ನ.1ಕ್ಕೆ ಮಾತ್ರ ‘ಕನ್ನಡದ ನೆನಪು’ ಸೀಮಿತವಾಗದಿರಲಿ – ಕನ್ನಡ ದಿನನಿತ್ಯ ಜನಮಾನಸದಲ್ಲಿ ನಲಿದಾಡಲಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನವಂಬರ್ ತಿಂಗಳು ಕನ್ನಡಿಗರ ಪಾಲಿಗೆ ಒಂದು ವಿಶಿಷ್ಟ ಹಾಗೂ ಅತ್ಯಂತ ಸಂಭ್ರಮದ ತಿಂಗಳು. ಈ ತಿಂಗಳು ಕರ್ನಾಟಕದ ಪಾಲಿಗೆ ನಾಡಹಬ್ಬದ ಸಂಭ್ರಮವನ್ನು ತಂದುಕೊಡುತ್ತದೆ. ನಾಡು – ನುಡಿಯ ಸ್ಮರಣೆ ಮಾಡಿಕೊಳ್ಳುವುದರೊಂದಿಗೆ ಕನ್ನಡ ನಾಡು-ನುಡಿಯನ್ನು ಇನ್ನಷ್ಟು ಸಂಪದ್ಭರಿತ, ಶ್ರೀಮಂತಗೊಳಿಸುವ ಬಗೆ ಹೇಗೆ, ನಾಡು ಎದುರಿಸುತ್ತಿರುವ ಸಮಸ್ಯೆಗಳು ಯಾವುವು, ಕನ್ನಡಿಗರು ಮಾಡಬೇಕಾದುದೇನು ಮುಂತಾದ ಹತ್ತು ಹಲವು ಸಂಗತಿಗಳ ಕುರಿತು ಗಂಭೀರ ಸ್ವರೂಪದ ಚರ್ಚೆ, ಸಮಾಲೋಚನೆ, ಚಿಂತನೆಗಳು ನಡೆಯಬೇಕಾದ ಸಂದರ್ಭ ಈ ತಿಂಗಳು ನಡೆಯುತ್ತದೆ. ಒಟ್ಟಿನಲ್ಲಿ ಕನ್ನಡದ ಕುರಿತಾದ ಚಿಂತನೆಗಳು ಮತ್ತೊಮ್ಮೆ ಕನ್ನಡ ನಾಡಿನಲ್ಲಿ ಪ್ರಾರಂಭವಾಗಿದ್ದು, ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಕನ್ನಡದ, ಕನ್ನಡ ನಾಡಿನ ಹಾಗೂ ಕನ್ನಡಿಗರ ಕುರಿತ ಒಂದು ಸಣ್ಣ ಇಣುಕುನೋಟ…
ಕನ್ನಡ ರಾಜ್ಯೋತ್ಸವ ಸಾಗಿ ಬಂದ ಹಾಜ್ಜೆಗಳು:
ಪಶ್ಚಿಮ ಘಟ್ಟಗಳಿಂದ ಸಮೃದ್ಧವಾಗಿರುವ ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಭಾರತದ 6ನೇ ಅತಿ ದೊಡ್ಡ ಹಾಗೂ ಜನಸಂಖ್ಯೆ ಆಧಾರದಲ್ಲಿ 8ನೇ ಅತಿ ದೊಡ್ಡ ರಾಜ್ಯವಾಗಿದೆ. ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಆಗುಂಬೆ ಹೀಗೆ ಹಲವಾರು ಪ್ರವಾಸಿ ತಾಣಗಳ ತವರೂರು ನಮ್ಮ ಕನ್ನಡ ನಾಡು. ಇನ್ನು ಮೈಸೂರು ನಗರ ನೂರಾರು ವರ್ಷ ಇತಿಹಾಸ ಹೊಂದಿರುವ ಸಾಂಸ್ಕೃತಿಕ ವೈಭವಕ್ಕೆ ಜೀವಂತ ಸಾಕ್ಷಿಯಾಗಿದೆ. ಕದಂಬರು, ಹೊಯ್ಸಳರು, ಚೋಳರು, ನಿಜಾಮರು ಹಾಗೂ ಒಡೆಯರ್ ರಾಜರು ಆಳಿದ ಭೂಮಿ ಕರ್ನಾಟಕ. ಭಾರತ ದೇಶದಲ್ಲಿ ರಾಜ್ಯಗಳ ವಿಲೀನಿಕರಣ ಪ್ರಕ್ರಿಯೆಯು 19ನೇ ಶತಮಾನದ ಮಧ್ಯಭಾಗದಲ್ಲಿ ಆರಂಭಗೊಂಡಿತ್ತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಂದಿನ ಮೈಸೂರು ಮಹಾರಾಜರಾಗಿದ್ದ ಒಡೆಯರ್ ಅವರು ತಮ್ಮ ರಾಜ್ಯವನ್ನು ಭಾರತ ದೇಶದೊಂದಿಗೆ ವಿಲೀನ ಮಾಡಲು ಒಪ್ಪಿದರು. ದಕ್ಷಿಣ ಭಾರತದಲ್ಲಿ ಹರಡಿದ್ದ ಕನ್ನಡ ಭಾಷಿಕರ ಎಲ್ಲ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವು 1956 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಕೂರ್ಗ್, ಮದರಾಸು, ಹೈದರಾಬಾದ್ ಮತ್ತು ಬಾಂಬೆ ಸಂಸ್ಥಾನದ ಕೆಲ ಪ್ರದೇಶಗಳು ಈ ಪ್ರಕ್ರಿಯೆಯಲ್ಲಿ ಮೈಸೂರು ರಾಜ್ಯಕ್ಕೆ ಸೇರಿಸಲ್ಪಟ್ಟವು.1950ರಲ್ಲಿ ಭಾರತ ಗಣರಾಜ್ಯವಾದ ನಂತರ ಭಾಷೆಯ ಆಧಾರದಲ್ಲಿ ದೇಶದ ಪ್ರಾಂತ್ಯಗಳನ್ನು ರಾಜ್ಯಗಳಾಗಿ ಪುನರ್ವಿಂಗಡನೆ ಮಾಡಲಾಗಿತ್ತು. 1956ರ ನವೆಂಬರ್ 1ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ರಾಜ್ಯದ ಉತ್ತರ ಭಾಗದ ಬಹಳಷ್ಟು ಜನರಿಗೆ ಮೈಸೂರು ರಾಜ್ಯ ಎಂಬ ಹೆಸರಿನ ಬದಲಾಗಿ ಬೇರೆ ಹೆಸರನ್ನು ರಾಜ್ಯಕ್ಕೆ ಇಡುವ ಇರಾದೆ ಇತ್ತು. ಹೀಗಾಗಿ 1973ರ ನವೆಂಬರ್ 1ರಂದು ಮೈಸೂರು ರಾಜ್ಯ ಎಂಬುದು ಅಧಿಕೃತವಾಗಿ ಕರ್ನಾಟಕ ರಾಜ್ಯವಾಯಿತು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ಸಂದರ್ಭದ ಸವಿ ನೆನಪಿಗಾಗಿಯೇ ಪ್ರತಿವರ್ಷ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
‘ಕರ್ನಾಟಕ’ ಹೆಸರಿನ ಹಿನ್ನಲೆ:
