ಆದರ್ಶನಗರ ನಿವಾಸಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಿ – ಅನಾಹುತಕ್ಕೆ ಮೊದಲೇ ಎಚ್ಚೆತ್ತುಕೊಳ್ಳಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 34  ನೆಕ್ಕಿಲಾಡಿ ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ಥರ ಆಗ್ರಹ

ಉಪ್ಪಿನಂಗಡಿ: ಆದರ್ಶನಗರದ ಜನವಸತಿ ಪ್ರದೇಶದಲ್ಲಿ ಈಗಾಗಲೇ ಮಳೆಗಾಲದಲ್ಲಿ ಆವರಣಗೋಡೆ ಕುಸಿತ, ಗುಡ್ಡ ಕುಸಿತಗಳು ಉಂಟಾಗಿ ಸಾಕಷ್ಟು ಮನೆಗಳಿಗೆ ಹಾನಿಯಾಗಿವೆ. ಇಲ್ಲಿನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಕೆಲವು ವರ್ಷಗಳ ಹಿಂದೆ ಮಳೆಗಾಲದಲ್ಲಿ ಕೊಡಗು ಜಿಲ್ಲೆಯಲ್ಲಿ ಆದ ಅನಾಹುತಗಳು ಇಲ್ಲೂ ಸಂಭವಿಸಬಹುದು ಎಂಬ ಎಚ್ಚರಿಕೆ ಹಾಗೂ ತಹಶೀಲ್ದಾರರು ಖುದ್ದು ಸ್ಥಳ ಪರಿಶೀಲನೆ ನಡೆಸಿ, ಇಲ್ಲಿನ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ವರದಿ ಮಾಡಿ, ಅದಕ್ಕೆ ಸೂಕ್ತ ಪರಿಹಾರವನ್ನು ದೊರಕಿಸಿಕೊಡಬೇಕೆಂಬ ಆಗ್ರಹ 34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಕೇಳಿ ಬಂತು.

ತಹಶೀಲ್ದಾರ್ ರಮೇಶ್ ಬಾಬು ಅವರ ನೇತೃತ್ವದಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ವಿಷಯ ಪ್ರಸ್ತಾಪಿಸಿದ ನಮ್ಮೂರು- ನೆಕ್ಕಿಲಾಡಿ ಅಧ್ಯಕ್ಷ ಜತೀಂದ್ರ ಶೆಟ್ಟಿ, ಆದರ್ಶನಗರದ ಜನತಾ ಕಾಲನಿಯು ಗುಡ್ಡ ಪ್ರದೇಶದಲ್ಲಿದ್ದು, ಇಲ್ಲಿ ಸುಮಾರು ೫೦ರಿಂದ ೫೫ರಷ್ಟು ಮನೆಗಳಿವೆ. ಈಗಾಗಲೇ ಇಲ್ಲಿ ಮಳೆಗಾಲದಲ್ಲಿ ಆವರಣಗೋಡೆ ಕುಸಿತ, ಗುಡ್ಡ ಕುಸಿತಗಳುಂಟಾಗಿ ಮನೆಗಳಿಗೆ ಹಾನಿಯಾಗುವುದು ಸಾಮಾನ್ಯವಾಗಿದೆ. ಇಲ್ಲಿ ಸರಿಯಾಗಿ ನಡೆದಾಡಲು ಕಾಲು ದಾರಿಗಳು ಇಲ್ಲದ ಸ್ಥಿತಿಯಿದೆ. ಇಲ್ಲಿನ ನಿವಾಸಿಗಳು ಇಂತಹ ಕಾಲುದಾರಿಯಲ್ಲಿ ಜೀವ ಭಯದಿಂದ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇದೆ. ಮಳೆಗಾಲದಲ್ಲಿ ಇಲ್ಲಿನ ಮನೆಗಳವರು ಯಾವಾಗ ನಮ್ಮ ಮನೆ ಬೀಳುತ್ತದೆ, ಮನೆಯ ಹಿಂದಿನ ಗುಡ್ಡ ಕುಸಿಯುತ್ತದೆ ಎಂಬ ಭಯದಲ್ಲಿ ಆತಂಕದಲ್ಲಿ ಕಾಲ ಕಳೆಯಬೇಕಾದ ಸ್ಥಿತಿ ಇದೆ. ಇಲ್ಲಿನ ಪರಿಸ್ಥಿತಿಗೆ ಹೆದರಿ ಕೆಲವರು ಈಗಾಗಲೇ ಇಲ್ಲಿನ ಮನೆಗಳನ್ನು ಖಾಲಿ ಮಾಡಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಒಂದೆರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಕೊಡಗು ಜಿಲ್ಲೆಯಲ್ಲಿ ಆದ ಅನಾಹುತಗಳು ಇಲ್ಲಿಯೂ ಸಂಭವಿಸಬಹುದಾದ ಸಾಧ್ಯತೆ ಇದೆ. ಆದ್ದರಿಂದ ತಾವುಗಳು ಖುದ್ದು ಸ್ಥಳ ಪರಿಶೀಲನೆ ನಡೆಸಿ, ಇಲ್ಲಿನ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ವರದಿ ಮಾಡಿ, ಅದಕ್ಕೆ ಸೂಕ್ತ ಪರಿಹಾರವನ್ನು ದೊರಕಿಸಿಕೊಡಬೇಕೆಂದು ಆಗ್ರಹಿಸಿದರು. ಅಲ್ಲದೇ, ಈ ಬಗ್ಗೆ ಮನವಿಯನ್ನೂ ನೀಡಲಾಯಿತು.

