ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ ಅ.30ರಂದು ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಉಪ್ಪಿನಂಗಡಿಯಲ್ಲಿ ೩೦ ವರ್ಷ ಸೇರಿದಂತೆ ಒಟ್ಟು ೩೮ ವರ್ಷಗಳ ಸುದೀರ್ಘ ಸೇವೆ

ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲಾ ವಿಭಾಗದ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ದಿವಾಕರ ಆಚಾರ್ಯ ಗೇರುಕಟ್ಟೆ ಅ. ೩೦ರಂದು ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ.

ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ೧೯೯೧ರಿಂದ ವಿಜ್ಞಾನ-ಗಣಿತ ಶಿಕ್ಷಕರಾಗಿ ೧೮ ವರ್ಷ ಹಾಗೂ ೨೦೦೮ರಿಂದ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದು, ಇಲ್ಲಿ ಒಟ್ಟು ೩೦ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

೩೮ ವರ್ಷಗಳ ಸುದೀರ್ಘ ಸೇವೆ:
ದಿವಾಕರ ಆಚಾರ್ಯರವರು ೧೯೮೨ರಲ್ಲಿ ಉಡುಪಿಯ ಬೆಳ್ಳಂಪಳ್ಳಿ ಶ್ರೀ ವಿಶ್ವಕರ್ಮ ಪ್ರೌಢ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ೨ ವರ್ಷ ಸೇವೆ ಸಲ್ಲಿಸಿ, ಬಳಿಕ ೧೯೮೫ರ ಸೆಪ್ಟಂಬರ್ ೫ರಂದು ಬೆಳ್ತಂಗಡಿ ತಾಲ್ಲೂಕಿನ ಪುತ್ತಿಲದ ಸರ್ಕಾರಿ ಪ್ರೌಢ ಶಾಲೆಗೆ ಸರ್ಕಾರಿ ಸೇವೆಗೆ ನೇಮಕವಾದರು. ೫ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ೧೯೯೧ರಲ್ಲಿ ಉಪ್ಪಿನಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ವರ್ಗಾವಣೆ ಹೊಂದಿ ಆಗಮಿಸಿದವರು ಇದೀಗ ನಿವೃತ್ತಿ ಹೊಂದುತ್ತಿದ್ದಾರೆ. ಒಟ್ಟು ೩೮ ವರ್ಷಗಳ ಕಾಲ ಶಿಕ್ಷಕರಾಗಿ ದುಡಿದ ಅನುಭವ ಇವರಿಗಿದೆ.

ಬೆಳ್ತಂಗಡಿ ತಾಲ್ಲೂಕು ಗೇರುಕಟ್ಟೆಯ ಸ್ವರ್ಣಶಿಲ್ಪಿ ಕೆ. ಮೋನಪ್ಪ ಆಚಾರ್ಯ ಮತ್ತು ವಾರಿಜ ದಂಪತಿಯ ತೃತೀಯ ಪುತ್ರನಾಗಿ ೧೯೬೧ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೇರುಕಟ್ಟೆ, ಪ್ರೌಢ ಶಿಕ್ಷಣವನ್ನು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಪ್ರೌಢ ಶಾಲೆ, ಬಿ.ಎಸ್ಸಿ., ಪದವಿಯನ್ನು ಉಜಿರೆ ಯಸ್.ಡಿ.ಯಂ.

ಕಾಲೇಜಿನಲ್ಲಿ ಹಾಗೂ ಬಿ.ಇಡಿ. ತರಬೇತಿಯನ್ನು ಮಂಗಳೂರಿನ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪಡೆದಿರುತ್ತಾರೆ. ಮೈಸೂರು ಹಿಂದಿ ಪ್ರಚಾರ ಪರಿಷತ್ತು ಬೆಂಗಳೂರು ಇವರು ನಡೆಸುವ “ಹಿಂದಿರತ್ನ” ಪರೀಕ್ಷೆಯಲ್ಲಿ ರಾಜ್ಯದಲ್ಲಿ ೪ನೇ ರ್‍ಯಾಂಕ್ ಗಳಿಸಿದ್ದಾರೆ.