ಕರ್ನಾಟಕ ಪದದ ಮೂಲದಬಗ್ಗೆ ಹಲವು ಅಭಿಪ್ರಾಯಗಳಿದ್ದರೂ ಸಾಮಾನ್ಯವಾಗಿ “ಕರು” ಮತ್ತು “ನಾಡು” ಸೇರಿ “ಎತ್ತರದ ಭೂಮಿ” ಎಂಬರ್ಥದ ಕರುನಾಡು ಪದದಿಂದ ಉಗಮವಾಗಿದೆ ಎನ್ನಲಾಗಿದೆ. ಕರು ಎಂದರೆ ಕಪ್ಪು, ನಾಡು ಎಂದರೆ ಪ್ರದೇಶ ಎಂದು ಅರ್ಥೈಸಿಕೊಂಡರೆ ಬಯಲು ಸೀಮೆಯ ಕಂಡು ಕಪ್ಪು ಹತ್ತಿ ಮಣ್ಣಿನಿಂದಾಗಿ ಹೆಸರು ಬಂದಿದೆ ಎಂದೂ ಹೇಳಲಾಗುತ್ತದೆ. ಕೃಷ್ಣಾ ನದಿಯ ದಕ್ಷಿಣಕ್ಕೆ ಎರಡೂ ಕಡೆ ಜಲಾವೃತವಾದ ಪ್ರದೇಶವಾದ್ದರಿಂದ ಬ್ರಿಟಿಷರ ಕಾಲದಲ್ಲಿ ಕಾರ್ನಾಟಿಕ್ ಅಥವಾ ಕರ್ನಾಟಕ ಹೆಸರು ಬಳಕೆಗೆ ಬಂತು ಎಂಬ ಹಿನ್ನಲೆ ಇತಿಹಾಸದಲ್ಲಿ ಕಾಣಬಹುದು.
ಕನ್ನಡ ‘ಬಾವುಟ’ದ ಇತಿಹಾಸ:
ಕರ್ನಾಟಕಕ್ಕೆ ತನ್ನದೇ ಆದ ಪ್ರತ್ಯೇಕ ಬಾವುಟವಿದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯೋತ್ಸವ ದಿನದಂದು ಕರ್ನಾಟಕ ರಾಜ್ಯಾದ್ಯ೦ತ ಮಹದಾನ೦ದ ಮತ್ತು ಚಟುವಟಿಕೆಯಿಂದ ಆಚರಿಸಲಾಗುತ್ತದೆ.
ರಾಜ್ಯಕ್ಕೊಂದು ವಿಶೇಷ ಭಾವುಟ ಬೇಕೆಂಬ ಅವಶ್ಯಕತೆಯನ್ನು ಮನಗೊಂಡ ಕನ್ನಡದ ಹೋರಾಟಗಾರರಾದ ಎಂ ರಾಮಮೂರ್ತಿಗಳು ಹಳದಿ ಹಾಗೂ ಕೆಂಪು ಬಣ್ಣ ಬಳಸಿ, ಬಾವುಟವನ್ನು ಸಿದ್ದಪಡಿಸಿದರು. ಮೂಲತಃ ಹಳದಿ ಬಣ್ಣವು ಕನ್ನಡಾಂಬೇಯ ಆರಿಶಿನ ಮತ್ತು ಕುಂಕುಮವನ್ನು ಸೂಚಿಸುತ್ತದೆ ಹಾಗೂ ಹಳದಿ ಬಣ್ಣವು ಶಾಂತಿ, ಸೌಹಾರ್ದತೆ ಸೂಚಿಸಿದರೆ ಕೆಂಪು ಬಣ್ಣ ಕ್ರಾಂತಿಯ ಸಂದೇಶ ನೀಡುತ್ತದೆ. ಕನ್ನಡಿಗರೂ ಶಾಂತಿಗೆ ಬದ್ಧ, ಯುದ್ಧಕ್ಕೂ ಸಿದ್ಧ ಎಂಬ ಸಂದೇಶವನ್ನು ನೀಡುತ್ತದೆ. ಆರಂಭದಲ್ಲಿ ಕನ್ನಡ ಬಾವುಟ ಸಿದ್ಧಗೊಂಡಾಗ ಬಾವುಟದ ಮಧ್ಯೆ ಕರ್ನಾಟಕದ ಭೂಪಟ ಮತ್ತು ಅದರ ನಡುವಿನಲ್ಲಿ ಏಳು ಕವಲುಗಳುಳ್ಳ ತೆನೆಯ ಚಿತ್ರವಿತ್ತು. ಮುದ್ರಿಸಲು ಸ್ವಲ್ಪ ಕಷ್ಟವಾಗುತ್ತಿದ್ದರಿಂದ ಅದನ್ನು ತೆಗೆದು ಕೇವಲ ಹಳದಿ ಮತ್ತು ಕೆಂಪು ಬಣ್ಣವನ್ನು ಮಾತ್ರ ಉಳಿಸಿಕೊಳ್ಳಲಾಯಿತು.
