- ವಾಣಿಜ್ಯ ಕೊಠಡಿ ಬಾಡಿಗೆದಾರರ ಬಾಕಿ ವಸೂಲಾತಿಗೆ ಆಗ್ರಹ
ನೆಲ್ಯಾಡಿ: ಗ್ರಾಮ ಪಂಚಾಯತ್ನ ವಾಣಿಜ್ಯ ಕೊಠಡಿಯನ್ನು ಏಲಂನಲ್ಲಿ ಪಡೆದುಕೊಂಡ ಬಾಡಿಗೆದಾರರು ಬಾಕಿ ಉಳಿಸಿಕೊಂಡಿರುವ ಬಾಡಿಗೆ ಮೊತ್ತ ವಸೂಲಾತಿಗೆ ಕ್ರಮ ಕೈಗೊಳ್ಳುವಂತೆ ನೆಲ್ಯಾಡಿ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದ್ದಾರೆ. ಸಭೆ ಅ.21ರಂದು ಗ್ರಾ.ಪಂ.ಅಧ್ಯಕ್ಷೆ ಚೇತನರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ನಾಲ್ಕು ವರ್ಷದ ಹಿಂದೆ ಗ್ರಾಮ ಪಂಚಾಯತ್ನ ವಾಣಿಜ್ಯ ಕೊಠಡಿಯನ್ನು ಏಲಂನಲ್ಲಿ ಪಡೆದುಕೊಂಡ ಬಾಡಿಗೆದಾರರು ಗ್ರಾಮ ಪಂಚಾಯತ್ಗೆ ಪಾವತಿಸಬೇಕಾದ ಬಾಡಿಗೆ ಮೊತ್ತ ಬಾಕಿ ಉಳಿಸಿಕೊಂಡಿರುವ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅಂತವರಿಂದ ಬಾಕಿ ಮೊತ್ತ ವಸೂಲಾತಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಲ್ಲದೇ ಕಳೆದ ಎಪ್ರಿಲ್ ತಿಂಗಳಿನಲ್ಲಿ ನಡೆದ ಏಲಂ ಪ್ರಕ್ರಿಯೆಯಲ್ಲಿ ವಾಣಿಜ್ಯ ಕೊಠಡಿ ಬಾಡಿಗೆಪಡೆದುಕೊಂಡವರು ಏಲಂ ಮೊತ್ತದ ಮೂರನೇ ಒಂದು ಭಾಗವನ್ನು ೨೪ ಗಂಟೆಯೊಳಗೆ ಪಾವತಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಇದೀಗ ಏಲಂ ನಡೆದು ಆರು ತಿಂಗಳು ಕಳೆದರೂ ಹಣ ಪಾವತಿಸದೇ ಇರುವ ವಿಚಾರವು ತಿಳಿದುಕೊಂಡ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣ ವಸೂಲಾತಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಮಂಜುಳ ಎನ್.ರವರು, ಆರು ವರ್ಷದಿಂದ ಆಡಿಟ್ ವರದಿ ಸಿಗದೇ ಇರುವುದರಿಂದ ಸಮಸ್ಯೆಯಾಗಿದೆ. ಹಸಿಮೀನು, ಸಂತೆ ಮಾರುಕಟ್ಟೆ ಬಾಕಿ ವಸೂಲಾತಿ ಮಾಡಲಾಗಿದೆ ಎಂದರು. ಪಂಚಾಯತ್ಗೆ ಬರಬೇಕಾದ ಬಾಡಿಗೆ ಬಾಕಿ ಉಳಿಸಿಕೊಂಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರೂ ಬಾಡಿಗೆದಾರರ ಬಾಕಿ ಮೊತ್ತ ವಸೂಲಾತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಅನುದಾನ ಹಂಚಿಕೆ ವಿಚಾರ-ಚಕಮಕಿ:
