ಖ್ಯಾತ ಪತ್ರಕರ್ತ ಜೋಗಿಗೆ ಸಾಹಿತ್ಯ ರತ್ನ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಕೊಡುವ ಸಾಹಿತ್ಯ ರತ್ನ-2020 ಪ್ರಶಸ್ತಿಗೆ ಖ್ಯಾತ ಪತ್ರಕರ್ತ ಜೋಗಿರವರು ಆಯ್ಕೆಯಾಗಿದ್ದಾರೆ.

 

ಪ್ರತೀ ವರ್ಷ ನೀಡಲಾಗುವ ಈ ಪ್ರಶಸ್ತಿಗೆ ಹತ್ತು ಮಂದಿ ತಜ್ಞರ ತಂಡ ಉಪ್ಪಿನಂಗಡಿ ಮೂಲದವರಾದ ಗಿರೀಶ್ ರಾವ್ ‘ಜೋಗಿ’ ಯವರ ‘108- ನಾಲ್ಕು ದಶಕಗಳ ಕತೆಗಳು’ ಕೃತಿಯನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ದಶಂಬರ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಜೋಗಿಯಾದ ಗಿರೀಶ್
ಮೂಲತಃ ಉಪ್ಪಿನಂಗಡಿಯವರಾದ ಪತ್ರಕರ್ತ ಜೋಗಿ ಅವರ ‘ಎಲ್’ ಕಾದಂಬರಿಗೆ ರಾಜ್ಯಮಟ್ಟದ ಅಮ್ಮ ಪ್ರಶಸ್ತಿ ಇತ್ತೀಚೆಗೆ ದೊರೆತಿತ್ತು. ಕಲಬುರಗಿ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಈ ಪ್ರಶಸ್ತಿ ನೀಡಿ ಗೌರವಿಸಿತ್ತು. ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಜೋಗಿ ಅವರಿಗೆ ಕರಾವಳಿ ಪತ್ರಿಕೋದ್ಯಮದ ಕರ್ಣ ಎಂದೇ ಖ್ಯಾತರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಬಳಿಕ ಅವರ ‘ಎಲ್’ ಕಾದಂಬರಿ ಅಮ್ಮ ಪ್ರಶಸ್ತಿಗೆ ಆಯ್ಕೆಯಾಗಿತ್ತು.

ಜೋಗಿ ಎಂದೇ ಖ್ಯಾತರಾಗಿರುವ ಗಿರೀಶ್ ರಾವ್ ಹತ್ವಾರ್ ಅವರು ಕನ್ನಡಪ್ರಭದ ಪುರವಣಿಯ ಪ್ರಧಾನ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಲೇಖಕರಾಗಿ, ಕಾದಂಬರಿಕಾರನಾಗಿ, ಅಂಕಣಗಾರರಾಗಿ, ವಿಮರ್ಶಕರಾಗಿ, ಧಾರಾವಾಹಿ ಸಂಭಾಷಣೆಕಾರರಾಗಿ ಗುರುತಿಸಿಕೊಂಡವರು. ಇವರು ಬೆಂಗಳೂರಿನಲ್ಲಿ ಪತ್ನಿ ಜ್ಯೋತಿ, ತಾಯಿ ಶಾರದಾ, ಮಗಳು ಖುಷಿಯೊಂದಿಗೆ ವಾಸವಾಗಿದ್ದಾರೆ. ಇವರ ತಂದೆ ಹತ್ವಾರ ನಾರಾಯಣ ರಾವ್.

ಮಂಗಳೂರಿನ ಸುರತ್ಕಲ್ ಹೊಸಬೆಟ್ಟು ಜೋಗಿ ಅವರ ಹುಟ್ಟೂರು. 1965ರ ನವೆಂಬರ್ 16 ಜನ್ಮದಿನ. ಹತ್ವಾರ್ ಮನೆತನ. ಗುರುವಾಯನಕೆರೆ ಸರಕಾರಿ ಶಾಲೆ, ಉಪ್ಪಿನಂಗಡಿ ಚರ್ಚ್ ಸ್ಕೂಲ್‌ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ. ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದರು. ತನ್ನ 18ನೇ ವಯಸ್ಸಿಗೆ ಬರಹ ಲೋಕಕ್ಕೆ ಕಾಲಿಟ್ಟವರು. ಜತೆಜತೆಗೇ ಮಾತುಗಾರಿಕೆಯ ಕಲೆಯನ್ನು ಮೈಗೂಡಿಸಿಕೊಂಡರು. ಆ ದಿನಗಳಲ್ಲೇ ಸಾಹಿತ್ಯದ ರುಚಿ ಹಿಡಿಸಿದವರು ಬಳ್ಳ ವೆಂಕಟರಮಣ ಅವರು. 1989ರಲ್ಲಿ ಬೆಂಗಳೂರು ಕಡೆ ಮುಖ ಮಾಡಿ, ಬರಹವನ್ನೇ ಜೀವನವಾಗಿಸಿಕೊಂಡರು. ಅಲ್ಲಿವರೆಗೆ ಗಿರೀಶ್ ರಾವ್ ಹತ್ವಾರ್ ಆಗಿದ್ದವರು ಮುಂದೆ ವೈ.ಎನ್.ಕೆ. ಅವರಿಂದಾಗಿ ‘ಜೋಗಿ’ಯಾಗಿ ಗುರುತಿಸಿಕೊಳ್ಳುತ್ತಾರೆ.

