ಶುಭರಾತ್ರಿ……

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನವರಾತ್ರಿ ಹಬ್ಬದ ಮೊದಲದಿನ, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ, ಭಾಷಣಕಾರರು ತಮ್ಮ ಭಾಷಣದಲ್ಲಿ ಶುಭರಾತ್ರಿ ಎಂಬ ಪದವನ್ನು ಉಲ್ಲೇಖಿಸಿದರು. ಈ ‘ಶುಭರಾತ್ರಿ’ ಗೆ ಸಂಬಂಧಿಸಿದ ನಾನು ಕೇಳರಿದುಕೊಂಡ ಕೆಲವು ವಿಚಾರಗಳು ಅಕ್ಷರರೂಪದಲ್ಲಿ ಮೂಡಿಬರಲು ಹೆಚ್ಚು ಸಮಯವೇನು ಹಿಡಿಯಲಿಲ್ಲ.

ಪ್ರಸ್ತುತ, ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ನಾವು ವಿವಿಧ ಬಗೆಯ ಶುಭರಾತ್ರಿ,ಶುಭ ಮುಂಜಾನೆ ಸಂದೇಶಗಳು ಹರಿದಾಡುವುದನ್ನು ನೋಡುತ್ತಿದ್ದೇವೆ. ಈ ಶುಭರಾತ್ರಿ ಮೆಸೇಜುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ದಿನವನ್ನು ಕೊನೆಗೊಳಿಸುವ ಟ್ರೆಂಡ್ ಈಗ ಬೆಳೆದುಬಂದಿದೆ. ವಿಪರ್ಯಾಸ ಎಂದರೆ ಎಷ್ಟೋ ಸಲ ಶುಭರಾತ್ರಿ ಎಂಬುದು ಬರೀ ಒಂದು ಪದವಾಗಿ ಮೆಸೇಜ್ಗಳಲ್ಲಿ ಮಾತ್ರ ಉಳಿದುಕೊಂಡು ,ರಾತ್ರಿಗಳು ಶುಭವಾಗದೇ ಇರುವುದನ್ನು ಗಮನಿಸುತ್ತೇವಲ್ಲವೇ? ಹೇಗೋ ಏನೋ ನಿದ್ರಾ ಲೋಕಕ್ಕೆ ಹೋದರೂ ಕೂಡ ಬೆಳಗಿನ ಜಾವ ಏಳುವ ಸಂದರ್ಭದಲ್ಲಿ ದೇಹ ಭಾರವಾಗಿರುವುದು ಮತ್ತು ಮನಸ್ಸಿನಲ್ಲಿ ಉಲ್ಲಾಸ ಇಲ್ಲದಿರುವುದನ್ನು ಸರ್ವೇ ಸಾಮಾನ್ಯವಾಗಿ ಅನುಭವಿಸಿರುತ್ತೇವೆ.

