ಫಿಲೋಮಿನಾದ ನಿವೃತ್ತ ಸ.ಪ್ರಾಧ್ಯಾಪಕಿ ಪ್ರೊ|ಕೊನ್ಸೆಪ್ಟ ಲೋಬೋರವರಿಗೆ 80ರ ಸಂಭ್ರಮ-ಹಿರಿಯ ವಿದ್ಯಾರ್ಥಿಗಳಿಂದ ಅಭಿನಂದನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದರ್ಬೆ ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಲ್ಲಿ ಸುಮಾರು ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿ ೨೦೦೦ರಲ್ಲಿ ನಿವೃತ್ತರಾದ ಸಹಾಯಕ ಪ್ರಾಧ್ಯಾಪಕಿ ಪ್ರೊ|ಕೊನ್ಸೆಪ್ಟ ಲೋಬೋರವರಿಗೆ ನ.೨ ರಂದು ೮೦ರ ಹುಟ್ಟುಹಬ್ಬದ ಸಂಭ್ರಮ. ಈ ನಿಟ್ಟಿನಲ್ಲಿ ಪ್ರೊ|ಕೊನ್ಸೆಪ್ಟ ಲೋಬೋರವರ ನೆಚ್ಚಿನ ಹಿರಿಯ ವಿದ್ಯಾರ್ಥಿಗಳು ಕೂರ್ನಡ್ಕದಲ್ಲಿನ ಅವರ ನಿವಾಸಕ್ಕೆ ಭೇಟಿಯಿತ್ತು ಪ್ರೊ|ಕೊನ್ಸೆಪ್ಟ ಲೋಬೋರವರ ಜನುಮದಿನಕ್ಕೆ ತುಂಬು ಹೃದಯದಿಂದ ಶುಭ ಹಾರೈಸಿದ್ದಾರೆ.


ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ|ಲಿಯೋ ನೊರೋನ್ಹಾರವರು ಮಾತನಾಡಿ, ಕಲ್ಯಾಣಪುರದ ಸೈಂಟ್ ಮಿಲಾಗ್ರಿಸ್ ಕಾಲೇಜಿನಿಂದ ನಾನು ಫಿಲೋಮಿನಾ ಕಾಲೇಜಿಗೆ ಆಗಮಿಸುವ ಮೊದಲೇ ಮೇಡಂ ಕೊನ್ಸೆಪ್ಟರವರು ನಿವೃತ್ತಿ ಹೊಂದಿದ್ದರು. ಮೇಡಂ ಕೊನ್ಸೆಪ್ಟರವರು ಸಸ್ಯಶಾಸ್ತ್ರ ವಿಭಾಗದ ಅಧ್ಯಾಪಿಕೆಯಾಗಿದ್ದು, ಅವರ ಈ ಮನೆಯ ಪರಿಸರದಲ್ಲಿ ವಿವಿಧ ಮರಗಳನ್ನು ಬೆಳೆಸುವ ಮೂಲಕ ನಿಜಕ್ಕೂ ಓರ್ವ ಸಸ್ಯಪ್ರೇಮಿಯಾಗಿ ಗುರುತಿಸಿಕೊಂಡಿದ್ದಾರೆ ಮಾತ್ರವಲ್ಲದೆ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿ ಅವರುಗಳನ್ನು ನಿಜಕ್ಕೂ ಪೋಷಿಸಿದ್ದಾರೆ. ಎಂಟು ದಶಕ ಕಂಡಿರುವ ಮೇಡಂ ಕೊನ್ಸೆಪ್ಟರವರು ಇನ್ನೂ ಎರಡು ದಶಕ ಬಾಳಿ ಶತಾಯುಷಿಯಾಗಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದರು.

