ಸರ್ವೆ ಇಲಾಖೆಯಲ್ಲಿ ಹಣಕೊಟ್ಟರೆ ಮಾತ್ರ ಕೆಲಸ, ಮಿನಿ ವಿಧಾನಸೌಧದಲ್ಲಿ ಮಧ್ಯವರ್ತಿಗಳ ತುಂಬಿದ್ದಾರೆ – ಆರ್ಯಾಪು ಗ್ರಾಮಸಭೆಯಲ್ಲಿ ಆರೋಪ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು; ಭೂ ಮಾಪನಾ ಇಲಾಖೆಯಲ್ಲಿ ಹಣ ನೀಡಿದರೆ ಮಾತ್ರ ಎಲ್ಲಾ ಕೆಲಸಗಳು ನಡೆಯುತ್ತದೆ. ಹಣ ನೀಡದವರಿಗೆ ಯಾವುದೇ ಕೆಲಸಗಳು ನಡೆಯುವುದಿಲ್ಲ. ಮಿನಿ ವಿಧಾನ ಸೌಧದಲ್ಲಿರುವ ಇಲಾಖೆಯ ಕಚೇರಿಯಲ್ಲಿ ಮಧ್ಯವರ್ತಿಗಳು ತುಂಬಿದ್ದಾರೆ ಎಂದು ಆರ್ಯಾಪು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾ.ಪಂನ ೨೦೨೦-೨೧ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ನ.೮ರಂದು ಅಧ್ಯಕ್ಷೆ ಸರಸ್ವತಿಯವರ ಅಧ್ಯಕ್ಷತೆಯಲ್ಲಿ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮಸ್ಥ ಶುಭಕರ ರಾವ್ ಮಾತನಾಡಿ, ಭೂ ಮಾಪನ ಇಲಾಖೆಯಲ್ಲಿ ಯಾವುದೇ ಕೆಲಸಗಳು ಆಗಬೇಕಾದರೆ ಹಣ ನೀಡಬೇಕು. ಹಣ ನೀಡದಿದ್ದರೆ ಯಾವುದೇ ಕೆಲಸಗಳು ನಡೆಯುವುದಿಲ್ಲ. ಪ್ಲಾಟಿಂಗ್ ನಡೆಸಲು ಅರ್ಜಿ ಕೊಟ್ಟು ೧೦ ವರ್ಷ ಕಳೆದರೂ ಇನ್ನೂ ಆಗಿಲ್ಲ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಪುರುಷೋತ್ತಮ ರೈ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಹಣ ಕೊಟ್ಟರೆ ೨೪ ಗಂಟೆಯಲ್ಲಿ ಕೆಲಸ ಆಗುತ್ತದೆ. ಹಣ ನೀಡದಿದ್ದರೆ ೨೪ ತಿಂಗಳು ಕಳೆದರೂ ಆಗುವುದಿಲ್ಲ. ಮಿನಿ ವಿಧಾನ ಸೌಧದಲ್ಲಿಯೂ ನೇರವಾಗಿ ಹೋದರೆ ಕೆಲಸಗಳು ಆಗುವುದಿಲ್ಲ. ಅಲ್ಲಿರುವ ಎಲ್ಲಾ ಇಲಾಖೆಗಳಲ್ಲಿಯೂ ಮಧ್ಯವರ್ತಿಗಳು ತುಂಬಿದ್ದಾರೆ. ಜನಪ್ರತಿನಿಧಿಗಳಾಗಿ ನಮಗೆ ಹೋಗಲು ನಾಚಿಕೆಯಾಗುತ್ತಿದೆ. ನಾವು ಹೋದಾಗಲು ಮಧ್ಯವರ್ತಿಗಳಂತೆ ನೋಡುತ್ತಾರೆ. ಹೀಗಾಗಿ ನಾವು ಇತರರಲ್ಲಿ ನಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದೇವೆ. ಶಾಸಕರ ಕಚೇರಿಯು ಮಿನಿ ವಿಧಾನ ಸೌಧದಲ್ಲಿದ್ದು, ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕರು ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಣ ಮಾಡಬೇಕು ಎಂದು ಒತ್ತಾಯಿಸಿದ ಅವರು ಸರಕಾರಿ ಅಧಿಕಾರಿಗಳಿಗೆ ವೇತನವಿದೆ. ನಿವೃತ್ತಿ ಬಳಿಕ ಪಿಂಚನಿ ಬರುತ್ತಿದ್ದರೂ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.