ವಿಜ್ಞಾನ ಕೇಂದ್ರದ ಕಾರ್ಯನಿರ್ವಾಹಕರಾಗಿ:
೧೯೯೯ರಲ್ಲಿ ಶಿಕ್ಷಣ ಇಲಾಖೆಯಿಂದ ಸ್ಥಾಪನೆಗೊಂಡ ಪುತ್ತೂರು ವಿಧಾನ ಸಭಾ ಕ್ಷೇತ್ರದ ವಿಜ್ಞಾನ ಕೇಂದ್ರದ ಕಾರ್ಯನಿರ್ವಾಹಕರಾಗಿ ವಿದ್ಯಾರ್ಥಿಗಳಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಮತ್ತು ಸಮುದಾಯಕ್ಕೆ ವೈಜ್ಞಾನಿಕ ಜಾಗೃತಿಯ ಕಾರ್ಯಕ್ರಮವನ್ನು ತಾಲೂಕಿನಾದ್ಯಂತ ಸಂಘಟಿಸಿದ್ದಾರೆ. ಕಾರ್ಯಕ್ರಮಗಳ ಅನುಷ್ಠಾನದಲ್ಲ್ಲಿ ದ.ಕ. ಜಿಲ್ಲೆಯ ೯ ವಿಜ್ಞಾನ ಕೇಂದ್ರಗಳಲ್ಲಿ ಉಪ್ಪಿನಂಗಡಿಯ ವಿಜ್ಞಾನ ಕೇಂದ್ರವು ಸತತವಾಗಿ ೫ ಬಾರಿ “ಉತ್ತಮ ವಿಜ್ಞಾನಕೇಂದ್ರ” ಎಂದು ಪ್ರಶಸ್ತಿ ಪಡೆದುಕೊಂಡಿದೆ. ೧೯೯೮ರಲ್ಲಿ ವಿಜ್ಞಾನ ಸಂಘದ ಸಂಚಾಲಕರಾಗಿದ್ದಾಗ ಸಂಸ್ಥೆಯ ವಿಜ್ಞಾನ ಸಂಘವು ದ.ಕ. ಜಿಲ್ಲೆಯ “ಉತ್ತಮ ವಿಜ್ಞಾನ ಸಂಘ”ವೆಂಬ ಪ್ರಶಸ್ತಿಯನ್ನು ಪಡೆದಿರುತ್ತದೆ.

ಬರಹಗಾರರಾಗಿ:
ಪರಿಸರ ಜಾಗೃತಿಗಾಗಿ ವೃಕ್ಷ ಸಂರಕ್ಷಣಾ ಕಿರುನಾಟಕ, ವಿಜ್ಞಾನ ಸಂಬಂಧಿ ಭಾಷಣಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ. ಕಲೆ-ಸಾಹಿತ್ಯ-ವಿಜ್ಞಾನ-ಸಿನಿಮಾ ಸಂಬಂಧಿಸಿ ಇವರ ಲೇಖನಗಳು ನಾಡಿನ ದಿನಪತ್ರಿಕೆ-ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಂಪಿ ವಿಶ್ವ ವಿದ್ಯಾನಿಲಯದ ವಿಜ್ಞಾನ ಸಂಗಾತಿ, ಡಿ.ಯಸ್.ಇ.ಆರ್.ಟಿ. ಬೆಂಗಳೂರು ಪ್ರಕಟಿಸುತ್ತಿರುವ ವಿಜ್ಞಾನ ವಾಣಿಯಲ್ಲಿ ಇವರ ವೈಜ್ಞಾನಿಕ ಲೇಖನಗಳು ಪ್ರಕಟವಾಗಿದೆ. ಮುಂಗಾರು ಮತ್ತು ಕನ್ನಡ ಪ್ರಭ ಪತ್ರಿಕೆಗಳಲ್ಲಿ ಹವ್ಯಾಸಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆ ಪ್ರಕಟಿಸುವ “ಕಣಾದ” ವಿಜ್ಞಾನ ಸಂಚಿಕೆಗಾಗಿ ಇವರು ಬರೆದ “ದೂರಸಂವೇದಿ ಉಪಗ್ರಹಗಳು ಮತ್ತು ಅನ್ವಯಗಳು” (೨೦೦೬)
“ಮನುಕುಲಕ್ಕೆ ಮಾರಕ ಸೀಸದ ನಂಜು” (೨೦೦೭) ಪ್ರಬಂಧಗಳಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸ್ಮಾರಕ ಪ್ರಶಸ್ತಿ ಲಭಿಸಿದೆ. ದೇವರ ಕಾಡುಗಳ ಮಹತ್ವದ ಬಗ್ಗೆ ಬರೆದ “ಪವಿತ್ರ ವನಗಳು” ಮತ್ತು ಪ್ರಾಕೃತಿಕ ವಿಕೋಪಗಳ ನಿರ್ವಹಣೆ ಲೇಖನಗಳು ವಿಶೇಷ ಪುರಸ್ಕಾರಕ್ಕೆ ಪಾತ್ರವಾಗಿದೆ.

ಸಂಪನ್ಮೂಲ ವ್ಯಕ್ತಿಯಾಗಿ:
ಪ್ರಾಥಮಿಕ-ಪ್ರೌಢಶಾಲಾ ಶಿಕ್ಷಕರಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಉಪಗ್ರಹ ಆಧಾರಿತ ತರಬೇತಿಯಲ್ಲಿ ಜಿಲ್ಲಾ ಮಾರ್ಗದರ್ಶಕರಾಗಿ, ಇಕೋಕ್ಲಬ್‌ಗಳ ಮಾಸ್ಟರ್ ಟ್ರೈನರ್ ಆಗಿ, ಪ್ರೌಢ ಶಾಲಾ ಗಣಿತ ಚೈತನ್ಯ ತರಬೇತಿ ಸಂಚಿಕೆ ಮತ್ತು ವಿಜ್ಞಾನ ಕೇಂದ್ರಗಳ ನಿರ್ವಾಹಕರ ಕೈಪಿಡಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ. ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವತಿಯಿಂದ ಹೈದರಾಬಾದಿನಲ್ಲಿ ೧೦ ದಿನ ಮತ್ತು ನವದೆಹಲಿಯಲ್ಲಿ ೨೫ ದಿನಗಳ ಕಾಲ ಜರಗಿದ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ರೂ ೪೦ ಸಾವಿರ ಮೌಲ್ಯದ ಶ್ರವ್ಯ-ದೃಶ್ಯ ಸಾಧನಗಳನ್ನು ಸಂಸ್ಥೆಗೆ ಒದಗಿಸಿದ್ದಾರೆ. ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ರೂ ೩,೦೦,೦೦೦ ಮೊತ್ತದ ಉಪಕರಣಗಳನ್ನು ಪಡೆದು ಪ್ರಯೋಗ ಶಾಲೆಯ ಉನ್ನತೀಕರಣವನ್ನು ಮಾಡಿರುತ್ತಾರೆ.