ಮೇಡಂ ಕೊನ್ಸೆಪ್ಟ ಲೋಬೋರವರ ವಿದ್ಯಾರ್ಥಿಗಳಾದ ನೊಣಾಲು ಜೈರಾಜ್ ಭಂಡಾರಿ, ಕುಂಜಾಡಿ ಪ್ರಕಾಶ್ಚಂದ್ರ ರೈ ಮೊಗೇರುಗುತ್ತು, ಎನ್.ಈಶ್ವರ ಭಟ್ ಸಜಂಕುಮೂಲೆ ಕಬಕ, ಯು.ಕೃಷ್ಣಮೂರ್ತಿ ಕಲ್ಲಜಾಲು ವಿಟ್ಲ, ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ, ಲಕ್ಷ್ಮೀನಾರಾಯಣ, ಸುದೇಶ್‌ರವರು ಮಾತನಾಡಿ, ಮೇಡಂ ಕೊನ್ಸೆಪ್ಟ ಲೋಬೋರವರು ಕೇವಲ ಶಿಕ್ಷಕಿ ಮಾತ್ರವಲ್ಲ, ಅವರು ನಮಗೆಲ್ಲ ಮಾತೃಶಕ್ತಿಯಾಗಿದ್ದಾರೆ. ತನ್ನ ನಗುಮುಖದಿಂದಲೇ ನಮ್ಮನ್ನು ಪ್ರೋತ್ಸಾಹಿಸಿ ಹರಸಿದ್ದರಿಂದಲೇ ಇಂದು ನಾವು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆದಿದ್ದೇವೆ. ಮೇಡಂ ಕೊನ್ಸೆಪ್ಟರವರು ಇಂದಿಗೂ ನೆನಪಿನ ಶಕ್ತಿಯನ್ನು ಹೊಂದಿರುವುದು ನಮಗೆಲ್ಲ ಖುಶಿಯ ವಿಚಾರ. ಉಳಿದ ಶಿಕ್ಷಕರಿಗಿಂತ ಮೇಡಂ ಕೊನ್ಸೆಪ್ಟರವರು ತುಂಬಾ ಭಿನ್ನವಾಗಿ ಕಾಣುತ್ತಾರೆ. ಅವರಲ್ಲಿನ ಮೃದು ಸ್ವಭಾವ, ನಗುಮುಖ, ಹೆಲ್ಪಿಂಗ್ ನೇಚರ್ ಬಹಳ ಇಷ್ಟವಾಗುವಂತಹುದು. ಅದರಲ್ಲೂ ಮುಖ್ಯವಾಗಿ ಅವರು ಸಂಸ್ಥೆಯನ್ನು ಹಾಗೂ ವಿದ್ಯಾರ್ಥಿಗಳನ್ನು ಪ್ರೀತಿಸುವ ಪರಿ ನಿಜಕ್ಕೂ ಹೆಮ್ಮೆಪಡುವಂತಹುದು ಎಂದು ಹೇಳಿ ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿನ ಅನುಭವದ ಘಟನೆಗಳನ್ನು ಮೆಲುಕು ಹಾಕಿಕೊಂಡರು. ಫಿಲೋಮಿನಾ ಕಾಲೇಜು ಬಿಎ ವಿಭಾಗದ ಹಿರಿಯ ವಿದ್ಯಾರ್ಥಿ ಡಿಂಬ್ರಿಗುತ್ತು ಗಣೇಶ್ ರೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

1965ರಲ್ಲಿ ಸೇವೆ ಆರಂಭ:
ಮೂಲತಃ ಮೂಡುಫೆರಾರ್ ನಿವಾಸಿಯಾಗಿರುವ ದಿ.ಝೇವಿಯರ್ ಲೋಬೋ ಹಾಗೂ ದಿ.ಕ್ಯಾಥರೀನ್ ಡಿ’ಕುನ್ಹರವರ ಐವರು ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದ ಕೊನ್ಸೆಪ್ಟ ಲೋಬೋರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನ ಪಡೀಲು ಸೈಂಟ್ ಜೋಸೆಫ್ಸ್ ಎಲಿಮೆಂಟರಿ ಸ್ಕೂಲ್‌ನಲ್ಲಿ, ಪ್ರೌಢಶಿಕ್ಷಣವನ್ನು ಮಂಗಳೂರಿನ ನಾಗುರಿ ಕಪಿತಾನಿಯೋ ಸ್ಕೂಲ್‌ನಲ್ಲಿ, ಪದವಿ ಶಿಕ್ಷಣವನ್ನು ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ, ಸಸ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾನಿಲಯದಲ್ಲಿ ಪೂರೈಸಿದ್ದರು. ೧೯೬೫, ಜುಲೈ ೧೩ರಂದು ಫಿಲೋಮಿನಾ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ನೇಮಕಗೊಂಡು, ಸುಮಾರು ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿ ೨೦೦೦, ಮಾರ್ಚ್ ೩೧ರಂದು ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತಿ ಹೊಂದಿದ್ದರು.