ಅಧ್ಯಯನಗಳ ಪ್ರಕಾರ,ರಾತ್ರಿ ಮಲಗುವ ಮೊದಲು ನಮ್ಮ ಮನಸ್ಥಿತಿಯ ಮೇಲೆ ರಾತ್ರಿಯು ಶುಭವಾಗಿರುತ್ತದೋ ಅಶುಭವಾಗಿರುತ್ತದೋ ಎನ್ನುವುದು ಅವಲಂಬಿತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿರುವ ಅಹಿತಕರವಾದುದನ್ನು ಓದುತ್ತಾ, ನೋಡುತ್ತಾ, ಹಲವು ಟೀಕೆಗಳನ್ನು ನಿಂದನೆಗಳನ್ನು ಅಧ್ಯಯನ ಮಾಡುತ್ತಲೇ ನಮಗರಿವಿಲ್ಲದೆ ನಾವು ನಿದ್ದೆಗೆ ಜಾರಿರುತ್ತೇವೆ.ನಿದ್ದೆಗೆ ಮೊದಲು, ನಮ್ಮ ಭಾವನೆಗಳು ಆಲೋಚನೆಗಳು ಹೇಗಿತ್ತು ಎಂಬುದು ನಿದ್ದೆಯ ಗುಣಮಟ್ಟವನ್ನು ನಿರ್ಧರಿಸುತ್ತದೆ.ದಿನದ ಚಟುವಟಿಕೆಗಳು, ಅನುಭವಗಳು ಅಹಿತಕರವಾಗಿದ್ದಾಗ, ಪರಿಸ್ಥಿತಿಗಳು ಚೆನ್ನಾಗಿಲ್ಲದಿರುವಾಗ, ನಮ್ಮ ಮನಸ್ಸು ಸದಾ ಕೆಳಸ್ತರದ ಭಾವನೆಗಳಾದ ಕೋಪ, ಬೇಸರ, ಹತಾಶೆ, ಮುಂತಾದುವುಗಳಿಂದ ತುಂಬಿರುತ್ತದೆ. ಇವುಗಳಿಂದಾಗಿ ನಾವು ಆಳವಾದ ನಿದ್ದೆ (ಡೀಪ್ ಸ್ಲೀಪ್ ) ಇಂದ ವಂಚಿತರಾಗುತ್ತೇವೆ. ದುಸ್ವಪ್ನಗಳು, ಹೆದರಿಕೊಳ್ಳುವುದು, ಆಗಾಗ್ಗೆ ಎಚ್ಚರವಾಗಿ ನಿದ್ದೆ ಬಾರದೆ ಚಡಪಡಿಸುವ ಪ್ರಮೇಯಗಳು ಸಾಮಾನ್ಯವಾಗಿ ನಮ್ಮ ಅನುಭವಕ್ಕೆ ಬಂದಿರುತ್ತದೆ. ಇದರ ಪರಿಣಾಮ, ಶರೀರಕ್ಕೆ ಸರಿಯಾದ ಆರಾಮ ಸಿಗದೆ ಕ್ರಮೇಣ ಇವು ಅನೇಕ ಖಾಯಿಲೆಗಳಿಗೆ ನಾಂದಿಯಾಗುವುವು ಎಂದರೆ ತಪ್ಪಾಗಲಾರದು.

ಹಾಗಾದರೆ ರಾತ್ರಿಯನ್ನು ಶುಭವಾಗಿಸುವುದು ಹೇಗೆ? ಶುಭವಾದ ರಾತ್ರಿಯಾಗಬೇಕಾದರೆ ಮಲಗುವ ಮೊದಲು ಮನಸ್ಸನ್ನು ಶುಚಿಗೊಳಿಸುವುದು ಅತೀ ಅಗತ್ಯ.ನಾವೆಲ್ಲರೂ ಬಾಹ್ಯ ಶುಚಿತ್ವದೆಡೆಗೆ ಗಮನಹರಿಸುತ್ತೇವೆ. ಆದರೆ ಆಂತರಿಕ ಶುಚಿತ್ವಕ್ಕೆ ಹೆಚ್ಚಿನ ಗಮನ ಹರಿಸುವುದಿಲ್ಲ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ನಿತ್ಯ ಜೀವನದಲ್ಲಿ ಬಂದೊದಗುವ ಪರಿಸ್ಥಿತಿಗಳಿಂದಾಗಿ ಮನಸ್ಸಿನ ಭಾವನೆಗಳು ಯೋಚನೆಗಳು ಉತ್ತಮವಾಗಿರುವುದಿಲ್ಲ.ಮನಸ್ಸನ್ನು ಶುದ್ಧಗೊಳಿಸಲು, ಅಂದರೆ ನಮ್ಮಲ್ಲಿರುವ ಕೆಳಸ್ತರದ ಭಾವನೆಗಳು ಹಾಗೂ ಆಲೋಚನೆಗಳನ್ನು ಉನ್ನತ ಭಾವನೆಗಳಾಗಿ, ಆಲೋಚನೆಗಳಾಗಿ ಪರಿವರ್ತಿಸುವ ವಿಧಾನ ಎಂದರೆ ವೇದ ಉಪನಿಷತ್ತುಗಳಲ್ಲಿ ಉಲ್ಲೇಖಿಸಿದ ಶಾಂತಿ ಮಂತ್ರಗಳು, ಶ್ಲೋಕಗಳ ಪಠಣ, ದೇವರ ನಾಮ ಜಪಿಸುವುದು, ಎಲ್ಲರನ್ನೂ ಕ್ಷಮಿಸುವುದು, ಧ್ಯಾನ, ಮುಂತಾದುವು. ಹೌದು, ಶಾಂತಿ ಮಂತ್ರಗಳು, ಶ್ಲೋಕಗಳು ಉನ್ನತ ಕಂಪನಗಳನ್ನು ಹೊಂದಿದ್ದು, ಮಲಗುವ ಮೊದಲು ಇವುಗಳ ಪಠಣವು ನಮ್ಮ ಯೋಚನೆಗಳು ಹಾಗೂ ಭಾವನೆಗಳನ್ನು ಪರಿಶುದ್ಧಗೊಳಿಸುತ್ತದೆ. ಮನಸ್ಸು ಶಾಂತವಾಗಿ ಆಳ ನಿದ್ದೆಗೆ ಜಾರಲು ಸಹಕಾರಿಯಾಗುತ್ತದೆ.