ಯಕ್ಷಗಾನ ಕಲಾವಿದರಾಗಿ:
ಯಕ್ಷಗಾನ ಇವರ ಮುಖ್ಯ ಹವ್ಯಾಸ. ಕಳೆದ ೪ ದಶಕಗಳಿಂದ ಯಕ್ಷಕೂಟ (ರಿ) ನಾಳ, ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸಂಘ, ನಾಳ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ ಗೇರುಕಟ್ಟೆ, ಯಕ್ಷಸಂಗಮ ಉಪ್ಪಿನಂಗಡಿ, ಶ್ರೀ ಆಂಜನೇಯ ಯಕ್ಷಗಾನ ಸಂಘ ಬೊಳುವಾರು, ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಯಕ್ಷಗಾನ ಸಂಘಗಳ ತಾಳಮದ್ದಳೆಗಳಲ್ಲಿ ಮತ್ತು ಬಯಲಾಟಗಳಲ್ಲಿ ಕಲಾವಿದರಾಗಿ ಮತ್ತು ಸಂಘಟಕರಾಗಿ ಹಲವಾರು ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗುವ ರೇಡಿಯೋ ತಾಳಮದ್ದಳೆಯಲ್ಲಿ ಪಾಲ್ಗೊಂಡಿದ್ದಾರೆ. ಯಕ್ಷಭಾರತಿ (ರಿ) ಕನ್ಯಾಡಿ ಧರ್ಮಸ್ಥಳ ಇದರ ಕಾರ್ಯದರ್ಶಿಯಾಗಿ ೩ನೇ ಅವಧಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನವನ್ನು ಸ್ಥಾಪಿಸಿ ಸುಮಾರು ೪೦ ಯಕ್ಷಗಾನ ಕಲಾವಿದರನ್ನು ಸನ್ಮಾನಿಸುವ ಕಾರ್ಯ ಮಾಡಿದ್ದಾರೆ. ಸೌಹಾರ್ದ ಯಕ್ಷಗಾನ ಸಮಿತಿ ಉಪ್ಪಿನಂಗಡಿ, ಬಾರ್ಯ ಪ್ರತಿಷ್ಠಾನ ಪುತ್ತೂರು ಇದರ ಸಂಚಾಲಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸ್ವಯಂ ಸೇವಾ ಸಂಸ್ಥೆಗಳೊಂದಿಗೆ:

ಸಂಜೀವಿನಿ ಪರಿಸರ ಜಾಗೃತಿ ಸಮಿತಿ ಇಳಂತಿಲ, ಕನ್ನಡ ಬಳಗ ಇಳಂತಿಲ, ಹಿರಿಯ ವಿದ್ಯಾರ್ಥಿ ಸಂಘ ಗೇರುಕಟ್ಟೆ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಳದ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ, ಬೆಳ್ತಂಗಡಿ ತಾಲೂಕು ವಿಶ್ವಕರ್ಮಾಭ್ಯುದಯ ಸಭಾದ ಕಾರ್ಯದರ್ಶಿಯಾಗಿ ಪ್ರಸ್ತುತ ಪುತ್ತೂರು ವಲಯದ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪಡೆದ ಪುರಸ್ಕಾರ-ಪ್ರಶಸ್ತಿಗಳು:
ಚಿತ್ರದುರ್ಗದ ಪುಟಾಣಿ ವಿಜ್ಞಾನ ಪತ್ರಿಕಾ ಬಳಗದಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದ ಉತ್ತಮ ವಿಜ್ಞಾನ ಸಂಘಟಕ ಪ್ರಶಸ್ತಿ ಹಾಗೂ ೨೦೦೦ರಲ್ಲಿ ಜರಗಿದ ರಾಜ್ಯ ಮಟ್ಟದ ಪ್ರಥಮ ವಿಜ್ಞಾನ ಸಮಾವೇಶದಲ್ಲಿ “ವಿಜ್ಞಾನ ಮಿತ್ರ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರೌಢ ಶಾಲಾ ಶಿಕ್ಷಕರ ವಿಜ್ಞಾನ ವಿಚಾರ ಗೋಷ್ಠಿ ಸ್ಪರ್ಧೆಗಳಲ್ಲಿ ಬಹುಮಾನಿತರಾಗಿದ್ದಾರೆ. ಇವರ ಶೈಕ್ಷಣಿಕ-ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರಗಳ ಸಾಧನೆಗಳನ್ನು ಗುರುತಿಸಿ ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ೨೦೦೮ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೦೯ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ, ೨೦೧೦ರಲ್ಲಿ ಭಾರತ ಸರ್ಕಾರವು ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ನೀಡಿದೆ. ಉತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಸತತವಾಗಿ ಪಡೆದ ಇವರು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಈ ರೀತಿಯ ಸಾಧನೆ ಮಾಡಿದ ಮೊದಲಿಗರಾಗಿದ್ದಾರೆ.