ನರೇಗಾ ಯೋಜನೆಯಡಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಗ್ರಾಮ ಪಂಚಾಯತ್ಗೆ ಬಂದಿರುವ ಅನುದಾನ ಹಂಚಿಕೆ ಕುರಿತಂತೆ ಸದಸ್ಯರ ನಡುವೆ ಏರು ಧ್ವನಿಯಲ್ಲಿ ಚರ್ಚೆ ನಡೆದು ಮಾತಿನ ಚಕಮಕಿಯೂ ನಡೆಯಿತು. ಅನುದಾನವನ್ನು ಎಲ್ಲಾ ಸದಸ್ಯರಿಗೂ ಸಮಾನವಾಗಿ ಹಂಚಿಕೆ ಮಾಡಬೇಕೆಂದು ಸದಸ್ಯ ಆನಂದ ಪಿಲವೂರು ಆಗ್ರಹಿಸಿದರು. ಇದಕ್ಕೆ ಆಕ್ಷೇಪಿಸಿದ ಸದಸ್ಯ ಮೊಹಮ್ಮದ್ ಇಕ್ಬಾಲ್ರವರು, ವಾರ್ಡ್ವಾರು ಅನುದಾನ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು. ಕೆಲವೊಂದು ವಾರ್ಡ್ಗಳ ವ್ಯಾಪ್ತಿ ವಿಸ್ತಾರವಾಗಿದೆ. ವಾರ್ಡ್ವಾರು ಅನುದಾನ ಹಂಚಿಕೆ ಮಾಡಿದಲ್ಲಿ ಸದಸ್ಯರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಬಂದಿರುವ ಅನುದಾನ ಪ್ರತಿ ಸದಸ್ಯರಿಗೂ ಸಮಾನವಾಗಿ ಸಿಗಬೇಕೆಂದು ಸದಸ್ಯ ಆನಂದ ಗೌಡ ಪಿಲವೂರು ಹೇಳಿದರು. ಈ ಬಗ್ಗೆ ಪರ, ವಿರೋಧ ಚರ್ಚೆ ನಡೆದು ಮಾತಿನ ಚಕಮಕಿಯೂ ನಡೆಯಿತು. ಈ ವೇಳೆ ಮಾತನಾಡಿದ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ರವರು, ಆಯಾ ವಾರ್ಡ್ಗಳಲ್ಲಿ ನರೇಗಾ ಯೋಜನೆಯಡಿ ನಡೆದಿರುವ ದಿನಗೂಲಿ ಪರಿಗಣಿಸಿ ಅನುದಾನ ಹಂಚಿಕೆ ಮಾಡುವುದು ಸೂಕ್ತ ಎಂದು ಅಭಿಪ್ರಾಯಿಸಿದರು. ಇದಕ್ಕೆ ಸದಸ್ಯ ಯಾಕೂಬ್ ಸಲಾಂರವರು ಅಸಮಾಧಾನ ವ್ಯಕ್ತಪಡಿಸಿದರು.
ನೆಲ್ಯಾಡಿಯಲ್ಲಿ ಮರಣೋತ್ತರ ಪರೀಕ್ಷೆ ಆಗಬೇಕು:
ಈ ಹಿಂದೆ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ ಈಗ ಇಲ್ಲಿ ಮರಣೋತ್ತರ ಪರೀಕ್ಷೆ ನಡೆಸುತ್ತಿಲ್ಲ. ಇದರಿಂದಾಗಿ ಪುತ್ತೂರು, ಕಡಬ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ. ಈಗ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯವರಿದ್ದು ಮತ್ತೆ ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಮೊಹಮ್ಮದ್ ಇಕ್ಬಾಲ್ ಒತ್ತಾಯಿಸಿದರು.
ಕೆನರಾ ಬ್ಯಾಂಕ್ ಸಿಬ್ಬಂದಿಗಳಿಗೆ ಕನ್ನಡ ಗೊತ್ತಿಲ್ಲ:
ಕೆನರಾ ಬ್ಯಾಂಕ್ನ ನೆಲ್ಯಾಡಿ ಶಾಖೆಯಲ್ಲಿರುವ ಸಿಬ್ಬಂದಿಗಳಿಗೆ ಕನ್ನಡ ಬರುತ್ತಿಲ್ಲ. ಹಿಂದಿಯಲ್ಲಿಯೇ ವ್ಯವಹರಿಸಬೇಕಾಗಿದೆ. ಇದರಿಂದ ಈ ಪ್ರದೇಶದ ಜನರಿಗೆ ತೊಂದರೆಯಾಗಿದೆ. ಆದ್ದರಿಂದ ಇಲ್ಲಿಗೆ ಕನಿಷ್ಠ ಇಬ್ಬರು ಕನ್ನಡ ಬರುವ ಸಿಬ್ಬಂದಿಗಳ ನೇಮಕ ಮಾಡುವ ಸಂಬಂಧ ಬ್ಯಾಂಕ್ನ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಬೇಕೆಂದು ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಹೇಳಿದರು.