 

ಅಲ್ಲಿಯ ಕಾಲು ದಾರಿ ಸಮಸ್ಯೆಯ ಬಗ್ಗೆ ತಹಶೀಲ್ದಾರ್‌ರವರು ಗ್ರಾ.ಪಂ.ಗೆ ಪರಿಹಾರ ಕಲ್ಪಿಸಲು ತಿಳಿಸಿದಾಗ, ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್., ಅಲ್ಲಿ ಹಲವರು ರಸ್ತೆಯನ್ನು ಒತ್ತುವರಿ ಮಾಡಿ ಆವರಣಗೋಡೆ ಕಟ್ಟಿದ್ದಾರೆ. ರಸ್ತೆ ಒತ್ತುವರಿ ಮಾಡಬೇಡಿ ಎಂದರೂ ಅಲ್ಲಿನವರು ಸ್ಪಂದಿಸುತ್ತಿಲ್ಲ. ರಸ್ತೆಗೆ ಜಾಗ ಬಿಟ್ಟಲ್ಲಿ ಸರಕಾರದಿಂದ ಅನುದಾನ ತರಿಸಿ, ಅಲ್ಲಿಗೆ ದಾರಿಯ ವ್ಯವಸ್ಥೆ ಮಾಡಿಕೊಡಬಹುದು ಎಂದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಗ್ರಾ.ಪಂ. ಮಾಜಿ ಅಧ್ಯಕ್ಷ ಅಸ್ಕರ್ ಅಲಿಯವರು, ಅದು ಜಾಗ ಸುಮಾರು 1980ರಲ್ಲಿ ನೀಡಿರುವಂತದ್ದು. ಆಗ ನಿಯಮಾನುಸಾರವೇ ಕೊಡಲಾಗಿದೆ. ಅಲ್ಲಿ ಅವರು ಮನೆ ಕಟ್ಟಿದ್ದಾರೆ. ಆದರೆ ಈಗ ನಿಯಮ ಬದಲಾವಣೆಯಾಗಿದೆ. ಈಗ ಅಲ್ಲಿ ರಸ್ತೆಗೆ ಜಾಗ ಬಿಡಲು ಹೋದರೆ ಹಲವು ಮನೆಗಳು ಹೋಗುತ್ತವೆ. ಮನೆ ಹೋದರೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲು ಸಾಧ್ಯವೇ? ಅದು ಸಾಧ್ಯವಿಲ್ಲದಿದ್ದರೆ ರಸ್ತೆಗೆ ಜಾಗ ಬಿಡಲು ಸಾಧ್ಯವಿಲ್ಲ ಎಂದರು.