ಗೂಡಂಗಡಿ ತೆರವಿಗೆ ನ್ಯಾಯಕೊಡಿ
ಕಳೆದ ಎಂಟು ತಿಂಗಳ ಹಿಂದೆ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಮಾರ್ಜಿನ್ ನಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ನಾನು ಬಡ ಬಡಗಿ. ನನ್ನ ಜೀವನಕ್ಕೆ ಅದೇ ದಾರಿ. ಅನಧಿಕೃತ ಕಟ್ಟಡ ಎಂಬ ಕಾರಣಕ್ಕೆ ನನ್ನ ಕಟ್ಟಡವನ್ನು ತೆರವುಗೊಳಿಸಲಾಗಿದೆ. ರಸ್ತೆ ಮಾರ್ಜಿನ್, ಅನಧಿಕೃತ ಕಟ್ಟಡಗಳು ಬಡವರಿಗೆ ಮಾತ್ರವೇ ಎಂದು ಪ್ರಶ್ನಿಸಿದ ಅವರು ನನಗೆ ನ್ಯಾಯಕೊಡಬೇಕು ಎಂದು ರವಿಯವರು ಆಗ್ರಹಿಸಿದರು. ಪ್ರತಿಕ್ರಿಯಿಸಿದ ಮಾರ್ಗದರ್ಶಿ ಅಧಿಕಾರಿಕಾರಿಯಾಗಿದ್ದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಸಾರ್ವಜನಿಕ ದೂರು ಬಂದಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ಸೂಚನೆಯಂತೆ ಸರಕಾರಿ ಜಾಗದಲ್ಲಿ ಅನಧಿಕೃತವಾಗಿದ್ದ ಕಟ್ಟಡಗಳನ್ನು ಮಾತ್ರವೇ ತೆರವುಗೊಳಿಸಲಾಗಿದೆ. ವರ್ಗ ಜಾಗದಲ್ಲಿದ್ದ ಕಟ್ಟಡಗಳನ್ನು ತೆರವುಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವಿಚಾರದಲ್ಲಿ ಸಭೆಯಲ್ಲಿ ಚರ್ಚೆಗಳು ನಡೆದು ಅನಧಿಕೃತ ಕಟ್ಟಡ ತೆರವುಗೊಳಿಸುವ ನಿಯಮ ಆರ್ಯಾಪು ಗ್ರಾಮಕ್ಕೆ ಸೀಮಿತವೇ? ಇತರ ಗ್ರಾಮಗಳಲ್ಲಿ ಅನಧಿಕೃತ ಕಟ್ಟಡಗಳಿಲ್ಲವೇ ಎಂದು ಗ್ರಾಮಸ್ಥರು ಪ್ರಶ್ನಿಸಿ ಆಕ್ರೋಷ ವ್ಯಕ್ತಪಡಿಸಿದರು.

ಗ್ರಾಮಸ್ಥರ ಬೇಡಿಕೆಗಳು:
ಈಗಾಗಲೇ ಬೇಡಿಕೆ ಸಲ್ಲಿಸಿರುವ ಪೋಡಿ ಮುಕ್ತ ಗ್ರಾಮವನ್ನು ಆರ್ಯಾಪು ಹಾಗೂ ಕುರಿಯ ಗ್ರಾಮದಲ್ಲಿ ಶೀಘ್ರವೇ ಮಾಡಬೇಕು. ಭತ್ತದ ಕೃಷಿಯನ್ನೂ ಉದ್ಯೋಗ ಖಾತರಿ ಯೋಜನೆಗೆ ಒಳಪಡಿಸಬೇಕು. ಪರ್ಯಾಯ ಇಂದನ ಬಳಕೆಗೆ ಪೂರಕವಾಗಿ ಜೈವಿಕ ಇಂದನದ ಬೀಜ ಉತ್ಪತ್ತಿ ಮಡುವ ಗಿಡ ನೆಡಲು ಅರಣ್ಯ ಇಲಾಖೆ ಪ್ರೋತ್ಸಾಹ ನೀಡಬೇಕು. ವಿಪರೀತ ಮಳೆಯಾಗುತ್ತಿದ್ದು ಅಡಿಕೆ ಒಣಗಿಸಲು ಸೋಲಾರ್ ಗೂಡು ಅಳವಡಿಸಲು ಸರಕಾರ ಸಹಾಯಧನ ನೀಡಬೇಕು. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವುದು. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಲು ಜಿ.ಪಂ ಇಂಜಿನಿಯರಿಂಗ್ ಇಲಾಖೆಯಲ್ಲಿ ಖಾಲಿಯಿರುವ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡುವುದು, ಒಳತ್ತಡ್ಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗಬೇಕು, ನಿರ್ವಹಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಡಿನ ಒಳಭಾಗದಲ್ಲಿರುವ ವಿದ್ಯುತ್ ಲೈನ್‌ನ್ನು ಮುಖ್ಯರಸ್ತೆಗೆ ಬದಲಾಯಿಸುವುದು ಮೊದಲಾದ ಬೇಡಿಕೆಗಳನ್ನು ಗ್ರಾಮಸ್ಥರು ಸಲ್ಲಿಸಿದರು. ಗ್ರಾಮಸ್ಥರಾದ ಶುಭಕರ ರಾವ್, ರಾಮ್ ಪ್ರಸಾದ್, ಸಲಾಂ. ರಿಯಾಝ್, ರಾಮಣ್ಣ, ಜಾಣಪ್ಪ ನಾಯ್ಕ, ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.

