ನೆ.ಮುಡ್ನೂರು ಬೆಳ್ಳಿಚೆಡವು ಪರಿಶಿಷ್ಟ ಪಂಗಡದ ಭಜನಾ ಮಂದಿರ ವಿವಾದ- ಸ್ಥಳಕ್ಕೆ ತಹಶೀಲ್ದಾರ್ ಭೇಟಿ-ಪರಿಶೀಲನೆ: ಗೊಂದಲಗಳಿಗೆ ತೆರೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಗ್ರಾ.ಪಂ ಅಧ್ಯಕ್ಷರ ನೇತೃತ್ವದಲ್ಲಿ 9 ಮಂದಿಯ ಸಮಿತಿ ರಚಿಸಲು ಸೂಚನೆ

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಬೆಳ್ಳಿಚೆಡವು ಎಂಬಲ್ಲಿ ಪರಿಶಿಷ್ಟ ಪಂಗಡದವರಿಗೆ ಸೇರಿದ ಸಮಾಜ ಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ತಹಶೀಲ್ದಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ದಾಖಲೆ ಪ್ರಕಾರ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಸ್ಥಳ ಇದಾಗಿದ್ದು ಇಲ್ಲಿ ಪರಿಶಿಷ್ಟ ಪಂಗಡ ಸಮುದಾಯದವರೇ ಹಕ್ಕುಸ್ವಾಮ್ಯ ಹೊಂದಿರುವ ಭಜನಾ ಮಂದಿರ ನಿರ್ಮಾಣ ಮಾಡುವ ಬಗ್ಗೆ ಸೂಚಿಸಿದ್ದಾರೆ. ದಾಖಲೆಗಳ ಆಧಾರದಲ್ಲಿ ಅಲ್ಲಿ ಪರಿಶಿಷ್ಟ ಪಂಗಡದವರ ಭಜನಾ ಮಂದಿರ ಎಂದಿದೆ. ಹಾಗಾಗಿ ಅದೇ ರೀತಿ ಕಾರ್ಯಚಟುವಟಿಕೆಗಳು ಮುಂದುವರಿಯಲಿ, ಯಾವುದೇ ಸಮಸ್ಯೆ, ಗೊಂದಲಗಳು ಬೇಡ ಎಂದು ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದರು. ಈ ಸಂದರ್ಭದಲ್ಲಿ ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಪಿಡಿಓ ಸಂದೇಶ್, ಗ್ರಾಮ ಕರಣಿಕ ಉಮೇಶ್ ಕಾವಡಿ, ಈಶ್ವರಮಂಗಲ ಹೊರಠಾಣೆಯ ಎಎಸ್ಸೈ ಜಗನ್ನಾಥ, ಗ್ರಾ.ಪಂ ಸದಸ್ಯರಾದ ಇಬ್ರಾಹಿಂ ಪಳ್ಳತ್ತೂರು, ರಾಮ ಮೇನಾಲ, ಚಂದ್ರಹಾಸ, ಪ್ರದೀಪ್ ಕುಮಾರ್, ಶಂಸುದ್ದೀನ್, ವೆಂಕಪ್ಪ ನಾಯ್ಕ, ರಿಯಾಝ್, ಲಲಿತಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಅಧ್ಯಕ್ಷರ ನೇತೃತ್ವದಲ್ಲಿ ಕಮಿಟಿ ರಚನೆ:
ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಅವರ ನೇತೃತ್ವದಲ್ಲಿ ಭಜನಾ ಮಂದಿರಕ್ಕೆ 9 ಮಂದಿಯ ಕಮಿಟಿ ರಚನೆ ಮಾಡಿಕೊಳ್ಳುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ. ಕಮಿಟಿಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಹುದ್ದೆಗಳು ಪರಿಶಿಷ್ಟ ಪಂಗಡದವರಿಗೆ ನೀಡಬೇಕಾಗಿದ್ದು ಇತರ ಸದಸ್ಯರನ್ನು ಸ್ಥಳೀಯವಾಗಿ ಇತರ ಸಮುದಾಯಗಳಿಂದಲೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಭಜನಾ ಮಂದಿರ ನಿರ್ಮಾಣವನ್ನು ಸ್ಥಳೀಯವಾಗಿ ಫಂಡ್ ಸಂಗ್ರಹಿಸಿ ನಿರ್ಮಾಣ ಮಾಡಬೇಕಾಗಿದ್ದು ಶಾಸಕರ ಕೋಟಾದಲ್ಲೂ ಅನುದಾನ ಒದಗಿಸಲು ಕೇಳಿಕೊಂಡು ಭಜನಾ ಮಂದಿರ ನಿರ್ಮಾಣ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.

ಏನಿದು ವಿವಾದ:
ಬೆಳ್ಳಿಚೆಡವು ಎಂಬಲ್ಲಿ ಸರಕಾರಿ ಕಟ್ಟಡವೊಂದಿದ್ದು ಅದು ಇತ್ತೀಚೆಗೆ ಮಾಯವಾಗಿತ್ತು. ಪರಿಶಿಷ್ಟ ಪಂಗಡದವರಿಗೆ ಸೇರಿದ ಸಮಾಜ ಮಂದಿರವನ್ನು ಕೆಡವಿ ಹಾಕಲಾಗಿದೆ ಎಂದು ಆರೋಪಿಸಿ ಕೆಲವು ಸದಸ್ಯರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಕ್ರಮಕ್ಕೆ ಆಗ್ರಹಿಸಿದ್ದರು. ಅಲ್ಲದೇ ಇಲ್ಲಿ ಹೊರಗಿನವರು ಸೇರಿಕೊಂಡು ಭೂಮಿಪೂಜೆ ಮಾಡಿದ್ದಾರೆ ಎನ್ನುವ ಆರೋಪವೂ ಸಾಮಾನ್ಯ ಸಭೆಯಲ್ಲಿ ಚರ್ಚೆಗೀಡಾಗಿತ್ತು. ಇತ್ತೀಚಿನ ದಾಖಲೆ ಪ್ರಕಾರ ಸ್ಥಳದಲ್ಲಿ ಭಜನ ಮಂದಿರವಿದ್ದ ಬಗ್ಗೆ ನಮೂದಾಗಿದೆ ಹಾಗಾಗಿ ಅಲ್ಲಿ ಭಜನಾ ಮಂದಿರವೇ ನಿರ್ಮಾಣವಾಗಬೇಕೆಂದು ಕೆಲವು ಸದಸ್ಯರು ಆಗ್ರಹಿಸಿದ್ದರು. ಭಜನಾ ಮಂದಿರವಾದರೂ, ಸಮಾಜ ಮಂದಿರವಾದರೂ ಆಗುವುದಕ್ಕೆ ನಮ್ಮ ಅಭ್ಯಂತರವಿಲ್ಲ ಆದರೆ ಪರಿಶಿಷ್ಟ ಪಂಗಡದವರು ಹಕ್ಕು ಹೊಂದಿರುವ ಕಟ್ಟಡವೇ ಅಲ್ಲಿ ನಿರ್ಮಾಣವಾಗಬೇಕೆಂದು ಇನ್ನೂ ಕೆಲವು ಸದಸ್ಯರು ಆಗ್ರಹಿಸಿದ್ದರು. ಸಾಮಾನ್ಯ ಸಭೆಯಲ್ಲಿ ವಿಚಾರ ಗಂಭೀರವಾಗಿ ಪ್ರತಿಧ್ವನಿಸಿದ್ದರಿಂದ ಕಂದಾಯ ಇಲಾಖೆ ಮುಖಾಂತರ ಪರಿಹಾರ ಕಂಡುಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು. ಆ ಪ್ರಕಾರ ಸ್ಥಳೀಯ ಗ್ರಾಮ ಕರಣಿಕರೂ ಸಭೆಗೆ ಬಂದು ದಾಖಲೆ ಪ್ರಕಾರ ಯಾವ ರೀತಿಯಿದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದರು. ಕೊನೆಗೆ ತಹಶೀಲ್ದಾರ್ ಅವರೇ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ ಎಂದು ತೀರ್ಮಾನಿಸಲಾಗಿತ್ತು.

ನೆ.ಮುಡ್ನೂರು ಗ್ರಾ.ಪಂ ವ್ಯಾಪ್ತಿಯ ಬೆಳ್ಳಿಚೆಡವು ಎಂಬಲ್ಲಿ ಪರಿಶಿಷ್ಟ ಪಂಗಡದವರಿಗೆ ಸೇರಿದ ಭಜನಾ ಮಂದಿರದ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗಿದೆ. ದಾಖಲೆ ಪ್ರಕಾರ ಅಲ್ಲಿ ಪರಿಶಿಷ್ಟ ಪಂಗಡದವರಿಗೆ ಸೇರಿದ ಭಜನಾ ಮಂದಿರ ನಿರ್ಮಾಣ ಮಾಡಲು ಅವಕಾಶವಿದ್ದು ಗ್ರಾ.ಪಂ ಅಧ್ಯಕ್ಷರ ನೇತೃತ್ವದಲ್ಲಿ 9 ಜನರ ಕಮಿಟಿ ರಚನೆ ಮಾಡಲು ತಿಳಿಸಿದ್ದೇನೆ. ಕಾನೂನಾತ್ಮಕವಾಗಿ ದಾಖಲೆ ಪ್ರಕಾರವೇ ಅಲ್ಲಿ ಎಲ್ಲವೂ ನಡೆಯುವಂತೆ ಸೂಚಿಸಲಾಗಿದೆ – ರಮೇಶ್ ಬಾಬು, ತಹಶೀಲ್ದಾರ್

ಬೆಳ್ಳಿಚೆಡವು ಪರಿಶಿಷ್ಟ ಪಂಗಡದ ಭಜನಾ ಮಂದಿರಕ್ಕೆ ಶೀಘ್ರದಲ್ಲೇ ಸಮಿತಿ ರಚಿಸಿ ಸಮಿತಿಗೆ 9 ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಕಾನೂನು ಪ್ರಕಾರ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಶಿಷ್ಟ ಪಂಗಡದವರಿಗೆ ಆದ್ಯತೆ ನೀಡಿ ಸಮಿತಿ ರಚನೆ ಮಾಡಲಾಗುವುದು.
-ರಮೇಶ್ ರೈ ಸಾಂತ್ಯ, ಅಧ್ಯಕ್ಷರು, ನೆ.ಮುಡ್ನೂರು ಗ್ರಾ.ಪಂ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.