ಅಲ್ಲಿನವರ ಸಮಸ್ಯೆಗಳ ಪರಿಹಾರಕ್ಕೆ ಶಾಶ್ವತ ಪ್ರಯತ್ನಗಳಾಗಬೇಕು. ಅದಕ್ಕೆ ಸಣ್ಣ ಅನುದಾನ ಸಾಲಲಾರದು. ಆದ್ದರಿಂದ ಅಧಿಕಾರಿಗಳು ಅಲ್ಲಿಗೆ ಭೇಟಿ ಕೊಟ್ಟು ನೈಜತೆಯನ್ನು ನೋಡಿ ಸರಕಾರಕ್ಕೆ ವರದಿ ಕಳುಹಿಸಿ ಅದಕ್ಕೆ ಸೂಕ್ತ ಪರಿಹಾರವನ್ನು ದೊರಕಿಸಿಕೊಡಬೇಕೆಂದು ಜತೀಂದ್ರ ಶೆಟ್ಟಿ ತಿಳಿಸಿದರು. ಅಲ್ಲಿನವರ ಸಮಸ್ಯೆಗಳ ಬಗ್ಗೆ ನಮ್ಮೂರು- ನೆಕ್ಕಿಲಾಡಿಯ ರೂಪೇಶ್ ರೈ, ಅಬ್ದುರ್ರಹ್ಮಾನ್ ಯುನಿಕ್, ಅಲ್ಲಿನ ನಿವಾಸಿಗಳು ವಸ್ತು ಸ್ಥಿತಿಯನ್ನು ವಿವರಿಸಿದರು. ಕಾರ್ಯಕ್ರಮ ಮುಗಿದ ಕೂಡಲೇ ಅಲ್ಲಿಗೆ ಭೇಟಿ ಕೊಡುವುದಾಗಿ ತಹಶೀಲ್ದಾರ್ ಈ ಸಂದರ್ಭ ತಿಳಿಸಿದರು.

ಸಿಹಿತಿಂಡಿ ಉತ್ಪಾದನಾ ಘಟಕ, ಹೊಟೇಲ್‌ಗಳಲ್ಲಿ ಶುಚಿತ್ವ ಕಂಡು ಬರುತ್ತಿಲ್ಲ. ಇದು ನಮ್ಮೆಲ್ಲರ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಅಶುಚಿತ್ವವಾಗಿರುವ ಆಹಾರ ಉತ್ಪಾದನಾ ಘಟಕಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೂಪೇಶ್ ರೈ ಒತ್ತಾಯಿಸಿದರೆ, ಪತ್ರಕರ್ತ ಉದಯಕುಮಾರ್ ಮಾತನಾಡಿ, ಹಣ್ಣು-ಹಂಪಲು, ತರಕಾರಿಗಳ ಸಂರಕ್ಷಣೆಗಾಗಿ ಹಾಗೂ ಅದರ ತಾಜಾತನ ಕಾಪಾಡಲು ಕೆಲವು ಅಂಗಡಿಗಳವರು ಸ್ಪ್ರೇಯಂತಹ ಕೆಲವು ದ್ರಾವಣಗಳನ್ನು ಬಳಸುತ್ತಾರೆ. ಇದು ಮಾನವನ ದೇಹ ಸೇರಿದರೆ ಹಾನಿಕಾರಕ. ಆದ್ದರಿಂದ ಈ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು. ಆಹಾರ ಉತ್ಪಾದನಾ ಘಟಕ, ಅಂಗಡಿಗಳಿಗೆ ಹೋಗಿ ಪರಿಶೀಲನೆ ನಡೆಸಲು ಆಹಾರ ನಿರೀಕ್ಷಕರಿಗೆ ಸೂಚಿಸಲಾಗುವುದು. ಗ್ರಾ.ಪಂ. ಮಟ್ಟದಲ್ಲಿ ಪಿಡಿಒ ಅವರು ಈ ಬಗ್ಗೆ ಕ್ರಮ ವಹಿಸಲು ಸೂಚಿಸಲಾಗುವುದು ಎಂದು ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದರು.

