ಭಗವಂತನ ಅನುಗ್ರಹವೂ ಬೇಕಾಗಿದೆ. ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ವಿದ್ಯಾರ್ಜನೆ ಮಾಡಿ ವಿದ್ಯಾರ್ಥಿಗಳು ವಿಶೇಷ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆ ಹಿಂದೆ ಶಿಕ್ಷಕರ ಪಾತ್ರವೂ ಇದೆ. ಪಿಯುಸಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳು ರಾಮಕುಂಜೇಶ್ವರ ವಿದ್ಯಾಸಂಸ್ಥೆಯಲ್ಲಿಯೇ ಪದವಿ ಶಿಕ್ಷಣ ಮುಂದುವರಿಸಬೇಕು. ಈ ಮೂಲಕ ಸಂಸ್ಥೆಗೆ ಕೀರ್ತಿ ತರುವಂತವರಾಗಬೇಕೆಂದು ನುಡಿದರು.

ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್.,ರವರು ಮಾತನಾಡಿ, ವಿಶೇಷ ಸಾಧನೆ ಮಾಡುವ ಮೂಲಕ ವಿದ್ಯಾರ್ಥಿಗಳು ಸಂಸ್ಥೆಗೆ ಗೌರವ ತಂದಿದ್ದಾರೆ. ಸನ್ಮಾನ ಪಡೆದ ವಿದ್ಯಾರ್ಥಿಗಳ ಕಲಿಕೆ, ಅಭ್ಯಾಸ ಮತ್ತಷ್ಟೂ ಹೆಚ್ಚಾಗಬೇಕು. ಈ ಮೂಲಕ ಇಲ್ಲಿನ ಶಿಕ್ಷಣ ಸಂಸ್ಥೆಗೂ ಕೀರ್ತಿ ತರಬೇಕೆಂದು ಹೇಳಿದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕೋಶಾಧಿಕಾರಿ ಕೆ.ಸೇಸಪ್ಪ ರೈ, ಸದಸ್ಯರಾದ ಮಾಧವ ಆಚಾರ್ ಇಜ್ಜಾವು, ಲಕ್ಷ್ಮೀನಾರಾಯಣ ರಾವ್ ಆತೂರು, ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ್ ಕುಂಬ್ಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕ ದಿನೇಶ್, ಶಿಕ್ಷಕಿ ರಶ್ಮಿ, ಉಪನ್ಯಾಸಕ ಚೇತನ್‌ರವರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಪ್ರಾಂಶುಪಾಲ ಚಂದ್ರಶೇಖರ್ ಸ್ವಾಗತಿಸಿ, ಮುಖ್ಯಶಿಕ್ಷಕ ಸತೀಶ್ ಭಟ್ ವಂದಿಸಿದರು. ಉಪನ್ಯಾಸಕಿ ಮಲ್ಲಿಕಾ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಶ್ರೇಯಾ, ಮಯೂರಿ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್‌ಕಟ್ಟಪುಣಿ, ಕಾಲೇಜಿನ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

100 ವಿದ್ಯಾರ್ಥಿಗಳಿಗೆ ಗೌರವಾರ್ಪಣೆ:
2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಡಿಸ್ಟಿಂಕ್ಷನ್ ಪಡೆದುಕೊಂಡ ಮತ್ತು ಎನ್‌ಎಂಎಂಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 100 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿದ್ಯಾರ್ಥಿಗಳಿಗೆ ಶಾಲುಹಾಕಿ, ಪ್ರಮಾಣಪತ್ರ ನೀಡಿ ಆಶೀರ್ವದಿಸಿದರು. ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ನೂತನ ಪ್ರಾಂಶುಪಾಲ ಗಣರಾಜ್ ಕುಂಬ್ಳೆ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಹಾಗೂ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ಭಟ್‌ರವರನ್ನು ಆಡಳಿತ ಮಂಡಳಿ ಪರವಾಗಿ ಸ್ವಾಮೀಜಿಯವರು ಶಾಲುಹಾಕಿ, ಸ್ಮರಣಿಕೆ, ಫಲತಾಂಬೂಲ ನೀಡಿ ಗೌರವಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.