ರವಿ ಬೆಳಗೆರೆ ಸಾರಥ್ಯದ ಹಾಯ್ ಬೆಂಗಳೂರು ಪತ್ರಿಕೆಯ ಸಹಾಯಕ ಸಂಪಾದಕರಾಗಿ, ಅಚ್ಚರಿ ಮಾಸಪತ್ರಿಕೆಯ ಸಂಪಾದಕರಾಗಿ, ಕನ್ನಡ ಪ್ರಭ ಪತ್ರಿಕೆಯ ಪುರವಣಿ ಸಹ ಸಂಪಾದಕರಾಗಿ, ಇದೀಗ ಕನ್ನಡಪ್ರಭ ಪತ್ರಿಕೆಯ ಪುರವಣಿ ಪ್ರಧಾನ ಸಂಪಾದಕರಾಗಿದ್ದಾರೆ. ಮಣಿಪಾಲ ಸಮೂಹದ ರೂಪತಾರಾ ಪತ್ರಿಕೆಯ ರೂವಾರಿಯೂ ಹೌದು. ಇದರ ಜತೆಗೆ ಅನಾಮಧೇಯ ಹೆಸರಲ್ಲಿ ಪುಸ್ತಕ ವಿಮರ್ಶೆ ಕ್ಷೇತ್ರದಲ್ಲೂ ಮಿಂಚಿದವರು. ಜಾನಕಿ, ಗಿರೀಶ್ ರಾವ್ ಹತ್ವಾರ್, ಎಚ್. ಗಿರೀಶ್ ರಾವ್, ಸತ್ಯವ್ರತ ಹೊಸಬೆಟ್ಟು ಕಾವ್ಯನಾಮದಲ್ಲಿ ಸಾಹಿತ್ಯ ರಚಿಸಿದ್ದಾರೆ.

ಕನ್ನಡ ಪ್ರಭ ಪತ್ರಿಕೆಯ ಬಾಲಿವುಡ್ ಗಾಸಿಪ್, ಹಾಯ್ ಬೆಂಗಳೂರು ಪತ್ರಿಕೆಯ ರವಿ ಕಾಣದ್ದು, ರವಿ ಕಾಣದ್ದು – ರವಿ ಕಂಡದ್ದು, ಜಾನಕಿ ಕಾಲಂ, ಜಾನಕಿ ಕಾಲಂ – ೧, ಜಾನಕಿ ಕಾಲಂ – ೨, ಜೋಗಿಮನೆ, ಜೋಗಿ ಕಾಲಂ, ರೂಪರೇಖೆ, ಸೀಕ್ರೆಟ್ ಡೈರಿ, ಮಹಾನಗರ, ನೋಟ್‌ಬುಕ್, ಅರೆಬೆಳಕು, ಅಂಕಣ ಗಾಳಿಯಾಟ ಇವರ ಅಂಕಣಗಳು.