ಉಪ್ಪಿನಂಗಡಿ ಗ್ರಾ.ಪಂ.ನ ಇನ್ನೊಂದು ಬದಿಗೆ ಕಂದಾಯ ಇಲಾಖೆಯ ಜಾಗ ಇದೆ. ಅಲ್ಲಿ ಕಂದಾಯ ನಿರೀಕ್ಷಕರ ಕಚೇರಿ ಇದೆ. ಆದರೆ ಬಸ್‌ನಿಲ್ದಾಣದೊಳಗಿನಿಂದ ರಿಕ್ಷಾ ಹಾಗೂ ವಾಹನಗಳು ಹೋಗುವುದಕ್ಕೆ ಗ್ರಾ.ಪಂ. ನಿಷೇಧಿಸಿದೆ. ಹಾಗಾದರೆ ಅಸಹಾಯಕರು ಅಲ್ಲಿಗೆ ತೆರಳುವುದಾದರೂ ಹೇಗೆ ಎಂದು ಅಬ್ದುರ್ರಹ್ಮಾನ್ ಯುನಿಕ್ ಪ್ರಶ್ನಿಸಿದರಲ್ಲದೆ, ಕಂದಾಯ ಇಲಾಖೆಯ ಈ ಜಾಗಕ್ಕೆ ಬಸ್ ನಿಲ್ದಾಣದ ಬದಿಯಿಂದ ರಸ್ತೆ ಇತ್ತು. ಆದರೆ ಅದನ್ನು ಗ್ರಾ.ಪಂ. ಅತಿಕ್ರಮಿಸಿ ಅಲ್ಲಿ ಪ್ರಯಾಣಿಕರ ತಂಗುದಾಣ, ಅಂಗಡಿಗಳನ್ನು ಕಟ್ಟಿದೆ. ಇದರಿಂದ ಆ ದಾರಿಯೂ ಬಂದ್ ಆದಂತಾಗಿದೆ. ಆದ್ದರಿಂದ ಒಂದೋ ಬಸ್ ನಿಲ್ದಾಣದೊಳಗಿನಿಂದ ವಾಹನಗಳು ಅಲ್ಲಿಗೆ ಹೋಗಲು ಅನುಮತಿ ನೀಡಲಿ. ಇಲ್ಲದಿದ್ದಲ್ಲಿ ಕಂದಾಯ ಇಲಾಖೆಯವರು ಅತಿಕ್ರಮಣವಾಗಿರುವ ಆ ದಾರಿಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದರು. ಖಲಂದರ್ ಶಾಫಿ ಕೂಡಾ ಇದಕ್ಕೆ ಧ್ವನಿಗೂಡಿಸಿದರು.

ಈ ಸಂದರ್ಭ ತಹಶೀಲ್ದಾರ್ ರಮೇಶ್ ಬಾಬು ಮಾತನಾಡಿ, ಈ ಬಗ್ಗೆ ಉಪ್ಪಿನಂಗಡಿ ಗ್ರಾ.ಪಂ. ಪಿಡಿಒರವರಲ್ಲಿ ಮಾತನಾಡುವುದಾಗಿ ತಿಳಿಸಿದರು. ನೆಕ್ಕಿಲಾಡಿ ಗ್ರಾ.ಪಂ. ಸ್ವಾಧೀನವಿರುವ ಜಾಗದ ಸರ್ವೇ ನಡೆಸಿ, ಗಡಿಗುರುತು ನಡೆಸಿಕೊಡಲು ಅರ್ಜಿ ಕೊಟ್ಟು ಹಲವು ತಿಂಗಳುಗಳು ಕಳೆದಿವೆ. ಆದರೂ ಅದಕ್ಕೆ ಸರ್ವೇ ಇಲಾಖೆಯಿಂದ ಸ್ಪಂದನೆ ಇಲ್ಲ. ಸರಕಾರದ ಆಸ್ತಿಯನ್ನೇ ಸರ್ವೇ ನಡೆಸಲು ಇಷ್ಟು ವಿಳಂಬ ಮಾಡಿದರೆ ಇನ್ನು ಜನಸಾಮಾನ್ಯರ ಜಾಗದ ಸರ್ವೆ ಕಾರ್ಯ ಯಾವಾಗ ಆಗಬಹುದು ಎಂದು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್. ಪ್ರಶ್ನಿಸಿದರು. ಸರಕಾರಿ ಶಾಲೆಗಳ, ಅಂಗನವಾಡಿ ಕೇಂದ್ರಗಳ ಗಡಿಗುರುತಿಸುವಿಕೆಯೂ ವಿಳಂಬವಾಗಿದೆ ಎಂಬುದನ್ನು ಈ ಸಂದರ್ಭ ಗ್ರಾ.ಪಂ. ಸದಸ್ಯ ವಿಜಯಕುಮಾರ್ ಪ್ರಸ್ತಾಪಿಸಿದರು.