ಫಿಲೋಮಿನಾ, ನೆಚ್ಚಿನ ವಿದ್ಯಾರ್ಥಿಗಳನ್ನು ಎಂದಿಗೂ ಮರೆಯಲಾರೆ:
ಪ್ರೊ|ಕೊನ್ಸೆಪ್ಟ ಲೋಬೋರವರು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸಂಚಾಲಕರಾಗಿ ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರಿಂದ ಹಿಡಿದು ವಂ|ಸ್ಟ್ಯಾನಿ ಲೋಬೋ, ಪ್ರಾಂಶುಪಾಲರಾಗಿ ವಂ|ಸೆರಾವೋ, ವಂ|ಕ್ಯಾಸ್ಟಲಿನೋ, ವಂ|ಜೆ.ಬಿ ಡಿ’ಸೋಜಾ, ವಂ|ಮೆಂಡೋನ್ಸಾ, ವಂ|ಫ್ರೆಡ್ರಿಕ್ ಮಸ್ಕರೇನ್ಹಸ್, ಸಹೋದ್ಯೋಗಿಗಳಾಗಿ ಡಾ|ರವಿಚಂದ್ರನ್, ಪ್ರೊ|ಅಣ್ಣಾಜಿ ರಾವ್, ಸ್ವತಃ ಪ್ರೊ|ಕೊನ್ಸೆಪ್ಟರವರ ಶಿಷ್ಯರಾದ ಡಾ|ಪ್ರಸನ್ನ ಕುಮಾರ್ ರೈ, ಕು|ಶಕುಂತಳಾ, ಆಡಳಿತ ಸಿಬ್ಬಂದಿಯಾಗಿ ಸಿರಿಲ್ ವಾಸ್, ಜೋನ್ ಡಿ’ಸೋಜರವರು ಸೇವೆ ಸಲ್ಲಿಸುತ್ತಿದ್ದರು. ಕೊನ್ಸೆಪ್ಟ ಲೋಬೋರವರು ತಮ್ಮ ವೃತ್ತಿ ಜೀವನದಲ್ಲಿ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದ್ದು ಈ ಪೈಕಿ ಪುತ್ತೂರಿನ ವೈದ್ಯರಾದ ಡಾ.ರಮಾದೇವಿ, ಬೂಡಿಯಾರು ಸಂಜೀವ ರೈರವರು ಕೊನ್ಸೆಪ್ಟ ಲೋಬೋರವರ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳಾಗಿದ್ದಾರೆ. ಮೇಡಂ ಕೊನ್ಸೆಪ್ಟ ಲೋಬೋರವರ ೧೯೮೨ರ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದ ಆನಂದ ರೈಯವರು ನನ್ನ ಕೇರ್ ಟೇಕರ್ ಆಗಿದ್ದಾರೆ ಮಾತ್ರವಲ್ಲದೆ ಫಿಲೋಮಿನಾ ವಿದ್ಯಾಸಂಸ್ಥೆ ಹಾಗೂ ನನ್ನ ನೆಚ್ಚಿನ ವಿದ್ಯಾರ್ಥಿಗಳನ್ನು ನಾನು ಎಂದಿಗೂ ಮರೆಯಲಾರೆ ಎಂದು ಪ್ರೊ|ಕೊನ್ಸೆಪ್ಟ ಲೋಬೋರವರು `ಸುದ್ದಿ’ಯೊಂದಿಗೆ ಖುಶಿಯನ್ನು ಹಂಚಿಕೊಂಡಿದ್ದಾರೆ.