ಅನಧಿಕೃತ ಅಂಗಡಿ ತೆರವು:
ನೆಲ್ಯಾಡಿ ಪೇಟೆಯಲ್ಲಿರುವ ಅಂಗಡಿಗಳ ತೆರಿಗೆ ಹೆಚ್ಚಿಸಲಾಗಿದೆ. ಆದರೆ ಅನಧಿಕೃತ ಅಂಗಡಿಗಳಿಂದಾಗಿ ತೆರಿಗೆ ಪಾವತಿಸಿ ವ್ಯಾಪರ ಮಾಡುವ ವರ್ತಕರಿಗೆ ತೊಂದರೆಯಾಗಿದೆ. ಈ ಬಗ್ಗೆ ದೂರುಗಳು ಬಂದಿವೆ. ಮೂರು ತಿಂಗಳ ಹಿಂದೆಯೇ ಅನಧಿಕೃತ ಅಂಗಡಿಗಳ ತೆರವಿಗೆ ನೋಟಿಸ್ ಜಾರಿ ಮಾಡಿದ್ದರೂ ಪಂಚಾಯತ್ ಕಡೆಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ರವರು, ಅನಧಿಕೃತ ಅಂಗಡಿಯವರಿಗೆ ಮತ್ತೆ ನೋಟಿಸ್ ನೀಡಿ ತೆರವಾಗದೇ ಇದ್ದಲ್ಲಿ ಪಂಚಾಯತ್ ವತಿಯಿಂದ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಕಟ್ಟಡ ಪರವಾನಿಗೆ, ವ್ಯಾಪರ ಪರವಾನಿಗೆ, ತೆರಿಗೆ ವಸೂಲಿ, ರಸ್ತೆ ಕಾಂಕ್ರಿಟೀಕರಣ, ಸತ್ತನಾಯಿಗಳ ವಿಲೇವಾರಿ, ಸ್ವಚ್ಛತೆಗೆ ಆದ್ಯತೆ, ಮೆಸ್ಕಾಂ ಬಿಲ್ಲು, ಜಾಗದ ವಿವಾದ ಬಗೆಹರಿಸಲು ಸಾಮಾಜಿಕ ನ್ಯಾಯ ಸಮಿತಿ ಸಭೆ, ನೀರು ನಿರ್ವಾಹಕರ ಸಭೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಲೀಲಾ, ಆಶಾ ಕಾರ್ಯಕರ್ತೆ ಪೂರ್ಣಿಮಾ ಆರೋಗ್ಯ ಇಲಾಖೆಯ ಮಾಹಿತಿ ನೀಡಿದರು. ಅಧ್ಯಕ್ಷೆ ಚೇತನ, ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಆನಂದ ಪಿಲವೂರು, ಯಾಕೂಬ್ ಸಲಾಂ ಪಡುಬೆಟ್ಟು, ಮೊಹಮ್ಮದ್ ಇಕ್ಬಾಲ್, ಶ್ರೀಲತಾ ಸಿ.ಹೆಚ್., ರೇಷ್ಮಾಶಶಿ, ಉಷಾಜೋಯಿ, ಪ್ರಕಾಶ್ ಪೂಜಾರಿ ಕೆ., ಜಯಲಕ್ಷ್ಮೀಪ್ರಸಾದ್, ಜಯಂತಿ, ಪುಷ್ಪಾ ಪಡುಬೆಟ್ಟು ವಿವಿಧ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದರು. ಪಿಡಿಒ ಮಂಜುಳ ಎನ್. ಸ್ವಾಗತಿಸಿದರು. ಸಿಬ್ಬಂದಿ ಶಿವಪ್ರಸಾದ್ ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಸಭೆಗೆ ಮಂಡಿಸಿದರು. ಸಿಬ್ಬಂದಿಗಳು ಸಹಕರಿಸಿದರು.