ಕೋವಿಡ್ ಲಸಿಕೆ ಪಡೆಯಲು ಬರುವವರ ದಟ್ಟಣೆ ಈಗ ಕಮ್ಮಿ ಇರುವುದರಿಂದ ಹಾಸಿಗೆಯಲ್ಲೇ ಮಲಗಿರುವ ಸ್ಥಿತಿಯಲ್ಲಿರುವವರು ಗ್ರಾಮ ವ್ಯಾಪ್ತಿಗಳಲ್ಲಿ ಇದ್ದರೆ ಅಂತವರಿಗೆ ಮನೆಗೆ ಭೇಟಿ ನೀಡಿ ಲಸಿಕೆ ಕೊಡುವುದು ಉತ್ತಮ ಎಂಬ ಸಲಹೆ ಸಭೆಯಲ್ಲಿ ಕೇಳಿಬಂತು. ೩೪ ನೆಕ್ಕಿಲಾಡಿ ನಾಗರಿಕ ರಾಜನ್‌ಗೆ ಗ್ರಾ.ಪಂ.ನಿಂದ ಶುದ್ಧ ಕುಡಿಯುವ ನೀರನ್ನು ನೀಡುವ ಬಗ್ಗೆ, ನೇತ್ರಾವತಿ, ಕುಮಾರಧಾರ ನದಿಗಳ ನೀರನ್ನು ಮಲೀನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ, 34 ನೆಕ್ಕಿಲಾಡಿಯಲ್ಲಿ ಇರುವ ದಾರಿ ದೀಪದ ಸಮಸ್ಯೆಗೆ ಮುಕ್ತಿ ನೀಡುವ ಬಗ್ಗೆ ಹಾಗೂ 34 ನೆಕ್ಕಿಲಾಡಿ ಗ್ರಾ.ಪಂ.ನ ಕಟ್ಟಡವಿರುವ ಗ್ರಾ.ಪಂ. ಜಾಗವನ್ನು ಸರ್ವೇ ನಡೆಸುವ ಕುರಿತು ಸಭೆಯ ಕೊನೆಗೆ ನಮ್ಮೂರು- ನೆಕ್ಕಿಲಾಡಿ ಸಂಸ್ಥೆಯ ವತಿಯಿಂದ ತಹಶೀಲ್ದಾರ್ ಮೂಲಕ ಮನವಿ ನೀಡಲಾಯಿತು.

34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ನಿರ್ದೇಶಕಿ ಶೈಲಜಾ ಭಟ್, ೩೪ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಮಾರಯ್ಯ, ಸದಸ್ಯರಾದ ಗೀತಾ, ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಕಾನಿಷ್ಕ, ಪಶು ಸಂಗೋಪನಾ ಇಲಾಖೆಯ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್, ಆರೋಗ್ಯ ಇಲಾಖೆಯ ಶ್ರೀಮತಿ ಡೈಸಿ, ಮೆಸ್ಕಾಂ ಇಲಾಖೆಯ ಶ್ರೀಮತಿ ಸುಧಾ, ಶಿಕ್ಷಣ ಇಲಾಖೆಯ ಸುಂದರ ಗೌಡ, ಅಶ್ರಫ್. ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ ಬಿ., ಕೃಷಿ ಇಲಾಖೆಯ ಭರಮಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶ್ರೀಮತಿ ಸುಜಾತ, ಭೂಮಾಪನಾ ಇಲಾಖೆಯ ಮಹೇಶ್, ಮಂಜುನಾಥ, ಸಾಮಾಜಿಕ ಅರಣ್ಯ ಇಲಾಖೆಯ ಕೃಷ್ಣ ಇಲಾಖಾ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನಮ್ಮೂರು ನೆಕ್ಕಿಲಾಡಿ ಸಂಘಟನೆಯ ಅಧ್ಯಕ್ಷ ಜತೀಂದ್ರ ಶೆಟ್ಟಿ, ಕಾರ್ಯದರ್ಶಿ ಖಲಂದರ್ ಶಾಫಿ, ಉಪಾಧ್ಯಕ್ಷರಾದ ರೂಪೇಶ್ ರೈ, ಅನಿ ಮಿನೇಜಸ್, ಕೋಶಾಧಿಕಾರಿ ಅಬ್ದುಲ್ ರಹಿಮಾನ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಸ್ಕರ್ ಅಲಿ, ಗ್ರಾಮ ಪಂಚಾಯತ್ ಸದಸ್ಯರಾದ ವಿಜಯಕುಮಾರ್, ಹರೀಶ್ ಡಿ., ಶ್ರೀಮತಿ ಸುಜಾತ ರೈ, ಶ್ರೀಮತಿ ತುಳಸಿ, ವಿಮಲ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದು ಚರ್ಚೆಯಲ್ಲಿ ಪಾಲ್ಗೊಂಡರು. ಉಪ ತಹಸೀಲ್ದಾರ್‌ಗಳಾದ ಚೆನ್ನಪ್ಪ ಗೌಡ ಸ್ವಾಗತಿಸಿ, ಶ್ರೀಮತಿ ಕವಿತಾ ವಂದಿಸಿದರು. ಗ್ರಾಮಕರಣಿಕರಾದ ಶ್ರೀಮತಿ ನಮಿತಾ, ಕಚೇರಿ ಸಿಬ್ಬಂದಿ ರಾಮಣ್ಣ ನಾಯ್ಕ್, ಯತೀಶ್ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಪ್ರಭಾರ ಕಂದಾಯ ನಿರೀಕ್ಷಕ ಹರೀಶ್ ಪಿ. ಕಾರ್‍ಯಕ್ರಮ ನಿರೂಪಿಸಿದರು.