ಹಲವಾರು ಪ್ರಶಸ್ತಿಗಳು:
ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ಪುತ್ತೂರಿನ ಪ್ರಥಮ ಮಹಿಳಾ ಲೆಕ್ಚರರ್ ಎಂಬಂತೆ ಪ್ರೊ|ಕೊನ್ಸೆಪ್ಟ ಲೋಬೊರವರನ್ನು ಗುರುತಿಸಿ ಸನ್ಮಾನಿಸಿದ್ದಾರೆ. ರೋಟರಿ ಕ್ಲಬ್ ಪುತ್ತೂರು ಸಿಟಿ ವತಿಯಿಂದ ೨೦೧೮-೧೯ರಲ್ಲಿ ವಿಶ್ವ ಮಹಿಳೆಯರ ದಿನಾಚರಣೆಯ ಪ್ರಯುಕ್ತ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ನೀಡಿದ ಉತ್ತಮ ಸೇವೆಗಾಗಿ ಸನ್ಮಾನ, ಮಾಯಿದೆ ದೇವುಸ್ ಚರ್ಚ್‌ನ ಸ್ತ್ರೀ ಸಂಘಟನೆ ಹಾಗೂ ಡೊನ್ ಬೊಸ್ಕೊ ಕ್ಲಬ್ ವತಿಯಿಂದ ಪುರಸ್ಕಾರ, ೧೯೯೨ರ ಬ್ಯಾಚ್‌ನ ರಾಕೇಶ್ ಶೆಟ್ಟಿರವರ ನೇತೃತ್ವದಲ್ಲಿ ೩೩ ಹಿರಿಯ ವಿದ್ಯಾರ್ಥಿಗಳಿಂದ ಪುರಸ್ಕಾರ, ಪುತ್ತೂರು ಕೇಬಲ್ ನೆಟ್‌ವರ್ಕ್‌ನ ಅಬೂಬಕ್ಕರ್‌ರವರಿಂದ ಅಭಿನಂದನೆ, ತನ್ನ ನಿವೃತ್ತಿ ಸಮಯದಲ್ಲಿ ಫಿಲೋಮಿನಾ ಕಾಲೇಜು ವತಿಯಿಂದ ಪುರಸ್ಕಾರ ಎಲ್ಲವೂ ನನಗೆ ಸರಿಯಾಗಿ ನೆನಪಿದೆ ಮಾತ್ರವಲ್ಲದೆ ೨೦೧೩ರಲ್ಲಿ ಮಾಣಿ ಸಮೀಪ ನಡೆದ ಅಪಘಾತವೊಂದರಲ್ಲಿ ತಾನು ಬದುಕುಳಿದದ್ದು ಅದೃಷ್ಟವೇ ಸರಿ ಎಂಬುದು ಕೊನ್ಸೆಪ್ಟ ಲೋಬೋರವರು ತನ್ನ ೮೦ರ ಇಳಿ ವಯಸ್ಸಿನಲ್ಲೂ ನೆನಪು ಶಕ್ತಿಯನ್ನು ಹೊಂದಿರುವುದು ವಿಶೇಷವಾಗಿದೆ. ಮೇಡಂ ಕೊನ್ಸೆಪ್ಟ ಲೋಬೋರವರ ಕೇರ್ ಟೇಕರ್ ಆನಂದ ರೈ ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿ ನೊಣಾಲು ಜೈರಾಜ್ ಭಂಡಾರಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಪ್ರಥಮ ಡಸ್ಟರ್, ಚಾಕ್ ಪೀಸ್‌ಗಳು
ನೆನಪಿಗಾಗಿ ಈಗಲೂ ನನ್ನಲ್ಲಿದೆ…