ನದಿಯ ನೆನಪಿನ ಹಂಗು, ಯಾಮಿನಿ, ಚಿಟ್ಟೆ ಹೆಜ್ಜೆ ಜಾಡು, ಹಿಟ್ ವಿಕೆಟ್, ಊರ್ಮಿಳಾ, ಮಾಯಾ ಕಿನ್ನರಿ, ಗುರುವಾಯನಕೆರೆ, ದೇವರ ಹುಚ್ಚು, ಚಿಕ್ಕಪ್ಪ, ಚೈತ್ರ ವೈಶಾಖ ವಸಂತ, ಲೈಫ್ ಈಸ್ ಬ್ಯೂಟಿಫುಲ್, ಎಲ್ಲಾನು ಮಾಡುವುದು ಹೊಟ್ಟೆಗಾಗಿ, ವಿರಹದ ಸಂಕ್ಷಿಪ್ತ ಪದಕೋಶ, ತಂದೆತಾಯಿ ದೇವರಲ್ಲ!, ಬೆಂಗಳೂರು, ಬಿ ಕ್ಯಾಪಿಟಲ್, ಪ್ರೀತಿಸುವವರನ್ನು ಕೊಂದುಬಿಡಿ ಇವರ ಕೃತಿಗಳು. ಹಲಗೆ ಬಳಪ (ಹೊಸ ಬರಹಗಾರರಿಗೆ ಪಾಠ), ಎಂ. ರಂಗರಾವ್ (ವ್ಯಕ್ತಿ ಚಿತ್ರ), ಸದಾಶಿವ ಅವರ ಆಯ್ದ ಕತೆಗಳು (ಸಂಪಾದಿತ), ಜೋಗಿ ರೀಡರ್ (ಜೋಗಿ ಬರಹಗಳ ವಾಚಿಕೆ – ಸಂಧ್ಯಾರಾಣಿ ಸಂಪಾದಿತ), ಮಸಾಲೆ ದೋಸೆಗೆ ಕೆಂಪು ಚಟ್ನಿ, ಮಹಾನಗರ, ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ, ಕತೆ ಚಿತ್ರಕಥೆ ಸಂಭಾಷಣೆ ಸಾಹಿತ್ಯಗಳನ್ನು ರಚಿಸಿದ್ದಾರೆ.

ಶಕ್ತಿ, ಯಶವಂತ ಚಿತ್ತಾಲರ ಶಿಕಾರಿ, ಬೆಳ್ಳಿತೆರೆ, ಗುಪ್ತಗಾಮಿನಿ, ಪ್ರೀತಿ ಇಲ್ಲದ ಮೇಲೆ, ಬಂದೇ ಬರತಾವ ಕಾಲ, ಶುಭಮಂಗಳ ಧಾರವಾಹಿಗೆ ಸಂಭಾಷಣೆ ಬರೆದಿದ್ದಾರೆ. ಅನಂತಮೂರ್ತಿ ಅವರ ಮೌನಿ ಕತೆ ತೆರೆ ಕಂಡಾಗ, ಅದಕ್ಕೆ ಚಿತ್ರಕತೆ, ಸಂಭಾಷಣೆ ರಚಿಸಿದ್ದಾರೆ.

ಸೀಳುನಾಲಿಗೆ, ಜೋಗಿ ಕತೆಗಳು, ಕಾಡು ಹಾದಿಯ ಕತೆಗಳು, ರಾಯಭಾಗದ ರಹಸ್ಯ ರಾತ್ರಿ, ಜರಾಸಂಧ, ಸೂಫಿ ಕತೆಗಳು, ಕಥಾ ಸಮಯ, ಫೇಸ್‌ಬುಕ್ ಡಾಟ್ ಕಾಮ್, ನಾಳೆ ಬಾ ಕಥೆಗಳು. ಇವರ ಕಾಡಬೆಳದಿಂಗಳು ಕಥೆ ಚಲನಚಿತ್ರವಾಗಿದ್ದು, ರಾಜ್ಯ ಸರ್ಕಾರದ ಅತ್ಯುತ್ತಮ ಕತೆ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಮಯೂರ, ತರಂಗ, ತುಷಾರ, ಸುಧಾ, ಕನ್ನಡಪ್ರಭ, ಪ್ರಜಾವಾಣಿ, ಓ ಮನಸೇ ಮುಂತಾದ ಪತ್ರಿಕೆಗಳಲ್ಲಿ ಕತೆಗಳನ್ನು ಪ್ರಕಟಿಸಿದ್ದಾರೆ. ಲಂಕೇಶ್ ಪತ್ರಿಕೆಗೆ ಪ್ರಬಂಧ ಬರೆಯುತ್ತಿದ್ದರು. ಇಷ್ಟೇ ಅಲ್ಲ ಪ್ರವಾಸ ಪ್ರೇಮಿಯಾಗಿಯೂ ಕಾಣಿಸಿಕೊಂಡವರು ಜೋಗಿ. ಅಮೆರಿಕಾ, ಶ್ರೀಲಂಕಾ, ನೇಪಾಳ, ಥೈಲ್ಯಾಂಡ್, ಸಿಂಗಾಪುರ್, ಮಲೇಷಿಯಾ ಮೊದಲಾದ ದೇಶಗಳನ್ನು ಸುತ್ತಾಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.