ಮಂಗಳೂರಿನ ಶ್ರೀನಿವಾಸ ಶಿಕ್ಷಣ ಸಮೂಹ ಸಂಸ್ಥೆಗಳ ರಜತ ಮಹೋತ್ಸವ ಸಂದರ್ಭದಲ್ಲಿ ಎ. ಶ್ಯಾಮರಾವ್ ಫೌಂಡೇಶನ್‌ನ ಅತ್ಯ್ತುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಈ ಪ್ರಶಸ್ತಿ ಪಡೆದ ಸರ್ಕಾರಿ ಶಿಕ್ಷಣ ಸಂಸ್ಥೆಯ ಮೊದಲ ಶಿಕ್ಷಕರೆಂಬ ಕೀರ್ತಿಯು ಇವರದ್ದಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರು ಹಾಗೂ ದ.ಕ. ಮತ್ತು ಉಡುಪಿ ಜಿಲ್ಲೆ, ಶೃಂಗೇರಿ, ಬೆಂಗಳೂರು, ಹುಬ್ಬಳ್ಳಿ ಹಾಗೂ ಕೊಯಮುತ್ತೂರುಗಳಲ್ಲಿ ಸನ್ಮಾನಗಳು ಸಂದಿವೆ.

೬೪ ವರ್ಷಗಳ ಇತಿಹಾವಿರುವ ಉಪ್ಪಿನಂಗಡಿ ಸ.ಪ. ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಮಾನ್ಯ ಶಾಸಕರು, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರು ಮತ್ತು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಮತ್ತು ಹಿರಿಯ ವಿದ್ಯಾರ್ಥಿಗಳು ಮತ್ತು ದಾನಿದಳ ನೆರವಿನಿಂದ ಒದಗಿಸುವಲ್ಲಿ ಪ್ರಯತ್ನಿಸಿದ್ದಾರೆ. ಪ್ರಸ್ತುತ ಪ್ರೌಢ ಶಾಲಾ ವಿಭಾಗಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪುತ್ತೂರು ಶಾಸಕರ ಅನುದಾನದಿಂದ ರೂಪಾಯಿ ೧ ಕೋಟಿಗಿಂತಲೂ ಹೆಚ್ಚಿನ ಅನುದಾನದಲ್ಲಿ ೬ ಕೊಠಡಿಗಳ ಕಾಮಗಾರಿ ಹಾಗೂ ನರೇಗ ಜಂಟಿ ಯೋಜನೆಯಲ್ಲಿ ಶಾಲಾ ಜಮೀನಿನ ಆವರಣ ಗೋಡೆಯ ನಿರ್ಮಾಣ ಪ್ರಗತಿಯಲ್ಲಿದೆ. ಇದಕ್ಕೆ ಸ್ಪಂದಿಸಿದ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಎಸ್.ಡಿ.ಎಂ.ಸಿ. ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಪತ್ನಿ ಶ್ರೀಮತಿ ಭಾರತಿ ಯಂ.ಯಲ್. ಅಳದಂಗಡಿ ಸ.ಪ. ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಇವರು ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಶಾಲಾ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗ ಪಡೆಯುವಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಮಹಿಳಾ ತಾಳಮದ್ದಳೆ ಕಾರ್ಯಕ್ರಮದಲ್ಲಿ ಅರ್ಥಧಾರಿಯಾಗಿ ಭಾಗವಹಿಸುತಿದ್ದಾರೆ. ಅವಳಿ ಮಕ್ಕಳಾದ ಸ್ವಾತಿ ಮುಂಬೈಯ ಆಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಮತ್ತು ಸನತ್ ಮಣಿಪಾಲದ ಎಮ್.ಐ.ಟಿ.ಯಲ್ಲಿ ಎಂ.ಟೆಕ್. ಪದವಿ ಪೂರೈಸಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.