ಮಂಗಳೂರು, ಕಡಬ, ವಾಮಂಜೂರು ಈ ಭಾಗದಲ್ಲಿ ವೃತ್ತಿ ನಿರ್ವಹಿಸಲು ಕರೆ ಬಂದರೂ ನನಗೆ ಪುತ್ತೂರೇ ಬೇಕು ಎಂದು ಹಠ ಹಿಡಿದವಳು ನಾನು. ನನ್ನ ವೃತ್ತಿ ಜೀವನದಲ್ಲಿ ರಜೆ ಹಾಕಲು ನನಗೆ ಮನಸ್ಸು ಬರುತ್ತಿರಲಿಲ್ಲ. ಯಾಕೆಂದರೆ ಪೋಷಕರು ತಮ್ಮ ಮಕ್ಕಳನ್ನು ಯಾವ ಕಷ್ಟದಲ್ಲಿ ಕಾಲೇಜಿಗೆ ಕಳುಹಿಸುತ್ತಿದ್ದಾರೆ ಎಂಬುದರ ಅರಿವು ನನಗಿತ್ತು. ಆದ್ದರಿಂದ ನನಗೆ ನನ್ನ ಫಿಲೋಮಿನಾ ಸಂಸ್ಥೆ ಹಾಗೂ ವಿದ್ಯಾರ್ಥಿಗಳು ಈಗಲೂ ಆಸ್ತಿಯಾಗಿದ್ದಾರೆ. ನನ್ನ ಮನೆಗೆ ಹಾಗೂ ಫಿಲೋಮಿನಾ ವಿದ್ಯಾಸಂಸ್ಥೆಗೆ ಬಹಳ ದೂರವಿರಲಿಲ್ಲ. ಸಂಸ್ಥೆಯ ಮೇಲಿನ ಅಭಿಮಾನದಿಂದ ೧೯೬೫ರಲ್ಲಿ ತಾನು ಕಾಲೇಜಿನಲ್ಲಿ ವೃತ್ತಿ ನಿರ್ವಹಿಸುತ್ತಿದ್ದ ಆರಂಭದ ಪ್ರಥಮ ಡಸ್ಟರ್(ಕರಿ ಹಲಗೆ ಒರೆಸುವ) ಹಾಗೂ ಚಿಕ್ಕ ಚಿಕ್ಕ ಚಾಕ್ ಪೀಸ್‌ಗಳನ್ನು ಇಂದಿಗೂ ನಾನು ವೃತ್ತಿ ಜೀವನದ ನೆನಪಿಗಾಗಿ ಜೊತೆಯಾಗಿ ಇಟ್ಟುಕೊಂಡಿದ್ದೇನೆ. -ಪ್ರೊ|ಕೊನ್ಸೆಪ್ಟ ಲೋಬೋ, ವಿಶ್ರಾಂತ ಸಸ್ಯಶಾಸ್ತ್ರ ವಿಭಾಗದ ಸ.ಪ್ರಾಧ್ಯಾಪಕರು, ಫಿಲೋಮಿನಾ ಕಾಲೇಜು

ಸನ್ಮಾನ…
ಈ ಸಂದರ್ಭದಲ್ಲಿ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ|ಲೀಯೊ ನೊರೋನ್ಹಾ ಹಾಗೂ ಮೇಡಂ ಕೊನ್ಸೆಪ್ಟ ಲೋಬೋರವರ ನೆಚ್ಚಿನ ಹಿರಿಯ ವಿದ್ಯಾರ್ಥಿಗಳು ಮೇಡಂ ಕೊನ್ಸೆಪ್ಟ ಲೋಬೋರವರಿಗೆ ಶಾಲು ಹೊದಿಸಿ, ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಮೇಡಂ ಕೊನ್ಸೆಪ್ಟರವರಿಗೆ ದೇವರು ಆಯುರಾರೋಗ್ಯವನ್ನು ಕರುಣಿಸಲಿ ಎಂದು ಹಾರೈಸುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲಾಯಿತು. ಬಳಿಕ ಮಾತನಾಡಿದ ಮೇಡಂ ಕೊನ್ಸೆಪ್ಟ ಲೋಬೋರವರು, ತನ್ನ ಹುಟ್ಟುಹಬ್ಬಕ್ಕೆ ಹಾರೈಸಿದ ತನ್ನ ನೆಚ್ಚಿನ ಹಿರಿಯ ವಿದ್ಯಾರ್ಥಿಗಳನ್ನು ಅಭಿನಂದಿಸಿ ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದು ಹಾರೈಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.