ಸರಕಾರಿ ಇಲಾಖೆಗಳಲ್ಲಿರುವ ಸಿಬ್ಬಂದಿಯ ಕೊರತೆ, ಸರಕಾರಿ ಶಾಲೆಯಲ್ಲಿನ ಶಿಕ್ಷಕರ ಕೊರತೆ, ಸರಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ, ಆರ್‌ಟಿಇಯ ನಿಯಮ ಬದಲಾವಣೆ, ವಿದ್ಯುತ್ ಬಾಕಿ ಬಿಲ್‌ನ ಮೇಲೆ ಮೆಸ್ಕಾಂನ ವಿಧಿಸುತ್ತಿರುವ ಬಡ್ಡಿಯ ಬಗ್ಗೆ, ಬಿಪಿಎಲ್ ಪಡಿತರ ಚೀಟಿ ಕೊಡುವ ಪ್ರಕ್ರಿಯೆ ನಡೆಯದ ಬಗ್ಗೆ, ಗ್ರಾ.ಪಂ.ನ ನೀರಿನ ಸ್ಥಾವರದ ವಿದ್ಯುತ್ ಬಿಲ್ ಅನ್ನು ಕಡಿಮೆಗೊಳಿಸುವ ಬಗ್ಗೆ ಹೀಗೆ ತಾಲೂಕು ಮಟ್ಟದ ಅಧಿಕಾರಿಗಳು ಪರಿಹಾರ ಕಾಣಲಾಗದ ದೊಡ್ಡ ದೊಡ್ಡ ಸಾರ್ವಜನಿಕ ಸಮಸ್ಯೆಗಳೇ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪ್ರಸ್ತಾಪವಾಯಿತು. ಕೊನೆಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ಅಸ್ಕರ್ ಅಲಿಯವರು ಇಲ್ಲಿರುವ ಅಧಿಕಾರಿಗಳಿಂದ ಇದಕ್ಕೆಲ್ಲಾ ಮೇಲಾಧಿಕಾರಿಗಳಿಗೆ ಅಥವಾ ಸರಕಾರಕ್ಕೆ ಪತ್ರ ಬರೆಯಬಹುದಷ್ಟೇ. ಅವರಿಂದ ಮಾಡಲು ಸಾಧ್ಯವಿಲ್ಲ. ಇದೆಲ್ಲಾ ಆಗಬೇಕಾಗಿರುವುದು ಸರಕಾರದ ಮಟ್ಟದಲ್ಲಿ. ಇದನ್ನು ಮಾಡಬೇಕಾದವರು ಜನಪ್ರತಿನಿಧಿಗಳು ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಇವರ ಈ ಮಾತು ಸರಕಾರದ ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಅಣಕಿಸುವಂತಿತ್ತು.

ತಹಶೀಲ್ದಾರ್ ಭೇಟಿ
ನಮ್ಮೂರು- ನೆಕ್ಕಿಲಾಡಿಯ ಮನವಿಯಂತೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಬಳಿಕ ತಹಶೀಲ್ದಾರ್ ರಮೇಶ್ ಬಾಬು ಅವರು ಗುಡ್ಡ ಕುಸಿತ ಸೇರಿದಂತೆ ಹಲವು ಸಮಸ್ಯೆಗಳಿರುವ ಆದರ್ಶನಗರ ಜನತಾ ಕಾಲನಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದರು.

ಆದೇಶ ಪತ್ರ ವಿತರಣೆ:
ಸಭೆಯಲ್ಲಿ ಇಂದಿರಾ ಗಾಂಧಿ ವೃದ್ಧಾಪ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಗಳಿಗೆ ಸಂಬಂಧಿಸಿದಂತೆ ಒಟ್ಟು ೧೬ ಮಂದಿ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.