ನಮ್ಮ ಹಿರಿಯರು, ಅಜ್ಜ, ಅಜ್ಜಿಯಂದಿರು ಚಿಕ್ಕವರಿರುವಾಗಲೇ ನಮಗೆ ಈ ಅಭ್ಯಾಸಗಳನ್ನು ಕಲಿಸುತ್ತಿದ್ದರೆಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಪ್ರತಿನಿತ್ಯ ಮಲಗುವ ಮೊದಲು ಕೈಕಾಲು ತೊಳೆದು ದೇವರ ನಾಮ ಸ್ಮರಣೆ ಮಾಡಿ ಮಲಗುತ್ತಿದ್ದ ಆ ಸುಂದರ ದಿನಗಳು ನೆನಪಿಗೆ ಬರುತ್ತದೆ .ಈ ಸಂಸ್ಕಾರವನ್ನು ಕೊಟ್ಟ ನಮ್ಮ ಹಿರಿಯರಿಗೆ ಚಿರಋಣಿಗಳಾಗುವುದರ ಜೊತೆಗೆ ಈ ಸಂಸ್ಕಾರವನ್ನು ನಮ್ಮ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಕೊಡುವ ಜವಾಬ್ದಾರಿಯೂ ನಮ್ಮ ಮೇಲಿದೆ ಎನ್ನುವ ಅರಿವು ಕೂಡ ನಮಗಿರಬೇಕು.

ಹೀಗೆ ದಿನದ ಅಂತ್ಯವು ಇನ್ನೊಬ್ಬರನ್ನು ನಿಂದಿಸುವ, ಟೀಕಿಸುವ ಮೆಸೇಜ್ಗಳು, ವೀಡಿಯೋಗಳ ವೀಕ್ಷಣೆಯ ಮೂಲಕ ಆಗುವ ಬದಲು, ಎಲ್ಲರನ್ನೂ ಕ್ಷಮಿಸಿ, ಎಲ್ಲರಿಗೂ ಕೃತಜ್ಞತರಾಗಿ,ಧ್ಯಾನ,ಶಾಂತಿ ಮಂತ್ರ, ಶ್ಲೋಕ ಪಠಣ ಅಥವಾ ದೇವರ ನಾಮ ಸ್ಮರಣೆಯ ಮೂಲಕವಾಗಲೆಂದು ಆಶಯ. ಪ್ರತಿ ದಿನವೂ ಶುದ್ಧ ಮನಸ್ಸು (‘ಕ್ಲೀನ್ ಹಾರ್ಟ್’)ನಿಂದ ಮಲಗಿದಾಗ ಪ್ರತಿ ರಾತ್ರಿಯೂ ನಿಜ ಅರ್ಥದಲ್ಲಿ ಶುಭರಾತ್ರಿಯಾಗುವುದರಲ್ಲಿ ಸಂದೇಹವಿಲ್ಲ.


ವಿನುತ ಎಂ.ಸಾಲೆ
ರಸಾಯನ ಶಾಸ್ತ್ರ ಉಪನ್ಯಾಸಕಿ
ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಬಪ್ಪಳಿಗೆ
ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.