ಜಾಗತಿಕವಾಗಿಯೂ ಕನ್ನಡ ರಾಜ್ಯೋತ್ಸವದ ಆಚರಣೆ:
ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕದಲ್ಲಿ ಸಂಭ್ರಮದಿಂದ ಆಚರಿಸುವುದಲ್ಲದೇ ಜಾಗತಿಕವಾಗಿಯೂ ಕನ್ನಡ ರಾಜ್ಯೋತ್ಸವದ ಆಚರಣೆ ನಡೆಯುತ್ತದೆ. ಮುಂಬಯಿ, ದೆಹಲಿ ಮುಂತಾದ ಹಲವು ರಾಜ್ಯಗಳಲ್ಲಿ ಕನ್ನಡಿಗರು ಜಾಸ್ತಿಯಿರುವ ಕಡೆಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾದ, ಸಿಂಗಾಪುರ್, ದುಬೈ , ಮಸ್ಕಟ್, ದಕ್ಷಿಣ ಕೊರಿಯಾ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ. ಜೊತೆಗೆ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಪಡಿಸಲಾಗುತ್ತದೆ. ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ.
ನ.1ಕ್ಕೆ ಮಾತ್ರ ‘ಕನ್ನಡದ ನೆನಪು’ ಸೀಮಿತವಾಗದಿರಲಿ: 
ಕನ್ನಡ ರಾಜ್ಯೋತ್ಸವವೆನ್ನುವುದು ಒಂದು ದಿನದ ವಾರ್ಷಿಕ ಜಾತ್ರೆಯಾಗಿರುವುದು ಕಹಿಯಾದರೂ ಸತ್ಯ. ನ.1ಕ್ಕೆ ಕನ್ನಡ ಹಬ್ಬದ ಸಂಭ್ರಮ, ಕನ್ನಡದ ಕುರಿತ ಹೋರಾಟದ ಮಾತುಗಳು, ಕನ್ನಡಕ್ಕಾಗಿ ಬದುಕುವ ಎಂಬ ಭಾಷಣಕ್ಕೆ ಸೀಮಿತಗೊಂಡಿದ್ದು, ಉಳಿದ ಸಂದರ್ಭದಲ್ಲಿ ಕನ್ನಡ ಉಳಿಸುವ ಪ್ರಯತ್ನ, ಚಿಂತನೆ ನಡೆಯದಿರುವುದು ಸತ್ಯ. ನವೆಂಬರ್ ತಿಂಗಳು ಮುಗಿದ ಬಳಿಕ ಕನ್ನಡ- ನಾಡು ನುಡಿಯ ಕುರಿತು ನಾವ್ಯಾರೂ ತಲೆಕೆಡಿಸಿಕೊಳ್ಳಲು ಹೋಗದಿರುವುದು ದುರದೃಷ್ಟಕರ. ಬೆಳಗಾವಿ ಗಡಿಗಳಲ್ಲಿ, ಕಾಸರಗೋಡು ಎಂಬ ಜಿಲ್ಲೆಯಲ್ಲಿ ಕನ್ನಡ, ಕನ್ನಡಿಗರಿಗೆ ಆಗುವ ಅವಮಾನಕ್ಕೆ ಮಿಡಿಯುವ, ಅದಕ್ಕೆ ದಿಟ್ಟವಾಗಿ ಉತ್ತರಿಸುವ ಯತ್ನಗಳು ಬರೇ, ಕನ್ನಡ ಸಂಘಟನೆ ಹಾಗೂ ಸರ್ಕಾರದ ಕರ್ತವ್ಯವೆಂದು ನಾವು ಅಂದುಕೊಂಡಿದ್ದೇವೆ. ಕನ್ನಡ ನಾಡು-ನುಡಿ ಕುರಿತ ಎಚ್ಚರ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ಅದು ವರ್ಷ ಪೂರ್ತಿ ಎಚ್ಚರವಾಗಿರಲಿ. ಕನ್ನಡ ಕುರಿತ ಕಾಳಜಿ, ಕಳವಳ ಹೀಗೆ ನಿರಂತರವಾಗಿ ನಮ್ಮೆದೆಯೊಳಗಿದ್ದರೆ ನಮ್ಮ ನಾಡು-ನುಡಿಯ ಕಂಪು ಎಲ್ಲೆಡೆ ಪಸರಿಸಲಿ… ನಾವೆಲ್ಲರೂ ಕನ್ನಡಿಗರು ಎಂದು ಹೆಮ್ಮೆಯಿಂದ ಹೇಳಿಕೊಂಡು, ಕನ್ನಡವನ್ನು ಕಾಪಾಡುತ್ತ ನಿಜವಾದ ಭಾಷಪ್ರೇಮವನ್ನು ಬೆಳಿಸಿಕೊಳ್ಳುವ ಅನಿವಾರ್ಯತೆ ಇಂದು ಪ್ರತಿಯೊಬ್ಬ ಕನ್ನಡಿಗರಿಗಿದೆ. ರಾಷ್ಟ್ರಕವಿ ಕುವೆಂಪು ತಮ್ಮ ಕವನದಲ್ಲಿ, ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂದು ವರ್ಣಿಸಿದಂತೆ ಭಾರತಾಂಬೆಯ ಪುತ್ರಿ ಕರ್ನಾಟಕ ಮಾತೆಯಾಗಿದ್ದು, ಅಂತಹ ಮಾತೆಯನ್ನು ಸಮಸ್ಯೆಗಳು ಬರದಂತೆ ಸಲಹುವ, ಪೋಷಿಸುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗನದ್ದಾಗಿದೆ ಎಂದರೆ ತಪ್ಪಲ್ಲ. ನಾವು ನಮ್ಮ ದಿನನಿತ್ಯದ ಆಗಹೋಗುಗಳಲ್ಲಿ, ವ್ಯವಹಾರದಲ್ಲಿ ಕನ್ನಡವನ್ನು ಬಳಸಿದರೆ, ನಮ್ಮ ಮಕ್ಕಳಿಗೆ ಕನ್ನಡದ ಮಹತ್ವವನ್ನು ತಿಳಿಸಿದರೆ, ನಾವು ಪ್ರತಿಯೊಬ್ಬರಲ್ಲಿ ಕನ್ನಡದಲ್ಲಿ ಮಾತನಾಡಿದರೆ, ಮನೆಗೊಂದು ಕನ್ನಡ ದಿನಪತ್ರಿಕೆ ತರಿಸಿದರೆ, ತಮ್ಮ ಮಕ್ಕಳಿಗೆ ಕನ್ನಡದ ಪುಸ್ತಕವೊಂದನ್ನು ಕೊಡುಗೆಯಾಗಿ ನೀಡಿದರೆ ನಾವು ನಮ್ಮ ನೆಲೆಯಲ್ಲಿ ಕನ್ನಡವನ್ನು ಉಳಿಸಬಹುದು. ಮಾತ್ರವಲ್ಲ, ಬೆಳೆಸಬಹುದು ಎಂಬುದು ಅಕ್ಷರಶ: ಸತ್ಯ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು…

 


ಲಕ್ಷ್ಮಿಕಾಂತ ರೈ ಅನಿಕೂಟೇಲ್
ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ,
ವಿವೇಕಾನಂದ ಕಾನೂನು ಮಹಾವಿದ್ಯಾಲಯ, ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.