ಆಶಾ ಕಾರ್ಯಕರ್ತೆಯರಿಗೆ ಪುಕ್ಸಟೆ ಗೌರವಧನ;
ಕೋವಿಡ್ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ಅವಿರತ ಶ್ರಮವಹಿಸಿದ್ದಾರೆ. ಅವರ ಮಹತ್ವ ಅರಿವಾಗಿರುವುದು ಕೋವಿಡ್ ಸಮಯದಲ್ಲಿ. ಆದರೂ ಅವರಿಗೆ ನೀಡುವ ಗೌರವ ಧನ ಪುಕ್ಸಟೆಯಾಗಿದೆ. ಶಾಸಕರು, ಸಂಸದರ ಗೌರವ ಧನ ಹೆಚ್ಚಿಸಲು ಇರುವ ಆಸಕ್ತಿ ಆಶಾ ಕಾರ್ಯಕರ್ತೆಯರಿಗಿಲ್ಲ. ಎಲ್ಲಾ ನೌಕರರಿಗೆ ಅನ್ವಯವಾಗುವ ನಿಯಮ ಆಶಾ ಕಾರ್ಯಕರ್ತೆಯರಿಗೆ ಅನ್ವಯವಾಗುವುದಿಲ್ಲವೇ ಎಂದು ಗ್ರಾಮಸ್ಥ ರಾಮ್ ಪ್ರಸಾದ್ ಪ್ರಶ್ನಿಸಿದರು. ಈ ಬಗ್ಗೆ ಸರಕಾರಕ್ಕೆ ಮನವಿ ಮಾಡುವುದಾಗಿ ನಿರ್ಣಯಿಸಲಾಯಿತು.

ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಗೀತಾ, ವಸಂತ, ದೇವಕಿ, ರುಕ್ಮಯ್ಯ ಮೂಲ್ಯ, ಶ್ರೀನಿವಾಸ ರೈ, ಪವಿತ್ರ ರೈ ಬಿ., ಚೇತನ್, ಕಸ್ತೂರಿ, ಹರೀಶ್ ನಾಯಕ್, ಗಿರೀಶ್, ನಳಿನಿ ಕುಮಾರಿ, ರಶೀದಾ ಬಿ., ರೇವತಿ ಬಿ.ಎಚ್., ಅಶೋಕ ನಾಯ್ಕ ಎನ್., ರಕ್ಷಿತಾ ಬಿ., ನಾಗೇಶ್ ಎಮ್., ಕಲಾವತಿ ಬಿ., ಯಾಕೂಬ್ ಸುಲೈಮಾನ್, ಪುರುಷೋತ್ತಮ ರೈ ಹಾಗೂ ವಿವಿಧ ಇಲಾಖಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆಯರು ನಾಡಗೀತೆ ಹಾಡಿದರು. ಲೆಕ್ಕ ಸಹಾಯಕ ಮೋನಪ್ಪ ಸ್ವಾಗತಿಸಿದರು. ಪಿಡಿಓ ನಾಗೇಶ್ ಎಂ ವರದಿ ವಾಚಿಸಿದರು. ಸದಸ್ಯ ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. Avinash

    ಹೌದು ಇದು ನಿಜ ಅಲ್ಲಿಗೆ ಹೋದ್ರೆ ಒಂದು ವಾರ ಬಿಟ್ಟು ಬನ್ನಿ ಅಂತಾರೆ ಒಂದು ವಾರ ಬಿಟ್ಟು ಬಂದ್ರೆ ಇನ್ನೊಂದು ವಾರ ಬಿಟ್ಟು ಬನ್ನಿ ಅಂತಾರೆ ಹೀಗೆ ಪ್ರತೀ ಸಲ ಹೋದಾಗಲು ಉತ್ತರ ಒಂದೇ ಒಂದು ವಾರ ಬಿಟ್ಟು ಬನ್ನಿ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.